Wednesday 10 October 2012

ಭಂ ಬೋಲೆ ೫

ಭಿನ್ನವಶೀಕರಣ....



ಭಿನ್ನವಶೀಕರಣಕ್ಕೆ ಮುದ್ವ ಮುಂದಾಗಿದ್ದ. ಅವನ ಆಣತಿಯಂತೆ, ನಾಲ್ಕು ಅಡಿಯ ಹೋಮಕುಂಡವನ್ನ ಸ್ಮಶಾನದ ಮುಂಬಾಗಿಲಲ್ಲಿ ಬೆಂಕಿ ಕೊಳ್ಳಿಯ ಬೆಳಕಲ್ಲಿ ತಯಾರಿಸಲಾಗಿತ್ತು. ಮುದ್ವನ ಹೊರತಾಗಿ ಅಲ್ಲಿ ಅವನ ನಾಲ್ಕು ಸಹಚರರು ಮಾತ್ರ ಇದ್ದಿದ್ದು. ಮತ್ತಾರೂ ಅಲ್ಲಿಗೆ ಬಾರದಂತೆ ದಿಗ್ಬಂಧನವನ್ನೂ ಹೇರಲಾಗಿತ್ತು. ಹಲಸಿನೆಲೆ, ತುಪ್ಪ, ದರ್ಬೆ, ಕುಂಕುಮದ ನೀರು, ಎಲುಬಿನ ತುಂಡುಗಳನ್ನ ಕುಂಡದ ಎಡಗಡೆಯಲ್ಲಿ ಸಾಲಾಗಿ ಜೋಡಿಸಲಾಗಿತ್ತು. ಕುಂಡದ ಎದುರಾಗಿ, ಮುದ್ವ ಪದ್ಮಾಸನದಲ್ಲಿ ಕಣ್ಮುಚ್ಚಿ ಕುಳಿತಿದ್ದವ ಕಣ್ನು ತೆರೆಯುತ್ತಿದ್ದಂತೆ ಕುಂಡದಲ್ಲಿ ಅಗ್ನಿ ಜ್ವಲಿಸಿತು.  ಸಹಚರರ ಮುಖದಲ್ಲಿ ಮಂದಹಾಸ. ಮೂಲಮಂತ್ರಗಳನ್ನ, ವಶೀಕರಣ ಛಂದಸ್ಸನ್ನ ಸಾದ್ಯಂತವಾಗಿ ಶುರುಮಾಡಿದ. ಬಣ್ಣದ ಪುಡಿಯಲ್ಲಿ ಮಂಡಲವನ್ನ ಚಿತ್ರಿಸಲಾಗಿತ್ತು. ಅದನ್ನ ಅಷ್ಟಚೌಕವನ್ನಾಗಿ ಬಿಡಿಸಿ, ಅದರ ಮಧ್ಯದಲ್ಲಿ, ವ್ರತ್ತವನ್ನ ರಚಿಸಲಾಗಿತ್ತು. ಆ ವ್ರತ್ತದ ಕೇಂದ್ರದಲ್ಲಿ ಗೋಲಿಯೊಂದನ್ನ ಚಲಿಸದಂತೆ ಇಡಲಾಗಿತ್ತು. ಮುದ್ವನ ಮಂತ್ರ ತಾರಕಕ್ಕೆ ಸಾಗುತ್ತಿದ್ದಂತೆ, ಗೊಲಿ ಅದುರಲು ಶುರುವಾಯ್ತು. ಸಹಚರರೆಲ್ಲ ಗೋಲಿಯನ್ನ ಬಿಟ್ಟಕಣ್ಣು ಬಿಡದಂತೆ ನೋಡುತ್ತಿದ್ದರೆ, ಮುದ್ವ ಮಾತ್ರ ಸಾವಿರಾರುಮೈಲಿ ದೂರದ ದಕ್ಷಿಣಭಾರತದಲ್ಲಿಯ ಹಳ್ಲಿಯೊಂದರ ಪುಟ್ಟಮನೆಯಲ್ಲಿ, ದಾವಣಿಯನ್ನೇ ಚಾದರವನ್ನಾಗಿಸಿ ಮಲಗಿದ್ದ ಹದಿನೈದರ ಕನ್ನೆಯನ್ನೇ ನೋಡುತ್ತಿದ್ದ. ಕುಳಿತಲ್ಲಿಂದಲೇ ಅವನು ವಶೀಕರಣದ ಪ್ರಯೋಗ ಮಾಡಿದ್ದೇ ಅವಳಮೇಲೆ. ಗೋಲಿ ಉರುಳಿ ನಾಲ್ಕು ಗೆರೆಯಲ್ಲಿ ಚಿತ್ರಿಸಿದ ವ್ರತ್ತದ ಮೊದಲ ಗೆರೆಯನ್ನ ದಾಟಿತು. ಮಲಗಿದ್ದ ಕನ್ನೆ ಕಣ್ನುತೆರೆದಿದ್ದಳು. ಮುದ್ವನಲ್ಲಿಯೂ ಮಂದಹಾಸ ಜಿನುಗಿತು. ಮಂತ್ರ ಮುಂದುವರೆದಿತ್ತು. ಅವಳ ಕಣ್ಣು ನೀಲಿ ಬಣ್ಣಕ್ಕೆ ಬದಲಾಗುತ್ತಿತ್ತು. ಗೋಲಿ ಮತ್ತೆಲ್ಲೊ ಸಾಗಲು ಹಿಂದುಮುಂದು ಚಲಿಸುತ್ತಿತ್ತು. ಕುಂಕುಮದ ನೀರನ್ನ ಮಂಡಲದಮೆಲೆ ಸೋಕಿಸಿ, ಎಲುಬಿನ ತುಂಡನ್ನ ಗೋಲಿಗೆ ತಾಕಿಸಿ, ಹಲಸಿನೆಲೆಯಲ್ಲಿ ತುಪ್ಪವನ್ನ ಹವಿಸ್ಸನ್ನಾಗಿ ಕುಂಡಕ್ಕೆ ಬಡಿಸಿದ ಮುದ್ವ. ಕನ್ನೆ ಎಚ್ಚರವಿದ್ದರೂ ತನ್ನ ಕೈಕಾಲುಗಳನ್ನ ಶರೀರವನ್ನ ಚಲಿಸದಂತಾದಳು. ಕಾಲಿನ ಎಲ್ಲ ಬೆರಳುಗಳು ಸೆಟೆದುಕೊಂಡವು. ಹವಿಸ್ಸು ಒಂದೊಂದು ಮಂತ್ರದ ತುದಿಯಲ್ಲಿಯೂ ಅಗ್ನಿಯನ್ನ ಸೇರುತ್ತಿತ್ತು. ಪದೇ ಪದೇ ಎಲುಬಿನತುಂಡು ಗೋಲಿಯನ್ನ ತಾಕುತ್ತಿತ್ತು. ಕನ್ನೆಯ ಶರೀರ ಇದ್ದಕ್ಕಿದ್ದಂತೆಯೆ ಸಡಿಲವಾಗಿಹೋಯ್ತು. ಗೋಲಿ ಎಡಬದಿಯ ಚೌಕದ ಮೂಲೆಗೆ ಬಂದು ನಿಂತಿತು. ಕನ್ನೆ ಹಾಸಿಗೆಯಿಂದ ಎದ್ದು ಕನ್ನಡಿಯ ಮುಂದೆಹೋಗಿ ನಿಂತುಕೊಂಡಳು. ತನ್ನ ಕೈಗಳೆರಡನ್ನೂ ಒಟ್ಟುಸೇರಿಸಿ ಬಿಗಿಯಾಗಿ ಹಿಡಿದುಕೊಂಡಳು. ಮುದ್ವ ಛಂದಸ್ಸನ್ನ ಬದಲಿಸಿ ತನ್ನ ಸಹಚರರಲ್ಲಿಯೇ ಒಬ್ಬನನ್ನ ಕರೆದು ಅವನನ್ನ ಪೂರ್ತಿಯಾಗಿ ದರ್ಬೆಯಲ್ಲಿ ತಲೆಯಿಂದ ಪಾದದವರೆಗೆ ಮುಟ್ಟಿದ. ದೂರದಲ್ಲಿದ್ದ ಕನ್ನೆ ಜೀವಛ್ಛವವಾದವಳಂತೆ ಇದ್ದ ಸ್ಥಿತಿಯಲ್ಲಿಯೇ ಕಲ್ಲಿನಂತೆ ನಿಂತುಬಿಟ್ಟಳು. ಸಹಚರನ ಚರ್ಯೆ ಇದ್ದಕ್ಕಿದ್ದಂತೆಯೇ ಬದಲಾಗಿಹೋಯ್ತು. ಸಹಚರ ಶರೀರದ ರಚನೆಯ ಹೊರತಾಗಿ ಉಳಿದೆಲ್ಲವೂ ಸಾವಿರಮೈಲಿ ದೂರದ ಕನ್ನೆಯಾಗಿದ್ದ. ಕನ್ನೆ ಕಲ್ಲಿನಂತಾಗಿದ್ದಳು. ಮುದ್ವ ಗೋಲಿಯನ್ನ ನೋಡುವ ಹೊತ್ತಿಗೆ ಗೋಲಿ ಮೊದಲಿನಂತೆ ವ್ರತ್ತದ ಮಧ್ಯಭಾಗಕ್ಕೆ ಉರುಳಿಬಂದು ನಿಂತಿತ್ತು. ಹೋಮದಕುಂಡಕ್ಕೆ ರಾಳವನ್ನ ಮುಷ್ಟಿಯಲ್ಲಿ ಎರಚಿದ. ಅಗ್ನಿ ಇಡೀ ಸ್ಮಶಾನವನ್ನೇ ಆವರಿಸುವಂತೆ ಭುಗ್ಗೆಂದು ಮುಗಿಲೆತ್ತರಕ್ಕೆ ಚಿಮ್ಮಿ ಮೊದಲಿನಂತಾಯಿತು. 
"ಹೇಳು ನಿನ್ನ ಹೆಸರೇನು?" ಸಹಚರನನ್ನ ಕುರಿತು ಕೇಳಿದ ಮುದ್ವ.
"ಮಾಧವಿ" ಎಂದ ಸಹಚರ. ಬಾಕಿ ಸಹಚರರಲ್ಲಿ ಕುತೂಹಲ ಇಮ್ಮಡಿಸಿತು. ಮುದ್ವನ ಶಕ್ತಿಯನ್ನಕಂಡ ಅವರು ಚಕಿತರಾದರು. ಇದು ನಿಜಕ್ಕೂ ಪವಾಡವೇ ಸರಿ. ಮುದ್ವ ಮಹಾಮಹಿಮನೆಂಬ ಭಾವಕ್ಕೆ ಅವರೆಲ್ಲ ಬಂದಿದ್ದರು
" ಎಲ್ಲಿದ್ದೀಯ" ಮುದ್ವ ಮುಂದುವರೆಸಿದ.
"ಕನ್ನಡಿಯ ಎದುರಲ್ಲಿ"
"ತಿರುಗಿ ಬಂದು ಹಾಸಿಗೆಯಲ್ಲಿ ಕೂರಲು ಸಾಧ್ಯವೊ?"
"ನೀವು ಹೇಳಿದಲ್ಲಿಗೆ ಹೋಗುತ್ತೇನೆ" ಕನ್ನೆಯ ಶಾರೀರ ಸಹಚರನ ಶರೀರದಲ್ಲಿ ಧ್ವನಿಸುತ್ತಿತ್ತು.
"ಓಹೊ, ನಾನಿದ್ದಲ್ಲಿಗೆ ಬರುವೆಯಾ?"
"ದಾರಿ ಹೇಳಿ, ಹೊರಡಲು ಸಿದ್ಧನಿದ್ದೇನೆ."
"ಮನೆಯವರನ್ನೆಲ್ಲ ಬಿಟ್ತು ಇಲ್ಲಿಗೆ ಬರಲು ಸಿದ್ಧವಿದ್ದೀಯ, ನಿನ್ನನ್ನ ಯಾರಾದರೂ ತಡೆದರೆ?" ಮುದ್ವ ದ್ವಂದ್ವವನ್ನ ಮುಂದಿಟ್ಟ.
" ಅಲ್ಲಿಗೆ ಬರುವುದು ಗುರಿ, ನೀವು ಹೇಳಿದ್ದೇ ದಾರಿ, ಮಧ್ಯದಲ್ಲಿಯ ತೊಡಕುಗಳನ್ನ ಲೆಕ್ಕಿಸುವುದಿಲ್ಲ" ನಿರ್ಧಾರಿಸಿದವಳಂತೆ ಹೇಳಿದಳು.
ಮುದ್ವನಿಗೆ ಅಲ್ಲಿಗೆ ಎಲ್ಲವೂ ಅವನ ಎಣಿಕೆಯಂತೆಯೇ ನದೆದಿತ್ತು. 
"ನಿನ್ನನ್ನ ಬೇಕಾದಾಗ ಕರೆಸಿಕೊಳ್ಳುವೆ. ಈಗ ನೀನು ಸ್ವತಂತ್ರಳು. ಹಾಗೆಯೇ ನಿನ್ನ ಸುಪ್ತಮನಸ್ಸಿನಲ್ಲಿ ಒಂದು ವಿಚಾರವಿರಲಿ. ನನ್ನ ಒಪ್ಪಿಗೆಯ ಹೊರತಾಗಿ ನೀನು ಕನ್ಯತ್ವವನ್ನ ಕಳೆದುಕೊಳ್ಳುವ ಹಾಗಿಲ್ಲ. ಹಾಗಾದಲ್ಲಿ ಅದೇ ನಿನ್ನ ಕೊನೆಯ ದಿನವಾಗಿರುತ್ತದೆ" ಎಂದು ಹೇಳುತ್ತ, ಕೊನೆಯ ಹವಿಸ್ಸನ್ನ ಅಗ್ನಿಗರ್ಪಿಸುತ್ತ ಸಹಚರನ ಮೈಮೇಲೆ ಮತ್ತೊಮ್ಮೆ ದರ್ಬೆಯನ್ನ ಸೋಕಿ ಗೋಲಿಯನ್ನ ಮಂಡಲದಿಂದ ಹೊರತೆಗೆದ. ಕನ್ನಡಿಯ ಎದುರಲ್ಲಿ ನಿಂತಿದ್ದ ಕನ್ನೆ ತ್ರಾಣವೇ ತೀರಿಹೋದವಳಂತೆ ಧೊಪ್ಪನೆ ಕೆಳಗೆ ಬಿದ್ದಳು. ಮುದ್ವ ಮುಷ್ಟಿಯನ್ನೊಮ್ಮೆ ಆಗಸಕ್ಕೆತ್ತಿ ಗಟ್ಟಿಯಾಗಿ ಕೂಗಿದ, ಭಂ ಬೋಲೆಯೆಂದು... ಸಹಚರರು ಅವಾನನ್ನ ಅನುಸರಿಸಿದರು.

Sunday 7 October 2012

ಭಂ ಬೋಲೆ ೪

ಪ್ರಣವಮಂತ್ರಂ


ಅವರಿಗೆ ಕತ್ತಲೆಯೇ ಆಗಬೇಕೆಂದೇನಿಲ್ಲ. ಅವರ ಆಚರವಿಚಾರಗಳಿಗೆ ಧಕ್ಕೆತರದಂತೆ ಅವರ ಕರ್ಮಾನುಷ್ಠಾನದ ಜಾಗದಲ್ಲಿ ನಿರ್ಜನ ಪರಿಸ್ಥಿತಿಯಿದ್ದರೆ ಸಾಕು. ಮುದ್ವನ ಸ್ನಾನ ಆಗತಾನೆ ಮುಗಿದಿತ್ತು. ಸ್ನಾನವೆಂದರೆ ನೀರಿನಲ್ಲಿ ಮೂರುಬಾರಿ ಮುಳುಗಿ ಏಳುವುದಷ್ಟೆ. ಮುಳುಗೆದ್ದ ನಂತರದಲ್ಲಿ, ಮೈತುಂಬ ಸಿಗುವಷ್ಟು ಭಸ್ಮವನ್ನ ಮೆತ್ತಿಕೊಳ್ಳುವುದು. ಮನಸಿಗೆ ಕಂಡಕಡೆಗಳಲ್ಲಿ ಜೀವವೇ ಇಲ್ಲವೆಂಬಷ್ಟು ನಿಶ್ಚಲನಾಗಿ ಕುಳಿತುಬಿಡುವುದು. ಮುದ್ವ ಧ್ಯಾನಕ್ಕೆ ಕೂರುವಾಗೆಲ್ಲ ಒಂದು ಕೈ ಮೇಲೆತ್ತಿ ಮುಷ್ಟಿ ಕಟ್ಟಿಯೇ ಕೂರುವುದು. ಅದು ಅವನ ಧ್ಯಾನಾಸನ. ಒಂದೂ ಮರವಿಲ್ಲದ ಬೋಳು ಬೆಟ್ಟದಮೇಲೆ ಮುದ್ವ ಹಾಗೆಯೇ ಕುಳಿತಿದ್ದ. ಬೆಟ್ಟದ  ಬುಡದಲ್ಲಿ ಸಣ್ಣ ತೊರೆಯೊಂದು ರಭಸದಲ್ಲಿ ಹರಿಯುತ್ತದೆ. ಮುದ್ವ ತೊರೆಯಲ್ಲಿ ಸ್ವಚ್ಚಂದವಾಗಿ ಈಜಿ ಹಾಯಗಿದ್ದ ಮೀನುಗಳನ್ನ ಕುಳಿತಲ್ಲಿಯೇ ಕೊಲ್ಲುತ್ತಿದ್ದ. ಅದು ಅವನಿಗೆ ಸಿದ್ಧಿಸಿದ ವಿದ್ಯೆ... ಮುದ್ವ ಸ್ವಭಾವದಲ್ಲೇ ಕ್ರೂರಿ. ಹಸಿವಿಗಾಗಿ ಕೊಲ್ಲುವುದು ನೈಸರ್ಗಿಕ ನಿಯಮ. ಮುದ್ವ ಹಾಗಲ್ಲ, ಅವನ ಮಂತ್ರದ ನೆನಪಿಗಾಗಿ, ತನ್ನ ವಿಕಾರ ವಿದ್ಯೆ ಸಿದ್ಧಿಗಾಗಿ ಹಾಗೆ ಕೊಲ್ಲುತ್ತಿದ್ದ. ಅವನ ಕಣ್ಣೆದುರು ಸಿಂಹವೇ ಬಂದರೂ ಅದನ್ನ ಬಲು ಸೀದ ಸಾದ ಕೊಂದುಮುಗಿಸುವಷ್ಟು ವಾಮ ವಿದ್ಯೆ ಅವನಿಗೆ ಕರಗತವಾಗಿತ್ತು. ವಾಮ ವಿದ್ಯೆಯಲ್ಲಿ ಪ್ರಚಲಿತ ಅಘೋರಿಗಳಲ್ಲೇ ಮುದ್ವ ಪ್ರಖಾಂಡ ಪಂಡಿತ. ಹಾಗೆ ಕೊಂದ ಮೀನುಗಳನ್ನ ಮುದ್ವ ತಿನ್ನುತ್ತಿರಲಿಲ್ಲ. ಅದು ಅವನ ಚೇಷ್ಟೆ ಅಷ್ಟೆ. ಧ್ಯಾನ ಮುಗಿಯುವುದರೊಳಗಾಗಿ ಅಸಂಖ್ಹ್ಯ ಮೀನುಗಳು ಸತ್ತಿರುತ್ತಿದ್ದವು.
..........................................
ವ್ರತ್ತಾಕಾರದಲ್ಲಿ ಸುತ್ತಲೂ ಹರಡಿದ ಬೆಟ್ಟಗಳ ಮಧ್ಯದಲ್ಲಿ ವಿಶಾಲವಾದ ಬಯಲು. ಅಲ್ಲಿ ಕೆಲವು ಕುಠೀರಗಳು. ಒಳಗೆ ಸದಾ ಧ್ಯಾನಸ್ಥರಾಗಿರುವ ವ್ರದ್ಧ ಸನ್ಯಾಸಿಗಳು. ಪ್ರಣವ ಮಂತ್ರದ ಹೊರತಾಗಿ ಅವರ ಆಲೋಚನೆಯಲ್ಲೂ ಇನ್ನೊಂದು ಕಲ್ಪನೆ ಇರಲಿಲ್ಲ. ಎಚ್ಚೆತ್ತರೂ ಸುಪ್ತ ಮನಸಲ್ಲಿ ಪ್ರಣವ ಮಂತ್ರ ಜಪಿಸುತ್ತಲೇ ಇರುವ ನಿಜವಾದ ಸಾಧುಗಳು ಅವರು. ಸೂರಿಯನ್ನ ಹೊತ್ತುಕೊಂಡು ಹೊರಟಿದ್ದ ವ್ರದ್ಧ ಕುದುರೆಸವಾರನ ಕುದುರೆ ಬಯಲಿನಲ್ಲಿಯ ಮಧ್ಯದ ಕುಠೀರದ ಮುಂದೆ ಬಂದು ನಿಂತುಕೊಂಡಿತು. ಆತ ವ್ರದ್ಧ, ಎದೆಯನ್ನ ದಾಟಿದ ಬಿಳಿಯ ಕೂದಲು, ಭುಜವನ್ನೂ ಮೀರಿ ಬೆಳೆದ ಬಿಳಿಯ ಹಿಪ್ಪಿ. ಮೈ ಮೇಲೆ ಯಾವಗಲೂ ಮೊಣಕಾಲಿನವರೆಗೆ ಬರುವ ಒಂದೇ ಒಂದು ಕಪ್ಪು ಕಾಷಾಯ.ಊಹೆಗೂ ನಿಲುಕದ ವೇಗದ ಬಿಳಿಯ ಕುದುರೆ ಅವನ ಆಸ್ತಿ. ಅವನ ತಪಸ್ಸು, ಮತ್ತು ಅವನ ಇತಿಹಾಸವೇ ಅವನ ಗೌರವ. ವ್ರದ್ಧನನ್ನ ವಾಮ ಹಾಗೂ ವಾಮೇತರ ಅಘೋರಿಗಳು ಕರೆಯುತ್ತಿದ್ದುದು, "ಜುಕಾವುಮುನಿ" ಎಂದು. ಜುಕಾವು ಪರಮಶ್ರೇಷ್ಠ ಮುನಿವರ್ಯನೆಂಬುದು ಎಲ್ಲ ಅಘೋರಿಗಳಿಗೆ ತಿಳಿದ ವಿಷಯವೇ.
ಜುಕಾವು ಅತಿಮಾನುಷನಂತೆ ಬರೋಬ್ಬರಿ ಏಳು ಅಡಿಯ ಆಳು. ಜುಕಾವು ಸೂರಿಯನ್ನ ಕುದುರೆಯಿಂದ ಕೆಳಗಿಳಿಸಿ ತಾವೂ ಇಳಿದರು . ಸೂರಿ ಜುಕಾವುಮುನಿಯನ್ನೇ ನೋಡುತ್ತ ನಿಂತುಕೊಂಡ. ತನ್ನೊಂದಿಗೆ ಬಾ ಎಂದು ಸನ್ನೆ ಮಾಡಿ ಜುಕಾವು ಮುಖ್ಯ ಕುಠೀರದ ಒಳನಡೆದರು. ಸೂರಿ ಹಿಂಬಾಲಿಸಿದ. ವಿಶಾಲವಾದ ಕುಠೀರದ ಒಳಾಂಗಣದಲ್ಲಿ, ಹಲವಾರು ವ್ರದ್ಧ ಸನ್ಯಾಸಿಗಳು ಧ್ಯಾನಸ್ಥರಾಗಿದ್ದರು. ಜುಕಾವು ಒಳಬರುತ್ತಿದ್ದಂತೆಯೆ ಧ್ಯಾನದಲ್ಲೇ ಪರಮಗುರುವಿನ ಆಗಮನವನ್ನ ಅರಿತ ಸನ್ಯಾಸಿಗಳೆಲ್ಲ, ಎದ್ದು ನಿಂತರು. ವ್ರದ್ಧ ಸನ್ಯಾಸಿಗಳ ಗುರುವಾಗಿದ್ದ ಜಂಗುಬಾಬಾ ತಾನಿದ್ದಲ್ಲಿಂದಲೆ ಉದ್ದಂದ ನಮಸ್ಕಾರ ಮಾಡಿದ. ಜಂಗುಬಾಬಾನ ಹಣೆ ಜುಕಾವುಮುನಿಯ ಕಾಲ್ಬೆರಳುಗಳನ್ನು ತಾಕುತ್ತಲೇ ಜುಕಾವು ಕಣ್ಮುಚ್ಚಿಕೊಂಡು, ಓಂ ಎಂದರು. ಸಮಸ್ಕರಿಸಿ ಎದ್ದ ಜಂಗುಬಾಬಾ "ಮಹಾಮುನಿ ನಿಮ್ಮ ಆಗಮನವನ್ನೇ ನಿರೀಕ್ಷಿಸುತ್ತಿದ್ದೆವು. ಕತ್ತಲ ಸಾಮ್ರಾಜ್ಯದ ಉದಯ ಆಗಿಹೋಯಿತು. ಸಾಮ್ರಾಜ್ಯಕ್ಕೆ ಮುದ್ವನೀಗ ಅಧಿಪತಿ. ಚರಾಚರಗಳ ರಕ್ಷಣೆ ನಿಮ್ಮಮೇಲಿದೆ. ನಾವು ದಾರಿಕಾಣದಾಗಿದ್ದೇವೆ." ವಿಹ್ವಲನಾಗಿ ಆತಂಕದಲ್ಲಿ ನುಡಿದ.
"ಅರಿತಿದ್ದೆನೆ," ಮತ್ತೇನನ್ನೋ ವಿಚಾರಮಾಡುತ್ತ ಹೇಳಿದರು ಜುಕಾವು. ವಿಚಾರದಿಂದ ಹೊರಬಂದವರಂತೆ " ಯಾವುದೂ ತಿಳಿಯಾಗಿ ಕಾಣುತ್ತಿಲ್ಲ. ನಿಮಗೆ ಕೊಟ್ಟ ಮಾತಿನಂತೆ ಹುಡುಗನನ್ನ ಕರೆತಂದಿದ್ದೇನೆ." ಎಂದು ಸೂರಿಯನ್ನ ಎದುರು ಎಳೆಯುತ್ತ ಎಲ್ಲರಿಗೂ ತೋರಿಸಿದರು ಜುಕಾವು. ಸೂರಿಗೆ ಎಲ್ಲವೂ ಕನಸಿನಂತೆಯೇ ಇತ್ತು. ಜಾಗ, ಅಲ್ಲಿಯ ಮುನಿಗಳು ಅವರ ಮಾತು, ಜುಕಾವು ಎಲ್ಲವೂ ಅವನಿಗೆ ಅಪರಿಚಿತವೇ. ತನ್ನನ್ನೇಕೆ ಕರೆತಂದಿದ್ದು, ಕರೆತರುವುದಾಗಿ ಮಾತುಕೊಟ್ಟಿದ್ದೇಕೆ, ತಾನು ಮಾದುವುದಾದರೂ ಏನು, ಸೂರಿಯ ಮನಸಲ್ಲಿ ಒಂದೇ ಸಮನೆ ನೂರೆಂಟು ಪ್ರಶ್ನೆಗಳು ಶುರುವಾದವು. ಮೂಲೆಯಲ್ಲಿ, ಭಯ ಶುರುವಾದರೂ, ಜುಕಾವುಮುನಿಯ ಸ್ಪರ್ಷದಿಂದ, ತಾನು ಅಭದ್ರನೆಂದು ಸೂರಿಗೆ ಅನಿಸಲಿಲ್ಲ.
ಎಲ್ಲರೂ ಒಮ್ಮೆ ಸೂರಿಯನ್ನೇ ನೋಡಿದರು. "ನಾವು ಧನ್ಯರು, ವಂದನೆಗಳು ಗುರುವರ್ಯ" ಎಂದ ಜಂಗುಬಾಬ. ಉಳಿದ ಸನ್ಯಾಸಿಗಳೂ ಜುಕಾವುಮುನಿಗೆ ನಿಂತಲ್ಲಿಯೇ ಬಾಗಿ ನಮಸ್ಕರಿಸಿದರು.
ಸೂರಿಯನ್ನ ತನ್ನ ಕಡೆಗೆ ತಿರುಗಿಸಿಕೊಂಡ ಜುಕಾವುಮುನಿ " ನಾನು ಅವತ್ತೇ ಹೇಳಿದ ಹಾಗೆ, ನಮ್ಮ ಜನ್ಮ ಯಾವುದಕ್ಕಾಗಿದೆ ಎಂಬುದನ್ನ ಮೊದಲು ಅರಿಯಬೇಕು. ಕಾಲ ನಿನಗೀಗ ಬಂದಿದೆ. ನಿನ್ನ ಹಳೆಯ ಬದುಕೆಲ್ಲವೂ ಬರಿಯ ಕಲ್ಪನೆಯಷ್ಟೆ. ಅದು ನಿನ್ನ ನೆನಪಲ್ಲಿ, ಹಗಲಾದಮೆಲೆ ಕನಸು ಮರೆಯುವಂತೆ ಮರೆತುಹೋಗುತ್ತದೆ. ಇಂದಿನಿಂದ ಜಂಗುಬಾಬ ನಿನ್ನ ಗುರುಗಳು. ಮತ್ತೆ ನಾನು ನಿನ್ನನ್ನ ಕಾಣುವವರೆಗೂ ನೀನು ಇಲ್ಲಿಯೇ ಇರತಕ್ಕದ್ದು. ನಿನ್ನ ಜವಾಬ್ದಾರಿ ನನ್ನದು. ಭಯ ನಿನ್ನಲ್ಲಿ ಬರಕೂಡದು. ದಾರಿಯಲ್ಲಿ ಹೇಳಿದ ವಿಷಯಗಳು ನೆನಪಿರಲಿ" ಎಂದು ಹೇಳಿ ಸೂರಿಯ ತಲೆಯಮೇಲೆ ಕೈ ಇಟ್ಟು ಓಂಕಾರ ಪಠಿಸಿ ಆಲ್ಲಿಂದ ಹೊರನಡೆದರು. ಸೂರಿ ಅವರನ್ನೆ ನೋಡುತ್ತ ನಿಂತುಕೊಂಡ.
ಜಂಗುಬಾಬಾ ಬಂದು ಸೂರಿಯನ್ನ ಮುಟ್ಟದಿದ್ದರೆ ಸೂರಿ ಹಾಗೆ ನೋಡುತ್ತಲೇ ಇರುತ್ತಿದ್ದನೇನೊ.
"ಮಗು ಇಂದಿನಿಂದ ನಿನ್ನ ಹೆಸರು ಬಾಬಾ." ಎಂದರು ಜಂಗುಬಾಬಾ.
"ನನ್ನಿಂದೇನಾಗುವುದಿದೆ, ನಾನೇನು ಮಾಡಬೇಕು ಇಲ್ಲಿ" ಅರ್ಥವಾಗದವನಂತೆ ಕೇಳಿದ ಸೂರಿ.
"ಮೊದಲನೆ ಪ್ರಶ್ನೆಗೆ ಉತ್ತರ ನೀನೇ ಹುಡುಕಬೇಕು. ಎರಡನೇಯದನ್ನ ನಾನು ಹೇಳುತ್ತೇನೆ. ಅದಕ್ಕಾಗಿಯೇ ಜುಕಾವು ನಿನ್ನನ್ನ ಇಲ್ಲಿಗೆ ಕರೆತಂದಿದ್ದು. ನಮಗೆ ಈಗ ಜಪದ ಸಮಯ. ನೀನೂ ಸಾಧ್ಯವಾದರೆ ನಮ್ಮನ್ನ ಅನುಸರಿಸು. ಓಂ ಎಂದು ಹೇಳುತ್ತಿರು ಮತ್ತೆ ನಾ ನಿನ್ನನ್ನ ಕರೆಯೊ ವರೆಗೆ" ಎಂದು ಕಿವಿಯಲ್ಲಿ ಓಂಕಾರ ಉಪದೇಶಿಸಿದ ಜಂಗುಬಾಬಾ ತಿರುಗಿ ತಮ್ಮ ಸ್ಥಾನಕ್ಕೆ ಹೋಗಿ ಧ್ಯಾನಸ್ಥರಾದರು.
ಸೂರಿಯೂ ಅಲ್ಲಿಯೇ ಕುಳಿತು ಓಂಕಾರ ಭಜಿಸಲು ಶುರುಮಾಡಿದ..................

Tuesday 2 October 2012

ಭಂ ಬೋಲೆ ೩



ಎಲ್ಲವೂ ಒಂದು ಚೇತನಕ್ಕಾಗುತ್ತಿರುವ ಭ್ರಮೆಯಷ್ಟೇ...




ಒಂದೇ ಏಟಿಗೆ ಹುಡುಗನನ್ನ ಕೊಂದುಬಿಡುವಷ್ಟು ಕೋಪ ಬಂದಿತ್ತು ಮೇಸ್ಟ್ರಿಗೆ. ಇಡೀ ಶಾಲೆಯೆ ಅವರೆಂದರೆ ಗಡಗಡ ನಡುಗುತ್ತಿತ್ತು. ಹೆಡ್ ಮೇಶ್ಟ್ರು ಇವರನ್ನ ಎಂತಹ ಸಂದರ್ಭದಲ್ಲಿಯೂ ಎದುರುಹಾಕಿಕೊಂಡೋರಲ್ಲ. ಒಮ್ಮೆ ಅವರದೇ ತಪ್ಪಿದ್ದಾಗಲೂ ಯಾರೂ ಅವರನ್ನ ಪ್ರಶ್ನೆ ಮಾಡುತ್ತಿರಲಿಲ್ಲ. ಹಾಗಿರುವಾಗ ಅವರು ಕೇಳಿದ ಪ್ರಶ್ನೆಗೆ ಸೂರಿ ಅವನದೇ ಆದ ಉತ್ತರ ಹೇಳಿದ್ದು ಅವರ ಕೋಪಕ್ಕೆ ಕಾರಣವಾಗಿತ್ತು.
"ಕೊನೇಬಾರಿ ಕೇಳ್ತೇನೆ.. ಮಾನವನ ಪೂರ್ವಜರು ಯಾರು?" ಅವರ ಕೋಪ ಪರಮಾವಧಿ ಮಟ್ಟವನ್ನ ತಲುಪಿತ್ತು.
"ಮೂಲಸ್ವರೂಪ" ಹುಡುಗ ನಿರ್ಭಾವುಕನಾಗಿ ತಾನು ಮೊದಲು ಹೇಳಿದ ಉತ್ತರವನ್ನೇ ಹೇಳಿದ.
"ಬೇವರ್ಸಿ... ಬೋಳಿಮಗನೆ, ಎಷ್ಟೊ ಕೊಬ್ಬು ನಿಂಗೆ, ಆ ಧನಂಜಯ, ಅವನಿಗೆ ಒಂದು ಒಂದು ಎಷ್ಟು ಎಂದು ಕೇಳಿದ್ರು ಹೇಳೋಕೆ ಬಾರದವನೂ,ಮಾನವನ ಪೂರ್ವಜರು ವಾನರರು ಅಂತ ಹೇಳ್ತಾನೆ. ನಿಂಗೇನೊ ಜಡ ಅಷ್ಟು ಬೊಗಳೋಕೆ.." ತಮ್ಮ ಛಡಿಯಲ್ಲಿ ರಪರಪನೆ ಮೈಕೈಮೇಲೆಲ್ಲ ಹೊಡೆಯುತ್ತ ಹೇಳೀದರು. ಅವರ ಕೋಪ ತಣ್ಣಗಾಗೊ ಲಕ್ಷಣವಿರಲಿಲ್ಲ. ಪೂರ್ತಿ ಕ್ಲಾಸು ಬೆಚ್ಚಿ ಕುಳಿತಿತ್ತು. ಎಲ್ಲ ಮಕ್ಕಳಿಗೂ ಸೂರಿಯಮೇಲೆ, ಅನುಕಂಪ ಮೂಡಿತ್ತಾದರೂ,ಮೇಸ್ಟ್ರು ಎಷ್ಟುಬಾರಿ ಕೇಳಿದರೂ ಅವನು ಅವನ ಉತ್ತರ ಬದಲಾಯಿಸದೆ ಇದ್ದುದಕ್ಕೆ ಅಸಮಾಧಾನವಿತ್ತು. ಮೇಸ್ಟ್ರು ಒಂದೇಸಮನೆ ಹೊಡೆಯುತ್ತಿದ್ದರೂ ತನಗೇನೂ ಆಗುತ್ತಿಲ್ಲವೆಂಬಂತೆಯೆ ನಿರ್ಲಿಪ್ತನಾಗಿ ಛಡಿಯೇಟು ತಿನ್ನುತ್ತ ನಿಂತಿದ್ದ ಸೂರಿ. ಮೇಸ್ಟ್ರಿಗೇ ಸುಸ್ತಾಗಿ ಅರೆಕ್ಷಣ ಸುಮ್ಮನಾಗಿ ಮತ್ತೆ ತಲೆಯಮೇಲೆ ಗುದ್ದಿದರು. ಆಗಲೂ ಸೂರಿ ನೆಟ್ಟಗೆ ನಿಂತಿದ್ದ. ಮೇಸ್ಟ್ರಿಗೆ ಅವನ ಸ್ವಭಾವವೇ ವಿಚಿತ್ರವೆನಿಸಿಹೋಯ್ತು. ಮತ್ತೆ ಏನು ಮಾಡಬೇಕು ಎಂದು ಅರಿಯದೇ ತಿರುಗಿ ತಮ್ಮ ಖುರ್ಚಿಯಮೆಲೆ ಬಂದು ಕುಳಿತರು.
ಏನಾದರೊಂದು ಇತ್ಯರ್ಥವಾಗಲೇ ಬೇಕೆಂದು "ಯಾರಯ್ಯ ನಿಂಗೆ ಮಾನವನ ಪೂರ್ವಜರು ಮೂಲ ಸ್ವರೂಪ ಅಂತ ಹೇಳಿದೋರು" ಎಂದು ರೇಗಿದರು.
ಸೂರಿ ಉತ್ತರಿಸಲಿಲ್ಲ.
"ನಿನಗೆ ಹೇಳಿ ಏನು ಪ್ರಯೋಜನ. ನಿನ್ನ ಅಪ್ಪನಲ್ಲಿ ಮಾತನಾಡುತ್ತೇನೆ." ಎಂದು ಗೊಣಗಿದ ಮೇಸ್ಟ್ರು ತಮ್ಮ ಪಾಠವನ್ನ ಮುಂದುವರೆಸಿದರು. ಕ್ಲಾಸು ಮುಗಿಯೊ ವರೆಗೂ ಸೂರಿ ನಿಂತುಕೊಂಡೇ ಇದ್ದ.
..............................................................................................................................

ಅಪ್ಪ ಮನೆಗೆ ಬರುವಾಗಲೇ ಬೆಂಕಿ ಕೆಂಡವಾಗಿದ್ದ. ಮೇಸ್ಟ್ರ ಹೊಡೆತ ಎಷ್ಟು ಖಾರವಾಗಿದ್ದರೂ ತಾಳಿಕೊಳ್ಳಬಹುದು, ಆದರೆ ಅಪ್ಪನ ಹೊಡೆತ ಅದಕ್ಕಿಂತ ಭೀಕರವಾಗಿರುತ್ತದೆಂಬುದು ಸೂರಿಗೆ ತಿಳಿದಿತ್ತು. ಅಪ್ಪನ ಮುಖ ನೋಡುತ್ತಲೇ, ಮೇಸ್ಟ್ರು ಕ್ಲಾಸಿನಲ್ಲಿ ನಡೆದಿದ್ದನ್ನೆಲ್ಲ ವರದಿ ಮಾಡಿದ್ದಾರೆಂಬುದು ಸೂರಿಗೆ ಅರ್ಥವಾಯ್ತು. ತನ್ನ ಬಟ್ತೆಯನ್ನ ಬದಲಿಸಿದ ಅಪ್ಪ ಬೆಳ್ಟ್ ತೆಗೆದುಕೊಂಡು, ಮನಸೊ ಇಚ್ಛೆ ಥಳಿಸಿದ. ಸೂರಿಯ ಮೈಯಲ್ಲಿ ಬಾಸುಂಡೆಗಳು ಎದ್ದಿದ್ದವು. ಬೆಳ್ಟಿನ ಅಂಚು ಕೆಲವುಕಡೆ ಅವನ ಚರ್ಮವನ್ನ ಸೀಳಿತ್ತು. ಪಕ್ಕದಮನೆಯವರಿಗೆಲ್ಲ ಸೂರಿಗೆ ಏಟು ಬೀಳುತ್ತಿದೆಯೆಂಬುದು ಗೊತ್ತಾದರೂ ಸೂರಿಯ ಧ್ವನಿ ಮಾತ್ರ ಕೇಳಲಿಲ್ಲ. ಅವನ ಅಪ್ಪ ಮಾತ್ರ "ಮುಂಡೇ ಮಗನೆ, ತಾಯಿ ಇಲ್ಲ ಅಂತ ಸ್ವಲ್ಪೇ ಸ್ವಲ್ಪ ಮುದ್ದು ಮಾಡಿದ್ದಕ್ಕೆ, ಮರ್ಯಾದಿ ತೆಗೆಯೊ ಕೆಲಸ ಮಾಡ್ತೀಯಾ? ಹೊಟ್ಟೆ ಬಟ್ಟೇ ಕಟ್ಟಿ ಹೆಂಗೊ ನಿನ್ ಓದಿಸ್ತಿದೀನಿ, ತೆಪ್ಪಗೆ ಓದೋದ್ ಬಿಟ್ಟು ಶಾಲೆಗ್ ಹೋಗಿ ತಲೆಹರಟೆ ಮಾಡ್ತೀಯಾ?" ಮನಸಿಗೆ ಬಂದಂಗೆ ಬಯ್ಯುತ್ತ ತನ್ನ ಅಹಂಕಾರಕ್ಕೆ ಸಮಾಧಾನ ಆಗೊ ವರೆಗೂ ಹೊಡೆದ. ಮಗನಿಂದ ಪ್ರತಿಕ್ರಿಯೆಯೇ ಇಲ್ಲದ್ದನ್ನ ನೋಡಿ ಅಪ್ಪನಿಗೆ ಆಶ್ಚರ್ಯವಾಯ್ತು. ಮೊದಲೆಲ್ಲ ತಾನು ಕಣ್ನಲ್ಲಿ ಕೋಪ ತೋರಿಸಿದರೂ ಮುದುಡಿಕೊಂಡು ಮೂಲೆ ಸೇರಿಕೊಳ್ಳುತ್ತಿದ್ದವ, ಇಷ್ಟು ಹೊಡೆದರೂ ಗರಡುಗಂಬದಂತೆ ನಿಂತಿದ್ದನ್ನ ಅರಗಿಸಿಕೊಳ್ಳಲಾಗಲಿಲ್ಲ. ಸಿಟ್ಟೆಲ್ಲ ಇಳಿದಮೇಲೆ ಹೊಡೆದಿದ್ದಕ್ಕೆ ಬೇಸರವಾದರೂ ಅದನ್ನ ತೋರ್ಗೊಡದೆ ಊಟ ಮುಗಿಸಿ ಮಲಗಿದ.

ಸೂರಿಗೆ ಹೊಡೆತವೆಲ್ಲ ಸರ್ವೇ ಸಾಮಾನ್ಯವಾಗಿಹೋಗಿತ್ತು. ಸಣ್ಣವನಿದ್ದಾಗ ತನ್ನ ಪುಂಡಾಟಗಳಿಂದ, ತರಲೆಗಳಿಂದ ಹೊಡೆಸಿಕೊಳ್ಳುತ್ತಿದ್ದರೆ,ವೃದ್ಧ ಕುದುರೆ ಸವಾರ ಸಿಕ್ಕಿದಾಗಿನಿಂದ, ಬದಲಾದ ತನ್ನ ಯೋಚನಾಲಹರಿಗಳಿಂದ ಪೆಟ್ಟು ತಿನ್ನುವುದು ಸಾಮಾನ್ಯವಾಗಿಹೋಗಿತ್ತು. ವ್ರದ್ಧ ಕುದುರೆ ಸವಾರನ ಮಾತು ಸೂರಿಯನ್ನ ಎಲ್ಲಿಲ್ಲದಂತೆ ಕಾಡುತ್ತಿತ್ತು. "ಸಮಾಜ ಒಂದು ನಾಟಕ,ಯಾವುದಕ್ಕೂ ಅಸ್ತಿತ್ವವಿಲ್ಲ, ಎಲ್ಲವೂ ಒಂದು ಚೆತನಕ್ಕಾಗುತ್ತಿರುವ ಭ್ರಮೆಯಷ್ಟೇ. ನಿಜವಾದದ್ದು ಎಂಬುದು ಯಾವುದೂ ಇಲ್ಲ. ಶಾಶ್ವತವಾದದ್ದೂ ಇಲ್ಲಿಲ್ಲ. ನೋವು ನಗುವಿನಷ್ಟೇ ಆನಂದಮಯ, ಆದರೆ ಅದನ್ನ ಸ್ವೀಕರಿಸುವ ನಿನ್ನ ಮನೋಬಲ ಗಟ್ಟಿಯಾಗಿರಬೇಕಷ್ಟೇ." ವ್ರದ್ಧ ಹೇಳಿದ್ದು ಮತ್ತೆ ನೆನಪಾಯ್ತು ಸೂರಿಗೆ. ಅಮ್ಮ ಸತ್ತಾಗಿನಿಂದ ಯಾವುದನ್ನೂ ಆಸಕ್ತಿಯಿಲ್ಲದೇ ಮಾಡುತ್ತಿದ್ದ ಸೂರಿಯಲ್ಲಿ ವಿಚಿತ್ರವಾದ ಬದಲಾವಣೆಗಳು ಸಂಭವಿಸುತ್ತಿದ್ದವು. ಅದೇ ಸಂದರ್ಭದಲ್ಲೇ ವ್ರದ್ಧನ ಭೇಟಿಯಾಗಿದ್ದು. ವ್ರದ್ದನ ಮಾತನ್ನ ಮತ್ತೆ ನೆನಪಿಸಿಕೊಂಡ."ಶಾಂತಿ ಸಂಗಮವಾಗಬೇಕು, ನೆಮ್ಮದಿಯ ಮಳೆ ಸುರಿಯಬೇಕು, ಸದ್ಯದಲ್ಲೇ ದೊಡ್ಡ ವಿಪತ್ತು ಕಾದಿದೆ, ನಮ್ಮ ಜನ್ಮ ಯಾವುದಕ್ಕಾಗಿ ಆಗಿದೆ ಎಂಬುದನ್ನ ನಾವು ಎಷ್ಟು ಬೇಗ ತಿಳಿದುಕೊಳ್ಳುತ್ತೇವೋ ಅಷ್ಟು ಒಳ್ಳೆಯದು. ಸತ್ಕಾರ್ಯದಲ್ಲಿ ಸಾಧನೆಯಿದೆ, ಸೌಖ್ಯವಿದೆ, ನಾನು ಹೇಳಿದ ನೆಮ್ಮದಿಯಿದೆ. ನಿನ್ನಿಂದ ಆ ಸಾಧನೆ ಸಾಧ್ಯ. ನನ್ನ ಕುದುರೆ ಖಾಲಿಯಿದೆ ಬರುವ ಮನಸ್ಸು ಎಂದು ಆಗುವುದೋ ಅಂದು ನೆನಪಿಸಿಕೊ, ಅಂದು ಅದು ಅಲ್ಲಿರುತ್ತದೆ." ವ್ರದ್ಧನ ಮಾತಿಗೆ ಅವನಲ್ಲಿಯ ತೇಜಸ್ಸಿಗೆ, ಮರುಳಾಗಿದ್ದ ಸೂರಿ. ಮನೆಯಲ್ಲಿ ಸಮಾಜದಲ್ಲಿ,ಶಾಲೆಯಲ್ಲಿ ಎಲ್ಲ ಕದೆಯಲ್ಲೂ ಹಿಂಸೆ ಅನುಭವಿಸುತ್ತಿದ್ದ ಸೂರಿಗೆ ವ್ರದ್ಧನ ಮಾತೆ ಸರಿಯೆನಿಸಿತು. ತನ್ನ ತನಗಳಿಗೆ ಬೆಲೆಯಿಲ್ಲದೆ, ಒಪ್ಪಿಕೊಳ್ಳಲಾಗದ್ದನ್ನ ಅನಿವಾರ್ಯವಾಅಗಿ ಒಪ್ಪಿಕೊಳ್ಳುತ್ತಿರುವ, ತಾನಲ್ಲದ ತನ್ನನ್ನು ಸಂಭಾಳಿಸುವುದು ಅವನಿಗೆ ಸಾಧ್ಯವಾಗುತ್ತಿರಲಿಲ್ಲ. ಕೊನೆಯದಾಗಿ ನಿಶ್ಚಯಿಸಿಕೊಡ. ಮಲಗಿದ್ದ ಅಪ್ಪನ ಮುಖವನ್ನೊಮ್ಮೆ ನೋಡಿ, 'ಯಾವುದು ಸರಿಯೆಂದು ತಿಳಿಯುತ್ತಿಲ್ಲ, ಆದರೆ ಸದ್ಯದಲ್ಲಿ ನಾನಿರುವ ಸ್ಥಿತಿಯೆಂತು ಖಂಡಿತ ಸರಿಯಿಲ್ಲ. ನಿನ್ನನ್ನ ಒಬ್ಬಂಟಿಯನ್ನಾಗಿಸಿ ಹೊರಡುತ್ತಿದ್ದೇನೆ. ನಿನ್ನ ಕೋಪದ ಪರಿಚಯ ನನಗಿದೆ, ಸಿಟ್ಟು ಯಾರಮೇಲೇ ಬಂದಿರಲಿ, ಕಡೆಗೆ ಅದು ನಿನ್ನ ದೌರ್ಬಲ್ಯದಿಂದಾದ ಕೆಡುಕೇ ಆಗಿದ್ದರೂ, ನೀ ಅದನೆಲ್ಲ ತೀರಿಸಿಕೊಳ್ಳುತ್ತಿದ್ದುದು ನನ್ನಮೇಲೆಯೆ ಆಗಿತ್ತು. ನೀನು ಎಷ್ಟೇ ನನ್ನನ್ನ ಹೊಡೆದರೂ, ಹೊಡೆಯುವಾಗಲೂ ನಿನ್ನ ಮನಸಲ್ಲಿ ನನ್ನೆಡೆಗೊಂದು ಅದಮ್ಯವಾದ ಪ್ರೀತಿಯನ್ನ ನಾನು ಕಂಡಿದ್ದೇನೆ. ಇನ್ನು ನಿನ್ನ ಏಟು ತಿನ್ನಲು ನಾನಿರುವುದಿಲ್ಲ. ಕ್ಷಮೆಯಿರಲಿ' ಎಂದು ಮನಸಿನಲ್ಲಿಯೇ ಅಂದುಕೊಳ್ಳುತ್ತ ಅಪ್ಪನ ಪಾದ ಮುಟ್ಟಿ ನಮಸ್ಕರಿಸಿ ಹಿತ್ತಲುಕಡೆಯ ಬಾಗಿಲಿಂದ ಹೊರಬಂದ. ಮನೆಯ ಹಿಂಬದಿಯಲ್ಲಿ ಕಾಡು ಹಬ್ಬಿಕೊಂಡಿತ್ತು. ಸ್ವಲ್ಪ ದೂರ ಬಂದು ಹಿಂದೊಮ್ಮೆ ತಿರುಗಿ ಮನೆಯತ್ತ ನೋಡಿದ, ಮತ್ತೆ ತಾನು ಇಲ್ಲಿಗೆ ಬರುವುದು ಸಾಧ್ಯವಿಲ್ಲವೆನಿಸಿತು ಅವನಿಗೆ, ಮನಸನ್ನ ಮತ್ತಷ್ಟು ಗಟ್ತಿಮಾಡಿಕೊಂಡು, ಕಾಡಿನೊಳಕ್ಕೆ ವ್ರದ್ಧನ ಕುದುರೆಯನ್ನ ನೆನಪಿಸಿಕೊಳ್ಳುತ್ತ ನಡೆದ. ಎರಡುಮೂರು ಮೈಲಿ ಕಾಡಿನಲ್ಲಿಯೆ ನಡೆದ ನಂತರ, ಕಾಡು ಕಡಿಮೆಯಾಗುತ್ತ ಬಂತು. ಹಿಂದೆ ಮುಂದೆ ನೋಡದೆ ಒಂದೆಸಮನೆ ನಡೆದ. ಕೊನೆಗೆ ಕಾಡು ಕಡಿಮೆ ಆಗಿ ಆಗಿ ಪೂರ್ತಿ ಮುಗಿದಿತ್ತು. ಆಗ್ ಸೂರಿ ದೊಡ್ಡ ಹುಲ್ಲುಗಾವಲಿನೆದುರಲ್ಲಿ ನಿಂತುಕೊಂಡಿದ್ದ. ಆಳೆತ್ತರಕ್ಕೆ ಬೆಳೆದ ಹುಲ್ಲನ್ನ ಬದಿಯಲ್ಲಿ ತಳ್ಳುತ್ತ ತಳ್ಳುತ್ತ ಮುಂದೆ ಮುಂದೆ ನಡೆದ. ಒಂದೇ ವೇಗದಲ್ಲಿ ನಡೆಯುತ್ತಿದ್ದವ ಥಟ್ಟನೆ ಅವಾಕ್ಕಾಗಿ ನಿಂತುಕೊಂಡ.  ಸುಮಾರು ಫರ್ಲಾಂಗು ದೂರದಲ್ಲಿ,ಹುಣ್ಣಿಮೆಯ ಬೆಳಕಲ್ಲಿ ವ್ರದ್ಧನ ಕುದುರೆ ಹುಲ್ಲು ಮೇಯುತ್ತ ನಿಂತಿದ್ದು, ಅವನಿಗೆ ಸ್ಪಷ್ಟವಾಗಿ ಕಾಣಿಸಿತು.