Friday, 30 December 2011

ಇವತ್ತು ಕೆಲಸದಿಂದಾಗಿಯೇ ಕೆಲಸಕ್ಕೆ  ಬೇಗ ಬಿಡುವು ಸಿಕ್ಕಿತ್ತು. ಹಾಗಂತ ನಾನು ರೂಮಿಗೆ ಬೇಗ ಹೋಗಿ ಮಾಡುವುದು ಏನೂ ಇರಲಿಲ್ಲ. ನಮ್ಮ ಮೆಟ್ರೋ ಗೆ ಚಾಲನೆ ಸಿಕ್ಕ ವಿಷಯ ನನ್ನಲ್ಲಿ ಕುತೂಹಲ ಮೂಡಿಸಿ ಆಗಿತ್ತು. ರಜೆಯ ದಿನಗಳಲ್ಲಿ ಇದ್ದುಬದ್ದ ಕೆಲಸವನ್ನೆಲ್ಲಾ ಮುಗಿಸಿ ಮೊದಲಿನಿಂದಲೂ ಇರುವ ಸಿನೆಮಾ ಹುಚ್ಚನ್ನು ನೀಗಲು ಅಲ್ಲಿಗೆ ಹೋಗಿ ಬರುವುದರೊಳಗಾಗಿ ಅಪರೂಪವೆಂಬಂತೆ ಭಾಸವಾಗೋ ಭಾನುವಾರ ಮುಗಿದು ಮತ್ತೆ ಸೋಮವಾರದ ಗಡಿಬಿಡಿ ಶುರುವಾಗಿಬಿಡುತ್ತಿತ್ತು. ಅಲ್ಲಿಗೆ ಉಳಿದ ಆಸೆಗಳಿಗೆ ಮತ್ತೊಂದು ಭಾನುವಾರದ ಬೆಣ್ಣೆ ಒರೆಸುತ್ತಿದ್ದೆ. ಆದರೆ ಗ್ರಹಚಾರಕ್ಕೆ ಇವತ್ತು ಸ್ವಲ್ಪ ಸಮಯ ಬಿಡುವು ಸಿಕ್ಕಿತ್ತು. ಎಂ ಜಿ ರೋಡ್ ನಲ್ಲಿ  ಇದ್ದುದರಿಂದ ಮೆಟ್ರೋ ಹತ್ತಲೆಬೇಕೆಂದು ನಿಶ್ಚಯ ಮಾಡಿಬಿಟ್ಟೆ. ೧೫ ರೊಪಾಯಿ ಕೊಟ್ಟು ಬಿಲ್ಲೆಯಂತ ತಿಕೆಟ್ಟೂ ಕೊಂಡು ಜೀವಮಾನದಲ್ಲಿ  ಮೊಟ್ಟ ಮೊದಲ ಬಾರಿಗೆ ಮೆಟ್ರೋ ಏರಿಯೂ ಆಯಿತು. ನನ್ನಂಥದ್ದೇ ಕುತೂಹಲದಲ್ಲಿ ಅಲ್ಲಿ ಅನೇಕರಿದ್ದರು. ಕಾದಿದ್ದ ರೈಲು ಬಂದೇಬಿಟ್ಟಿತು. ಬಿ ಟಿ ಎಸ್ ಬಸ್ಸುಗಳನ್ನು  ಹತ್ತಿ ರೂಢಿಯಾಗಿದ್ದ ನಮಗೆ ನಿಧಾನಕ್ಕೆ ಹತ್ತುವ ಅವಧಾನವಿರಲಿಲ್ಲ. ಆದರೆ ಸಂಖ್ಯೆಯಲ್ಲಿ ಕಡಿಮೆಯಿದ್ದ ನಮಗೆಲ್ಲರಿಗೂ ಒಳಗೆ ಆಸನಗಳಿದ್ದವು. ಸ್ವಲ್ಪ ಹೊತ್ತು ಎಲ್ಲರದು ಮೌನಾಸನಗಳೇ. ಜೇಬಿನಲ್ಲಿದ್ದ ಕ್ಯಾಮರಕ್ಕೆ ಹೆಚ್ಚು ಹೊತ್ತು ಅಲ್ಲೇ ಇರಲು ಮನಸು ಬಿಡಲಿಲ್ಲ. ಚೊಕ್ಕಟವಾದ ರೈಲಿನ  ಗಾಜಿನಿಂದ ಎಂದೂ ನೋಡದ ಬೆ೦ಗಳೂರು ಕಣ್ಣ ತುಂಬಿಕೊಳ್ಳುತ್ತಿತ್ತು. ಸೋಕಾಸುಮ್ಮನೆ ಬೆ೦ಗಳೂರನ್ನ ಗುರಿಯಾಗಿಸಿಕೊ೦ಡು ಫ್ಲಾಶ್ ಸಹಿತ   ಒಂದು ಫೋಟೊ ಕ್ಲಿಕ್ಕಿಸಿಬಿಟ್ಟೆ. ನನ್ನ ಕ್ಯಾಮರಾದ ಬೆಳಕೇ ಎಲ್ಲರನ್ನೂ ಎಬ್ಬಿಸಿತೇನೋ ಎ೦ಬ ಅನುಮಾನ ಶುರುವಾಯ್ತು. ಎಲ್ಲೆಲ್ಲಿಯೋ ಇದ್ದ ಮೊಬೈಲ್, ಕ್ಯಾಮರಗಳೆಲ್ಲ ತನ್ನಿ೦ದತಾನೆ ಹೊರಗೆಬ೦ದು ಚಕಚಕನೆ ಫೋಟೋಗಳು ಜೆವತಳೆದವು. ಮೊಟ್ಟ ಮೊದಲಬಾರಿಗೆ ಯಾವುದೋ ಒ೦ದನ್ನ ಆರ೦ಭಿಸಿದ ಖುಷಿ  ನನ್ನದಾಗಿತ್ತು ಇವತ್ತು. ತಮ್ಮ ನೆ೦ಟರಿಸ್ಟ್ರನ್ನೆಲ್ಲ ಒ೦ದು ಕಡೆ ನಿಲ್ಲಿಸಿದವರು, ಮಕ್ಕಳ ಕೈ ಗೆ ಮೊಬೈಲ್ ಕೊಟ್ಟು ಒಟ್ಟಿಗೆ ಕೂತ ಅಪ್ಪ ಅಮ್ಮ , ತಾವೇ ತಮ್ಮನ್ನ ಕ್ಲಿಕ್ಕಿಸುವ ಪ್ರೇಮಿಗಳು,  ಹೀಗೆ ಭಾವಚಿತ್ರಗಳು ಸೆರೆ ಸಿಕಿದ್ದೇ ಸಿಕ್ಕಿದ್ದು. ನಾನೂ ಎಲ್ಲರೋಳ್ಗೊಬ್ಬ ಮ೦ಕುತಿಮ್ಮನಾಗಿ ನನಗೆ ಮನಸಾದ ಚಿತ್ರಗಳನೆಲ್ಲ ಸೆರೆಹಿಡಿದೆ.
                                                         ಇದು ಒಂದು ಹೊಸ ಹಾಗು ಆನಂದದ ಅನುಭವವಾದರೆ ಮೊತ್ತೊ೦ದು ನನ್ನನ್ನ ಚಿ೦ತೆಗೆ ಹಚ್ಚಿದ್ದು. ಹಾಗೆ ರೈಲಿನ ಗಾಜಿನಿಂದ ಹೊರಗೆ ನೋಡುವಾಗ ಅಕ್ಕಪಕ್ಕದಲ್ಲಿದ್ದ ಮಕ್ಕಳು ಸ೦ಭ್ರಮಿಸುತ್ತಿದ್ದವು. ಕೆಲವರಿಗೆ ಮಾತಿನ ಅವಶ್ಯಕತೆಯಿರಲಿಲ್ಲ. ಇನ್ನು ಕೆಲವರಿಗೆ ಮ೦ದಹಾಸವೆ ಹಿತ ನೀಡುತ್ತಿತ್ತು. ಹಾಗೆ ಸ್ವಚ್ಛ ಉನ್ಮಾದದಲ್ಲಿದ್ದ ಮಕ್ಕಳ ಗು೦ಪಿನಲ್ಲಿದ್ದ ಒ೦ದು ಹೆಣ್ಣುಮಗು ಹೊರಗೆ ಕಾಣಿಸಿದ ಕೆಲವು ಮರಗಳನ್ನ ನೋಡಿ ತನ್ನ ಅಮ್ಮನಲ್ಲಿ " ಅಮ್ಮ ಇದು ಕಾಡಿರಬೇಕು
ಅಲ್ವ ಅಮ್ಮ? " ಎ೦ದು ಕೇಳುತ್ತಿತ್ತು. ಅಮ್ಮನಿ೦ದ ಯಾವ ಪ್ರತಿಕ್ರಿಯೆಯನ್ನೂ  ನಾನು ಗಮನಿಸಲಿಲ್ಲ. ಆದರೆ ಪಕ್ಕದಲ್ಲಿದ್ದ ಮತ್ತೊ೦ದು ಮಗು " ಇದು ಕಾಡಲ್ಲ ಕಣೆ, ಕಾಡು ದೊಡ್ಡದಾಗಿರುತ್ತ೦ತೆ " ಎ೦ದಿತ್ತು. ಆ ಇಬ್ಬರೂ ಮಕ್ಕಳು ಕಾಡನ್ನ ನೋಡಿಲ್ಲವೆನ್ನುವುದು ಅಲ್ಲಿಗೆ ಸ್ಪಸ್ಟ. ಅಲ್ಲಿಗೆ ನನ್ನ ಫೋಟೊ ಕ್ಲಿಕ್ಕಿಸುವ ಉಮೇದಿ ಮುಗಿದಿತ್ತು. ಆ ಪುಟ್ಟ ಮಗುವಿನ ಯಾ೦ತ್ರಿಕ ಜಗತ್ತು ನನ್ನನ್ನ ಪ್ರಶ್ನಿಸಲು ಆರ೦ಭಿಸಿತು. ರಜೆ ಸಿಕ್ಕಿತೆ೦ದರೆ ಕಾಡು ಬೆಟ್ಟ ಹೊಳೆ ಕೆರೆ ಎ೦ದು ಅಲೆಯಬೇಕಾದ ಮಕ್ಕಳೆಲ್ಲ ಇ೦ದು ಕಾಡನ್ನ ಫೋಟೊ ದಲ್ಲಿಯೋ, ಟೀವಿಯಲ್ಲಿಯೋ ನೋಡಬೇಕಾದ ಅನಿವಾರ್ಯತೆ ಇ೦ದಿನದಾಗಿರುವುದು ವಿಷಾದ. ಮು೦ದೊ೦ದು ದಿನ ಅದೇ ಮಗು ದೊಡ್ಡವಳಾದಮೇಲೆ ಸಮಯ ಸಿಕ್ಕಾಗ ಔಟಿ೦ಗ್, ಟೂರ್, ಹೀಗೆ ಯಾವುದೊ ಒ೦ದು ಹೆಸರಲ್ಲಿ ಕಾಡನ್ನ ನೋಡಬಹುದು. ಆದರೆ ಅವಳ ಬಾಲ್ಯವೆ೦ಬ ಅಮೂಲ್ಯ ಅದ್ಭುತ ಲೋಕವೊ೦ದು ಪಟ್ಟಣದ ಹೈವೇಲೋ, ಕಾ೦ಕ್ರೀಟ್  ಗೋಡೆಗಳ ಮಧ್ಯದಲ್ಲೇ ಮುಗಿದುಹೋಗುತ್ತವೆ. ಮಗಳಿಗೆ ಹೊರೆಗಟ್ಟಲೆ ಪುಸ್ತಕಗಳನ್ನ ಹೊರಿಸಿ ಹೋಂವರ್ಕ್ ಗಳಲ್ಲೇ ಕೂರಿಸುವ ಕೆಲಸ ಸ೦ಪ್ರದಾಯವಾಗಿ ಬೆಳೆದುಹೊಗಿರುವುದು ಇನ್ನೂ ಅಸಹ್ಯ. ಕಾಡು ಪ್ರಾಣಿಗಳು ಹಾಗಿರಲಿ ಕಾಡೇ  ಅಪರಿಚಿತವಾಗಿರುವ  ಆ ಮಗುವಿನ ತೀರ ಸು೦ದರವಾದ  ಬಾಲ್ಯ ಸ್ವಾರಸ್ಯ ಕುತೂಹಲಗಳೇ ಇರದ ಒ೦ದು ಸಹಜ ರುಟೀನ್ ಬದುಕಾಗಿಹೊಗಿರುವುದು ಬೇಸರದ ಸ೦ಗತಿ. ಆ ಮಗುವಿನ ತಾಯಿಯ ಮನಸು  ಮಗಳ ಪುಟ್ಟ ಪ್ರಶ್ನೆಗೂ ಉತ್ತರಿಸುವ ಅವಧಾನವಿರದ ಒತ್ತಡದ ದಿನಚರಿಯಲ್ಲಿಯೇ ಮುಳುಗಿತ್ತು. ಅವಳ  ಅವ್ಯಕ್ತ ಅಸಹನೆಯ ಭಾವನೆಯನ್ನ ನನ್ನ ಕ್ಯಾಮರ ಭಾವಚಿತ್ರವಾಗಿಸುವುದರಲ್ಲಿ  ಸೋತಿತ್ತು. ಆದರೆ ಆ ಮಗು ಮಾತ್ರ ಕಾಡೆ೦ಬುದರ ಬಗ್ಗೆ ಕಡೆಗೂ ಉತ್ತರ ಸಿಗದ ಪ್ರಶ್ನೆಯನ್ನೇ ಹೊತ್ತು ರೈಲು ಇಳಿದಿತ್ತು.

                                       ---KARTIK MOONI

Thursday, 29 December 2011

ಈ ಬ್ಲಾಗ್ ಕೇವಲ ಭಾವಚಿತ್ರಗಳಿಗಾಗಿ. ನನ್ನ ಕೈ ಗೆ ಕ್ಯಾಮರ ಬಂದಮೇಲೆ ಪೂರ್ತಿ ಜಗತ್ತನ್ನ ಸೆರೆಹಿಡಿಯುವ ಹುಚ್ಚು  ಶುರುವಾಗಿತ್ತು. ಆದರೆ ಭಾವಚಿತ್ರಗಳ ಹಿಂದಿನ ಭಾವಗಳು ನನ್ನನ್ನ ಚಕಿತಗೊಳಿಸುತ್ತಿದ್ದವು. ಅದಕ್ಕಿಂತ ಹೆಚ್ಚಾಗಿ ನನ್ನನ್ನ ವಿಚಲಿತಗೊಳಿಸುತ್ತಿದ್ದವು. ಕಂಡಿದ್ದೆಲ್ಲ ಚಿತ್ರಗಳಾಗಲಿಲ್ಲ,  ಸೇರೆಸಿಕ್ಕಿದ್ದೆಲ್ಲ ಚಂದ ಕಾಣಲಿಲ್ಲ, ಕೊನೆಗೆ ಚಂದ ಕಾನಿಸಿದ್ದೆಲ್ಲ ಮನಸಿಗೆ ಹಿಡಿಸಲೇ ಇಲ್ಲ. ಹಾಗಾಗಿ ಇಲ್ಲಿ ಸೆರೆಹಿಡಿದ ಚಿತ್ರಗಳಿಗಿಂತ ಕ್ಯಾಮರ ಹೊಟ್ಟೆ ಸೇರದ ಚಿತ್ರಗಳನ್ನ ಹೊಂದಿರುತ್ತದೆ ಎಂದು ಹೇಳಲು ವಿಷಾದಿಸುತ್ತೇನೆ. ನಿಮ್ಮ ಅಮೂಲ್ಯ ಸಮಯವನ್ನ ಇಲ್ಲಿ ವ್ಯಯಿಸಿರುವುದಕ್ಕಾಗಿ ನಿಜವಾದ ಅಭಿನಂದನೆಗಳು.ಭಾವಚಿತ್ರಗಳಲ್ಲಿ ಏನಾದರು ಭಾವನೆ ಕಂಡು ನಿಮಗೆ ಖುಷಿ ಆದಲ್ಲಿ ನಾನು ಧನ್ಯ.