ಒಂದು ಹನಿ.....
ಕಣ್ಣಂಚ ಸವರಿದ ಒಂದು ಹನಿ
ಎಲ್ಲಿ ಬಿತ್ತೊ ನಾ ಕಾಣೆ.
ಅದರೆಡೆಗೆ ಗಮನವಾದರೂ ಎಲ್ಲಿತ್ತು?
ಕೋಟಿಮಂದಿ ನೆರೆದ ಸಭೆಯ
ವಿಜ್ರಂಭಣೆಯ ಭವ್ಯತೆಗೆ
ಭಾವಚಿತ್ರದ ಬೆಳಕಿನ ಮಳೆಗೆ
ನನ್ನ ಕಣ್ಣು ಕುರುಡಾಗಿತ್ತೊ ಏನೊ
ನನ್ನನಗಲಿದ ಆ ಹನಿ ಕಾಣಲೇ ಇಲ್ಲ.
ರತ್ನಗಂಬಳಿ ಹಾಸಿದ ಮಾರುದ್ದದ ವೇದಿಕೆ
ವಜ್ರಖಚಿತ ಆಸನದಮೆಲೆ ಬಣ್ಣದ ದೀಪಗಳ ಹೊದಿಕೆ,
ನನಸೇ ಆದರೂ ಕನಸೆಂಬಂತಿತ್ತು,
ಕನಸೇ ನನಸಾಗಿತ್ತು.
ಕಿವಿಗಡಚಿಕ್ಕುವ ಕರತಾಡನ
ಅಭಿಮಾನದಿ ಉಕ್ಕೇರಿದ ತಾಳವಿರದ ನರ್ತನ,
ಕೇಕೆ ಸಿಳ್ಳೆಗಳ ನಡುವೆ ಮಾತಿಗೆ ನಿಂತಿದ್ದೆ.
ಗಂಟಲ ಪಸೆ ಆರಿಹೋಗಿತ್ತು.
ಪ್ರಶಸ್ತಿ ಹಿಡಿದಿದ್ದ ಕೈ
ಒಂದೇ ಸಮನೆ ನಡುಗುತ್ತಿತ್ತು.
"ನಲ್ಲೆಗೊಂದು ದಿನ ಹೇಳಿದ್ದೆ,
ಅವಳ ಒತ್ತಾಯಕೆ ಮಣಿದು
ಪ್ರೀತಿಗುಡುಗೊರೆ ಕೇಳಿದ್ದಕ್ಕೆ,
'ಸುರಿವ ಒಂದು ಹನಿಯೆಂದು'
ಅವಳು ನಗಲೇ ಇಲ್ಲ ಅವಳಿಗದು ಹಿಡಿಸಲೇ ಇಲ್ಲ.
ಬಹುಮಾನ ನೀಡಲಾಗದ ಬಡವ ನಾನೆಂದು
ನನ್ನೊಂದಿಗೆ ಉಳಿಯಲೇ ಇಲ್ಲ.
ದಡ್ಡಿಯವಳು
ಹನಿಹಿಂದಿನ ಹಿರಿದಾಸೆ ತಿಳಿಯದೆ
ಅದನ್ನ ಪಡೆವ ಸಂದರ್ಭ ಅರಿಯದೆ
ಕೈ ಬೀಸಿ ಕಾಣೆಯಾದಳು ಯಾವುದೊ
ಸಿರಿವಂತನ ತೆಕ್ಕೆಯೊಳಗೆ ಕರಗಿ.
ಅವಳು ಹೋದರೇನನಂತೆ
ಅವಳಿಗಾಗೇ ಕಂಡಿದ್ದ ಕನಸು
ಕೈ ಹಿಡಿದು ನಡೆಸಿತ್ತು.
ಅದೇ ನನ್ನ ನಿಮ್ಮೆದುರು ನಿಲ್ಲಿಸಿದೆ."
ಹೇಗೋ ತಡವರಿಸಿ ಇಷ್ಟು ಮಾತನಾಡಿದ್ದೆ.
ಭಾವಸಹಿತ ಚಪ್ಪಾಳೆ ಪ್ರವಾಹದಲ್ಲಿ
ನನ್ನ ದನಿ ಕಿರಿದಾಗಿತ್ತು.
ನನ್ನಎದುರ ಜನಸ್ತೋಮ ಎದ್ದು ನಿಂತಿತ್ತು.
ಏನು ಬಂದರೆ ಏನು
ಅವಳು ನನ್ನೊಂದಿಗಿಲ್ಲ,
ಒಮ್ಮೆ ಈ ಸಾಗರದಲ್ಲಿ ಅವಳಿದ್ದರೂ ಇರಬಹುದು,
ಆದರೀಗ
ಕೊಡಬಯಸಿದ್ದ ಹನಿಯಾಗಲೀ
ಕೊಡುವ ಮನಸಾಗಲೀ
ನನ್ನೊಂದಿಗಿಲ್ಲ, ನನಗಿಲ್ಲ
No comments:
Post a Comment