ತೆಳುವಾಗಿ ಹರಡಿದ ಬೆಳದಿಂಗಳ ಹೊರತಾಗಿ ಅಲ್ಲಿ ಬೆಳಕಿರಲಿಲ್ಲ. ನಡು ರಾತ್ರಿ ಮೀರಿಹೋಗಿತ್ತು. ಕಾಡು ಸ್ಮಶಾನ ಮೌನ ಹೊದ್ದು ತಣ್ನಗೆ ಮಲಗಿತ್ತು. ಕಾಡಿನ ಚರಾಚರಗಳು ಗುಸುಪಿಸುಗುಡುತ್ತಿದ್ದುದನ್ನು ಬಿಟ್ಟರೆ, ಎಲ್ಲೊ ಆಗೊಮ್ಮೆ ಈಗೊಮ್ಮೆ ತರಗೆಲೆಗಳು ಗಾಳಿಗೆ ಹಾರಾಡುವ ಸದ್ದು ಮತ್ರ ಅಲ್ಲಿದ್ದಿದ್ದು. ಸ್ವಾಭಾವಿಕವಾಗೇ ಆ ಜಾಗ ಭಯಂಕರ ಅನಿಸುವಷ್ಟು ಭೀಕರವಾಗಿತ್ತು. ಅಲ್ಲಿ ನೂರಾರು ಮಂದಿ ಒಂದು ದನಿಗಾಗಿ ಕಾಯುತ್ತಿದ್ದರು. ಎಲ್ಲರ ಮುಖದಲ್ಲಿಯೂ ಒಂದೇ ಕುತೂಹಲ, ಒಂದು ವರ್ಷದಿಂದ ಆ ಸಂದರ್ಭಕ್ಕಾಗಿ ಕಾಯುತ್ತಿದ್ದ ಎಲ್ಲರಿಗೂ ಅದೊಂದು ಜಯಘೊಶ ರೋಮಾಂಚನ ತರುವುದಿತ್ತು. ಸಣ್ಣ ದಿಬ್ಬವನ್ನೇ ವೇದಿಕೆಯಂತೆ ಮಾಡಿ, ಅದರ ಕೆಳಬದಿಯಲ್ಲಿ ಹೋಮಕುಂಡವೊಂದನ್ನ ನಿರ್ಮಿಸಲಾಗಿತ್ತು. ಆ ಕುಂಡದಲ್ಲಿನ್ನೂ ಅಗ್ನಿ ಸ್ಪರ್ಷವಾಗಿರಲಿಲ್ಲ. ಕುಂಡದ ಎದುರುಗಡೆಯ ತೆರೆದುಕೊಂಡಿದ್ದ ಸ್ವಲ್ಪೇ ಜಾಗದಲ್ಲಿ ಅಷ್ಟೂ ಮಂದಿ ನೆರೆದಿದ್ದು. ಅಷ್ಟುಮಾತ್ರದ ತೆರೆದ ಜಗವನ್ನ ಬಿಟ್ಟರೆ ಸುತ್ತಲೂ ಕಣ್ನಿಗೆ ಕಾಣುವಷ್ಟು ದೂರಕ್ಕೂ ಕಾಡಿನ ಹೊರತಾಗಿ ಅಲ್ಲಿ ಮತ್ತೇನೂ ಇರಲಿಲ್ಲ. ವೆದಿಕೆಯಲ್ಲಿ ಮೂವರು ವಜ್ರಾಸನದಲ್ಲಿ ಕುಳಿತು ಧ್ಯಾನಸ್ಥರಾಗಿದ್ದರು. ಅವರ ಕಣ್ನುಗಳು ಮುಚ್ಚಿದ್ದರೂ, ಅಲ್ಲೊಂದು ಜ್ವಾಲೆ ಜ್ವಲಿಸುತ್ತಿತ್ತು. ಒಂದು ಶಕ್ತಿ ತಮ್ಮೊಳಗೆ ಪ್ರವಹಿಸಲೆಂದು ಅವರು ಆಹ್ವಾನಿಸುತ್ತಿದ್ದರು. ಆ ಅವಾಹನೆ ಆಗೋವರೆಗೂ ಯಾರೂ ಮಾತಾಡುವಂತಿರಲಿಲ್ಲ. ಮಾತು ಹಾಗಿರಲಿ ಗಂಟಲನ್ನ ಸರಿಪಡಿಸಿಕೊಳ್ಳುವಂತ, ನಿಟ್ಟುಸಿರಂತ, ಆಕಳಿಕೆಯಂತ ಸಹಜ ಧ್ವನಿಗೂ ಅಲ್ಲಿ ಅವಕಾಶವಿರಲಿಲ್ಲ. ಒಮ್ಮೆ ನಿಶಿದ್ಧವೆಂದಮೇಲೆ ಮುಯಿತು, ಅಘೋರಿಗಳ ಪಾಲಿಗೆ ಅದು ಎಂದಿಗೂ ಪ್ರಶಸ್ತವಾಗುವುದಿಲ್ಲ. ವೇದಿಕೆಯಲ್ಲಿನ ಮೂವರ ದಿವ್ಯ ಧ್ಯಾನಸ್ಥ ಸ್ಥಿತಿಯನ್ನ ಎವೆಯಿಕ್ಕದೇ ನೋಡುತ್ತಿದ್ದ ನೂರಾರುಮಂದಿಯ ಕಂಗಳಲ್ಲಿಯೂ, ಆವಾಹನೆಯಾಗೊ ಶಕ್ತಿಯ ಕುರಿತಾಗಿ ಅದ್ವಿತೀಯ ಭಕ್ತಿಯಿತ್ತು. ಕಾಶಾಯ ವಸ್ತ್ರದಲ್ಲಿ, ಕಯ್ಯಲ್ಲೊಂದು ಆಕರವಿರದ ಕೋಲನ್ನ ದಂಡವಾಗಿ ಹಿಡಿದಿದ್ದ ಎಲ್ಲರೂ ಆ ದಂಡವನ್ನ ನೆಲಕ್ಕೆ ತಾಕದಂತೆ ತಮ್ಮ ತಮ್ಮ ಪಾದದಗಳಮೇಲೆ ಊರಿ ನಿಂತಿದ್ದರು. ಕಟ್ಟುಮಸ್ತಾದ ಅವರ ಮೈ ಕಟ್ಟು ಬೆಳದಿಂಗಳ ಬೆಳಕಲ್ಲಿಯೂ ಹೊಳೆಯುತ್ತಿತ್ತು. ಮುಖದಲ್ಲಿ ಮಿತಿಯನ್ನ ಲೆಕ್ಕಿಸದೇ ಬೆಳೆದಿದ್ದ ಕುರುಚಲು ಗಡ್ಡ ಎದೆಯನ್ನ ದಾಟಿ ಸಾಗಿತ್ತು. ಎಣ್ಣೆ ಕಾಣದೆ ತಲೆಯಿಂದ ಚದುರಿದ ಗೊಂಚಲು ಕೂದಲು, ಭುಜವನ್ನ ತಾಕಿತ್ತು. ನೆರೆದಿದ್ದ ಆ ನೂರಾರು ಮಂದಿಯಲ್ಲಿ ತೀರಾ ಸಾಮ್ಯವಾಗಿ ಕಾಣಿಸುತ್ತಿದ್ದ ಕೆಲವು ಲಕ್ಷಣಗಳೆಂದರೆ ಇವುಗಳು ಮಾತ್ರ. ಇವುಗಳ ಹೊರತಾಗಿ, ಅವರೆಲ್ಲರ ಪ್ರಕೃತಿ, ಸ್ವಭಾವ ಹಾಗೂ ಸಧನೆಗಳು ಭಿನ್ನವೇ.
ಗುರು ಸ್ಥಾನದಲ್ಲಿ ಕುಳಿತಿದ್ದ ಮೂವರಲ್ಲೊಬ್ಬ ಅಘೋರಿ, ತನ್ನ ಆಸನವನ್ನ ಬದಲಿಸಿ ಎದ್ದು ನಿಂತ. ಕೆಳಗಿದ್ದ ಎಲ್ಲರಲ್ಲಿಯೂ ಕುತೂಹಲ ಇಮ್ಮಡಿಸಿತು. ವೇದಿಕೆಯಲ್ಲಿನ ಉಳಿದಿಬ್ಬರು, ಗುರುಸ್ಥಾನದ ಅಘೋರಿಯನ್ನೇ ಅನುಸಾರಿಸಿದರು. ಗುರುಸ್ಥಾನದ ಅಘೋರಿ "ಸುಜ್ನಾನಂದ" ಬಲಗೈ ಮುಷ್ಟಿಯನ್ನ ಆಕಶಕ್ಕೆ ಎತ್ತಿ, ಆ ಮುಷ್ಟಿಯನ್ನ ಬಿಚ್ಚಿದ.. ಚಂದ್ರನನ್ನ ಹಾದು ಸಾಗುತ್ತಿದ್ದ ಮೋಡಗಳು ತಮ್ಮನ್ನ ಯಾರೋ ನೂಕಿದವರಂತೆ, ಚಂದ್ರನಿಗೆ ಅಡ್ಡಬಾರದಂತೆ ಪಥವನ್ನ ಬದಲಿಸಿದವು. ಕೈಗಳನ್ನು ನಿಧಾನವಾಗಿ ಕೆಳಗಿಳಿಸಿದ ಸುಜ್ನಾನಂದ ತನ್ನ ಬಲಗಡೆಯಲ್ಲಿ ನಿಂತಿದ್ದ ತನ್ನ ಗುರುವನ್ನು ವಿನಮ್ರವಾಗಿ ನೋಡಿ, ಅವರೆಡೆಗೆ ಎರಡೂ ಹಸ್ತಗಳನ್ನ ಚಾಚಿ ಅಪ್ಪಣೆಯನ್ನ ಕೋರಿದ.. ಗುರು ತನ್ನ ಜೋಳಿಗೆಯಲ್ಲಿಯ ಭಸ್ಮವನ್ನ ತೆಗೆದು ಸುಜ್ನಾನಂದರ ಹಣೆಯಲ್ಲಿ ಮೆತ್ತಿದರು. ಆ ಅಪ್ಪಣೆಯನ್ನ ಸ್ವೀಕರಿಸಿದ ಸುಜ್ನಾನಂದರು ತನ್ನ ಎಡಗಡೆಯಲ್ಲಿ ದೀಕ್ಷೆಗಾಗಿ ಎದುರು ನೋಡುತ್ತಿದ್ದ "ಮುದ್ವ"ನನ್ನು ನೋಡಿದರು. ಪ್ರಕಾಶಮಾನವಾಗಿ ಕಂಗೊಳಿಸುತ್ತಿದ್ದ ಮುದ್ವನ ಮುಖದಲ್ಲಿ ತೇಜಸ್ಸು ಪ್ರವಹಿಸುತ್ತಿತ್ತು. ಸುಜ್ನಾನಂದರ ಕನಸಿನ ಕೂಸು ಮುದ್ವ. ತನ್ನಿಂದ ಮಾಡಲಾಗದ ಸಾಧನೆಯನ್ನ ಮುದ್ವನಿಂದ ಸಾಧಿಸಿ ತಾನೇ ಸಾಧಿಸಿದಷ್ಟು ಸಂತೋಷ ಪಡುವ ಕನಸು ಸುಜ್ನಾನಂದರದು. ಅವರ ದಿವ್ಯ ಮಾರ್ಗದರ್ಶನದಲ್ಲೇ ಬೆಳೆದ ಮುದ್ವ ಅವರ ಎಲ್ಲ ಕನಸನ್ನೂ ಸಾಕಾರಗೊಳಿಸುವ ಎಕೈಕ ಅಘೋರಿಯಾಗಿದ್ದ. ಆ ಸಭೆ ಏರ್ಪಾಟಾದ ಕಾರಣವೂ ಅದೇ. ಮುದ್ವನನ್ನ ಮುಂದಿನ ಅಘೋರಿ ಗುರುವಾಗಿಸುವುದು. ಅದಕ್ಕೆ ಕಾಲ ಕೂಡಿ ಬಂದಿತ್ತು. ಸುಜ್ನಾನಂದರು ತಮ್ಮ ಕೈಯಲ್ಲಿದ್ದ ದಂಡವನ್ನ ಭೂಮಿಗೆ ಸಮನಾಂತರವಾಗಿ ಹಿಡಿದು ಕಣ್ಣು ಮುಚ್ಚಿ, ಮನಸಲ್ಲಿಯೇ ಮಂತ್ರವನ್ನ ಪಠಿಸಿ ಆ ದಂಡವನ್ನ ಮುದ್ವನೆದುರು ಚಾಚಿದರು. ಆಗಲೇ ಮುದ್ವ ಕಣ್ಣು ತೆರೆದದ್ದು. ಸುತ್ತಲೂ ನೆರೆದ ದಟ್ಟ ಕಾಡಿನ, ಹೆಮ್ಮರಗಳಲ್ಲಿ ಗೂಡು ಕಟ್ಟಿ ಮಲಗಿದ್ದ ಪಕ್ಷಿಗಳೆಲ್ಲ ಒಮ್ಮೆಲೇ ಚದುರಿದವು. ಅದು ಯಾವುದೋ ಒಂದು ಅನಿಷ್ಟದ ಸೂಚನೆಯಂತಿತ್ತು. ಮುದ್ವನ ಪಟ್ಟಾಭಿಶೇಕವನ್ನೇ ಎದುರು ನೋಡುತ್ತಿದ್ದ ಎಲ್ಲ ಅಘೋರಿಗಳಿಗೂ ಅದು ಗಮನಕ್ಕೇ ಬರಲಿಲ್ಲ. ಅವರೆಲ್ಲರೂ ಉನ್ಮತ್ತ ಸ್ಥಿತಿಯನ್ನ ತಲುಪಿಯಾಗಿತ್ತು. ಆದರೆ ಸುಜ್ನಾನಂದರ ಗುರು "ಏಕನಾಥ"ರಿಗೆ ಮಾತ್ರ ಅದು ತಿಳಿಯದೇ ಇರಲಿಲ್ಲ. ಮುದ್ವನ ಭೀಕರತೆ ಅಂತಹುದು. ಮುದ್ವ ದಂಡವನ್ನ ಭಕ್ತಿಯಿಂದ ಸ್ವೀಕರಿಸಿ ಗುರುವಿಗೆ, ಪರಮ ಗುರುವಿಗೆ ತನ್ಮಯನಾಗಿ ನಮಸ್ಕರಿಸಿದ. ಏಕನಾಥರು ಮತ್ತೆ ತಮ್ಮ ಜೋಳಿಗೆಯಿಂದ ಭಸ್ಮವನ್ನ ತೆಗೆದು ಮುದ್ವನ ಹಣೆಗೆ ಮೆತ್ತಿದರು. ಮುದ್ವ ಅಲ್ಲಿಗೆ ಅಧಿಕ್ರತವಾಗಿ ಅಘೋರಗುರುವಾಗಿ ನೇಮಕಗೊಂಡಿದ್ದ. ದಿಬ್ಬದ ತುದಿಯಲ್ಲಿ ಬಂದು, ತನ್ನ ಹೆಬ್ಬೆರಳಮೇಲೆ ಪೂರ್ತಿ ಶರೀರವನ್ನ ನಿಲ್ಲಿಸಿ ಬಲಗಯ್ಯಲ್ಲಿ ದಂಡವನ್ನ ಚಂದ್ರನತ್ತ ಎತ್ತಿದ ಮುದ್ವ, ತನ್ನೆಲ್ಲ ಶಕ್ತಿಯನ್ನ ಒಗ್ಗೂಡಿಸಿ "ಭಮ್ ಬೋಲೇ" ಎಂದು ಘೋಶಿಸಿದ.. ಅದನ್ನೇ ಕಾಯುತ್ತಿದ್ದ ಉಳಿದೆಲ್ಲ ಅಘೋರಿಗಳು ಪ್ರತಿಯಾಗಿ ಭಂ ಬೋಲೆ ಎಂದು ಜಯಘೋಷ ಮೊಳಗಿಸಿದರು. ಕಾಡಿನ ಮೂಲೆ ಮೂಲೆಗೂ ಅವರ ಧ್ವನಿ ಪ್ರತಿಧ್ವನಿಸಿತು... ಮುದ್ವ ಮತ್ತೊಮ್ಮೆ ಕಣ್ಣುಮುಚ್ಚಿ ಭಂ ಬೋಲೆಯೆಂದು ಘೋಷಿಸಿದ. ಯಜ್ನಕುಂಡದಲ್ಲಿ ತನ್ನಿಂದ ತಾನೇ ಅಗ್ನಿ ಜ್ವಲಿಸಿತು..
ನಡುರಾತ್ರಿ ಎರಡು ಗಂಟೆಯಲ್ಲಿ, ಅಜ್ನಾತ ಕಾಡಿನಲ್ಲಿ, ಅಘೋರಿಗಳು ಸ್ವೇಚ್ಛೆಯಲ್ಲಿ ಚೀರಿದರು. ಉದ್ರಿಕ್ತರಾಗಿ ಉನ್ಮತ್ತರಾಗಿ ಉದ್ವೇಗದಲ್ಲಿ ನಲಿದರು. ಅವರೆಲ್ಲ ಒಬ್ಬರನ್ನೊಬ್ಬರು ಅಭಿನಂದಿಸುತ್ತ, ಕೇಕೆ ಹಾಕುತ್ತ, ಜಯಘೋಷ ಕೂಗುತ್ತ ಅತೀವ ಆನಂದದಲ್ಲಿ ತೇಲುತ್ತಿದ್ದರೆ, ಏಕನಾಥರು ಮಾತ್ರ, ಮತ್ತೆ ಧ್ಯಾನಸ್ಥ ಸ್ಥಿತಿಗೆ ತೆರಳಿದ ಸುಜ್ನಾನಂದರ ಹಣೆಯಲ್ಲಿ ಕಪ್ಪಾದ ಭಸ್ಮವನ್ನೇ ಗಮನಿಸುತ್ತ ಕಣ್ಮುಚ್ಚಿದರು. ಆ ಹೊತ್ತಿಗೆ ಪಕ್ಕದ ರಾಜ್ಯದ ಬಡ ಜಿಲ್ಲೆಯ ಕುಗ್ರಾಮದಲ್ಲಿ, ವೇಶ್ಯೆಯೊಬ್ಬಳು ಗಂಡುಮಗುವನ್ನ ಹಡೆದಿದ್ದು ಅವರಿಗೆ ಕಾಣಿಸಿತು.
nice............all the
ReplyDeletebest