Friday, 14 December 2012

ಭಂಬೋಲೇ.. ಆರಂಭ


ಆರಂಭ..

ಕಾಲುಗಳು ಇಬ್ಬರನ್ನ ಹೊತ್ತು ನಡೆದಂತೆ ಆಯಾಸಗೊಂಡಿದ್ದವು. ಹೆಜ್ಜೆ ಕಿತ್ತಿಡಲು ಮನಸಿದ್ದರೂ, ಹಾಗೂ ಹೀಗೂ ಹುಡುಕಿಕೊಂಡ ಮಾರ್ಗವಿದ್ದರೂ, ನಡೆದು ಈಗಿರುವ ಪರಿಸ್ಥಿತಿಗಿಂತ ಸುಸ್ಥಿತಿಗೆ ಸೇರಲು ಶಕ್ತಿಯಿರಲಿಲ್ಲ. ಕಾಡು ಕತ್ತಲಾದಂತೆ ಸ್ವಭಾವಿಕವಾಗಿ ಅಪರಿಚಿತ ಲೋಕವೊಂದನ್ನ ಸೃಷ್ಟಿಸುತ್ತಿದೆಯೆಂಬ ಆತಂಕಬೇರೆ ಮನಸನ್ನ ಆವರಿಸುತ್ತಿತ್ತು. ಇಡೀ ಕಾಡಿನಲ್ಲಿ ಯಾವುದೋ ಮೂಲೆಯಲ್ಲಿ ಯಕ್ಕಶ್ಚಿತ್ ಜೀವವೊಂದು ಸರಿದಾಡಿದಂತೆ ರಾಮಾಜಿ, ತರಗೆಲೆಗಳ ರಾಷಿಯಲ್ಲಿ ತೆವಳುತ್ತ ಸಾಗುತ್ತಿದ್ದ. ತಾನು ಆ ಜಾಗಕ್ಕೆ ಬಂದಿದ್ದೇನಕ್ಕೆಂಬ ಇತಿಹಾಸ ಅವನ ನೆನಪಿನಲ್ಲಿರಲಿಲ್ಲ. ಎಲ್ಲೊ ಅಲ್ಲಲ್ಲಿ ಯಾವ್ಯಾವುದೋ ಸಂದರ್ಭಗಳನ್ನ ನೆನಪಿಸುವ ಆಸ್ಪಷ್ಟ ಚಿತ್ರಗಳು. ಎಲ್ಲಿಗೆ ಹೋಗಬೇಕೆಂಬ ಗುರಿಯೂ ಇರದ ಕಾರಣ, ಕಾಡಿನ ದಟ್ಟತೆ ಕಡಿಮೆಯಿರುವ ಜಾಗವನ್ನ ಸೇರುವುದೇ ಸದ್ಯದ ಗುರಿಯೆಂದು ರಾಮಾಜಿ ಹೊರಳಾಡಿದ.
ಇರುಳು ಆವರಿಸಿದಂತೆ, ಭೀತಿಯೂ ಉಚಿತವಾಗಿ ಎದೆಗಿಳಿಯುತ್ತದೆಂಬ ಸತ್ಯ ರಾಮಾಜಿಗೆ ಗೊತ್ತಿತ್ತು. ಅದಷ್ಟುಬೇಗ ಸುರಕ್ಷಿತ ಪ್ರದೇಶವೊಂದನ್ನ ತಲುಪುವುದು ಅನಿವಾರ್ಯವಾಗಿತ್ತವನಿಗೆ. ಕೊರೆಯುವ ಚಳಿ, ಸಣ್ಣಗೆ ಒಂದೇಸಮನೆ ಬೀಸುವ ಗಾಳಿ, ಅಪರಿಚಿತ ಸದ್ದು, ಅನಾಮಿಕ ಜೀವಿಗಳ ಕೂಗು ಕೆಲವು ಪರಿಚಿತವೆನಿಸುವ ಚೀತ್ಕಾರಗಳು. ತನ್ನ ವಿಧಿಯನ್ನ ತಾನೇ ಶಪಿಸಿಕೊಂಡ. ಆದರೆ ಅದರಿಂದ ಯಾವ ಲಾಭವೂ ಇರಲಿಲ್ಲ. ಆಗಿದ್ದಾಗಿದೆಯೆಂದು ತೆವಳುವುದೊಂದೇ ಉಳಿದ ಮಾರ್ಗವಾಗಿತ್ತು. ಹೇಗೋ ಸಾಹಸಮಾಡಿ ಎದ್ದುನಿಂತು ನಡೆದುಬಿಡುವುದೆಂದು ತೀರ್ಮಾನಿಸಿದ. ಎದ್ದುನಿಲ್ಲಲು ಗಾಯದಲ್ಲಿ ಜಜ್ಜಿದ್ದ ಮಂಡಿ ಸಹಕರಿಸಲಿಲ್ಲ. ಪಾದಗಳಲ್ಲಿ ತೊನೆಯುತ್ತಿದ್ದ ರಕ್ತ ಕಮಟುತ್ತಿತ್ತು. ಕಾಲ್ಗಂಟು ಊದಿತ್ತು. ತೆವಳುತ್ತಲೇ ಸಾಗಿದರೆ ಯವಾಗಬೇಕಾದರೂ ಅನಾಯಾಸವಾಗಿ ಕಾಡು ಪ್ರಾಣಿಗೆ ಆಹಾರವಾಗುವ ಅವಕಾಶವಿದ್ದಿದ್ದರಿಂದ  ಸಧ್ಯವಾದಷ್ಟು ನಡೆದುಬಿಡುವುದೇ ಸರಿಯೆಂದನಿಸಿತು ರಾಮಾಜಿಗೆ. ಸುತ್ತಲಿದ್ದ ಪೊದೆಗಳನ್ನ ಆಧಾರವಾಗಿಸಿಕೊಂಡು ಹೇಗೋ ಎದ್ದು ನಿಂತ. ನಿಂತಷ್ಟೇ ಬೇಗ ಮತ್ತೆ ಬಿದ್ದ. ರಾಮಾಜಿಗೆ ಹೇಳಹೆಸರಿಲ್ಲದಂತೆ ಸಾಯುವುದು ಇಷ್ಟವಿರಲಿಲ್ಲ. ಶರಿರ ಸಣ್ಣಗೆ, ಮಿತವಾದ ಎತ್ತರದಲ್ಲಿ ಪೀಚಾಗಿದ್ದರೂ ರಾಮಾಜಿ ಮಾನಸಿಕವಾಗಿ ಬಹಳ ಗಟ್ಟಿಗ. ಯಾವುದನ್ನೂ ಅಷ್ಟು ಸುಲಭಕ್ಕೆ ಸೋತವನಲ್ಲ. ಹಾಗೆ ತಾನು ದಾರುಣ ಪರಿಸ್ಥಿಯಲ್ಲಿದ್ದರೂ ಅದನ್ನ ಬದಿಗೊತ್ತಿ ಗೊತ್ತಿರದ ಗುರಿಯತ್ತ ಸಾಗಲು ಇಷ್ಟು ಹಠ ಮಾಡುತ್ತಿರುವುದಾದರೂ ಯಾಕೆಂಬುದು ಅರಿವಾಗಲು ರಾಮಾಜಿಗೆ ಹಳೆಯದು ನೆನಪಾಗಲಿಲ್ಲ. ಮತ್ತೆ ಹೇಗೋ ಎದ್ದುನಿಂತು, ಮತ್ತದೇ ಪೊದೆಗಳನ್ನ ಬಳಸಿಕೊಂಡು ಅರೆಜೀರ್ಣ ಶರೀರವನ್ನ ಸಾಧ್ಯವಾದಷ್ಟು ಮುಂದೂಡಿದ. ಅನಿವಾರ್ಯತೆಗಳು ಅರಿವಾಗದ ಕೆಲವು ಶಕ್ತಿಗಳನ್ನ ಎಚ್ಚೆಬ್ಬಿಸುತ್ತವೆಂಬ ಹೊಸ ಸತ್ಯ ರಾಮಾಜಿಗೆ ಅರಿವಾಗಿದ್ದೇ ಆಗ. ಧೂಮದಲ್ಲಿ, ಇಬ್ಬನಿಯ ಮಂಜು ಆವರಿಸಿದ್ದರಿಂದ ಮುಂದಿರುವುದೆಲ್ಲ ಹತ್ತಿರ ಬಂದಂತೂ, ಏನೆಂದು ತಿಳಿಯುತ್ತಿರಲಿಲ್ಲ. ಕುಂಟುತ್ತಲೇ ರಾಮಾಜಿ ಫರ್ಲಾಂಗು ದೂರ ಕ್ರಮಿಸಿಬಿಟ್ಟ. ನೋವಿಗೂ ಶರೀರ ಹೊಂದಿಕೊಂಡು ಮತ್ತಷ್ಟು ದೂರ ನಡೆಯಲು ಅನುಮತಿ ನೀಡಿತೆಂಬಂತೆ ತರಗೆಲೆಗಳನ್ನ ಗಿಡಗಂಟಿಗಳನ್ನ ಬಾಚುತ್ತ ಮುಂದುವರಿದ. ಇಬ್ಬನಿಯ ಮಂಜು ವಿಚಿತ್ರವಾದ ಪರಿಮಳವನ್ನ ಸೂಸುತ್ತಿತ್ತು. ತನಗೆ ಎಚ್ಚರವಾದಾಗಿನಿಂದ ಆ ಕಾಡಿನಲ್ಲಿ ಅಂತಹದೇ ಒಂದು ಸುವಾಸನೆ. ರಾತ್ರಿಯಲ್ಲಿ ಹೂಬಿರಿದು ಹಾಗಾಗಿರಬಹುದೆಂಬ ಅನುಮಾನ ಅವನಿಗೆ ಸರಿಯೆನಿಸಿರಲಿಲ್ಲವಾದರೂ ಅದರೆಡೆಗೆ ಹೆಚ್ಚು ಗಮನಕೊಟ್ಟಿರಲಿಲ್ಲ. ಅದೇ ಸುವಾಸನೆ ತಾನು ಮುಂದುವರಿದಂತೆ ಹೆಚ್ಚುತ್ತಹೋಯಿತು. ರಾಮಾಜಿ ಅದರಿಂದ ಅನಾಹುತವನ್ನು ಊಹಿಸಿದರೂ ಸುವಾಸನೆಯಿಂದ ಗಂಭೀರ ಪರಿಣಾಮಗಳಾಗುವುದು ಸುಲಭಕ್ಕೆ ಸಾಧ್ಯವಿರಲಿಲ್ಲ. ಆದರೆ ಆ ಸುವಾಸನೆಯ ಮೂಲದ ಬಗ್ಗೆ ರಾಮಾಜಿಗೆ ಕುತೂಹಲ ಶುರುವಾಯ್ತು. ಆ ಕುತೂಹಲದಲ್ಲಿಯೇ ತನಗೇ ಅರಿವಿಲ್ಲದಂತೆ ರಾಮಾಜಿ ಸುಮಾರು ದೂರ ನಡೆದುಬಂದಿದ್ದ. ದೂರದಲ್ಲೆಲ್ಲೋ ಬೆಳಕಿನ ಪ್ರಭೆಯೊಂದು ಕಾಣಿಸಿದಂತಾಯ್ತು. ಮತ್ತೊಂದು ಜೀವದ ಸುಳಿವೇ ಇಲ್ಲದ ಆ ಭೀಕರ ಕಾಡಿನಲ್ಲಿ ಬೆಳಕು ಕಾಣಿಸಿದ್ದು ಒಳ್ಳೆಯದೋ ಅಥವಾ ಮತ್ತಿನ್ನೇನೋ ಎಂಬ ಅನುಮಾನವೂ ಅವನನ್ನ ಹೊಕ್ಕಿತು. ಅವಸರಮಾಡದೆ ಆ ಬೆಳಕಿನ ಜಾಡನ್ನ ಹಿಡಿದು ಸಾಧ್ಯವಾದಷ್ಟು ಸದ್ದು ಮಾಡದೆ ತೆವಳಿಕೊಂಡು ಅದರೆಡೆಗೆ ನಡೆದ. ನಾಲ್ಕು ಸೂಡಿಹಿಡಿದು ಜಟಾಧಾರಿ ಬಾಬಗಳು ನಿಂತಿದ್ದರು. ಅಪಾಯವಾಗದಷ್ಟು ದೂರದಲ್ಲಿ, ತನ್ನ ಇರುವಿಕೆ ಆ ಬಾಬಾಗಳಿಗೆ ಅರಿವಾಗದಂತೆ ಮರದ ಬೊಡ್ಡೆಯಲ್ಲಿ ತನ್ನನ್ನ ತಾನು ಹುದುಗಿಸಿಕೋಂಡ. 
ಕಾವಿ ಲಂಗೋಟಿಯಲ್ಲಿ, ಮೈತುಂಬ ಭಸ್ಮಮೆತ್ತಿಕೊಂಡು ಜಡೆಹೊತ್ತ ಬಾಬಾಗಳು ಸೂಡಿಹಿಡಿದುಕೊಂಡು, ಸುಮ್ಮನೆ ನಿಂತಿದ್ದರು. ಅವರ ಎದುರಲ್ಲಿ ಶರೀರವೊಂದು ಮಲಗಿತ್ತು. ಕೆಲಹೊತ್ತು ಅಲ್ಲಿ ಯಾವ ಚಲನೆಯೂ ಇರಲಿಲ್ಲ. ಬಾಬಾಗಳೂ ವಿಚಲಿತರಾಗದೆ ಕಣ್ಣುಬಿಟ್ಟುಕೊಂಡು ಸುಮ್ಮನೆ ನಿಂತಿದ್ದರು. ಕೆಳಗಿದ್ದ ಶರೀರವೂ ಉಸಿರಾಡಿದಂತ, ನರಳಿದಂತ ಯಾವ ಬದಲಾವಣೆಯೂ ಇಲ್ಲದೆ ಸುಮ್ಮನೆ ಮಲಗಿತ್ತು. ಅದು ಹೆಂಗಸಿನ ಹಾಗೂ ಮಾನವನ ದೇಹವೆಂಬುದು ಅದರಮೇಲಿದ್ದ ಸೀರೆ ಕುಪ್ಪುಸಗಳಿಂದ ಗೊತ್ತಾಗುತ್ತಿತ್ತೇ ವಿನಹ ಆ ಶರೀರವನ್ನ ಅಷ್ಟು ಸುಲಭಕ್ಕೆ ಪತ್ತೆಮಾಡಲಾಗದಷ್ಟು ಮಣ್ಣು ಮೆತ್ತಿತ್ತು. ಕಣ್ಣುಗಳು ಮುಚ್ಚಿದ್ದವು, ಅದರಮೇಲೂ ಮಣ್ಣಿತ್ತು. ಮೂಗಿನ ಹೊಳ್ಳೆಗಳಲ್ಲಿ, ಅರೆತೆರೆದ ಬಾಯಲ್ಲಿಯೂ ಮಣ್ಣಿತ್ತು. ಹೂತಿದ್ದ ದೇಹವನ್ನ ಹೊರತೆಗೆದಂತಿತ್ತು ಅದು. ರಾಮಾಜಿಗೂ ಅದು ಹೆಣವಿರಬಹುದೆಂಬ ಅನುಮಾನಬಂತು. ಅಷ್ಟರಲ್ಲಿ ಎಲ್ಲಿಂದಲೋ ಒಬ್ಬ ದೈತ್ಯ ಸನ್ಯಾಸಿ ವೇಗವಾಗಿ ಅಲ್ಲಿಗೆ ಬಂದ. ಶರೀರವನ್ನೊಮ್ಮೆ ದಿಟ್ಟಿಸಿದ ಸನ್ಯಾಸಿ ಸುತ್ತಲಿದ್ದ ಬಾಬಾಗಳಿಗೆ ಸನ್ನೆಯಲ್ಲಿ ಏನನ್ನೋ ಸೂಚಿಸಿದ. ಅದರಲ್ಲೊಬ್ಬ ಬಾಬ ಪಕ್ಕದಲ್ಲಿಯೇ ಮೊದಲೇ ಸಿದ್ದಮಾಡಿ ತಂದಿದ್ದ ಬಟ್ಟೆ ಗಂಟಿನಿಂದ ತಲೆಬುರುಡೆ ಕೆಲವು ಮಾಂಸದ ತುಂಡುಗಳನ್ನ ತೆಗೆದು ಎದುರಲ್ಲಿಟ್ಟ. ದೈತ್ಯ ಸನ್ಯಾಸಿ ತನ್ನ ತಲೆಗೂದಲನ್ನ ಜಡೆಕಟ್ಟಿ ಪದ್ಮಾಸನ ಹಾಕಿ ಕುಳಿತುಕೊಂಡ. ಮಾಂಸದ ತುಂಡುಗಳನ್ನ ತಲೆಬುರುಡೆಮೇಲಿಟ್ಟು, ಮಂತ್ರಗಳನ್ನ ಪಠಿಸಿದ. ರಾಮಾಜಿಗೆ ಎಲ್ಲವೂ ಕನಸೇ ಇರಬಹುದೆಂಬ ಅನುಮಾನವೂ ಬಂತು. ಬಾಬಾಗಳ ಕೈಲಿದ್ದ ಎರದು ಸೂಡಿಗಳನ್ನ ತಲೆಬುರುಡೆಯ ಎದುರಲ್ಲಿಟ್ಟು ಅದಕ್ಕೆ ರಾಳವನ್ನೆರಚಿದ. ಉಳಿದಿದ್ದ ಮಾಂಸವನ್ನ ಸೂಡಿಗೆ ಆಹುತಿಯೆಂಬಂತೆ ಅರ್ಪಿಸಿದ. ರಾಮಾಜಿಗೆ ಅಲ್ಲಿ ನಡೆಯುತ್ತಿದ್ದ ಯಾವುದೂ ಅರ್ಥವಾಗಲಿಲ್ಲ. ಅರ್ಥವಾಗುವಂತದ್ದು ಅಲ್ಲಿ ಯಾವುದೂ ನಡೆಯಲೂ ಇಲ್ಲ. ಸೂಡಿಗಳು ಹೋಮಜ್ವಾಲೆಯಾಗಿ ಬದಲಾಗಿದ್ದರಿಂದ ಅಲ್ಲಿ ಬೆಳಕು ಮಂದವಾಗಿತ್ತು. ದೈತ್ಯ ಸನ್ಯಾಸಿಯ ಆಣತಿಯಂತೆ ಒಬ್ಬ ಬಾಬ ಹೆಣದಂತೆ ಮಲಗಿದ್ದ ದೇಹದ ತಲೆಯಿಂದ ಕೆಲವು ಕೂದಲನ್ನ ಕಿತ್ತುತಂದು ದೈತ್ಯ ಸನ್ಯಾಸಿಯ ಕೈಯಲ್ಲಿಟ್ಟ. ಆ ಕೂದಲನ್ನ ತನ್ನ ತೋರ್ಬೆರಳಿಗೆ ಸುತ್ತಿಕೊಂಡ ಸನ್ಯಾಸಿ ಅದು ಪೂರ್ತಿ ಸುಡುವವರೆಗೂ ತನ್ನ ಬೆರಳನ್ನ ಬುರುಡೆಯೆದುರಲ್ಲಿದ್ದ ಸೂಡಿಗೆ ಹಿಡಿದ. ಕೂದಲು ಸುಟ್ಟು ಖಾಲಿಯಾದಮೇಲೆ ಬೆರಳನ್ನ ಮಾಂಸದ ಮುದ್ದೆಯಲ್ಲಿ ಹೊಕ್ಕಿಸಿ ಹೊರತೆಗೆದು ಅದನ್ನು ನೆಕ್ಕಿದ. ರಾಮಾಜಿಗೆ ಎಲ್ಲವೂ ಅಸಹ್ಯವೆನಿಸಿತು. ಯಾವ ವಾಮಮಾರ್ಗದ ಕತೆಯಲ್ಲಿಯೂ ಕೇಳಿರದ ಹುಚ್ಚು ಸಂದರ್ಭವೊಂದನ್ನ ತಾನು ನೋಡುತ್ತಿರುವುದಾಗಿ ಸಹಿಸಿಕೊಂಡ. ಬೆರಳನ್ನ ಹೊಕ್ಕಿಸಿದ ಮಾಂಸದ ಮುದ್ದೆಯನ್ನ ಹೆಣದಂತೆ ಮಲಗಿದ್ದ ದೇಹದ ಹಣೆಯಮೇಲಿಟ್ಟು ಅಲ್ಲಿದ್ದ ಬಾಬಾಗಳಿಗೆ ತೆರಳುವಂತೆ ಸೂಚಿಸಿದ. ಅವನ ಸನ್ನೆಯನ್ನೂ ಮಾತಿನಂತೆ ಭಾವಿಸಿದ ಅವರು ಅಲ್ಲಿಂದ ಜಾಗ ಖಾಲಿಮಾಡಿದರು. ನಂತರ ನಡೆದದ್ದು ಮಾತ್ರ ಕಲ್ಪನಾತೀತ. ರಾಮಾಜಿ ಸದ್ದುಮಾಡದೇ ವಾಂತಿಮಾಡಿದ. ಹೆಣದಂತೆ ಮಲಗಿದ್ದ ಶರೀರ ಅಪ್ಪಟ ಹೆಣವೇ ಆಗಿತ್ತು. ಆ ದೈತ್ಯ ಸನ್ಯಾಸಿ ಅದೇ ಹೆಣದ ಅಳಿದುಳಿದ ಬಟ್ಟೆಯನ್ನ ಬಿಚ್ಚಿ ನಗ್ನವಾಗಿಸಿ ತಾನೂ ನಗ್ನನಾಗಿ ಶವದೊಂದಿಗೇ ಮೈಥುನ ಮುಗಿಸಿದ. ರಾಮಾಜಿಗೆ ತನ್ನ ನೋವಿನಬಗ್ಗೆ ಗಮನವೂ ಬಾರದಷ್ಟು ವಿಕ್ರತ ಅಸಹ್ಯ ದೃಶ್ಯ ಅಲ್ಲಿ ನಡೆದುಹೋಗಿತ್ತು. ಇಷ್ಟೊತ್ತು ನಡೆದದ್ದು ಕನಸೇ ಆಗಿದ್ದರೆ ಒಳ್ಳೆಯದಾಗಿತ್ತೆಂದು ಬಯಸುವಷ್ಟರಲ್ಲಿ ಆ ಸನ್ಯಾಸಿ ಕಾಮತೀರಿದವನಾಗಿ ತನ್ನ ತಲೆಗೂದಲನ್ನ ಕಿತ್ತು ಹೆಣದ ಕೂದಲಿನ ಜೊತೆ ಅದನ್ನು ಸೇರಿಸಿ ಬುರುಡೆಯಮೇಲಿಟ್ಟು ಮತ್ತೇನೋ ಮಂತ್ರ ಪಠಿಸಿ ಅದನ್ನ ಅಗ್ನಿಗರ್ಪಿಸಿ ಎದ್ದುನಿಂತು ಕಿರುಚಿದ, ಭಂ ಬೋಲೆಯೆಂದು. ರಾಮಾಜಿ ತೀರದ ಆಯಾಸದಲ್ಲಿ ಮೂರ್ಛೆಹೋಗಿದ್ದ. ರಾತ್ರಿಯೆಂಬುದು ಎಂದಿನಂತೆ ಇಬ್ಬನಿಯ ಮಂಜಿನಲ್ಲಿ ತೊನೆಯುತ್ತಿತ್ತು. ಬೆತ್ತಲೆ ಶವ ವಿಕಾರವಾಗಿ ಮಲಗಿತ್ತು.
Thursday, 6 December 2012

ಭಂ ಬೋಲೆ ೭
"ಮಿನಿಗಾದಿ ಪಂಗಡದವರು ಅಂದು ತಮ್ಮ ಸಹಕಾರ ನೀಡಿದ್ದಿದ್ದರೆ ಇಂದು ಮುದ್ವ ಎಂಬ ಹೆಸರು ನೆನಪಿಗೂ ಸಿಗದಂತೆ ಮರೆಯಾಗಿಹೋಗುತ್ತಿತ್ತು." ಅಲವತ್ತುಕೊಂಡ ಸುಪಿ.
"ಯಾಕೆ ಗುರುಗಳೆ ಅಂತದ್ದೇನಾಗಿತ್ತು?" ಕುತೂಹಲದಲ್ಲಿ ಕೇಳಿದ ಶಿಷ್ಯ ಮಜಗರ.
"ಉಪೀಟಿ ಎಂಬುದೊಂದು ಅದ್ವಿತೀಯವಾದ ವಿದ್ಯೆ. ಅದನ್ನು ಮೀರುವ ಯಾವ ತಂತ್ರವೂ ಅಂದು ತಿಳಿದಿರಲಿಲ್ಲ. ಆ ವಿದ್ಯೆ ಮಿನಿಗಾದಿಗಲ್ಲದೆ ಅಂದು ಮತ್ತಾರಿಗೂ ಗೊತ್ತಿರಲಿಲ್ಲ. ನನಗೆ ಉಪೀಟಿಗೆ ಬೇಕಾಗಿದ್ದ ಎಲ್ಲ ಅವಶ್ಯಕತೆಗಳ ಪರಿಚಯವಿತ್ತು. ಅದನ್ನ ಒದಗಿಸಲು ನಾನು ಸಿದ್ಧನಿದ್ದೆ ಕೂಡಾ. ಆದರೆ ಮುನಿಗಾದಿ ಅದನ್ನ ಪ್ರಾಣಾಪಹರಣಕ್ಕೆ ಪ್ರಯೋಗಿಸಲು ಒಪ್ಪಲೇ ಇಲ್ಲ. ಮುದ್ವನ ಭವಿಷ್ಯದ ಕ್ರೂರತೆಯನ್ನ ಮನಗಂಡಿದ್ದ ನನ್ನ ಗುರುಗಳು ಅಪಾಯದ ಮುನ್ಸೂಚನೆ ನೀಡಿದ್ದರು. ನನಗೆ ಅದರ ಭೀಕರತೆ ಅರ್ತವಾಗಿ ಮುನಿಗಾದಿಯಲ್ಲಿ ಮುದ್ವನನ್ನ ಮುಗಿಸಲು ಸಹಾಯ ಮಾಡಬೇಕಾಗಿ ಕೋರಿದ್ದೆ. ಆಗಲೇನಾದರೂ ಅದನ್ನವರು ಒಪ್ಪಿದ್ದರೆ ಇಂದು ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. " ಹಳೆಯದನ್ನೆಲ್ಲ ಮೆಲುಕಿ ಹೇಳಿದ ಸುಪಿ.
"ಮುದ್ವ ಈಗ ಮಾಡಿದ್ದಾದರೂ ಏನು? ಅಥವಾ ಅವನಿಂದ ಮುಂದೆ ಆಗುವುದಾದರೂ ಏನು? ಯಾಕೆ ಎಲ್ಲರೂ ಮುದ್ವನ ಬಗ್ಗೆ ಅಷ್ಟು ಭಯಗ್ರಸ್ಥರಾಗಿದ್ದಾರೆ?" ಅರ್ಥವಾಗದವನಂತೆ ಕೇಳಿದ ಮಜಗರ.
"ಅವ್ಯಕ್ತವಾಗಿ ಸಮಾಜದಲ್ಲಿ ಈಗಾಗಲೆ ಕಪ್ಪು ನೆರಳು ಚಾಚಿಕೊಂಡಾಗಿದೆ. ಆದರೆ ಯಾರೂ ಅದರಬಗ್ಗೆ ಯೋಚಿಸುತ್ತಿಲ್ಲ. ಹಣ, ಅಂತಸ್ತು, ಭೋಗದ ಸಾಧನೆಯೇ ಗುರಿಯಾಗಿಸಿಕೊಂಡಿರುವ ಮಾನವ, ಆ ನೆರಳ ಬಗ್ಗೆ ಕಲ್ಪನೆಯನ್ನೊ ಮಾಡುತ್ತಿಲ್ಲ. ಮುದ್ವ ಆ ಕತ್ತಲೆ ಸಾಮ್ರಾಜ್ಯದ ಅಧಿಪತಿಯಾಗುವ ಹಂಬಲದಲ್ಲಿ ತಂತ್ರವನ್ನ ಹೂಡುತ್ತಿದ್ದಾನೆ. ಯಾವುದು ಮೂಢನಂಬಿಕೆ, ಸುಳ್ಳು, ಅವೈಜ್ಞಾನಿಕ ಎಂದು ತಿಳಿದುಕೊಂಡು ಅದನ್ನ ತೀರಾ ಸರಳವಾಗಿ ಮನುಷ್ಯ ಪರಿಗಣಿಸಿದ್ದಾನೊ ಅದೇ ಅಗೋಚರ ಶಕ್ತಿ ಮನುಷ್ಯನ ಅಂತ್ಯಕ್ಕೆ ಕಾರಣವಾಗಲಿದೆ ಎಂಬ ಸತ್ಯ ಮಾತ್ರ ಜನರಿಗೆ ತಿಳಿಯುತ್ತಿಲ್ಲ."
"ಮನುಷ್ಯನ ಅಂತ್ಯವೇ?"... ಮಧ್ಯದಲ್ಲಿ ಕೇಳಿದ ಮಜಗರ.
"ಹೌದು. ಮುದ್ವ ತಂತ್ರಗಾರಿಕೆಯಲ್ಲಿ ಯಾರೂ ಸಾಧಿಸಲಾರದ ವಿದ್ಯೆಯನ್ನ ಸಾಧಿಸಿಬಿಟ್ಟಿದ್ದಾನೆ. ಅಷ್ಟೇ ಆದರೆ ತೊಂದರೆ ಏನೂ ಇರಲಿಲ್ಲ. ಆದರೆ ಸ್ವಭಾವತಹ ಮುದ್ವ ಕ್ರೂರಿ. ಅವನ ನಡುವಳಿಕೆ ಮತ್ತು ಗುರಿ ಕತ್ತಲೆ ಸಾಮ್ರಾಜ್ಯದ ಸ್ಥಾಪನೆ."
"ಕತ್ತಲೆ ಸಾಮ್ರಾಜ್ಯವೆಂದರೆ?" ಮತ್ತೆ ಕೇಳಿದ ಮಜಗರ.
"ಅದೇ ಈಗಿನ ಪ್ರಶ್ನೆ." ದೀರ್ಘವಾದ ಉಸಿರೆಳೆದುಕೊಂಡು, "ಮುಂದೆ ಏನಾಗಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಮುದ್ವ ಯಾವ ಪ್ರಯೋಗ ಮಾಡಲಿದ್ದಾನೆ ಎಂಬುದುದು ಸಹ ಪ್ರಶ್ನೆಯೇ. ಕತ್ತಲೆ ಸಾಮ್ರಾಜ್ಯದ ಅಸ್ತಿತ್ವ ಹೇಗಿರಬಹುದೆಂಬ ಊಹೆಯೂ ವಾಸ್ತವಕ್ಕೆ ನಿಲುಕದ್ದು. ಅದನ್ನ ಆತ ಹೇಗೆ ಸಾಧಿಸುತ್ತಾನೆಂಬುದು ನಿಗೂಢ. ಆದರೆ ಮುದ್ವ ಅದನ್ನ ಸಾಧಿಸುವಲ್ಲಿ ಸರ್ವಶಕ್ತ ಎಂಬುದರಲ್ಲಿ ಮಾತ್ರ ಯಾವ ಅನುಮಾನವೂ ಇಲ್ಲ. ಇದೆಲ್ಲದಕ್ಕೂ ಉತ್ತರ ಒಬ್ಬರಿಗೆ ಮಾತ್ರ ಗೊತ್ತಿರಬಹುದು." ಎಂದು ನಿಟ್ಟುಸಿರಿಟ್ಟ ಸುಪಿ.
"ಯಾರದು ಗುರುಗಳೇ"
"ಜುಕಾವು,(ಊರ್ದ್ವ ಗುರು)"
"ಅವರ್ಯಾರು?"
"ಅದೊಂದು ಶಕ್ತಿ. ದೇವಸಮಾನವಾದ ಚೇತನ. ತಂತ್ರಗಾರಿಕೆ ಮತ್ತು ವಾಮಮಾರ್ಗ ಕಂಡ ಪರಮ ಸಾಧಕ ಆತ. "
"ಮುದ್ವನನ್ನ ಅವರು ತಡೆಯಬಹುದಲ್ಲವೇ"
"ನಿನಗಿನ್ನೂ ಸಮಸ್ಯೆಯ ಸಂದರ್ಭದ ಹಾಗೂ ಈ ಗುಪ್ತ ಪ್ರಪಂಚದ ಅರಿವಾಗಿಲ್ಲ. ಆ ಉತ್ತರವನ್ನ ಅರ್ಥಮಾಡಿಕೊಳ್ಳಲು ನೀನಿನ್ನು ಸಣ್ಣವನು. ಮತ್ತು ಸುಲಭಕ್ಕೆ ತಡೆಯಲಾರದಷ್ಟು ಶಕ್ತಿಶಾಲಿ ಮುದ್ವ. ಸದ್ಯದ ಅಘೋಷಿತ ಪರಮ ಪರಾಕ್ರಮಿ ಅಘೋರಿಗಳಲ್ಲಿ ಮುದ್ವನೇ ದೊಡ್ಡವನು. ನೈಜವಾಗಿ ಜುಕಾವುಗಿಂತ ಬಲಿಷ್ಠ ಮುದ್ವ."
"ಗುರುಗಳೆ ಯಾಕಿಷ್ಟು ಗೊಂದಲ ಮಾಡುತ್ತಿದ್ದೀರಿ.? ಒಮ್ಮೆ ಜುಕಾವು ಪರಾಕ್ರಮಿ ಅಂತೀರಿ. ಮತ್ತೊಮ್ಮೆ ಮುದ್ವ ಅಸಮಾನ್ಯ ಅಂತೀರಿ ನನಗಂತೂ ಸ್ವಲ್ಪವೂ ಅರ್ಥವಾಗುತ್ತಿಲ್ಲ. ಯಾವುದು ಸತ್ಯ? ಅಸಹನೆಯಲ್ಲಿ ಹೇಳಿದ ಮಜಗರ
"ನಿನ್ನ ಗೊಂದಲ ಸರಿಯಾದದ್ದೇ. ನನಗೂ ಈ ಗಂಟನ್ನ ಸರಿಯಾಗಿ ಬಿಡಿಸಲಾಗುತ್ತಿಲ್ಲ. ಆದರೆ ಜುಕಾವು ಹೇಳುವಂತೆ ನಮಗೆ ಕಾಣುತ್ತಿರುವುದೆಲ್ಲ ಸುಳ್ಳೆಂಬುದೇ ಸತ್ಯ."
"ಹಾಗಂದ್ರೆ?" ಮತ್ತೆ ಪ್ರಶ್ನಿಸಿದ ಮಜಗರ
" ನನ್ನನ್ನ ಕಾಡಬೇಡ, ಮುಂದಿನ ಹುಣ್ಣಿಮೆಗೆ ಜುಕಾವು ಸರಿಜಾದ್ಗಡದಲ್ಲಿ ಎಲ್ಲ ಮುನಿಶ್ರೇಷ್ಠರನ್ನ ಬರಹೇಳಿದ್ದಾರೆ. ನಮಗೂ ಆಹ್ವಾನವಿದೆ. ಅವರು ಅಲ್ಲಿ ಎಲ್ಲವನ್ನ ತಿಳಿಸುತ್ತಾರೆ, ಮತ್ತು ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಚರ್ಚೆ ಮಾಡುವುದೇ ಆ ಸಭೆಯ ಉದ್ದೇಶ. ನಿನ್ನನ್ನೂ ಕರೆದುಕೊಂಡು ಹೋಗುತ್ತೇನೆ. ನಿನ್ನ ಅನುಮಾನ ಗೊಂದಲ ಎಲ್ಲ ಅಲ್ಲಿ ಪರಿಹಾರವಾಗುತ್ತದೆ. ಅಲ್ಲಿಯವರೆಗೆ ಸಹನೆಯಿರಲಿ" ಸಮಾಧಾನದಲ್ಲಿ ಅರಿವಾಗುವಂತೆ ಹೇಳಿದ ಸುಪಿ.
ಮಜಗರ ಮೌನದಲೇ ಸಮ್ಮತಿಸಿದ.Monday, 5 November 2012

COMMON LIFE: ಭಂ ಬೋಲೆ..

COMMON LIFE: ಭಂ ಬೋಲೆ..: ನಾನ್ಯಾರೆಂಬ ಒಗಟು... "ನಿನ್ನ ಪ್ರಶ್ನೆಗಳಿಗೆ ಉತ್ತರವಿದೆ" ಎದುರಿಗೆ ಕುಳಿತಿದ್ದ ಸೂರಿಗೆ ಹೇಳುತ್ತಿದ್ದರು ಜಂಗುಬಾಬ. "ಜುಕಾವು ನಿನ್ನನ್ನ ಇಲ್ಲಿಗೆ ಕರೆತಂದಿದ...

ಭಂ ಬೋಲೆ..

ನಾನ್ಯಾರೆಂಬ ಒಗಟು...


"ನಿನ್ನ ಪ್ರಶ್ನೆಗಳಿಗೆ ಉತ್ತರವಿದೆ" ಎದುರಿಗೆ ಕುಳಿತಿದ್ದ ಸೂರಿಗೆ ಹೇಳುತ್ತಿದ್ದರು ಜಂಗುಬಾಬ.
"ಜುಕಾವು ನಿನ್ನನ್ನ ಇಲ್ಲಿಗೆ ಕರೆತಂದಿದ್ದಕ್ಕೆ ಬಲವಾದ ಕಾರಣವಿದೆ, ನಿನಗೆ ಈಗ ಒಂದುವಾರದ ಪ್ರಣವಮಂತ್ರದ ಧ್ಯಾನವೂ ಆಗಿದೆ, ಸಹಜವಾಗಿ ನಿನ್ನಲ್ಲಿ ಬದಲಾವಣೆ ನನಗೆ ಕಾಣಿಸುತ್ತಿದೆ. ಈಗ ಕೆಲವಿಚಾರಗಳನ್ನ ನಾನು ಹೇಳಬಹುದು." ಒಮ್ಮೆ ತಡೆದು ಮತ್ತೆ ಮುಂದುವರಿಸಿದರು.
"ಮಾನವ ಬದಲಾಗುತ್ತ ಬಂದಹಾಗೆ ತನ್ನ ನೈಜ ಸ್ವಭಾವವಾದ ಕ್ರೌರ್ಯವನ್ನ ಬದಲಾಯಿಸಿಕೊಳ್ಳಲಿಲ್ಲ. ಕತ್ತಲೆಯ ಪ್ರಪಂಚ ತೆರೆದುಕೊಳ್ಳುತ್ತಿದೆ. ಅದು ಬೆಳೆಯುತ್ತಿದೆ. ಅದು ಸಂಪೂರ್ಣವಾಗಿ ಆವರಿಸಿಕೊಳ್ಳುವ ಮೊದಲು ಅದನ್ನ ತಡೆಯಬೇಕು. ಅದಕ್ಕಾಗಿಯೇ ಜುಕಾವು ನಿನ್ನನ್ನ ಇಲ್ಲಿಗೆ ಕರೆದುಕೊಂಡು ಬಂದಿದ್ದು." ಸೂರಿ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ.
"ನೀನು ಮಾಡಬೇಕಾಗಿರುವ ಕೆಲಸ ಬಹಳವಿದೆ. ಅದನ್ನೆಲ್ಲ ಸೂಕ್ಷ್ಮವಾಗಿ ಸಮಯನಬಂದಾಗ ಹೆಳುತ್ತೇನೆ."
ಸೂರಿ ಮಧ್ಯದಲ್ಲಿ ಮಾತನಾಡಿದ" ಸರಿ ನನ್ನನ್ನು ಆಯ್ಕೆ ಮಾಡಿಕೊಂಡಿದ್ದೇಕೆ? ನನ್ನಲ್ಲಿ ಏನು ಕಂಡು ಹೀಗೆ ಕರೆದುಕೊಂಡು ಬಂದಿದ್ದೀರಿ?" ಎಂದ.
"ನಾನು ಏನೆಲ್ಲ ಹೇಳಿದರೂ ನೀನು ಯಾರೆಂಬುದನ್ನ ಮಾತ್ರ ಹೇಳಲಾರೆ. ಅದಕ್ಕೆ ನನಗೆ ಪರವಾನಿಗೆಯೂ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅದನ್ನ ನೀನೇ ಕಂಡುಕೊಳ್ಳಬೇಕು. ಅದೇ ನಿನ್ನ ವಿಧಿ." ಒಗಟನ್ನ ಬಿಡಿಸದೆ ಮರೆಮಾಚಿದರು ಜಂಗುಬಾಬ.
"ಈ ಗೊಂದಲವೇ ನನ್ನನ್ನ ತೀವ್ರವಾಗಿ ಕಾಡಿದೆ. ಜುಕಾವುವನ್ನು ನಾನು ಮೊದಲು ಕಂಡಾಗಲೇ ನನಗೆ ವಿಚಿತ್ರವಾದ ಅನುಭವಗಳು. ಅವರ ಮಾತನ್ನು ಕೇಳಿದ ಮೇಲೆಯತೂ ನಾನು ವಿಚಿತ್ರವಾದ ಭಾವ ತಳಮಳವನ್ನ ಅನುಭವಿಸಿದ್ದೇನೆ. ಕಡೆಗೆ ನಾನು ನನ್ನನ್ನೇ ಮರೆತುಹೋಗಿದ್ದೇನೆ." ಮೊದಲ ಬಾರಿಗೆ ತನ್ನ ಭಾವನೆಯನ್ನ ಹಂಚಿಕೊಂಡ ಸೂರಿ.
"ನಿನ್ನನ್ನ ನೀನು ಮರೆತದ್ದು, ನಿಜವಾದ ನಿನ್ನನ್ನ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ಹುಟ್ಟು ಯಾವುದಕ್ಕಾಗಿದೆ ಎಂಬುದನ್ನ ನಾವು ಮೊದಲು ಪತ್ತೆ ಹಚ್ಚಬೇಕು. ಅದೇ ನಮ್ಮ ಗುರಿಯಾಗಿರಬೇಕು." ಎಂದರು ಜಂಗುಬಾಬ.
"ಜುಕಾವು ಕೂಡಾ ಇದನ್ನೇ ಹೇಳಿದ್ದಾರೆ."
"ಅದೇ ಇಲ್ಲಿಯ ಅಲಿಖಿತ ನಿಯಮ. ಇದು ನೀನು ಇಷ್ಟುದಿನ ನೋಡಿರುವ ಜಗತ್ತಲ್ಲ. ಇಲ್ಲಿಯ ನಿಯಮಗಳೇ ಬೇರೆ. ಇಲ್ಲಿಯ ಸಹಜತೆಗಳೇ ಬೇರೆ. ಮೊದಲು ನೀನು ಭಾವನೆಯನ್ನ ಬಿಡಬೇಕು, ಬಾಂಧವ್ಯಗಳನ್ನ ಬಿಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಬದುಕನ್ನ ಬಿಡಬೇಕು. ಶ್ರಮ, ಸೌಕರ್ಯ,ಸುಖ ಎಂಬ ಮೂರನ್ನ ನೀನು ತಿಳಿಯಬೇಕು. ಜ್ನಾನವೇ ಜಗತ್ತು, ಬೆಳಕೊಂದೇ ಸತ್ಯ. ಇಲ್ಲಿ ನಿನಗಾಗುತ್ತಿರುವುದೆಲ್ಲ ಭ್ರಮೆ. ಕಡೆಗೆ ನೀನೇ ಒಂದು ಭ್ರಮೆ. ಎಲ್ಲವೂ ಕೇವಲ ಒಂದು ಚೆತನಕ್ಕಾಗುತ್ತಿರುವ ಭ್ರಮೆ ಎಂಬುದು ಪರಮ ಸತ್ಯ ಎಂಬುದು ತಿಳಿದಿರಲಿ. ಇದು ನಿನಗೆ ಸುಲಭವಾಗಿ ತಿಳಿಯುವುದಿಲ್ಲ. ಅದು ತಿಳಿದ ದಿನವೇ ನಿನಗೆ, ನೀನು ಯಾರು ಎಂಬುದು ತಿಳಿಯುತ್ತದೆ. ಅದನ್ನ ಸಾಧ್ಯವಾದಷ್ಟು ಬೇಗ ಸಾಧಿಸು." ಜಂಗುಬಾಬ ಸೂರಿಯ ಬದುಕಿನ ಸತ್ಯವನ್ನ ತೆರೆದಿಟ್ಟರು.
ಒಂದುವಾರ ಅವಿಶ್ರಾಂತವಾಗಿ ನಡೆದ ಪ್ರಣವ ಮಂತ್ರದ ಸಹಾಯದಿಂದ ಸೂರಿಗೆ ಜಂಗುಬಾಬಾರ ಮಾತೆಲ್ಲ ಅರ್ಥವಾದಂತಾಯ್ತು.

ಸಮಯ ಸಿಕ್ಕಾಗೆಲ್ಲ ಜಂಗುಬಾಬ ಸೂರಿಗೆ ಉಪದೇಶ ನೀಡುತ್ತಿದ್ದರು. ಸೂರಿ ಕೇವಲ ಹದಿನೈದು ವರ್ಷದ ಹುಡುಗನಾಗಿದ್ದರೂ, ಸೂಕ್ಷ್ಮಗಳನ್ನ ಬಹಳಬೇಗ ಗ್ರಹಿಸುತ್ತಿದ್ದ. ಸೂರಿಗೆ ತಾನು ಹುಟ್ತಿರುವುದೇ ಹೀಗೊಂದು ಬದಲಾವಣೆಯ ಸಲುವಾಗಿ ಎಂದು ತಿಳಿದಿರಲಿಲ್ಲ.
ಕುಠೀರದ ವಾತವರಣಕ್ಕೆ ಸೂರಿ ಬೇಗ ಹೊಂದಿಕೊಂಡಿದ್ದ. ತಪಸ್ಸನ್ನ ಮನಸಾರೆ ಸ್ವೀಕರಿಸಿದವನಂತೆ ಧ್ಯಾನಸ್ಥನಾಗುತ್ತಿದ್ದ. ಹಾಗೆ ಧ್ಯಾನಕ್ಕೆ ಹೋದಾಗಲೆಲ್ಲ ಅವನು ಪ್ರಪಂಚದ ಕೊಂಡಿಯನ್ನ ಕಳಚಿಕೊಂಡವನಂತೆ ಶವಸ್ಥಿತಿಗೆ ತಲುಪಿಬಿಡುತ್ತಿದ್ದ. ಅಂತಹದೊಂದು ತಲ್ಲೀನತೆಯನ್ನ ಅಷ್ಟು ಚಿಕ್ಕವಯಸ್ಸಿನಲ್ಲಿಯೇ ಮೈಗೂಡಿಸಿಕೊಂಡಿದ್ದನ್ನ ಕಂಡ ಜಂಗುಬಾಬಾರಿಗೆ ಅವನನ್ನ ಕರೆತಂದ ಊರ್ಧ್ವಗುರು ಜುಕಾವುರಮೇಲೆ ಮತ್ತಷ್ಟು ಗೌರವ ಬಂದಿತ್ತು.
ಸೂರಿಗೆ ರಾತ್ರಿಯೆಲ್ಲ ನಿದ್ದೆ ಬರುತ್ತಿರಲಿಲ್ಲ. ಸದಾ ಒಂಡೆ ಕನಸು ಬೀಳುತ್ತಿತ್ತು. ಆ ಕನಸಿನಲ್ಲಿ ಯಾವಾಗಲೂ ಒಂದು ಚಹರೆಯನ್ನ ಕಾಣುತ್ತಿದ್ದ. ಆಚಹರೆ ಪಕ್ಕದಲ್ಲಿ ಒಬ್ಬ ಮಹಾತಪಸ್ವಿ ಇರುತ್ತಿದ್ದ.ನೋಡಲೂ ಭಯವಾಗುವಷ್ಟು ಭೀಕರತೆ ಅವನಲ್ಲಿತ್ತು. ಆದರೆ ಆ ತಪಸ್ವಿಗಿಂತ ಅವನ ಪಕ್ಕದಲ್ಲಿಯ ಆ ಚಹರೆಯೇ ಸೂರಿಯನ್ನ ಕೆಣಕುತ್ತಿದ್ದುದು. ಆ ಚಹರೆ ಒಬ್ಬಳು ಹುಡುಗಿಯದು. ಅವನಲ್ಲಿ, ಮೋಹವಾಗಲೀ ಕಾಮವಾಗಲೀ ಆಕರ್ಷಣೆಯಾಗಲೀ ಹುಟ್ಟುತ್ತಿರಲಿಲ್ಲ. ಆದರೆ ಆ ಚಹರೆ ತನ್ನ ಬದುಕಿನಲ್ಲಿ ತೀರಾ ಹತ್ತಿರದ ಸಂಬಂಧವನ್ನ ಹೊಂದಲಿರುವಂತೆ ಅವನಿಗೆ ಭಾಸವಾಗುತ್ತಿತ್ತು. ಅವನ ಕನಸಿಗೆ ಸ್ಪಷ್ಟತೆಯಿರಲಿಲ್ಲ. ಆದರೆ ಅದು ಪ್ರತಿದಿನ ಅವನನ್ನ ಕಾಡುತ್ತಿತ್ತು. ಪ್ರತಿದಿನವೂ ಒಂದೇರೀತಿಯಾಗಿ ಆ ಕನಸು ಬೀಳುತ್ತಿತ್ತು. 

ಆದರೆ ಆ ಚಹರೆ ಸುಮೇರಿಯದೆಂಬ ಕಲ್ಪನೆ ಮಾತ್ರ ಅವನಿಗಿರಲಿಲ್ಲ.


Wednesday, 10 October 2012

ಭಂ ಬೋಲೆ ೫

ಭಿನ್ನವಶೀಕರಣ....ಭಿನ್ನವಶೀಕರಣಕ್ಕೆ ಮುದ್ವ ಮುಂದಾಗಿದ್ದ. ಅವನ ಆಣತಿಯಂತೆ, ನಾಲ್ಕು ಅಡಿಯ ಹೋಮಕುಂಡವನ್ನ ಸ್ಮಶಾನದ ಮುಂಬಾಗಿಲಲ್ಲಿ ಬೆಂಕಿ ಕೊಳ್ಳಿಯ ಬೆಳಕಲ್ಲಿ ತಯಾರಿಸಲಾಗಿತ್ತು. ಮುದ್ವನ ಹೊರತಾಗಿ ಅಲ್ಲಿ ಅವನ ನಾಲ್ಕು ಸಹಚರರು ಮಾತ್ರ ಇದ್ದಿದ್ದು. ಮತ್ತಾರೂ ಅಲ್ಲಿಗೆ ಬಾರದಂತೆ ದಿಗ್ಬಂಧನವನ್ನೂ ಹೇರಲಾಗಿತ್ತು. ಹಲಸಿನೆಲೆ, ತುಪ್ಪ, ದರ್ಬೆ, ಕುಂಕುಮದ ನೀರು, ಎಲುಬಿನ ತುಂಡುಗಳನ್ನ ಕುಂಡದ ಎಡಗಡೆಯಲ್ಲಿ ಸಾಲಾಗಿ ಜೋಡಿಸಲಾಗಿತ್ತು. ಕುಂಡದ ಎದುರಾಗಿ, ಮುದ್ವ ಪದ್ಮಾಸನದಲ್ಲಿ ಕಣ್ಮುಚ್ಚಿ ಕುಳಿತಿದ್ದವ ಕಣ್ನು ತೆರೆಯುತ್ತಿದ್ದಂತೆ ಕುಂಡದಲ್ಲಿ ಅಗ್ನಿ ಜ್ವಲಿಸಿತು.  ಸಹಚರರ ಮುಖದಲ್ಲಿ ಮಂದಹಾಸ. ಮೂಲಮಂತ್ರಗಳನ್ನ, ವಶೀಕರಣ ಛಂದಸ್ಸನ್ನ ಸಾದ್ಯಂತವಾಗಿ ಶುರುಮಾಡಿದ. ಬಣ್ಣದ ಪುಡಿಯಲ್ಲಿ ಮಂಡಲವನ್ನ ಚಿತ್ರಿಸಲಾಗಿತ್ತು. ಅದನ್ನ ಅಷ್ಟಚೌಕವನ್ನಾಗಿ ಬಿಡಿಸಿ, ಅದರ ಮಧ್ಯದಲ್ಲಿ, ವ್ರತ್ತವನ್ನ ರಚಿಸಲಾಗಿತ್ತು. ಆ ವ್ರತ್ತದ ಕೇಂದ್ರದಲ್ಲಿ ಗೋಲಿಯೊಂದನ್ನ ಚಲಿಸದಂತೆ ಇಡಲಾಗಿತ್ತು. ಮುದ್ವನ ಮಂತ್ರ ತಾರಕಕ್ಕೆ ಸಾಗುತ್ತಿದ್ದಂತೆ, ಗೊಲಿ ಅದುರಲು ಶುರುವಾಯ್ತು. ಸಹಚರರೆಲ್ಲ ಗೋಲಿಯನ್ನ ಬಿಟ್ಟಕಣ್ಣು ಬಿಡದಂತೆ ನೋಡುತ್ತಿದ್ದರೆ, ಮುದ್ವ ಮಾತ್ರ ಸಾವಿರಾರುಮೈಲಿ ದೂರದ ದಕ್ಷಿಣಭಾರತದಲ್ಲಿಯ ಹಳ್ಲಿಯೊಂದರ ಪುಟ್ಟಮನೆಯಲ್ಲಿ, ದಾವಣಿಯನ್ನೇ ಚಾದರವನ್ನಾಗಿಸಿ ಮಲಗಿದ್ದ ಹದಿನೈದರ ಕನ್ನೆಯನ್ನೇ ನೋಡುತ್ತಿದ್ದ. ಕುಳಿತಲ್ಲಿಂದಲೇ ಅವನು ವಶೀಕರಣದ ಪ್ರಯೋಗ ಮಾಡಿದ್ದೇ ಅವಳಮೇಲೆ. ಗೋಲಿ ಉರುಳಿ ನಾಲ್ಕು ಗೆರೆಯಲ್ಲಿ ಚಿತ್ರಿಸಿದ ವ್ರತ್ತದ ಮೊದಲ ಗೆರೆಯನ್ನ ದಾಟಿತು. ಮಲಗಿದ್ದ ಕನ್ನೆ ಕಣ್ನುತೆರೆದಿದ್ದಳು. ಮುದ್ವನಲ್ಲಿಯೂ ಮಂದಹಾಸ ಜಿನುಗಿತು. ಮಂತ್ರ ಮುಂದುವರೆದಿತ್ತು. ಅವಳ ಕಣ್ಣು ನೀಲಿ ಬಣ್ಣಕ್ಕೆ ಬದಲಾಗುತ್ತಿತ್ತು. ಗೋಲಿ ಮತ್ತೆಲ್ಲೊ ಸಾಗಲು ಹಿಂದುಮುಂದು ಚಲಿಸುತ್ತಿತ್ತು. ಕುಂಕುಮದ ನೀರನ್ನ ಮಂಡಲದಮೆಲೆ ಸೋಕಿಸಿ, ಎಲುಬಿನ ತುಂಡನ್ನ ಗೋಲಿಗೆ ತಾಕಿಸಿ, ಹಲಸಿನೆಲೆಯಲ್ಲಿ ತುಪ್ಪವನ್ನ ಹವಿಸ್ಸನ್ನಾಗಿ ಕುಂಡಕ್ಕೆ ಬಡಿಸಿದ ಮುದ್ವ. ಕನ್ನೆ ಎಚ್ಚರವಿದ್ದರೂ ತನ್ನ ಕೈಕಾಲುಗಳನ್ನ ಶರೀರವನ್ನ ಚಲಿಸದಂತಾದಳು. ಕಾಲಿನ ಎಲ್ಲ ಬೆರಳುಗಳು ಸೆಟೆದುಕೊಂಡವು. ಹವಿಸ್ಸು ಒಂದೊಂದು ಮಂತ್ರದ ತುದಿಯಲ್ಲಿಯೂ ಅಗ್ನಿಯನ್ನ ಸೇರುತ್ತಿತ್ತು. ಪದೇ ಪದೇ ಎಲುಬಿನತುಂಡು ಗೋಲಿಯನ್ನ ತಾಕುತ್ತಿತ್ತು. ಕನ್ನೆಯ ಶರೀರ ಇದ್ದಕ್ಕಿದ್ದಂತೆಯೆ ಸಡಿಲವಾಗಿಹೋಯ್ತು. ಗೋಲಿ ಎಡಬದಿಯ ಚೌಕದ ಮೂಲೆಗೆ ಬಂದು ನಿಂತಿತು. ಕನ್ನೆ ಹಾಸಿಗೆಯಿಂದ ಎದ್ದು ಕನ್ನಡಿಯ ಮುಂದೆಹೋಗಿ ನಿಂತುಕೊಂಡಳು. ತನ್ನ ಕೈಗಳೆರಡನ್ನೂ ಒಟ್ಟುಸೇರಿಸಿ ಬಿಗಿಯಾಗಿ ಹಿಡಿದುಕೊಂಡಳು. ಮುದ್ವ ಛಂದಸ್ಸನ್ನ ಬದಲಿಸಿ ತನ್ನ ಸಹಚರರಲ್ಲಿಯೇ ಒಬ್ಬನನ್ನ ಕರೆದು ಅವನನ್ನ ಪೂರ್ತಿಯಾಗಿ ದರ್ಬೆಯಲ್ಲಿ ತಲೆಯಿಂದ ಪಾದದವರೆಗೆ ಮುಟ್ಟಿದ. ದೂರದಲ್ಲಿದ್ದ ಕನ್ನೆ ಜೀವಛ್ಛವವಾದವಳಂತೆ ಇದ್ದ ಸ್ಥಿತಿಯಲ್ಲಿಯೇ ಕಲ್ಲಿನಂತೆ ನಿಂತುಬಿಟ್ಟಳು. ಸಹಚರನ ಚರ್ಯೆ ಇದ್ದಕ್ಕಿದ್ದಂತೆಯೇ ಬದಲಾಗಿಹೋಯ್ತು. ಸಹಚರ ಶರೀರದ ರಚನೆಯ ಹೊರತಾಗಿ ಉಳಿದೆಲ್ಲವೂ ಸಾವಿರಮೈಲಿ ದೂರದ ಕನ್ನೆಯಾಗಿದ್ದ. ಕನ್ನೆ ಕಲ್ಲಿನಂತಾಗಿದ್ದಳು. ಮುದ್ವ ಗೋಲಿಯನ್ನ ನೋಡುವ ಹೊತ್ತಿಗೆ ಗೋಲಿ ಮೊದಲಿನಂತೆ ವ್ರತ್ತದ ಮಧ್ಯಭಾಗಕ್ಕೆ ಉರುಳಿಬಂದು ನಿಂತಿತ್ತು. ಹೋಮದಕುಂಡಕ್ಕೆ ರಾಳವನ್ನ ಮುಷ್ಟಿಯಲ್ಲಿ ಎರಚಿದ. ಅಗ್ನಿ ಇಡೀ ಸ್ಮಶಾನವನ್ನೇ ಆವರಿಸುವಂತೆ ಭುಗ್ಗೆಂದು ಮುಗಿಲೆತ್ತರಕ್ಕೆ ಚಿಮ್ಮಿ ಮೊದಲಿನಂತಾಯಿತು. 
"ಹೇಳು ನಿನ್ನ ಹೆಸರೇನು?" ಸಹಚರನನ್ನ ಕುರಿತು ಕೇಳಿದ ಮುದ್ವ.
"ಮಾಧವಿ" ಎಂದ ಸಹಚರ. ಬಾಕಿ ಸಹಚರರಲ್ಲಿ ಕುತೂಹಲ ಇಮ್ಮಡಿಸಿತು. ಮುದ್ವನ ಶಕ್ತಿಯನ್ನಕಂಡ ಅವರು ಚಕಿತರಾದರು. ಇದು ನಿಜಕ್ಕೂ ಪವಾಡವೇ ಸರಿ. ಮುದ್ವ ಮಹಾಮಹಿಮನೆಂಬ ಭಾವಕ್ಕೆ ಅವರೆಲ್ಲ ಬಂದಿದ್ದರು
" ಎಲ್ಲಿದ್ದೀಯ" ಮುದ್ವ ಮುಂದುವರೆಸಿದ.
"ಕನ್ನಡಿಯ ಎದುರಲ್ಲಿ"
"ತಿರುಗಿ ಬಂದು ಹಾಸಿಗೆಯಲ್ಲಿ ಕೂರಲು ಸಾಧ್ಯವೊ?"
"ನೀವು ಹೇಳಿದಲ್ಲಿಗೆ ಹೋಗುತ್ತೇನೆ" ಕನ್ನೆಯ ಶಾರೀರ ಸಹಚರನ ಶರೀರದಲ್ಲಿ ಧ್ವನಿಸುತ್ತಿತ್ತು.
"ಓಹೊ, ನಾನಿದ್ದಲ್ಲಿಗೆ ಬರುವೆಯಾ?"
"ದಾರಿ ಹೇಳಿ, ಹೊರಡಲು ಸಿದ್ಧನಿದ್ದೇನೆ."
"ಮನೆಯವರನ್ನೆಲ್ಲ ಬಿಟ್ತು ಇಲ್ಲಿಗೆ ಬರಲು ಸಿದ್ಧವಿದ್ದೀಯ, ನಿನ್ನನ್ನ ಯಾರಾದರೂ ತಡೆದರೆ?" ಮುದ್ವ ದ್ವಂದ್ವವನ್ನ ಮುಂದಿಟ್ಟ.
" ಅಲ್ಲಿಗೆ ಬರುವುದು ಗುರಿ, ನೀವು ಹೇಳಿದ್ದೇ ದಾರಿ, ಮಧ್ಯದಲ್ಲಿಯ ತೊಡಕುಗಳನ್ನ ಲೆಕ್ಕಿಸುವುದಿಲ್ಲ" ನಿರ್ಧಾರಿಸಿದವಳಂತೆ ಹೇಳಿದಳು.
ಮುದ್ವನಿಗೆ ಅಲ್ಲಿಗೆ ಎಲ್ಲವೂ ಅವನ ಎಣಿಕೆಯಂತೆಯೇ ನದೆದಿತ್ತು. 
"ನಿನ್ನನ್ನ ಬೇಕಾದಾಗ ಕರೆಸಿಕೊಳ್ಳುವೆ. ಈಗ ನೀನು ಸ್ವತಂತ್ರಳು. ಹಾಗೆಯೇ ನಿನ್ನ ಸುಪ್ತಮನಸ್ಸಿನಲ್ಲಿ ಒಂದು ವಿಚಾರವಿರಲಿ. ನನ್ನ ಒಪ್ಪಿಗೆಯ ಹೊರತಾಗಿ ನೀನು ಕನ್ಯತ್ವವನ್ನ ಕಳೆದುಕೊಳ್ಳುವ ಹಾಗಿಲ್ಲ. ಹಾಗಾದಲ್ಲಿ ಅದೇ ನಿನ್ನ ಕೊನೆಯ ದಿನವಾಗಿರುತ್ತದೆ" ಎಂದು ಹೇಳುತ್ತ, ಕೊನೆಯ ಹವಿಸ್ಸನ್ನ ಅಗ್ನಿಗರ್ಪಿಸುತ್ತ ಸಹಚರನ ಮೈಮೇಲೆ ಮತ್ತೊಮ್ಮೆ ದರ್ಬೆಯನ್ನ ಸೋಕಿ ಗೋಲಿಯನ್ನ ಮಂಡಲದಿಂದ ಹೊರತೆಗೆದ. ಕನ್ನಡಿಯ ಎದುರಲ್ಲಿ ನಿಂತಿದ್ದ ಕನ್ನೆ ತ್ರಾಣವೇ ತೀರಿಹೋದವಳಂತೆ ಧೊಪ್ಪನೆ ಕೆಳಗೆ ಬಿದ್ದಳು. ಮುದ್ವ ಮುಷ್ಟಿಯನ್ನೊಮ್ಮೆ ಆಗಸಕ್ಕೆತ್ತಿ ಗಟ್ಟಿಯಾಗಿ ಕೂಗಿದ, ಭಂ ಬೋಲೆಯೆಂದು... ಸಹಚರರು ಅವಾನನ್ನ ಅನುಸರಿಸಿದರು.

Sunday, 7 October 2012

ಭಂ ಬೋಲೆ ೪

ಪ್ರಣವಮಂತ್ರಂ


ಅವರಿಗೆ ಕತ್ತಲೆಯೇ ಆಗಬೇಕೆಂದೇನಿಲ್ಲ. ಅವರ ಆಚರವಿಚಾರಗಳಿಗೆ ಧಕ್ಕೆತರದಂತೆ ಅವರ ಕರ್ಮಾನುಷ್ಠಾನದ ಜಾಗದಲ್ಲಿ ನಿರ್ಜನ ಪರಿಸ್ಥಿತಿಯಿದ್ದರೆ ಸಾಕು. ಮುದ್ವನ ಸ್ನಾನ ಆಗತಾನೆ ಮುಗಿದಿತ್ತು. ಸ್ನಾನವೆಂದರೆ ನೀರಿನಲ್ಲಿ ಮೂರುಬಾರಿ ಮುಳುಗಿ ಏಳುವುದಷ್ಟೆ. ಮುಳುಗೆದ್ದ ನಂತರದಲ್ಲಿ, ಮೈತುಂಬ ಸಿಗುವಷ್ಟು ಭಸ್ಮವನ್ನ ಮೆತ್ತಿಕೊಳ್ಳುವುದು. ಮನಸಿಗೆ ಕಂಡಕಡೆಗಳಲ್ಲಿ ಜೀವವೇ ಇಲ್ಲವೆಂಬಷ್ಟು ನಿಶ್ಚಲನಾಗಿ ಕುಳಿತುಬಿಡುವುದು. ಮುದ್ವ ಧ್ಯಾನಕ್ಕೆ ಕೂರುವಾಗೆಲ್ಲ ಒಂದು ಕೈ ಮೇಲೆತ್ತಿ ಮುಷ್ಟಿ ಕಟ್ಟಿಯೇ ಕೂರುವುದು. ಅದು ಅವನ ಧ್ಯಾನಾಸನ. ಒಂದೂ ಮರವಿಲ್ಲದ ಬೋಳು ಬೆಟ್ಟದಮೇಲೆ ಮುದ್ವ ಹಾಗೆಯೇ ಕುಳಿತಿದ್ದ. ಬೆಟ್ಟದ  ಬುಡದಲ್ಲಿ ಸಣ್ಣ ತೊರೆಯೊಂದು ರಭಸದಲ್ಲಿ ಹರಿಯುತ್ತದೆ. ಮುದ್ವ ತೊರೆಯಲ್ಲಿ ಸ್ವಚ್ಚಂದವಾಗಿ ಈಜಿ ಹಾಯಗಿದ್ದ ಮೀನುಗಳನ್ನ ಕುಳಿತಲ್ಲಿಯೇ ಕೊಲ್ಲುತ್ತಿದ್ದ. ಅದು ಅವನಿಗೆ ಸಿದ್ಧಿಸಿದ ವಿದ್ಯೆ... ಮುದ್ವ ಸ್ವಭಾವದಲ್ಲೇ ಕ್ರೂರಿ. ಹಸಿವಿಗಾಗಿ ಕೊಲ್ಲುವುದು ನೈಸರ್ಗಿಕ ನಿಯಮ. ಮುದ್ವ ಹಾಗಲ್ಲ, ಅವನ ಮಂತ್ರದ ನೆನಪಿಗಾಗಿ, ತನ್ನ ವಿಕಾರ ವಿದ್ಯೆ ಸಿದ್ಧಿಗಾಗಿ ಹಾಗೆ ಕೊಲ್ಲುತ್ತಿದ್ದ. ಅವನ ಕಣ್ಣೆದುರು ಸಿಂಹವೇ ಬಂದರೂ ಅದನ್ನ ಬಲು ಸೀದ ಸಾದ ಕೊಂದುಮುಗಿಸುವಷ್ಟು ವಾಮ ವಿದ್ಯೆ ಅವನಿಗೆ ಕರಗತವಾಗಿತ್ತು. ವಾಮ ವಿದ್ಯೆಯಲ್ಲಿ ಪ್ರಚಲಿತ ಅಘೋರಿಗಳಲ್ಲೇ ಮುದ್ವ ಪ್ರಖಾಂಡ ಪಂಡಿತ. ಹಾಗೆ ಕೊಂದ ಮೀನುಗಳನ್ನ ಮುದ್ವ ತಿನ್ನುತ್ತಿರಲಿಲ್ಲ. ಅದು ಅವನ ಚೇಷ್ಟೆ ಅಷ್ಟೆ. ಧ್ಯಾನ ಮುಗಿಯುವುದರೊಳಗಾಗಿ ಅಸಂಖ್ಹ್ಯ ಮೀನುಗಳು ಸತ್ತಿರುತ್ತಿದ್ದವು.
..........................................
ವ್ರತ್ತಾಕಾರದಲ್ಲಿ ಸುತ್ತಲೂ ಹರಡಿದ ಬೆಟ್ಟಗಳ ಮಧ್ಯದಲ್ಲಿ ವಿಶಾಲವಾದ ಬಯಲು. ಅಲ್ಲಿ ಕೆಲವು ಕುಠೀರಗಳು. ಒಳಗೆ ಸದಾ ಧ್ಯಾನಸ್ಥರಾಗಿರುವ ವ್ರದ್ಧ ಸನ್ಯಾಸಿಗಳು. ಪ್ರಣವ ಮಂತ್ರದ ಹೊರತಾಗಿ ಅವರ ಆಲೋಚನೆಯಲ್ಲೂ ಇನ್ನೊಂದು ಕಲ್ಪನೆ ಇರಲಿಲ್ಲ. ಎಚ್ಚೆತ್ತರೂ ಸುಪ್ತ ಮನಸಲ್ಲಿ ಪ್ರಣವ ಮಂತ್ರ ಜಪಿಸುತ್ತಲೇ ಇರುವ ನಿಜವಾದ ಸಾಧುಗಳು ಅವರು. ಸೂರಿಯನ್ನ ಹೊತ್ತುಕೊಂಡು ಹೊರಟಿದ್ದ ವ್ರದ್ಧ ಕುದುರೆಸವಾರನ ಕುದುರೆ ಬಯಲಿನಲ್ಲಿಯ ಮಧ್ಯದ ಕುಠೀರದ ಮುಂದೆ ಬಂದು ನಿಂತುಕೊಂಡಿತು. ಆತ ವ್ರದ್ಧ, ಎದೆಯನ್ನ ದಾಟಿದ ಬಿಳಿಯ ಕೂದಲು, ಭುಜವನ್ನೂ ಮೀರಿ ಬೆಳೆದ ಬಿಳಿಯ ಹಿಪ್ಪಿ. ಮೈ ಮೇಲೆ ಯಾವಗಲೂ ಮೊಣಕಾಲಿನವರೆಗೆ ಬರುವ ಒಂದೇ ಒಂದು ಕಪ್ಪು ಕಾಷಾಯ.ಊಹೆಗೂ ನಿಲುಕದ ವೇಗದ ಬಿಳಿಯ ಕುದುರೆ ಅವನ ಆಸ್ತಿ. ಅವನ ತಪಸ್ಸು, ಮತ್ತು ಅವನ ಇತಿಹಾಸವೇ ಅವನ ಗೌರವ. ವ್ರದ್ಧನನ್ನ ವಾಮ ಹಾಗೂ ವಾಮೇತರ ಅಘೋರಿಗಳು ಕರೆಯುತ್ತಿದ್ದುದು, "ಜುಕಾವುಮುನಿ" ಎಂದು. ಜುಕಾವು ಪರಮಶ್ರೇಷ್ಠ ಮುನಿವರ್ಯನೆಂಬುದು ಎಲ್ಲ ಅಘೋರಿಗಳಿಗೆ ತಿಳಿದ ವಿಷಯವೇ.
ಜುಕಾವು ಅತಿಮಾನುಷನಂತೆ ಬರೋಬ್ಬರಿ ಏಳು ಅಡಿಯ ಆಳು. ಜುಕಾವು ಸೂರಿಯನ್ನ ಕುದುರೆಯಿಂದ ಕೆಳಗಿಳಿಸಿ ತಾವೂ ಇಳಿದರು . ಸೂರಿ ಜುಕಾವುಮುನಿಯನ್ನೇ ನೋಡುತ್ತ ನಿಂತುಕೊಂಡ. ತನ್ನೊಂದಿಗೆ ಬಾ ಎಂದು ಸನ್ನೆ ಮಾಡಿ ಜುಕಾವು ಮುಖ್ಯ ಕುಠೀರದ ಒಳನಡೆದರು. ಸೂರಿ ಹಿಂಬಾಲಿಸಿದ. ವಿಶಾಲವಾದ ಕುಠೀರದ ಒಳಾಂಗಣದಲ್ಲಿ, ಹಲವಾರು ವ್ರದ್ಧ ಸನ್ಯಾಸಿಗಳು ಧ್ಯಾನಸ್ಥರಾಗಿದ್ದರು. ಜುಕಾವು ಒಳಬರುತ್ತಿದ್ದಂತೆಯೆ ಧ್ಯಾನದಲ್ಲೇ ಪರಮಗುರುವಿನ ಆಗಮನವನ್ನ ಅರಿತ ಸನ್ಯಾಸಿಗಳೆಲ್ಲ, ಎದ್ದು ನಿಂತರು. ವ್ರದ್ಧ ಸನ್ಯಾಸಿಗಳ ಗುರುವಾಗಿದ್ದ ಜಂಗುಬಾಬಾ ತಾನಿದ್ದಲ್ಲಿಂದಲೆ ಉದ್ದಂದ ನಮಸ್ಕಾರ ಮಾಡಿದ. ಜಂಗುಬಾಬಾನ ಹಣೆ ಜುಕಾವುಮುನಿಯ ಕಾಲ್ಬೆರಳುಗಳನ್ನು ತಾಕುತ್ತಲೇ ಜುಕಾವು ಕಣ್ಮುಚ್ಚಿಕೊಂಡು, ಓಂ ಎಂದರು. ಸಮಸ್ಕರಿಸಿ ಎದ್ದ ಜಂಗುಬಾಬಾ "ಮಹಾಮುನಿ ನಿಮ್ಮ ಆಗಮನವನ್ನೇ ನಿರೀಕ್ಷಿಸುತ್ತಿದ್ದೆವು. ಕತ್ತಲ ಸಾಮ್ರಾಜ್ಯದ ಉದಯ ಆಗಿಹೋಯಿತು. ಸಾಮ್ರಾಜ್ಯಕ್ಕೆ ಮುದ್ವನೀಗ ಅಧಿಪತಿ. ಚರಾಚರಗಳ ರಕ್ಷಣೆ ನಿಮ್ಮಮೇಲಿದೆ. ನಾವು ದಾರಿಕಾಣದಾಗಿದ್ದೇವೆ." ವಿಹ್ವಲನಾಗಿ ಆತಂಕದಲ್ಲಿ ನುಡಿದ.
"ಅರಿತಿದ್ದೆನೆ," ಮತ್ತೇನನ್ನೋ ವಿಚಾರಮಾಡುತ್ತ ಹೇಳಿದರು ಜುಕಾವು. ವಿಚಾರದಿಂದ ಹೊರಬಂದವರಂತೆ " ಯಾವುದೂ ತಿಳಿಯಾಗಿ ಕಾಣುತ್ತಿಲ್ಲ. ನಿಮಗೆ ಕೊಟ್ಟ ಮಾತಿನಂತೆ ಹುಡುಗನನ್ನ ಕರೆತಂದಿದ್ದೇನೆ." ಎಂದು ಸೂರಿಯನ್ನ ಎದುರು ಎಳೆಯುತ್ತ ಎಲ್ಲರಿಗೂ ತೋರಿಸಿದರು ಜುಕಾವು. ಸೂರಿಗೆ ಎಲ್ಲವೂ ಕನಸಿನಂತೆಯೇ ಇತ್ತು. ಜಾಗ, ಅಲ್ಲಿಯ ಮುನಿಗಳು ಅವರ ಮಾತು, ಜುಕಾವು ಎಲ್ಲವೂ ಅವನಿಗೆ ಅಪರಿಚಿತವೇ. ತನ್ನನ್ನೇಕೆ ಕರೆತಂದಿದ್ದು, ಕರೆತರುವುದಾಗಿ ಮಾತುಕೊಟ್ಟಿದ್ದೇಕೆ, ತಾನು ಮಾದುವುದಾದರೂ ಏನು, ಸೂರಿಯ ಮನಸಲ್ಲಿ ಒಂದೇ ಸಮನೆ ನೂರೆಂಟು ಪ್ರಶ್ನೆಗಳು ಶುರುವಾದವು. ಮೂಲೆಯಲ್ಲಿ, ಭಯ ಶುರುವಾದರೂ, ಜುಕಾವುಮುನಿಯ ಸ್ಪರ್ಷದಿಂದ, ತಾನು ಅಭದ್ರನೆಂದು ಸೂರಿಗೆ ಅನಿಸಲಿಲ್ಲ.
ಎಲ್ಲರೂ ಒಮ್ಮೆ ಸೂರಿಯನ್ನೇ ನೋಡಿದರು. "ನಾವು ಧನ್ಯರು, ವಂದನೆಗಳು ಗುರುವರ್ಯ" ಎಂದ ಜಂಗುಬಾಬ. ಉಳಿದ ಸನ್ಯಾಸಿಗಳೂ ಜುಕಾವುಮುನಿಗೆ ನಿಂತಲ್ಲಿಯೇ ಬಾಗಿ ನಮಸ್ಕರಿಸಿದರು.
ಸೂರಿಯನ್ನ ತನ್ನ ಕಡೆಗೆ ತಿರುಗಿಸಿಕೊಂಡ ಜುಕಾವುಮುನಿ " ನಾನು ಅವತ್ತೇ ಹೇಳಿದ ಹಾಗೆ, ನಮ್ಮ ಜನ್ಮ ಯಾವುದಕ್ಕಾಗಿದೆ ಎಂಬುದನ್ನ ಮೊದಲು ಅರಿಯಬೇಕು. ಕಾಲ ನಿನಗೀಗ ಬಂದಿದೆ. ನಿನ್ನ ಹಳೆಯ ಬದುಕೆಲ್ಲವೂ ಬರಿಯ ಕಲ್ಪನೆಯಷ್ಟೆ. ಅದು ನಿನ್ನ ನೆನಪಲ್ಲಿ, ಹಗಲಾದಮೆಲೆ ಕನಸು ಮರೆಯುವಂತೆ ಮರೆತುಹೋಗುತ್ತದೆ. ಇಂದಿನಿಂದ ಜಂಗುಬಾಬ ನಿನ್ನ ಗುರುಗಳು. ಮತ್ತೆ ನಾನು ನಿನ್ನನ್ನ ಕಾಣುವವರೆಗೂ ನೀನು ಇಲ್ಲಿಯೇ ಇರತಕ್ಕದ್ದು. ನಿನ್ನ ಜವಾಬ್ದಾರಿ ನನ್ನದು. ಭಯ ನಿನ್ನಲ್ಲಿ ಬರಕೂಡದು. ದಾರಿಯಲ್ಲಿ ಹೇಳಿದ ವಿಷಯಗಳು ನೆನಪಿರಲಿ" ಎಂದು ಹೇಳಿ ಸೂರಿಯ ತಲೆಯಮೇಲೆ ಕೈ ಇಟ್ಟು ಓಂಕಾರ ಪಠಿಸಿ ಆಲ್ಲಿಂದ ಹೊರನಡೆದರು. ಸೂರಿ ಅವರನ್ನೆ ನೋಡುತ್ತ ನಿಂತುಕೊಂಡ.
ಜಂಗುಬಾಬಾ ಬಂದು ಸೂರಿಯನ್ನ ಮುಟ್ಟದಿದ್ದರೆ ಸೂರಿ ಹಾಗೆ ನೋಡುತ್ತಲೇ ಇರುತ್ತಿದ್ದನೇನೊ.
"ಮಗು ಇಂದಿನಿಂದ ನಿನ್ನ ಹೆಸರು ಬಾಬಾ." ಎಂದರು ಜಂಗುಬಾಬಾ.
"ನನ್ನಿಂದೇನಾಗುವುದಿದೆ, ನಾನೇನು ಮಾಡಬೇಕು ಇಲ್ಲಿ" ಅರ್ಥವಾಗದವನಂತೆ ಕೇಳಿದ ಸೂರಿ.
"ಮೊದಲನೆ ಪ್ರಶ್ನೆಗೆ ಉತ್ತರ ನೀನೇ ಹುಡುಕಬೇಕು. ಎರಡನೇಯದನ್ನ ನಾನು ಹೇಳುತ್ತೇನೆ. ಅದಕ್ಕಾಗಿಯೇ ಜುಕಾವು ನಿನ್ನನ್ನ ಇಲ್ಲಿಗೆ ಕರೆತಂದಿದ್ದು. ನಮಗೆ ಈಗ ಜಪದ ಸಮಯ. ನೀನೂ ಸಾಧ್ಯವಾದರೆ ನಮ್ಮನ್ನ ಅನುಸರಿಸು. ಓಂ ಎಂದು ಹೇಳುತ್ತಿರು ಮತ್ತೆ ನಾ ನಿನ್ನನ್ನ ಕರೆಯೊ ವರೆಗೆ" ಎಂದು ಕಿವಿಯಲ್ಲಿ ಓಂಕಾರ ಉಪದೇಶಿಸಿದ ಜಂಗುಬಾಬಾ ತಿರುಗಿ ತಮ್ಮ ಸ್ಥಾನಕ್ಕೆ ಹೋಗಿ ಧ್ಯಾನಸ್ಥರಾದರು.
ಸೂರಿಯೂ ಅಲ್ಲಿಯೇ ಕುಳಿತು ಓಂಕಾರ ಭಜಿಸಲು ಶುರುಮಾಡಿದ..................