Wednesday, 4 September 2013

ಇದು ಬೇರೆ ಕಥೆ..........

ಆಫೀಸು ಮುಗಿದಿತ್ತು. ಫೇಸ್‍ಬುಕ್‍ ಲಾಗೌಟ್ ಆಗಿತ್ತು. ಕ್ಯಾಬ್ ಮಿಸ್ಸಾಗಿತ್ತು. ಬಸ್ಸು ಬರ್ಬೇಕಾಗಿತ್ತು, ಆದ್ರೆ ಮಳೆ ಬಂದಿತ್ತು. ಜೇಬಲ್ಲಿ ಮೊಬೈಲ್ ಬ್ಲಿಂಕ್ ಆಗಿತ್ತು. ಇನ್‍ಶರ್ಟ್ ಔಟ್ ಆಗಿತ್ತು. ಮನೆಗೆ ಬಂದು ಮಾಡುವುದಾದರೂ ಏನಿತ್ತು? ಟಿವಿ ನೋಡಲಾ? ನಿನ್ನೆ ಉಂಡ ಪಾತ್ರೆ ತೊಳೆಯಲಾ? ಮತ್ತೆ ಕಂಪ್ಯೂಟರ್ ಎದುರು ಕೂರಲಾ? ಬಂದ ಆಲೋಚನೆಗಳು ಬರುವ ಮೊದಲೇ ಬೋರ್ ಆಗಿತ್ತು. ಹೆಂಡತಿ ಊರಲ್ಲಿದ್ದಾಳೆ. ಅಷ್ಟು ಮಾತ್ರದ ಆಸಕ್ತಿ ಮನಸಲ್ಲಿ ಇದ್ದಿದ್ದು. 
ಆಗ ನೆನಪಾದವಳೇ ಹಳೇ ಗೆಳತಿ. 
ಬಸ್‍ ಸ್ಟಾಪಿನಲ್ಲಿ ಜನರು ಕಡಿಮೆ ಇದ್ದರು. ನನ್ನ ಏಕಾಂತವನ್ನ ಅಲ್ಲಿ ಸ್ಥಾಪಿಸಲು ಯಾವ ಸಮಸ್ಯೆಯೂ ಇರಲಿಲ್ಲ. ಕತ್ತಲಾಗಿದ್ದರಿಂದ ಭಾವನೆಗಳ ಭರಾಟೆಯಲ್ಲಿ ಮುಖದಲ್ಲಿ ಬದಲಾವಣೆಯಾದರೂ, ಯಾರಿಗೂ ಕಾಣದಷ್ಟು ಸಣ್ಣ ಬೆಳಕಿತ್ತು ನನ್ನ ಪುಣ್ಯಕ್ಕೆ. ಮೊಬೈಲಿನ ಒಳಗೆ ಕಾದಿಟ್ಟುಕೊಂಡಿದ್ದ ಅವಳ ಭಾವಚಿತ್ರ ನೋಡಬೇಕೆನಿಸಿತು. ಆದ್ರೆ ಹೆಂಡತಿಯ ಮುಖ ನೆನಪಾಯ್ತು. ಆ ಆಸೆ ಕೈಬಿಟ್ಟೆ.
ಆದ್ರೆ ಅವಳ ನೆನಪು ನನ್ನನ್ನ ಬಿಡಲಿಲ್ಲ. ನನಗೂ ಅದನ್ನ ಬಿಡುವ ಮನಸಿರಲಿಲ್ಲ. ನೆನಪು ನೆನಪಾಗುತ್ತಾ ಹೋಗಿತ್ತು...

ಭರವಸೆಗಳಿಗೆ ನಂಬಿಕೆ ಬೇಕು, ನಾಚಿಕೆಗೆ ಭಾವನೆ ಸಾಕು, ಹೆಣ್ಣುಮಕ್ಕಳಿಗೆ ಅಂದಬೇಕು ಅದಕಿಂತ ಹೆಚ್ಚಾಗಿ ಹುಡುಗರಿಗೆ ಕಣ್ಣಿರಬೇಕು ಅಂತ ಯಾವಾಗಲೂ ಹೇಳುತ್ತಿದ್ದವಳವಳು. ಅವಳು ಮಾತನಾಡುವಾಗೆಲ್ಲ ನಾನು ಮೌನಿಯೇ. ಹಾಗಂತ ನಾನವಳ ಮಾತು ಕೇಳುತ್ತಿದ್ದೆನೆಂದಲ್ಲ, ಸುಮ್ಮನೆ ಅವಳನ್ನ ನೋಡುತ್ತ ಕುಳಿತುಬಿಡುತ್ತಿದ್ದೆ. ಅವಳ ಮಾತಲ್ಲಿ ಆಸಕ್ತಿ ಬಂದು, ಅವಳ ಮಾತು ನನಗೆ ಅರ್ಥವಾಗುವ ಹೊತ್ತಿಗೆ ನಾನವಳ ಪ್ರೀತಿ ಹಂಬಲಿಸಿದ್ದೆ. ಹಾಗಂತ ನಿವೇದಿಸಲಿಲ್ಲ, ಇಡೀ ದಿನ ಅವಳನ್ನ ಪ್ರೀತಿಯ ನೆರಳಿನಲ್ಲಿಯೇ ಕಾಣಲಿಲ್ಲ. ನನಗವಳ ಸಾಂಗತ್ಯ ಸಾಕಿತ್ತು.
ಊರು ಬಿಟ್ಟು ಓದಲೆಂದು ಹೊರಗಡೆಗೆ ಹೋಗಿ ಕೆಲವು ದಿನವಾದಮೇಲೆ ಒಂದು ಕಾಗದ ಬರೆದಿದ್ದಳು. ಆ ಕಾಗದದಲ್ಲಿದ್ದ ಅಕ್ಷರಗಳೆಂದರೆ ನನ್ನ ಮತ್ತು ಅವಳ ವಿಳಾಸವಷ್ಟೇ. ಪೆದ್ದ ನಾನು ತಿರುಗಿ ಎಂಟು ಪುಟದಲ್ಲಿ ಪ್ರತಿಕ್ರಿಯಿಸಿದ್ದೆ. ಮತ್ತೊಂದು ಕಾಗದ ಬಂದಿತ್ತು. ಅದು ಅವಳದಲ್ಲ. ಅವಳ ಪ್ರೀತಿ ಬಯಸಿ ಅಲ್ಲಿಯ ಯಾವುದೋ ಹುಡುಗನೊಬ್ಬ ಬರೆದ ಪ್ರೇಮ ಪತ್ರ. ಅದೂ ಹೆಚ್ಚು ಕಮ್ಮಿ ಆರೇಳು ಪುಟವ ದಾಟಿತ್ತು. ನನಗರ್ಥವಾಗಿದ್ದೇ ಆಗ 'ಮಾತಲ್ಲ ಬೇಕಾಗಿದ್ದು ತನಗೆ ಮನಸೆಂದು' ಅವಳು ಖಾಲಿ ಪತ್ರ ಕಳಿಸಿದ್ದಳೆಂದು. ಮತ್ತೆ ಊರಿಗೆ ಬಂದಾಗ ನನ್ನ ಪತ್ರ ತಿರುಗಿಸಿ ಕೊಟ್ಟಾಗಲೇ ನಿಟ್ಟುಸಿರ ಬಿಟ್ಟಿದ್ದೆ ಇವಳು ನನ್ನಂಥವಳಲ್ಲ ಎಂದು. 

ಅವಳು ಬರಿಯ ಸ್ನೇಹಿತೆಯೆಂದು ಮನಸನ್ನ ಅದೆಷ್ಟು ನಿಯಂತ್ರಿಸಿದರೂ ಒಲವ ಮಳೆ ಸುರಿಯುತ್ತಲೇ ಇತ್ತು. ಅದೆಷ್ಟು ಪುಸ್ತಕಗಳನ್ನ ಓದಿದ್ದಳೋ ಅವೆಲ್ಲವನ್ನೂ ನನಗೂ ಓದಿಸಿದ್ದಳು. ನಾನು ಅವಳು ಹೇಳಿದ್ದಾಳೆಂದು ಓದಿದ್ದೆ. ಆದರೆ ಅವಳು ಓದಿದ್ದೆಲ್ಲವನ್ನೂ ಅರ್ಥೈಸಿಕೊಂಡಿದ್ದಳು.
ಹಾಗೆ ಕೂತಿರುವಾಗಲೇ ಎರಡು ಬಸ್ಸು ಪಾಸಾಗಿತ್ತು. ನನಗದರಬಗ್ಗೆ ಗಮನವಿರಲಿಲ್ಲ.
ಕಾಲೇಜು ಮುಗಿದಿತ್ತು, ಹೆಚ್ಚಿನ ಓದಿಗಾಗಿ ಇಬ್ಬರೂ ಬೆಂಗಳೂರು ಸೇರಿದ್ವಿ. ಓದು ಮುಗಿದಿತ್ತು. ತಕ್ಕ ಕೆಲಸವೂ ಸಿಕ್ಕಿತ್ತು. ಆದರೆ ನಲುಮೆಯ ದಿನಗಳಲಿ ಯಾವ ಬದಲಾವಣೆಯೂ ಆಗಲಿಲ್ಲ. ಪತ್ರದ ಬದಲು ಮೊಬೈಲ್ ಬಂದಿತ್ತು. ಆದರೆ ಖಾಲಿ ಸಂದೇಶ ಯಾವಾಗಲೂ ಬರಲಿಲ್ಲ. ನಾನಾಗ ತೊದಲು ಸಾಲು ಬರೆಯುವ ಕವಿಯಾಗಿದ್ದೆ. ಅವಳೊ ಶುದ್ಧ ಕವಯಿತ್ರಿ. ಅವಳ ಮನೆಯಲ್ಲಿ ಲೆಕ್ಕವಿಲ್ಲದಷ್ಟು ಸಮಸ್ಯೆ. ದುಃಖ ತಡೆಯಲಾಗದೇ ಹೋದಾಗೆಲ್ಲ ಅವಳು ನನ್ನೆದುರೇ ಬಿಕ್ಕುತ್ತಿದ್ದಳು. ಹಾಗೆ ಅದೆಷ್ಟು ಬಾರಿ ಕಣ್ಣೀರಾದಳೊ
ಎಣಿಸುವ ಬದಲು ಯನ್ನ ಬೆರಳುಗಳು ಅವಳ ಕಣ್ಣೊರೆಸುತ್ತಿದ್ದವು.
ಇಬ್ಬರಿಗೂ ಮದುವೆಯ ವಯಸ್ಸು ಬಂದಿತ್ತು. ಮನಸಲ್ಲಿ ಪ್ರೀತಿ ಹಾಗೇ ಇತ್ತು. ಹೇಳಲು ಭಯವಲ್ಲ. ಅವಳು ಒಲ್ಲೆಯೆಂದಾಳು ಎನ್ನುವ ಅನುಮಾನವೂ ಅಲ್ಲ. ನಾನು ಅವಳಿಗೆ ಸರಿ ಹೊಂದಬಹುದೇ ಎಂಬ ಕೀಳರಿಮೆಯಷ್ಟೆ.
ಬೆಟ್ಟದ ಕಾಲು ಹಾದಿಯಲ್ಲಿ ಕುಂಟೆಬಿಲ್ಲೆ ಆಡಿದವಳು, ಹೊಳೆಯಲ್ಲಿ ಎಮ್ಮೆ ಮೈ ತೊಳೆಸಿದವಳು, ನಮ್ಮೊಡನೆಯೇ ಸೇರಿ ಕ್ರಿಕೆಟ್ ಆಡಿದವಳು, ಅಮ್ಮ ತಿಳಿಬೆಲ್ಲವನ್ನ ಉಪ್ಪಿನಕಾಯಿಗೆ ತಾಕುವಂತೆ ಹಾಕಿದಳೆಂದು ಉಪವಾಸ ಮಾಡಿದವಳು, ಹಠಮಾದಿದವಳು, ಸ್ನೇಹದಲೇ ಪ್ರೀತಿ ಕೊಟ್ಟವಳು. ಎಲ್ಲವೂ ಆದವಳು ಅವಳು. ಹಾಗಿರುವಾಗ ಮತ್ತೆ ನನ್ನವಳಾಗುತ್ತೀಯಾ ಅಂತ ಕೇಳುವುದು ನನ್ನತನವೇ ಎಂಬ ಪ್ರಶ್ನೆ ನನ್ನನ್ನ ಕಾಡಿದ್ದು. ಹಾಗೊಂದು ಪ್ರಶ್ನೆ ಬರುವಂಥ ವ್ಯಕ್ತಿತ್ವ ಕಟ್ಟಿಕೊಟ್ಟವಳೂ ಅವಳೇ. ನಾನು ಏನಾಗಬೇಕೆಂದು ಬಯಸಿದ್ದೆನೋ ಅದಾಗಲಿಲ್ಲ, ಆದರೆ ಕಡೆಗೆ ನಾನು ನಾನಾಗುವಂತೆ ಮಾಡಿದ್ದು ಅವಳೇ. 
ಪ್ರೀತಿ ಹೇಳಲೇ ಇಲ್ಲ. ಆದರೆ ಪ್ರೀತಿ ಖಾಲಿಯಾಗಲೇ ಇಲ್ಲ. ನಾವು ತೀರಾ ಹಚ್ಚಿಕೊಂಡಾಗ ಆಸೆ ಪಟ್ಟಾಗ ಅದು ನಮ್ಮ ಎದುರಲ್ಲಿಯೇ ಇದ್ದರೂ ನಮಗೆ ಸಾಕಾಗುವುದಿಲ್ಲ. ಅದಕ್ಕೆ ನಮ್ಮ ಒಡೆತನ ಇರಬೇಕೆಂಬ ಮತ್ತೊಂದು ಆಸೆ ನಮ್ಮನ್ನ ಕಾಡುತ್ತದೆ. ನನಗಾಗಿದ್ದೂ ಅದೇ.. 
ಅವಳು ಗೆಳತಿ ಹೌದು, ಕಣ್ಣರೆಪ್ಪೆಯಡಿಯಲ್ಲಿ ಬಚ್ಚಿಟ್ಟು ಕಾಯುವ ಭರವಸೆ ಬಂದಿದ್ದರಿಂದ ಜೀವಮಾನವಿಡೀ ಪ್ರೀತಿಸುವ ಹತ್ತಿಕ್ಕಲಾಗದ ಅದಮ್ಯ ಒಲವಿನ ಹರಿವೊಂದು, ಗೆಳತಿಯನ್ನ ಪ್ರೇಯಸಿಯನ್ನಾಗುವಂತೆ ಒತ್ತಾಯಿಸಲು ಇಂಬು ನೀಡಿತ್ತು. 
ಅವತ್ತೂ ಮಳೆ ಬಂದಿತ್ತು. ಅವಳು ಬಿಕ್ಕಿಬಿಕ್ಕಿ ಸುಮ್ಮನಾಗಿದ್ದಳು. ನಾನು ಪ್ರೀತಿ ನಿವೇದಿಸಿದ್ದೆ ಮಳೆಯಲ್ಲಿ ಅವಳೆದುರಲ್ಲಿ ತೀರಾ ನನ್ನತನದಲ್ಲಿ. ಅವಳು ಕಣ್ಣೊರೆಸಿಕೊಂಡು ಕೈ ಹಿಡಿದಿದ್ದಳು. ಮೆತ್ತಗೆ ಮೆಲುವಾಗಿ ಸಹಜವಾಗಿ ಅವಳರೀತಿಯಲ್ಲಿ...

ಮತ್ತೆ ಮೊಬೈಲ್ ಬ್ಲಿಂಕಾಯಿತು. ಕಾಲ್ ಬರುತ್ತಿತ್ತು. ಹೆಸರಿಗೆ ಆಫೀಸು ಮುಗಿದರೂ ಅದು ಪೂರ್ತಿ ಮುಗಿದಿರಲಿಲ್ಲ. ನಮ್ಮ ಮ್ಯಾನೇಜರ್ ಕಾಲ್ ಮಾಡಿದ್ದ. ಕೊನೆಯದಾಗಿ ಕಳುಹಿಸಿದ mailನಲ್ಲಿ ಅವನಿಗೆ ತೀರಾ ಅಗತ್ಯವಾಗಿ ಬೇಕಾಗಿದ್ದ ಮ್ಯಾಟರು ಇಲ್ಲವೆಂದು ಹೇಳಲು. ನಾನು ಸರಿ ಸಾರ್ ನಾಳೆ ಅದನ್ನ ಕಳುಹಿಸುತ್ತೇನೆಂದು ಹೇಳಿ ಕಾಲ್ ಕಟ್ ಮಾಡಿದೆ. 
ಗೆಳತಿಯ ನೆನಪು ಹೆಚ್ಚುಕಮ್ಮಿ ಮುಗಿದಿತ್ತು. ಮ್ಯಾನೇಜರ್‍ ನ ಮುಖ ನೆನಪಾಗಿ ಹಳೆಯ ಲಹರಿ ಉಳಿದಿರಲಿಲ್ಲ. ಮೊದಲು ಮೊಬೈಲ್ ಬ್ಲಿಂಕ್ ಆಗಿದ್ದು ನೆನಪಾಗಿ ಅದೇನೆಂದು ನೋಡಿದರೆ ಸಂದೇಶವೊಂದಿತ್ತು. ತೆರೆದು ನೋಡಿದರೆ ಇಷ್ಟೊತ್ತು ನೆನಪಿಸಿಕೊಂಡ ಅದೇ ಗೆಳತಿಯದು... 
ಅಲ್ಲ ಅಲ್ಲ ಈಗವಳು ಹೆಂಡತಿ. ಹೆಂಡತಿಯಾದಮೇಲೆ ಅವಳಲ್ಲಿ ಮನಸು ಗೆಳತಿಯನ್ನ ಬಯಸುತಿದೆ. ಗೆಳತಿಯಾದರೆ ಮತ್ತೆ ಪ್ರೇಯೈಯ ಬಯಸುವುದೋ ಏನೋ... ನನಗೆ ಬೇಕಾದಾಗೆಲ್ಲ ಅದೆಲ್ಲವೂ ಆಗಲು ಅವಳು ನನ್ನಂತೆಯೇ ಸಾಮಾನ್ಯಳು. ಮಿಸ್ಸಾದ ಎರಡು ಬಸ್ಸಿನ ಹೊತ್ತು ಕಣ್ಣ ತೆರೆಸಿತ್ತು. ಸಂದೆಶವೇನೆಂದು ತೆರೆದು ನೋಡಿದೆ. ಆದರವಳು ಗೆಳತಿಯಾಗೇ ಸಂದೇಶ ಕಳಿಸಿದ್ದಳು.... ಖಾಲಿಯಾಗಿ.
ಆದರೆ ಈ ಬಾರಿ ನಾ ಪೆದ್ದನಲ್ಲ, ತೇವ ತುಂಬಿದ ಕಂಗಳಲಿ ಹನಿಯ ತಡೆದು ತಿರುಗಿ ಕಾಲ್ ಮಾಡುವುದಿಲ್ಲ. ಅವಳಿಗೆ ಬೇಕಾಗಿರುವುದು ಮಾತಲ್ಲ ಮನಸು. 
ಮತ್ತೆ ಬಸ್ಸು ಬಂತು. ನಾ ಹತ್ತಲಿಲ್ಲ. ಬದಲಾಗಿ ಆಟೊ ಕರೆದು ಮೆಜೆಸ್ಟಿಕ್ ಗೆ ಹೊರಟೆ. ಮ್ಯಾನೇಜರ್ ಗೆ ದಾರಿಯಲ್ಲಿಯೇ mail ಮಾಡಿದೆ. ಜೊತೆಗೆ ಸಿಕ್ ಲೀವ್ ಅಪ್ಲೈ ಕೂಡಾ ಮಾಡಿಯಾಗಿತ್ತು. 
ಬೇಗ ಹೋಗುವಂತೆ ಕೋರಿಕೊಂಡಿದ್ದರಿಂದ ಹಳ್ಳದಿಣ್ಣೆ ಲೆಕ್ಕಿಸದೆ ಓಡುತ್ತಿದ್ದ ಆಟೋದ ಸೀಟಿಗೆ ಸಾದುತ್ತ ಸುಮ್ಮನೆ ಕಣ್ಮುಚ್ಚಲು ನಾನೇ ಬರೆದ ತೊದಲು ಸಾಲುಗಳು ನೆನಪಾಗಿದ್ದವು..

ಮನದ ಮೊದಲ ಒಲವ ಕವಿತೆ
ಅವಳೇ ಅದರಾ ಸಾಹಿತಿ,
ನೂರು ಬಾರಿ ಓದಿ ಮುಗಿದರೂ
ಇನ್ನೂ ಉಳಿದಾ ಮಾಹಿತಿ....

Sunday, 4 August 2013

ಭಾಗ ೩


ಕಥಾನಾಯಕನಿಗೆ and ನಾಯಕಿಗೆ ಹೆಸರಿಟ್ಟಾಗಿಲ್ಲ. ಈಗ್ ಇಟ್ರೆ ಪಪ್ಪಿ ಶೇಮ್ ಆಗ್ಬಹುದು ಹಂಗಾಗಿ ಹಿಂಗೇ ಇರ್ಲಿ.

'ಕಳ್ಳ ಕಣ್ಣು ಸಾಯ್ತದೆ, ಹಾಳು ಮನಸು ಸೋಲ್ತದೆ, ಬೇಕಾಬಿಟ್ಟಿ ಬದುಕಿನಲ್ಲಿ ತಲೆಕೆಟ್ಟು ಹೋಯ್ತದೆ'. ಸುಮ್ಮನೆ ಹಾಡು ಗುನುಗಿಕೊಂಡು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಟೆರೆಸ್ ಮೂಲೆಯಲ್ಲಿ ಖುರ್ಚಿ ಹಾಕಿಕೊಂಡು ಕೂತಿದ್ದ ನಮ್ಮ ಕಥೆಯ ನಾಯಕ. ಅವನೇ ಏನೋ ಬರ್ಕೊಂಡು ಅದ್ಕೆ ಬಿಕ್ನಾಸಿ ಟ್ಯೂನ್ ಹಾಕ್ಕೊಂಡು ಪಕ್ಕದಲ್ಲಿ ಕೂತ್ರೆ ಮಾತ್ರ ಕೇಳಿಸುವಷ್ಟು ದೊಡ್ಡದಾಗಿ ಹಾಡೋದು ಅವನ ಖಯಾಲಿ, and ಪಕ್ಕದಲ್ಲಿ ಯಾರಾದ್ರು ಕೂತ್ರೆ ಅದು ಅವ್ರ ಖರ್ಮ. ಅವನ ಚಡ್ಡಿ ದೋಸ್ತ ಅನ್ನುವವನು ಮೆಸೇಜ್ ನಲ್ಲಿ ಚಾಟ್ ಮಡ್ತಿದ್ದ.
"ಮಗನೆ ನಿ ಹೇಳಿದ್ ಕೂಸಿನ್ ನಂ ಸಿಕ್ಕಿದ್ದಿಲ್ಯಲೆ" ಫ್ರೆಂಡ್ಸು ಅಪೋಲಜಿ ಕೇಳೋದ್ರಲ್ಲಿ ಫೇಮಸ್ಸು.
"ಬೋಸ್ಟಿಕೆ, ಯವತ್ತಾರು ಬೇಕಾಗಿದ್ ಸಿಕ್ಕಿದ್ದನಾ ನಿಂಗೆ, ಯಂಗ್ ಅದೆಲ್ಲಾ ಗೊತ್ತಿಲ್ಲೆ ಹೆಂಗಾರು ಮಾಡ್ ಅದ್ರ ನಂ ಕೊಡದೆಯ" ಖಾರವಾಗಿ ಪ್ರೀತೀಲಿ order, ಫ್ರೆಂಡ್ಸ್ ಜೊತೆ ಅಲ್ದೆ ಇನ್ಯಾರತ್ರ ಮಾಡೋಕ್ ಸಾಧ್ಯ ಹೇಳಿ. 
"ಅದೆಂತಾ ಯನ್ ಮಾವನ್ ಮಗ್ಳನಾ ಸಸಾರಕ್ ತಗಂಬ್ಲೆ" ಸಮಜಾಯಿಶಿ.
"ಮಾವನ್ ಮಗ್ಳೇ ಆಗಿದ್ರೆ ದೇವ್ರಾಣೆ ಕೊಡ್ತಿದ್ದಿಲ್ಲೆ ಬಿಡು. ಅದು ಅಲ್ಲಾ ಹೇಳೇ ಕೇಳ್ತಿದ್ದಿ. ಮತ್ ನಿಂಗೇನಾದ್ರು ಅದೇ ಕೂಸಿನ್ ಮೇಲೆ ಮನ್ಸಿದ್ರೆ ಈಗ್ಲೆ ಹೇಳ್ಬಿಡೊ" ಹೀರೊ ರೆಪ್ಲ್ಯೈ ಮಾಡಿದ.
"ಗುರುವೆ ಯಂಗೆ ಹೆಣ್ಣುಡ್ರಿಗೆ ಗೋಬಿ ಮಂಚೂರಿಗು ಚಿಕನ್ ಕಾಬಾಬ್ ಗು ಇರ್ವಷ್ಟೆ ಹೋಲಿಕೆ ಹೇಳ್ ನಿಂಗ್ ಗೊತ್ತಿಲ್ಯನಾ?" ಮಾತಲ್ಲಿ ಅವ್ನೂ ಏನ್ ಕಮ್ಮಿ ಇರ್ಲಿಲ್ಲ. 
"ಈಗೆಂತು ಖರೆನು ಸಿಕ್ಕಿದ್ದಿಲ್ಯಾ?" ಚೂರು ಬೇಜಾರು.
"ಹೌದಲೆ, ವಿಜುನತ್ರೆ ಕೇಳ್ಜಿ. ಅವಂಗೆ ಅದು ಎಂತೊ ಸಂಬಂಧ. ಕೇಳ್ ನೋಡ್ತಿ ಹೇಳ್ಜವ ಪತ್ತೆನೇ ಇಲ್ಲೆ. ಅವಾ ಬಡ್ಡೀಮಗ ಡೇರಿಗ್ ಹಾಲ್ ಕೊಡದ್ರಲ್ಲೆ ಬ್ಯೂಸಿ."
"ಅಲ್ದಲೆ ಇನ್ನು ಅದೇ ಕೂಸಿನ್ ಹಿಡ್ಕಂಡಿದ್ನಾ? ಹಾಲ್ ಕ್ಯಾನ್ ಸೌಂಡ್ ಬಿಟ್ರೆ ಇವಿಬ್ರು ಮಾತಾಡವಲ್ಲ. ಅಷ್ಟಾಗ್ಯು ಸ್ಟೋರಿ ನಡೀತಿದ್ದ..?? ನಮ್ ಹೀರೊ ಪಿಯುಸಿ ವರೆಗೆ ಊರಲ್ಲೇ ಓದಿ ಆಮೇಲ್ ಬೆಂಗ್ಳೂರಿಗ್ ಬಂದಿದ್ದ. 
"ಇಲ್ಯೊ ಈಗ್ ಮಾತಾಡ್ತ. ಅವಂಗಿನ್ನು ಹೇಳಲಾಜಿಲ್ಲೆ ಅದೂ ಇನ್ನು ಖಾಲಿನೇ ಇದ್ದು. ಕೇಳಿರ್ ಮಗಾ, ಸದ್ಯದಲ್ಲೆ ಹೇಳ್ತ್ನಲೆ. ರಸ್ತೆ ಮೇಲೇ ಪ್ರಪೋಸ್ ಮಾಡ್ತಿ ಅಂಬಾ" 
"ಅವ ಸಾಯ್ಲಿ, ಅದೇನ್ ಚೊಲೊ ಇದ್ದು ಹೇಳ್ ಆ ನಮ್ನಿ ಅಲಿತ್ನನ... ಹೋಗ್ಲಿ ಇನ್ನೆಷ್ಟ್ ದಿನ ಕಾಯವು ನಂ ಸಿಗಲೆ"
ಇವ್ನು ಕಥೆ ಲಿ ಹೀರೊ ಆದ್ರೂ ಅಂಥ ಗುಣ ಯಾವ್ದೂ ಇಲ್ಲ. 
"ಸಿಕ್ತು ತಡಿ ಮಾರಾಯ. ಅಲ್ದಾ ಅಷ್ಟೆಲಾ ಹುಚ್ಚೆಂತಕ್ಕೆ ಆ ಕೂಸಿನ್ ಮೇಲೆ. ಯಾರನ್ನೂ ಹಿಡ್ಕಂಬವಲ್ಲ ನೀನು. ಬರೀತಾ ಪಟಾಯ್ಸಿ ಪಟಾಯ್ಸಿ ಏನ್ ಉಪ್ಯೋಗಾ" ದೋಸ್ತು ಅನ್ನೋರೆಲ್ಲ ಸಪೋರ್ಟ್ ಮಾಡುತ್ತಲೇ ಬುದ್ಧಿ ಹೇಳ್ತಾರೆ.
" ಅದ್ರಲ್ಲೆ ಮಜನಪ್ಪಾ... ಒಬ್ರೇ ಹಿಡ್ಕಂಬ್ಲೆ ಸಿಕ್ಕಾಪಟೆ ಬೋರು. ಕಾಳ್ ಹಾಕವು ಪಟಾಯ್ಸವು ಹಂಗೆ ಸುಮ್ನಿದ್ಬುಡವು."
"ಪುಣ್ಯ ಅಷ್ಟಕ್ಕೇ ಸುಮ್ನಿರ್ತ್ಯಲಾ ಮತ್ತೆಂತು ಮಾಡ್ತಿಲ್ಲೆ."
"ಹೆ ಮಳ್ಳನಾ ಅಷ್ಟೆಲಾ ಪಕ್ಕು ಅಲ್ದಲೆ. ಪಟಾಯ್ಸದು ಹಾಬಿ. ಅದು ಯನ್ ಈಗೋ satisfaction ಅಪ್ಪಲಷ್ಟೆಯ. ಬದ್ಕಲ್ ಆಟ ಆಡ್ವಷ್ಟು ಚಟ ಇಲ್ಯಲೆ." ನಮ್ ಹೀರೊ ಆ ವಿಷ್ಯದಲ್ಲಿ ಬೇಜಾನ್ ಒಳ್ಳೆ ಮನುಷ್ಯ. ಹೆಣ್ಮಕ್ಕಳ ಮೇಲೆ ಸೀರಿಯಸ್ನೆಸ್ ಇಲ್ಲದಿದ್ದರೂ ರೆಸ್ಪೆಕ್ಟ್ ಇತ್ತು.
" ಅದ್ ಗೊತ್ತಿದ್ದಾ... ತಡ್ಯಾ ಯಾವ್ದೊ ಮೆಸೇಜ್ ಬಂತು. ವಿಜುಂದೆ ಆಗಿಕ್ಕು ಬಹುಶ ನಂ ಕಳ್ಸಿದ್ನನ" 
ವಿಜು ನಂ ಕಳ್ಸಿದ್ದ. ನಂ ಕೆಳಗೆ ಮತ್ತೊಂದು ಸಾಲನ್ನೂ ಬರ್ದಿದ್ದ. "ಪಕ್ಕು ಕೂಸದು. ಜೊರಿದ್ದು. ಸಿಕ್ಕಪಟೆ ಕಥೆ ಇದ್ದು ಅದ್ರದ್ದು ಹುಷಾರಿ."
ವಿಷ್ಯ ಗೊತ್ತಿಲ್ಲದಿದ್ರೂ ಒಮ್ಮೊಮ್ಮೆ ಏನೂ ಇಲ್ಲದಿದ್ರೂ ಆ ಹುಡುಗೀನಾ ಗೊತ್ತಿದೆ ಬಿಡೊ ಎಂದು ಸುಮ್ಮನೆ ರೂಮರ್ ಹಾಕೋದು
ವಾಡಿಕೆ.
"ಯಂಗಲ್ಲ ಮಾರಾಯ. thanksಲೇ " ಎಂದು ಅವನಿಗೆ ರೆಪ್ಲಯ್ ಮಾಡಿ, ಅದೇ ನಂಬರನ್ನು ನಮ್ಮ ಹೀರೋ ಗೆ ಕಳುಹಿಸಿದ ಮಹೇಶ. 
ಬಿಸಿನೆಸ್ ಕಾರ್ಡ್ ನಲ್ಲಿ ನಂ ಬಂದಿರಲಿಲ್ಲವಾದ್ದರಿಂದ ಯೂಸ್ ನಂ option ಒತ್ತಿ ಸೆಂಡ್ ಮೆಸೇಜ್ ಹುಡುಕಿದ, ಅದು ವರ್ಕ್ ಆಗ್ಲಿಲ್ಲ. ಅದು ನೋಕಿಯಾ ೧೧೦೦ ಆಗಿದ್ದರಿಂದ ಕಾಲ್ ಮಾಡಬಹುದಾದ option ಮಾತ್ರ ಲಭ್ಯವಿತ್ತು. ಸೊ ನಂಬರನ್ನ ಎರಡು ಬಾರಿ ಓದಿ ಮನಸಲ್ಲಿ ನೆನಪಿಟ್ಟುಗೊಂಡು ಮೆಸೇಜ್ ಬರೆದ " ನೋಡಿದ್ದಿ. ಆದ್ರೆ ಚಂದಿದ್ದೆ ಹೇಳ್ ಹೇಳದ್ ಕಷ್ಟ ಹಂಗಂತ ಜೋರಿದ್ದೆ ಹೇಳ್ ಗೊತ್ತಿದ್ದು. ನಂ ಯಾರ್ ಕೊಟ್ಟ ಹೇಳ್ ಯೋಚ್ನೆ ಮಾಡಡ. ಡೌಟ್ ತೀರಾ ಹೆಚ್ಚಾದ್ರೆ ಮತ್ತೆ ಮೆಸೇಜ್ ಮಾಡ್ಲಕ್ಕು. ಯಂಗ್ ಮೆಸೇಜ್ ಫ್ರೀ ಇದ್ದು." ಟೈಪ್ ಮಾಡಿದ್ಮೇಲೆ ನೆನಪಿಟ್ಟುಕೊಂಡಿದ್ದ ನಂಬರ್ ಒತ್ತಿದ ಸೆಂಡ್ ಕೂಡಾ ಮಾಡಿ ಆಗಿತ್ತು. ಟೈಪ್ ಮಾಡುವಾಗ ಮಧ್ಯದೊಂದು ನಂಬರ್ ಮಿಸ್ ಆಗಿ ಬೇರೆ ನಂಬರ್ ಒತ್ತಿದ್ದ. ಗೆಳೆಯ ಮಹೇಶನಿಗೆ thanks ಹೇಳಿ ಗುಡ್ ನೈಟ್ ಮೆಸೇಜ್ ಕಳಿಸಿದ.
"ನಂಬರ್ ಸಿಕ್ಕಿದ್ಮೇಲೆ ನಮ್ಗೆ ಗುಡ್ ನಟು.." ಅಂತ ಕುಕ್ಕಿ ಅವನು ಅದನ್ನೇ ತಿರುಗಿ ಕಳಿಸಿ ಮಲಗಿದನಿರಬೇಕು. 
ನಮ್ ಹೀರೊ ಅವನವನೆ ಹಾಡಿಕೊಂಡ.
" ಹುಡುಗೀರ ಸಾಲನ್ನು ಲೆಕ್ಕಾ ಇಡು, ಮನ್ಸಿದ್ರೆ ಕನ್ಸನ್ನ ಖಾಲೀ ಬಿಡು, ಸಾಕಾಯ್ತು ಏಕಾಂತ ಸಾಲಾ ಕೊಡು, ಸಾವಲ್ಲಿ ಒಲವೀಗೆ ಜಾಗ ಇಡು"...... 

ಮನೆಯ ಮೆತ್ತಿಯ ವರಾಂಡಾದ ಮೂಲೆಯ ಪಕಾಸಿಗೆ ನೀರಿನ ಬಾಟಲಿಯನ್ನ ಅರ್ಧಕ್ಕೆ ಕೊರೆದು ತೂಗಿಬಿಡಲಾಗಿತ್ತು. ಅದರಲ್ಲಿ ಮೊಬೈಲ್ ಇತ್ತು. ಬಿಕಾಸ್ ಸಿಗ್ನಲ್ ಅಲ್ಲಿ ಮತ್ರ ಸಿಗ್ತಿತ್ತು. ಅದು ಮಿಣಿಮಿಣಿ ಬ್ಲಿಂಕ್ ಆಗಿ ಇನ್ನೇನೋ ಕೂಗಿಕೊಳ್ಳಬೇಕೆನ್ನುವಷ್ಟರಲ್ಲಿ ಒಂದೇ ಬಳೆಯನ್ನ ತೊಟ್ಟಿದ್ದ ಬಲಗೈಯೊಂದು ಮೊಬೈಲ್ ಎತ್ತಿಕೊಂಡಿತ್ತು. ಅವಳೇ ನಮ್ ಕಥೆಯ ಹೀರೋಯಿನ್ನು. ಓಪನ್ ಮಾಡಿದ್ದಷ್ಟೆ..
" ನೋಡಿದ್ದಿ. ಆದ್ರೆ ಚಂದಿದ್ದೆ ಹೇಳ್ ಹೇಳದ್ ಕಷ್ಟ ಹಂಗಂತ ಜೋರಿದ್ದೆ ಹೇಳ್ ಗೊತ್ತಿದ್ದು. ನಂ ಯರ್ ಕೊಟ್ಟ ಹೇಳ್ ಯೋಚ್ನೆ ಮಾಡಡ. ಡೌಟ್ ತೀರಾ ಹೆಚ್ಚಾದ್ರೆ ಮತ್ತೆ ಮೆಸೇಜ್ ಮಾಡ್ಲಕ್ಕು. ಯಂಗ್ ಮೆಸೇಜ್ ಫ್ರೀ ಇದ್ದು."
ಯಾವ್ದೊ ಪಕ್ಕಾ ಪುಕ್ಕಟೆ ಕೇಸಿದು ಅಂತ ಮೆಸೇಜ್ ಓದಿದಕೂಡಲೆ ಗೊತ್ತಾಗಿತ್ತವಳಿಗೆ.

ರಾಂಗ್ ನಂಬರ್ first time ಹುಡುಗಿಗೇ ಹೋಗಿದ್ದು ಕಥೆಯಲ್ಲಿ ಮತ್ರ ಆಗಿರ್ಬೇಕು. ನಿಜಾ ರಿ ನಾನ್ ಅದೆಷ್ಟ್ ಬಾರಿ ಬೆರೆ ನಂಬರ್ ಗೆ ತಪ್ಪಿ ಕಾಲ್ ಮಾಡಿದ್ದೇನೆ. ಆದ್ರೆ ಬಡ್ಡೀಮಗಂದು ಯವತ್ತು ಒಂದು ಕೂಸಿಗ್ ಹೋಗ್ಲಿಲ್ಲ. ಒಂದಿನ ಅಂತು ಸಂಕೇಶ್ವರ ಪೋಲೀಸ್ ಸ್ಟೇಶನ್ನಿಗೆ ಹೋಗಿತ್ತು. ಮುಂದೇನಾಯ್ತು ಅಂತ ಕೇಳ್ಬೇಡಿ ಅದು ಪರ್ಸನಲ್ಲು. ಹೀರೋ ನ ಲಕ್ಕೊ ಬ್ಯಾಡ್ ಲಕ್ಕೊ ನಮ್ ಹೀರೋಯಿನ್ ನಂಬರ್ ಗೆ ಮೆಸೇಜ್ ಹೋಗಿತ್ತು.
ಅವಳು ತಕ್ಷಣ ತಿರುಗಿ ಮೆಸೇಜ್ ಮಾಡ್ಲಿಲ್ಲ. ಅದ್ಕೆ ಅಲ್ವೆ ಅವಳನ್ನೇ ಹೀರೋಯಿನ್ ಮಾಡಿದ್ದು.!!!

ಮುಂದಿನದು ದೇವ್ರಿಗೆ ಬಿಟ್ಟಿದ್ದು...

ಸೂ: ಬರೆಯೋಕೆ ಸುಲಭ ಆಗೊ ಒಳ್ಳೇ ಹೆಸರಿದ್ರೆ ನಮ್ಮ ನಾಯಕಿಗೆ ನಾಯಕನಿಗೆ ಕೊಡಬೇಕಂತ ವಿನಂತಿ

ಸಂಭಾಷಣೆ ಸಶೇಷ...

ಭಾಗ ೨


ಬಾರಲ್ಲಿ ಬಾಗಿಲು ಬದಿಯಲ್ಲಿದ್ರು ಪರವಾಗಿಲ್ಲ, ಆದ್ರೆ ಒಳಗೆ ಅಟ್ಲೀಸ್ಟ್ ಬೀರು ಇರ್ಲೇಬೇಕು. ಬಾರು ಬೀರು ಅಂತ ಹೆಂಡದ್ ಕಥೆ ಹೇಳ್ತೀನಿ ಅಂದ್ಕೋಬೇಡಿ. ಲವ್ ಸ್ಟೋರಿ ಅಂದ್ಮೇಲೆ ಟ್ವಿಸ್ಟ್ ಇರ್ಲೇಬೇಕು ಇಲ್ಲಾ ಅಂದ್ರೆ ಮಜ ಇಲ್ಲ ಅನ್ನೋದಕ್ಕೆ ಸಣ್ಣ ಪೀಠಿಕೆ ಅಷ್ಟೆ. ಶನಿವಾರದ ಮಧ್ಯಾನ್ನ ಮುಗಿದು ಸುಮಾರಿಗೆ ಸಂಜೆ ಶುರುವಾಗಲಿತ್ತು.ಯಂಕಟಿ ಬಿಕ್ಕೆಗುಡ್ಡದ ತುದಿಯಲ್ಲಿಹೋಗಿ ಕೂತಿದ್ದ. ಅದು ಬಿಕ್ಕೆಹಣ್ಣು ಬೀಳುವ ಸೀಸನ್ನೇನಲ್ಲ. ಹಂಗೆ ಫೊಟೊ ತೆಗ್ಯೋಕ್ ಹೋಗಿರ್ಬೇಕು ಅಂದ್ಕೊಂಡ್ರೆ ಅವನಲ್ಲಿ ಕ್ಯಾಮರಾನೂ ಇರಲಿಲ್ಲ. ಸುಮ್ನೆ ಬಿಲ್ಡಪ್ ಯಾಕೆ, ಕಸೂತಿಯ ಬರುವನ್ನ ಎದುರುನೋಡುತ್ತಿದ್ದ. ಇದೆಂತ ಹೆಸ್ರಪ್ಪ ಅಂದ್ಕೊಂಡ್ರೆ ಕಾಮನ್ನು ಆಲೋಚನೆ ಆಗತ್ತೆ. ಅದೇ ಯಾಕ್ ಆ ಹೆಸರು ಅಂದ್ಕೊಂಡ್ರೆ ಕಥೆ ಮುಂದುವರಿಸಲು ನನಗೆ ಸಹಾಯವಾಗುತ್ತದೆ. ಹೆಸರು ಕಸ್ತೂರಿ ಅಂತ ಮನೆಮಂದಿ ಸರಿಯಾಗೆ ಇಟ್ಟಿದಾರೆ. ಯಂಕಟಿ ಅವಳನ್ನ ಪೀಡಿಸೋಕೆ ಹಾಗೆ ಕರೆಯುತ್ತಿದ್ದ ಅಷ್ಟೆ. ಹಂಗೆ ಕರ್ಯೋದು ಅವಳಿಗೂ ಇಷ್ಟ ಅಂತ ಉಲ್ಲೇಖ ಮಾಡಿದ್ರೆ ಸ್ವಲ್ಪ ಓವರ್ ಆಗ್ಬಹುದೇನೊ.. 
"ಏನಾ ಬೆಗ್ನೆ ಬಂದಿಗಿದೆ, ಮನೆಲ್ ಗಡಿಯಾರ ಅರ್ಧತಾಸು ಮುಂದಿಟ್ಟವ್ ಯಾರೊ?" ಗುಡ್ಡದ ಕೆಳಗಿನಿಂದಲೇ ಕೂಗುತ್ತ ಅವನಕಡೆ ಸಾಗಿದ್ದಳು.
"ಬಾಯ್ಬಡಕಿ, ಗೋಣಿಚೀಲಾ, ಉದ್ದಾರಪ್ಪ ದೊಣಗೀನೇ ಅಲ್ಲ ಇದು" ಮನಸಲ್ಲೇ ಅಂದುಕೊಂಡ.
"ಸ್ವಲ್ಪ ಹಲ್ ತೋರ್ಸೊ ಅಡ್ದಿಲ್ಲೆ, ನಪ್ಪಿಹೋದ ಬೋಗಣಿ ಹಂಗ್ ಮಕ ಮಾಡ್ಕೆಂಡ್ ಕುಂತಿದ್ಯಲಾ" ಅಷ್ಟು ಹೇಳುವಾಗ ಅವನ ಬಳಿಯಲ್ಲೇ ಬಂದು ಕೂತಿದ್ದಳು. 
"ಸೊಕಾಗ್ ಮಳ್ ಹರ್ಯಡಾ. ವಿಷ್ಯ ಸೀರ್ಯಸ್ಸು" ಅವ್ನಿಗ್ ಚಿಂತೆಯಿತ್ತು.
"ಪ್ಲೀಸ್ ಸೀರ್ಯಸ್ ಮಾತ್ರ ಆಗಡ" ಅವಳಿಗೆ ತನ್ನ ಭಾವನೆ ಅರ್ಥವಾಗಿ ತನ್ನ ಮನೋಲಹರಿಗೆ ಹೊಂದಿಕೊಂಡಳಿರಬೇಕು ಎಂದು ಅವನು ಅಂದುಕೊಳ್ಳುವಷ್ಟರಲ್ಲಿ ಅವಳು ಮತ್ತೆ ಮಾತಾಡಿದ್ದಳು " ಯನ್ನ ಅಜ್ಜ ಹೋಗಿದ್ ಸೀರ್ಯಸ್ ಆಗೆಯ. ಪ್ಲೀಸ್ ಸೀರ್ಯಸ್ ಮಾತ್ರ ಆಗಡ."
ಅವನಿಗೆ ಮುಷ್ಟಿಕಟ್ಟಿ ಗುದ್ದುವಷ್ಟು ಸಿಟ್ಟು ಬಂದಿತ್ತಾದರೂ ಅದನ್ನ ಮಾಡುವಂತಿರಲಿಲ್ಲ.
"ಆತು ಮಾರಾಯಾ ಹೇಳು. ಇಲ್ಲಿ ತಂಕಾ ಬಪ್ಪಲ್ ಹೇಳಿದ್ದೆಂತಕ್ಕಪಾ?"
ಅವನು ಆಗಿಂದಾಗ್ಗೆ ಮಾತಾಡಲಿಲ್ಲವಾದರೂ, ಮತ್ತೆ ಅವಳಿನ್ನೇನಾದರೂ ಮಾತಾಡಿಯಾಳು ಎಂದು ಶುರುಮಾಡಿದ.
"ನಿಂಗ್ ಎಂತಾ ಅನಿಸ್ತು" 
"ಹೇಳಿರ್ ಬಯ್ತೆ" ಅವಳಿಗಾಗಲೇ ನಗು ಬಂದಿತ್ತು.
"ಹೇಳದ್ ಬ್ಯಾಡ. ಕೇಳು" ಅವನ ಧ್ವನಿಯಲ್ಲಿ ಅಧಿಕಾರವಿತ್ತು ಜೊತೆಯಲ್ಲಿ ಚೂರು ಅಸಹನೆ.
"ಕೇಳ್ತಿ"
"ಯನ್ನ ದೋಸ್ತರಲ್ಲಿ ಸುಮಾರೆಲ್ಲರದ್ದೂ ಲವ್ ಸ್ಟೋರಿನೆಯಾ"
"ಅದ್ಕೆ ನೀ ಈಗ್ ಮದ್ವೆ ಅಪ್ಪವ್ನಾ?" 
"ಮಧ್ಯ ಬಾಯ್ಹಾಕಡ ಕೊಟ್ಬುಡ್ತಿ." ಗಂಡು ಜನ್ಮದ ತಳಮಳಕ್ಕೆ ಸಾಹಿತ್ಯದಲ್ಲಿ ಉದಾಹರಣೆಯಿಲ್ಲ ಬಿಡಿ.
ಅವಳು ಕಷ್ಟಪಟ್ಟು ಸರಿಯಪ್ಪ ಅನ್ನುವಂತೆ ತಲೆಯಾಡಿಸಿದಳು.
"ಆನು ನಿನ್ ಲವ್ ಮಾಡಿದಿದ್ದಿ. ಹೇಳಲಾಗ್ದೆ ಪೇಚಾಡಿ ಕಡಿಗ್ ಬೇರ್ಯವರಿಂದ ನಿಂಗ್ ವಿಷ್ಯ ಗೊತ್ತಾಗಿ ಅದು ಅಲ್ಲಿಗೇ ನಿಂತೋತು." ಸ್ವಲ್ಪ ತಡೆದು ಅವನೇ ಹೇಳಿದ. " ಆದ್ರೆ ಈಗ ಮತ್ತೆ ಹಂಗಿದ್ದೇ ಭಾವನೆ ಶುರುವಾಜು" 
ಅವಳಿಂದ ಏನೂ ಪ್ರತಿಕ್ರಿಯೆ ಇಲ್ಲದ್ದನ್ನ ನೋಡಿ ಅವಳ ಮುಖ ನೋಡಿದ. ಮಾತನಾಡಬಹುದಾ ಎಂಬಂತೆ ಅವಳು ಸನ್ನೆಯಲ್ಲೇ ಕೇಳುತ್ತಿದ್ದಳು. ಹೆಣ್ಣುಮಕ್ಕಳಿಗೆ ಕಣ್ಣಲ್ ನೀರ್ ಬಂದ್ರು ಗಂಡುಮಕ್ಕಳು ಥಟ್ಟನೆ ಕರ್ಚೀಪು ಕೊಡ್ತಾರೆ. ಗಂಡು ಮಕ್ಕಳಿಗೆ ಗಾಯವಾದ್ರು ಹೆಣ್ಮಕ್ಳು ಟಿಶ್ಯೂಪೇಪರ್ ಸಿಗ್ಬಹುದಾ ಅಂತ ಹುಡುಕ್ತಾರೆ.
"ಅಡ್ಡಿಲ್ಲೆ ಮತಾಡ್ಸಾಯಿ ಮಾರಾಯ್ತಿ" ಅವಳು ಹಂಗೆ ಅಂತ ಅವನಿಗೆ ನಮ್ಕಿಂತ ಚೆನ್ನಾಗೇ ಗೊತ್ತಿತ್ತು ಪುಣ್ಯ.
"ಯಾರ್ಮೇಲೋ ಅಂತಾ ಭಾವನೆ?" ಮಾತಲ್ಲಿ ಕುಚೇಷ್ಟೆಯಿತ್ತಾದರೂ ಮನಸಲ್ಲಿ ಹಿಂಸೆಯಿತ್ತು.
"ಅದಲ್ಲ ವಿಷ್ಯ. ಆ ಭಾವನೆ ಮೊದ್ಲಾದಂಗೆ ಬೇರ್ಯವರಿಂದ ಗೊತ್ತಾಪ್ಪದರ ಬದಲು ಆನೇ ಹೇಳಿರ್ ಹೆಂಗೆ ಹೇಳಿ ನಿನ್ ಕೇಳ್ತಿದ್ದಿ"
" ಹೌದು ಅದೇ ಚೊಲೋದು." ದನಿಯಲ್ಲಿ ಬದಲಾವಣೆಯಿತ್ತು.
"ಹೆಂಗ್ ಹೇಳ್ಳೇ?" ಮಕ್ಕಳಂತೆ ಕೇಳಿದ್ದ ಹೆಮ್ಮೆಯಲ್ಲಿ. ಅವಳ ಚೂಡಿದಾರದ ವೇಲಿನ ತುದಿಯನ್ನ ಬೆರಳತುಂಬ ಸುತ್ತಿಕೊಂಡಿದ್ದ.
"ನಿ ಹಿಂಗೇ ವೇಲ್ ಸುತ್ತತಾ ಇದ್ರೆ ಆನ್ ಬೆನ್ನು ಹಾಕಿ ಕೂರಕಾಗ್ತು" ಅವನನ್ನ ಬೇರೇನೋ ಆಲೋಚಿಸುವಂತೆ ಕದಲಿಸಿದಳು.
ಸುಮ್ನೆ ಗಂಡು ಮಕ್ಳು ಎದುರಲ್ಲಿ ಹಾದುಹೋದ್ರೇನೇ ವೆಲ್ ಸರಿ ಮಾಡಿಕೊಳ್ಳುವ ಹೆಣ್ಮಕ್ಳು, ಅದನ್ನೇ ಎಳೆದು ಸುತ್ತಿಕೊಂಡ್ರೆ ಸುಮ್ನಿರ್ತಾರ್ಯೆ?
"ಏನ್ ಅನಿಸ್ತಾ ಇದ್ದ ಅದ್ನ ಹೇಳವಪಾ" ತನಗೇನ್ ಗೊತ್ತು ಅನ್ನೋದ್ ಅವಳ ಭಾವನೆ.
"ಹೆಂಗ್ ಹೇಳಿರ್ ಹುಡ್ಗೀರ್ಗೆ ಇಷ್ಟಾಗ್ತು?"
ಹಾಗಲಕಾಯಿ ಅಡುಗೆಗೆ ಹಾಕಿದ್ರೂ ಹಾಗೆ ತಿಂದ್ರು ಹೇಗೆ ಕಹಿಯೋ ಹಾಗೇನೇ, ಹೆಂಗ್ ಹೇಳಿದ್ರೂ ಅವ್ರಿಗ್ ಅರ್ಥ ಆಗೋದ್ ಅಷ್ಟೇ ಅಂನ್ನೋದ್ ಮಾತ್ರ ಹುಡುಗರಿಗೆ ಗೊತ್ತಾಗೋದೇ ಇಲ್ಲ. 
"ಅದೆಂತ ಸಿಲೇಬಸ್ ಇರ ಕೋರ್ಸನಾ ಹಿಂಗೆಯಾ ಹಂಗೆಯಾ ಹೇಳಲೆ" ಅಲ್ಲಿಗ್ ನಾವ್ ಅರ್ಥ ಮಾಡ್ಕೊಬೇಕು ಹೆಣ್ಣುಮಕ್ಕಳಿಗೇ ಹೆಣ್ಣುಮಕ್ಳು ಅರ್ಥ ಆಗ್ಲಿಲ್ಲ ಅನ್ನೋದನ್ನ. 
"ಆದ್ರೂ ಹೆಂಗ್ ಹೇಳಿದ್ರೆ ಇಷ್ಟ ಆಗ್ತಿಲ್ಲೆ ಹೇಳ್ ಗೊತ್ತಾಗ್ತಲೆ" ಕೆಲವರು ಚಟ ಬಿಟ್ರೂ ಹಠ ಬಿಡಲ್ಲ. 
"ಎಲ್ಲರಂಗೆ ಸುಮ್ನೆ ಇಷ್ಟ, ಪ್ರಿತಿ ಮಾಡ್ತಿ ಹೇಳದ್ನ ಕೇಳಿ ಕೇಳಿ ಬೇಜಾರ್ ಆಗೋಗಿರ್ತು. ಹಂಗಂತ ಬೇರೆ ಏನೋ ಹೇಳದಲ್ಲ. ಬೆರೆ ನಮ್ನಿ ಹೇಳಿರ್ ಕ್ಯೂರಿಯಾಸಿಟಿ ಹೆಚ್ಚಾಗ್ತು. ಭಾವನೆ ಒಳ್ಳೇದ್ ಬತ್ತು." ಪ್ರಪೋಸ್ ಮಾಡೊದಕ್ಕೂ ಸ್ಟೈಲ್ ಐತ್ರಪ್ಪ. 
"ಮಂಡಿ ಊರಿ ಕೈ ಎರಡೂ ಎತ್ತಿ ಹೇಳ್ಳಾ"
"ಎಂತಕ್ಕೆ ನಿಂತ್ಕಂಬ್ಲೆ ಸೊಂಟನೋವಾ?"
"ಎದುರಲ್ಲಿ ಕೂತು ಅವಳ ಕಣ್ಣಲ್ಲೇ ಕಣ್ಣೀಟ್ಟು ಹೇಳ್ಳ?"
"ಕಣ್ ಹೋಗ್ಬುಡ್ಗು ಹುಷಾರಿ.."
""ಲೆಟರ್ ಬರ್ದು ಕೊಡ್ಲಾ?"
"ಎಂತಕ್ಕೆ, ಮೆಸೇಜ್ ಗೆ ದುಡ್ಡು ಕಟ್ ಆಗ್ತಿಲ್ಲೆ ಹೇಳಾದ್ರೆ ಅದ್ನೇ ಕಳ್ಸಿಬಿಡು."
"ಮತ್ತಿನ್ ಹೆಂಗ್ ಹೇಳವೆ..." 
"ಮೊದ್ಲು ಕೂಸು ಯಾರು ಹೇಳು" ಉತ್ತರ ಗೊತ್ತಿಲ್ಲದಿದ್ದಾಗ ಪ್ರಶ್ನೆಯನ್ನೇ ಬದಲಾಯಿಸುತ್ತಾರೆ ಹೆಣ್ಮಕ್ಕಳು. 
ಸಂಜೆ ಸಾಯಂಕಾಲವಾಗಿ ಬದಲಾಗಿತ್ತು. ಸಮಯ ಸರಿದಿತ್ತು. ಇಬ್ಬರಲ್ಲೊಬ್ಬರು ಹೊರಡಲೇಬೇಕಿತ್ತು. ಅವಳ ಕಡೆಯ ಪ್ರಶೆಗೆ ಅವನಿಂದ ಉತ್ತರ ಸಿಗಲಿಲ್ಲ. ಅವನ ಪ್ರಶ್ನೆಗೂ ಅವಳಿಂದ ಉತ್ತರ ಬಂದಿರಲಿಲ್ಲ ಹಂಗಾಗಿ ಮ್ಯಾಚು ಡ್ರಾ ಅಂದ್ಕೊಬೇಡಿ. ಯಾಕಂದ್ರೆ ವಂಡೆ ಮ್ಯಾಚು ಟೈ ಆಗಬಹುದೇ ವಿನಹ ಡ್ರಾ ಆಗಲ್ಲ. ಅವಳು ಹೊರಟಳು ಅವನು ಹಿಂಬಾಲಿಸಲೇಬೇಕಿತ್ತು. ಬೆಟ್ಟದ ಇಳಿಜಾರಲ್ಲಿ ಒಣಗಿದ ಹುಲ್ಲು ಆಳೆತ್ತರಕ್ಕೆ ಬೆಳೆದಿತ್ತು. 
"ಕಡಿಗೂ ನೀ ಹೇಳಿದ್ದಿಲ್ಲೆ" 
"ಮೊದ್ಲೇ ಹೇಳಿದ್ನಲಾ ಹೇಳಲ್ ಬತ್ತಿಲ್ಲೆ ಅದು ಹೇಳಿ" ಇದೇ ಮಾತನ್ನ ಮತ್ತೊಮ್ಮೆ ಅವಾಗ್ಲೇ ಹೇಳಿದ್ರೆ ಇಷ್ಟು ಸಾಲು ಬರೆಯುವ ಕೆಲಸವಿರಲಿಲ್ಲ ನಂಗೆ. 
"ಅಂಗಾರೆ ಆನು ಯೋಚ್ನೆ ಮಾಡ್ಜಂಗೇ ಹೇಳ್ತಿ. ಏನ್ಬೇಕಾರ್ ಅಂದ್ಕಳ್ಳಲಿ. ಅಟ್ಲೀಸ್ಟ್ ಅದು ಯನ್ನ ಸ್ವಂತದ್ದು ಹೇಳ ಸಮಾಧಾನ ಆದ್ರೂ ಇರ್ತು." ಸಿಗರೇಟು ಫಿಲ್ಟರ್ ವರೆಗೆ ಸುಟ್ಟಾದಮೇಲೆ ಸೇದದಿದ್ದರೇ ಚೆನ್ನಾಗಿತ್ತು ಅನಿಸುವ ಹಾಗೆ, ಹುಡುಗರಿಗೆ ತಾವು ಸರಿಯಾಗೇ ಇದ್ದಿದ್ದೆವು ಅಂತ ಅರ್ಥವಾಗೋದು ಹಾಳಾದಮೇಲೆಯೇ.
"ಹೆಂಗೆ" ಕುತೂಹಲವಿತ್ತು.
ಮುಂದೆ ಹೊರಟಿದ್ದವಳ ಕೈ ಹಿಡಿದು ಎಳೆದುಕೊಂಡ. ಅವನ ನಡೆಯ ಬಗ್ಗೆ ಕಿಂಚಿತ್ತೂ ಕಲ್ಪನೆಯಿರದಿದ್ದರಿಂದ ಅವನೆಳೆದ ರೀತಿಗೆ ತಿರುಗುವಾಗ ಆಯ ತಪ್ಪಿ ಅವನನ್ನಪ್ಪಿದಳು. ಇಬ್ಬರಿಗೂ ಅವರವರ ಉಸಿರು ತಾಕುವಷ್ಟು ಹತ್ತಿರದಲ್ಲಿ ಮುಖ ಬಂದಿತ್ತು. ಕಣ್ಣು ಹೋದರೂ ಪರವಾಗಿಲ್ಲವೆಂಬಂತೆ ಅವಳ ಕಣ್ಣಿನ ಕಪ್ಪಲ್ಲಿ ತನ್ನ ಬಿಂಬ ನೋಡುತ್ತಿದ್ದ. ಅನಿರೀಕ್ಷಿತತೆಗೆ ಶರಣಾಗಿದ್ದ ಅವಳಲ್ಲಿ 
ಪ್ರತಿಕ್ರಿಯೆಯೇ ಇರಲಿಲ್ಲ.ಸುರುಳಿ ಮುಂಗುರಳ ಕಿವಿಹಿಂದೆ ಸರಿಸಿ, ತನ್ನೆರಡೂ ಬೊಗಸೆಯಲ್ಲಿ ಅವಳ ಮುಖ ಹಿಡಿದುಕೊಂಡು
ಅವಳಿಗಷ್ಟೇ ಕೇಳುವ ಹಾಗೆ ಹೇಳಿದ.
"ಆನು ಬೋರು, ನಿನ್ನಂಗೆ ಕಿಲಾಡಿ ಮಾಡಲ್ ಬಪ್ಪವಲ್ಲ. ಆದ್ರೆ ಗೊತ್ತಿಲ್ಲದ ಕಾರಣ ಹುಡ್ಕಿ ಸಮಜಾಯಿಷಿ ಕೊಡ್ತ್ನಿಲ್ಲೆ. ಅಪ್ಪಯ್ಯನ ಎದ್ರಿಗೆ ಕಣ್ಣುಹೊಡ್ಯಲ್ ಹೆದ್ರಿಕೆ, ಸೊಸೈಟಿ ಎದ್ರಿಗೆ ಕಂಡ್ರೂ ಹೆಸರಿಟ್ಟು ಕರ್ಯಲೆ ನಾಚ್ಕೆ. ಯಾವ್ದಾರು ತಿಥಿ ಮನೆಲ್ಲಿ ಅಕಸ್ಮಾತ್ ಪಕ್ಕದಲ್ಲೇ ಊಟಕ್ ಕೂರ್ವಂಗ್ ಆಗ್ಬುಟ್ರೆ ಅರ್ಧ ಹೊಟ್ಟೇಲಿ ಯೋಳದು ಗ್ಯಾರೆಂಟಿ. ಇಬ್ಬರೇ ಇದ್ದಾಗ್ಲೂ ಮುತ್ತು ಕೊಡುವಷ್ಟು ಧೈರ್ಯಾ ಇಲ್ಲೆ. ಆದ್ರೆ ನಿ ಅಕ್ಕು ಹೇಳಿರ್ ಅಂಬಾಡಿ ಎಲೆ ಬಳ್ಳೀಲಿ ಗುಲಾಬಿ ಹೂ ತೋರ್ಸ್ತಿ. ಮಗ್ಗಿ ಪುಸ್ತಕದಲ್ಲಿ ಸಾಹಿತ್ಯ ಓದಸ್ತಿ, ಕಿತ್ಲೆಹಣ್ಣಲ್ ಅಪ್ಪೆಹುಳಿ ಮಾಡ್ತಿ, ನಿಂಗ್ ಸಿಟ್ಟು ಬಂದಾಗ್ಲು ಪ್ರೀತಿ ಮಾಡ್ತಿ, ಅರುವುಮರುವು ಅಪ್ಪತಕನೂ ಪ್ರೀತಿ ಮಾಡ್ತಾನೇ ಇರ್ತಿ." ಅರೆಕ್ಷಣ ಸುಮ್ಮನಾದ ಅವಳ ಪ್ರತಿಕ್ರಿಯೆಗಾಗಿ. ಅವಳಲ್ಲಿ ಆಶ್ಚರ್ಯದ ಹೊರತಾಗಿ ಮತ್ತಾವ ಭಾವನೆಯನ್ನೂ ಅವನು ನೋಡಲಿಲ್ಲ. ಮತ್ತೆ ಅವನೇ ಹೇಳಿದ" ಹಿಂಗ್ ಹೇಳವು ಹೇಳೇ ಮಾಡ್ಕೆಂದಿದಿದ್ದಿ.
ಇದನ್ನೆಲ್ಲ ತನಗೇ ಹೇಳಿದ್ದನೆಂದುಕೊಂಡಿದ್ದ ಅವಳ ಮುಖದಲ್ಲಿ ಹಿಗ್ಗಿದ್ದ ನೆರಿಗೆಗಳು ಅವನ ಕೊನೆಯ ಮಾತಿಂದ ಕುಗ್ಗಿದವು.
ಅವನು ಮುಗಿಸಿರಲಿಲ್ಲ "ಯಾರು ಆ ಕೂಸು ಅಂದ್ಯಲೆ ಅದು ನೀನೇಯ. ಅವತ್ತು ನಿನ್ನೇ ಇಷ್ಟ ಪಟ್ಟಿದಿದ್ದಿ ಇವತ್ತು ನಿನ್ನೇ ಇಷ್ಟ ಪಟ್ಟಿದ್ದಿ ಮುಂದು ಅಷ್ಟೆಯಾ. ಈ ಭಾವನೆ ನಿನ್ಮೇಲೊಂದೆಯ"
ಅದೆ ನೆರಿಗೆಗಳು ಮತ್ತಷ್ಟು ಹಿಗ್ಗಿದವು. ಯಂಕಟಿ ಹಿಂಗೆಲ್ಲ ಮಾತಾಡಿದ್ದನ್ನ ಅವಳು ಎಂದೂ ನೋಡಿರಲಿಲ್ಲ. ಮಾತಲ್ಲಿ ಸಿಕ್ಕಾಪಟ್ಟೆ 
ವ್ಯತ್ಯಾಸವಾಗಿಹೋಗಿತ್ತು. ಅದನ್ನೇ ಅವಳು ಬಯಸಿದ್ದಳು ಅಂತ ಈಗ ಹೇಳಿದ್ರೆ ಪ್ರಾಬ್ಲಮ್ ಇಲ್ಲಾ ಅಂದ್ಕೊತೀನಿ.
ಅವನ ಖಾಲಿ ಎದೆಯ ಮೇಲೆ ಅವಳು ಮುಖ ಹುದುಗಿಸಿದ್ದಳು.
OK ಅಂತ ಹೇಳೋಕೆ ಮೌನಕ್ಕಿಂತ ಒಳ್ಳೆ ಭಾಷೆ ಮತ್ತೊಂದಿಲ್ಲ ಬಿಡಿ. ಕಣ್ಣಮೇಲೆ ಧರ್ಯಮಾಡಿ ಕೊಡಬೇಕೆಂದಿದ್ದ ಮುತ್ತನ್ನ ಅವಳು ಎದೆಗೊರಗಿಕೊಂಡಿದ್ದರಿಂದ ಅವನು ಅವಳ ನೆತ್ತಿಯಮೇಲೆ ಕೊಡಬೇಕಾಯ್ತು ಅನ್ನೋದಷ್ಟೇ ಟ್ವಿಸ್ಟು. 
ಬಯ್ಕೋಬೇಡಿ.
ಹಾಗೆಯೇ ಮೋಹವಿರದ ಅಪ್ಪುಗೆಯಲ್ಲಿ ಅವರಿಬ್ಬರು ಕಳೆದುಹೋಗುತ್ತಿದ್ದರೊ ಏನೊ ಸಂಜೆಯಾಗಿದ್ದರಿಂದ ಕಸೂತಿಗೆ ಕೊಟ್ಟಿಗೆಗೆ ಹೋಗುವ ಹೊತ್ತಾಗಿತ್ತು. 
"ಆನ್ ಹೋಗವು ಹಾಲ್ ಕರ್ದಾಜಿಲ್ಲೆ ಇಲ್ದೋರ್ ಕಡಿಗ್ ತಮ್ಮ ವಿಜುಂಗೆ ಡೇರಿಗ್ ಹೋಪಲೆ ಲೇಟ್ ಆಗ್ತು." ಅಂದಳು.
ಅವನು ಸಮ್ಮತಿಸಿದ್ದ.

ಸಂಭಾಷಣೆ ಸಶೇಷ....

ಭಾಗ ೧

ಇದು ಹವ್ಯಕ ಭಾಷೆಯ ಸಂಭಾಷಣೆಯುಳ್ಳ ಬರಹ. ಹವ್ಯಕ ಪೇಜ್ ನಲ್ಲಿ ಇದನ್ನ ಪೋಸ್ಟ್ ಮಾಡುತ್ತಿದ್ದೇನೆ. ಅಲ್ಲಿ ಹಾಕುವಾಗ ಸಮಯದ ಅಂತರವಿರುವುದರಿಂದ ಒಂದು ಬರಹದಿಂದ ಮತ್ತೊಂದು ಬರಹಕ್ಕೆ ಕೊಂಡಿ ತಪ್ಪಬಹುದು. ಹಾಗಾಗಿ ಆಸಕ್ತರಿಗೆ ಹಿಂದಿನ ಬರಹ ಒಂದೇಸಾರಿ ಸಿಗುವಂತಾಗಲಿ ಎಂಬ ಕಾರಣಕ್ಕೆ ಇಲ್ಲಿ ಎಲ್ಲವನ್ನು ಮುದ್ರಿಸುತ್ತಿದ್ದೇನೆ.


1)


ಕೈಯಲ್ಲಿ ಹಾಲಿನ ಕ್ಯಾನು ಹಿಡಿದುಕೊಂಡು ಡೇರಿಗೆ ಬಂದವಳಲ್ಲಿ ನಿರೀಕ್ಷೆಯಿತ್ತು ಮತ್ತು ಅಷ್ಟೇ ಪ್ರಶ್ನೆಗಳು ಸಹ. ದಿನಾಲೂ ಅವನೂ ಅದೇ ಸಮಯಕ್ಕೆ ಡೇರಿಗೆ ಬರುತ್ತಿದ್ದ. ಮೊದಮೊದಲು ಸಮಯ ಹೆಚ್ಚು ಕಮ್ಮಿ ಆಗುತ್ತಿತ್ತಾದರೂ ಒಬ್ಬರಿಗೊಬ್ಬರು ಅಚಾನಕ್ಕಾಗಿ ಸಿಕ್ಕಿಕೊಂಡಮೇಲಂತು ಡೇರಿಗೆ ಬರುವ ಸಮಯದಲ್ಲಿ ವ್ಯತ್ಯಾಸವಾಗಲಿಲ್ಲ. ಅವಳ ಕಂಗಳಲ್ಲಿಯ ನಿರೀಕ್ಷೆ ಅಸಹನೆಯಾಗಿ ಮಾರ್ಪಡುವ ಮೊದಲೇ ಅವನು ಬಂದುಬಿಟ್ಟ. ಬಂದಕೂಡಲೆ ಮಾತಾಡುವಂತಿಲ್ಲ, ಏಕೆಂದರೆ ಡೇರಿಗೆ ಹಾಲು ತರುವವರು ಇವರಿಬರೇ ಅಲ್ಲವಲ್ಲಾ.. ಹಾಲು ಕೊಟ್ಟು ಕಾರ್ಡಿನಲ್ಲಿ ಎಂಟ್ರಿ ಮಾಡಿಸಿಯೂ ಆದಮೇಲೆ ಹೊರಡುವುದೊಂದೆ ಉಳಿದ ಕೆಲಸವಾದ್ದರಿಂದ ಇಬ್ಬರೂ ಹೊರಟಿದ್ದಾಯಿತು. ಮತ್ತೆ ಮರುದಿನದ ಭೇಟಿಯವರೆಗೆ ಕಾಯಬೇಕಾ ಅಂತ ಯೋಚಿಸ್ಬೇಡಿ.. ಇಬ್ಬರೂ ಹೋಗುವ ದಾರಿ ಒಂದೇ. ಬರುವಾಗಲೂ ಓಟ್ಟಿಗೆ ಬಂದರೆ ನೋಡುವವರಿಗೆ ಅನುಮಾನ ಬರಬಹುದೆಂದು ಅವರಿಬ್ಬರು ಅನವಶ್ಯಕವಾಗಿ ಅಂದುಕೊಂಡಿದ್ದರಿಂದ ಡೇರಿಯಲ್ಲಿ ಅವರಿಬ್ಬರನ್ನ ಬೇರೆಬೇರೆಯಾಗಿ ದರ್ಶನ ಮಾಡಿಸಿದೆ ಅಷ್ಟೆ. ದಾರಿಯಲ್ಲಿ ಸುಮ್ಮನೆ ಹೋಗಲಾದೀತೆ? ಹಾಗೇನೇ ಹೋಗ್ಬೇಕು ಅಂದ್ರೆ ಬರುವಾಗಿನ ತರಹ ಬೇರೆಬೇರೆಯಾಗಿಯೇ ಬರಬಹುದಲ್ಲ. ಡೋಂಟ್ ವರಿ ಅವರಿಬ್ಬರೂ ಮಾತಾಡ್ತಾರೆ.

"ಡೇರಿಗೂ ಚಡ್ಡಿ ಹಾಕ್ಯಂಡೇ ಬತ್ಯಲಾ..?" ಅವಿಳಿಗೆಂತ ಇರಿಸುಮುರುಸು ಗೊತ್ತಿಲ್ಲ, ಆದ್ರೆ ಹಂಗೆ ಕೇಳ್ಬಿಟ್ಳು.
"ಅದೂ ಬ್ಯಾಡದಾಗಿತ್ತು ಅಂಬ್ಯಾ?" ಅವನು ಹೀಗೆ ಕೇಳಿದ್ದರಲ್ಲಿ ತಪ್ಪೇನಿಲ್ಲ ಬಿಡಿ.
"ಥು ಹೊಗಾ.. ಸಾಯ್ಲಿ ಚೊಲೊ ಆದ್ರು ಇದ್ದ, ಅದೂ ಇಲ್ಲೆ. ಗಲೀಜು" ಹೇಳಿಕೇಳಿ ಹೆಣ್ಮಕ್ಳು ಒಮ್ಮೆ ಹೇಳಿದ್ಮೇಲೆ ಮೊದ್ಲು ಹೇಳಿದ್ದಕ್ಕೆ ಸಬೂಬು ನೀಡೋದು ಅವರ ಧರ್ಮ.
"ನಿಂಗೆತ ಆತೆ ಹಾಕ್ಯಂಡಿದ್ ಯಂದೆಯ" ನಿಂದೇನಲ್ಲಬಿಡು ಅನ್ನೋ ದಾಟೀಲೇ ಹೇಳಿದ್ದ.
"ಎಂತು ಇವತ್ತು ಖಡಕ್ ಮಾತುಕತೆ" ಸೋಲುತ್ತಿದ್ದೇನೆ ಅಂತ ಅನಿಸಿದ್ಮೇಲೆ ಹುಡ್ಗೀರು ವಿಷ್ಯ ಬದ್ಲಾಯಿಸ್ತಾರೆ ಅನ್ನೋದ್ ಹೊಸಾ ಗಾದೆ ಅಂತು ಅಲ್ಲ.

"ಡೇರಿ ಗೋವಿಂದನತ್ರ ಹಲ್ ಕಿರಿತಿದ್ದಿದ್ದೆ" ಪಾಪ ಪೊಸೆಸ್ಸಿವ್ನೆಸ್ಸು. ಹಂಗಂತ ಅವಳು ಅವನ ಲವ್ವರೇನಲ್ಲ.
"ಅಯ್ಯ ಅದ್ರಲ್ಲೆಂತಾ.. ಅವ ನಗಾಡ್ಜಾ ಆನು ನಗಾಡ್ಜಿ." ಅವಳು ನಕ್ಕಿದ್ದು ಅಷ್ಟಕ್ಕೇ ಆಗಿತ್ತು.
" ಹಾಲ್ ಅಳತೆ ಮಾಡ ಕೆರ್ದೇವಿನೂ ಯನ್ನತ್ರೆ ನಗಾಡ್ತು ಆದ್ರೆ ಆನು ಹಂಗೇ ಹಲ್ ಕಿರಿತ್ನ?" ಈ ಬಾರಿ ಸಬೂಬು ನೀಡುವ ಸರದಿ ಅವನದ್ದಾಗಿತ್ತು.
"ಅದು ನಿನ್ ನೋಡ್ಕೆಂಡ್ ನಗಾಡ್ತು ಅಂದ್ಕಂಜ್ಯ ಮಂಗ್ಯಾ? ನೀ ಜಿಪ್ ಹಾಕ್ಯ ಬಂಜಿಲ್ಲೆ ಅದ್ಕೆ ನಗಾಡಿದ್ದು. ದೇವ್ರೆ ಅದ್ಕೂ ಕಂಡೋತಲೊ" ಕಾಲೆಳೆಯುವ ಸಂದರ್ಭ ಬಂದ್ರೆ ಹುಡ್ಗೀರು ಹುಡುಗರ ಮರ್ಯಾದೆಯನ್ನು ಸಲೀಸಾಗಿ ತಗೋತಾರೆ ಅನ್ನೋದು ನೀತಿ.
ಥಟ್ಟನೆ ಜಿಪ್ ಎಳೆದುಕೊಂಡನಾದರೂ ಅವಮಾನ ಬೆತ್ತಲಾಗೇ ಇತ್ತು. ಸ್ವಲ್ಪ ಹೊತ್ತು ಮಾತಿರಲಿಲ್ಲ. ಏನಂತ ಮಾತಾಡ್ತಾರೆ ಹೇಳಿ. ಅವಳು ಮಾತಾಡಿದ್ರೆ ಇವನ ಮುಜುಗರ ಹೆಚ್ಚಾಗತ್ತೆ. ಇವನು ವಿಷಯ ಬದ್ಲಾಯ್ಸಿದ್ರೆ ಮ್ಯಾಚು ಸೋತ್ಮೇಲೆ ಅಂಪೈರ್ ಸರಿ ಇಲ್ಲ ಅಂದಂಗಿರತ್ತೆ. ಸೊ ಇಬ್ರೂ ಸೈಲೆಂಟಾಗಿ ಸ್ವಲ್ಪ ದೂರ ಹೆಜ್ಜೆ ಹಾಕಿದ್ರು. ಆದ್ರು ಅವ್ಳಿಗೆ ನಗು ಬರ್ತಾನೇ ಇತ್ತು.
ಹೆಣ್ಣುಮಕ್ಳಿಗೆ ಉರ್ಸೋಕು ಗೊತ್ತು, ಸವ್ರೋಕು ಗೊತ್ತು. ಅದ್ಕೆ ಅವ್ಳೇ ಮಾತಾಡಿದಳು.
"ಕಾಲೇಜಿಗೆಂತಕ್ ಬಂಜಿಲ್ಲೆ ಇವತ್ತು?" ಅಂದಳು.
ವಿಷ್ಯ ಬದ್ಲಾಯ್ಸಿದ್ ರೀತೀಲಿ ಕೊಂಕಿದ್ದಂತೆ ಅವನಿಗೆ ಕಾಣಿಸಲಿಲ್ಲ. 
" ಏನಾರು ವಿಷೇಶ ಇತ್ತ?" ಬರದೇ ಇರೋದರಿಂದ ನಷ್ಟ ಎಷ್ಟು ಅಂತ ಹುಡುಗರು ವಿಚಾರ ಮಾಡ್ತಾರ್ಯೆ ಹೊರತು ಬರಲಾರದಂತೆ ಮಾಡಿದ ಕಾರಣವನ್ನ ಮರುಕಳಿಸದಂತೆ ನೋಡಿಕೊಳ್ಳುವ ಬಗ್ಗೆಯಲ್ಲ.
" ಹೌದು... ನಗರಾಜನ್ನ ಗೊತ್ತಿದ್ದ?" ನಿರುತ್ತರವನ್ನ ನಿರೀಕ್ಷಿಸಿದವಳಾಗಿ ಮತ್ತೆ ಶುರುಮಾಡಿದಳು "ನಿಮ್ಮನೆ ಕವ್ವನ ಅಜ್ಜನ್ ಮನೆ ಭಾವನ ಷಡ್ಕನ್ ಎರಡನೆ ಮಗ" ಸಂಬಂಧದ ವಂಶವೃಕ್ಷ ವಿವರಿಸೋದರಲ್ಲಿ ಹೆಣ್ನುಮಕ್ಕಳಿಗೆ ಸಾಟಿಯಿಲ್ಲ ಬಿಡಿ. ಅವನಿಗೂ ಅದೇ ಅನಿಸ್ತೇನೊ ಅದಕ್ಕೆ ಹೀಗಂದ.
"ಅವ ಯಾರಾದ್ರೆ ಯಂಗೆಂತೆ ವಿಷ್ಯ ಹೇಳು ಮಾರಾಯ್ತಿ." 
" ಪೆಂಗಿದ್ದಂಗಿದ್ದ. ಗುಲಾಬಿ ಹೂ ತಗ ಬಂದಿದ್ದ. ಪ್ರಪೋಸ್ ಮಾಡವಾಗಿದ್ನಡಾ.. ಪಕ್ಕಯಾ ಮಾರಯಾ ಒಂದ್ ಹತ್ತುಸಾರಿ ಕ್ಲಾಸತ್ರೆ ಬಂದಿದ್ನನ.. ಕಡಿಗೂ ಹೇಳಿದ್ನೇ ಇಲ್ಲೆ ಮಾರಾಯಾ" ಅವಳ ದನಿಯಲ್ಲಿ ಮೊದಲ ಒಲವ ಪುಳಕದ ನೆರಳಿತ್ತು.
"ಹೇಳಿದ್ರೆ ನೀ ಎಂತ ಹೇಳ್ತಿದ್ದೆ?" ನೇರವಾಗಿ ಕೇಳಿದ.
ಅವನಿಂದ ಆಶ್ಚರ್ಯ ಅಪೇಕ್ಷಿಸಿದ್ದಳೇ ಹೊರತು ಪ್ರಶ್ನೆಯನ್ನಾಗಿರಲಿಲ್ಲ. ಸ್ವಲ್ಪ ತಡವರಿಸಿದರೂ ಸುಧಾರಿಸಿಕೊಂಡು ಹೇಳಿದಳು.
"ಎಂತ ಕೇಳಿದ್ಕೂಡ್ಲೆ ಹೇಳ್ಬುಡಲಾಗ್ತಾ?" ಹೆಣ್ಣು ಮಕ್ಳು ಈ ವಿಷ್ಯದಲ್ಲಿ ಕಾಯ್ಸಿದ್ರೇ ಚಂದ.
ಅವನಿಗೆ ಸ್ವಲ್ಪ ಸಮಾಧಾನವಾಯ್ತು. 
"ಆದ್ರೂ ಏನೊ ಖುಷಿ ಆದಂಗಿದ್ದು ತಮ್ಗೆ" ಪಾಪ, ಅವಳ ಅನಿಸಿಕೆಯನ್ನ ಅರ್ಥಮಾಡಿಕೊಳ್ಳುವ ಅನಿವಾರ್ಯತೆಯಿತ್ತವನಿಗೆ.
"ಸುಮ್ನಿರಾ ಖುಷಿ ಎಂತು ಇಲ್ಲೆ. ಅಷ್ಟೆಲ್ಲಾ ಹೆದ್ರದೆಂತಕ್ಕೆ? ಹೇಳವು ಅಂದ್ರೆ ಹೇಳ್ಬಿಡವು."
"ನಿಂಗ ಅಕ್ಕು ಹೇಳ್ತಿ ಹೇಳದ್ ಖಾತ್ರಿ ಇದ್ರೆ ಹೆದರ್ದೆ ಹೇಳ್ತ ಹುಡುಗರು" ತಾನು ಗಂಡು ಜನ್ಮದ ರಾಯಭಾರಿಯೇನೊ ಅನ್ನೋ ಮಟ್ಟದಲ್ಲಿ ಹೇಳಿದ. 
"ನೋಡಪಾ, ಯಂಗ ಹೇಳದ್ ಹೇಳ್ಯೇ ಹೇಳ್ತ್ಯ. ಅದು ನಿಂಗಕ್ ಬೇಕಾಗಿದ್ದೇ ಆಗವು ಹೇಳೇನ್ ಎಲ್ಲು ಇಲ್ಲೆ. ಅದ್ರಲ್ಲೂ ಫಸ್ಟ್ ಪ್ರಪೋಸಲ್ನೇ ಒಪ್ಗೆಂಡ್ರೆ ಕಡಿಗ್ ಬೇರೆ ಆಫರೇ ಬತ್ತಿಲ್ಲೆ.ಅದ್ಕೆ ಸ್ವಲ್ಪ ಯೋಚ್ನೆ ಮಡ್ತ್ಯ." ಪ್ರೇಮ ಭಗವದ್ಗೀತೆಯನ್ನ ಸರಳೀಕ್ರತವಾಗಿ ರಾಧೆ ದ್ರೌಪತಿಗೆ ಉಪದೇಶ ಮಾಡಿದಂಗಿತ್ತು ಆ ಸಂದರ್ಭ. 
"ಅಂಗರ್ ಹುಡುಗ್ರು ಫಸ್ಟ್ ಟೈಮ್ ಯಾವ್ದಾರು ಸ್ಕ್ರಾಪ್ ಫಿಗರ್ ಗೆ ಪ್ರಪೋಸ್ ಮಾಡವು ಕುಶಾಲಿಗೆ ಹೇಳಾತು" ಗಲ್ಲಿ ಕ್ರಿಕೆಟ್ ನಲ್ಲಿ ಉಪ್ಯೋಗಕಿಲ್ಲದ ಪುಕ್ಕಟೆ ಟ್ರಯಲ್ ಬಾಲ್ ಇರತ್ತಲ್ಲ, ಅದೇ ರೀತಿ ಇದೂನು ಅನ್ನೋ ರೀತಿಲ್ ಹೇಳಿದ.
" ಹೊ ಒಂದ್ ಮಟ್ಟಿಗೆ ಅದು ಚೊಲೊನೇಯ" ಪರವಾಗಿಲ್ಲ ಅನ್ನೋದು ಅವಳ ಭಾವನೆಯಾಗಿತ್ತು.
"ಹಾಗಿದ್ರೆ ನಾಗರಾಜನೂ ಅದೇ ಪ್ರಯತ್ನದಲ್ಲಿದ್ದಿದ್ನ ಎಂತನ".. ಹೋದ ಮಾನ ವಾಪಸ್ಸು ಬಂದಂಗಿತ್ತು ಅವನ ದನಿಯಲ್ಲಾದ ಬದಲಾವಣೆಯಲ್ಲಿ. 
"ಹೊಟ್ಟೆ ಉರಿ ನಿಂಗೆ" ಇಷ್ಟೊತ್ತು ಅವನಿಗಾಗುತ್ತಿರುವುದನ್ನೇ ಅವಳು ಹೇಳಿದರೂ ಅವಳ ದನಿಯಲ್ಲಿದ್ದ ಅರ್ಥ ಅದಾಗಿರಲಿಲ್ಲ. ಅವನೇನೋ ಹೇಳಬೇಕೆನ್ನುವಷ್ಟರಲ್ಲಿ ಅವರವರ ಊರಿನ ಕವಲು ದಾರಿ ಎದುರಾಗಿತ್ತು.. ದೈನಂದಿನ ರುಟೀನಿನಂತೆ ಕವಲು ಹಾದಿ ಬಂತೆಂದರೆ ಅಲ್ಲಿ ಹೆಚ್ಚು ಹೊತ್ತು ನಿಲ್ಲದೆ ಹೊರಟುಬಿಡಬೇಕು. ಇಬ್ಬರೂ ತಮ್ಮ ತಮ್ಮ ದಾರಿ ಹಿಡಿದರು. 
"ಸುಮಾರ್ ಸುದ್ದಿ ಇದ್ದು ವಿಜು.. ನಾಳೆ ಮಾತಾಡನ" ಹೆಣ್ಣು ಮಕ್ಕಳಿಗೆ ವ್ಯಕ್ತಿ, ವಿಷಯಕ್ಕಿಂತ ಸಮಯ ಸಂದರ್ಭ ಎರಡೂ ಮುಖ್ಯ ಅಂತ ಅವನಿಗನಿಸಿತು. ಅವಳು ತಿರುವಲ್ಲಿ ಮರೆಯಾಗುತ್ತಿದ್ದಳು. ಅವನ ಕಾಲುಗಳು ಯಾರ ಅನುಮತಿಯನ್ನೂ ಕೇಳದೆ ಮನೆಯತ್ತ ಹೆಜ್ಜೆ ಹಾಕಿದ್ದವು. ಬೆನ್ನ ಹಿಂದೆ ಅಂಗಿಯೊಳಗೆ ಇಟ್ಟುಕೊಂಡಿದ್ದ ಗುಲಾಬಿ ಹೂ, ಅವನಲ್ಲಿಯೇ ಉಳಿದಿತ್ತು. ಖಾಲಿಯಾದ ಹಾಲಿನ ಕ್ಯಾನು ಸುಮ್ಮನೆ ಸದ್ದು ಮಾಡುತ್ತಿತ್ತು.

ಕಥೆ ಶುರು ಮಾಡಿದ್ದು ನಾನು. ಮುಗಿಸೋದು ನಾನೇ ತಾನೆ.. ಕವಲು ದಾರಿ ಬಂತು ಅಂತ ಮನೆಗ್ ಹೋಗ್ಬಿಟ್ರೆ ಆಗೋಯ್ತಾ? ದನ ಮರುದಿನವೂ ಹಾಲು ಕೊಡಲ್ವಾ? ಡೇರಿ ಮುಚ್ಚಿಹೋಗತ್ತಾ? ನಾಳೆ ಮತ್ತೆ ಬರ್ತಾರೆ ಅದೇ ಕ್ಯಾನ್ ಹಿಡ್ಕೊಂಡು. ಮತ್ತೆ ಮಾತಾಡ್ಸಿದ್ರಾಯ್ತು ಬಿಡಿ. 

ಸಂಭಾಷಣೆ ಸಷೇಶ.

Wednesday, 9 January 2013




ನನ್ನದೆಂಬ ಈ ಹಿಡಿಜೀವನದಲ್ಲಿ
ಕೆವಲ ಆಕರ್ಷಣೆಯ ಬದಲಾಗಿ
ಒಲವು ಮೂಡುವುದು
ಅಸಾಧ್ಯವೆಂದುಕೊಂಡಿದ್ದೆ

ಅವಳು ಕಾಣುವವರೆಗೂ..






ಬದುಕಿನಲ್ಲಿ ಹಿಂದೆಂದೂ ಇಂಥ
ಮೃದುಲ ಮೆತ್ತನೆ ಹಿತವಾದ
ಆನಂದವಾಗಿರಲಿಲ್ಲ.
ಹಾಗಾಗಿದ್ದು 
ನನ್ನೆರಡೂ ಬೊಗಸೆಗಳಲಿ 
ಅವಳ ಅಂಗಾಲ ಹಿಡಿದಾಗ....



ನನ್ನ ಅಬ್ಬೇಪಾರಿಯಂತ ಬದುಕಿಗೆ
ಏನೋ ಒಂದು ಬದಲಾವಣೆ ಬೇಕಿತ್ತೇನೊ..

ಅವಳು ಬಂದಳು....