Tuesday, 25 September 2012

ಪಟ್ಟಾಭಿಶೇಕ




ತೆಳುವಾಗಿ ಹರಡಿದ ಬೆಳದಿಂಗಳ ಹೊರತಾಗಿ ಅಲ್ಲಿ ಬೆಳಕಿರಲಿಲ್ಲ. ನಡು ರಾತ್ರಿ ಮೀರಿಹೋಗಿತ್ತು. ಕಾಡು ಸ್ಮಶಾನ ಮೌನ ಹೊದ್ದು ತಣ್ನಗೆ ಮಲಗಿತ್ತು. ಕಾಡಿನ ಚರಾಚರಗಳು ಗುಸುಪಿಸುಗುಡುತ್ತಿದ್ದುದನ್ನು ಬಿಟ್ಟರೆ, ಎಲ್ಲೊ ಆಗೊಮ್ಮೆ ಈಗೊಮ್ಮೆ ತರಗೆಲೆಗಳು ಗಾಳಿಗೆ ಹಾರಾಡುವ ಸದ್ದು ಮತ್ರ ಅಲ್ಲಿದ್ದಿದ್ದು. ಸ್ವಾಭಾವಿಕವಾಗೇ ಆ ಜಾಗ ಭಯಂಕರ ಅನಿಸುವಷ್ಟು ಭೀಕರವಾಗಿತ್ತು. ಅಲ್ಲಿ ನೂರಾರು ಮಂದಿ ಒಂದು ದನಿಗಾಗಿ ಕಾಯುತ್ತಿದ್ದರು. ಎಲ್ಲರ ಮುಖದಲ್ಲಿಯೂ ಒಂದೇ ಕುತೂಹಲ, ಒಂದು ವರ್ಷದಿಂದ ಆ ಸಂದರ್ಭಕ್ಕಾಗಿ ಕಾಯುತ್ತಿದ್ದ ಎಲ್ಲರಿಗೂ ಅದೊಂದು ಜಯಘೊಶ ರೋಮಾಂಚನ ತರುವುದಿತ್ತು. ಸಣ್ಣ ದಿಬ್ಬವನ್ನೇ ವೇದಿಕೆಯಂತೆ ಮಾಡಿ, ಅದರ ಕೆಳಬದಿಯಲ್ಲಿ ಹೋಮಕುಂಡವೊಂದನ್ನ ನಿರ್ಮಿಸಲಾಗಿತ್ತು. ಆ ಕುಂಡದಲ್ಲಿನ್ನೂ ಅಗ್ನಿ ಸ್ಪರ್ಷವಾಗಿರಲಿಲ್ಲ. ಕುಂಡದ ಎದುರುಗಡೆಯ ತೆರೆದುಕೊಂಡಿದ್ದ ಸ್ವಲ್ಪೇ ಜಾಗದಲ್ಲಿ ಅಷ್ಟೂ ಮಂದಿ ನೆರೆದಿದ್ದು. ಅಷ್ಟುಮಾತ್ರದ ತೆರೆದ ಜಗವನ್ನ ಬಿಟ್ಟರೆ ಸುತ್ತಲೂ ಕಣ್ನಿಗೆ ಕಾಣುವಷ್ಟು ದೂರಕ್ಕೂ ಕಾಡಿನ ಹೊರತಾಗಿ ಅಲ್ಲಿ ಮತ್ತೇನೂ ಇರಲಿಲ್ಲ. ವೆದಿಕೆಯಲ್ಲಿ ಮೂವರು ವಜ್ರಾಸನದಲ್ಲಿ ಕುಳಿತು ಧ್ಯಾನಸ್ಥರಾಗಿದ್ದರು. ಅವರ ಕಣ್ನುಗಳು ಮುಚ್ಚಿದ್ದರೂ, ಅಲ್ಲೊಂದು ಜ್ವಾಲೆ ಜ್ವಲಿಸುತ್ತಿತ್ತು. ಒಂದು ಶಕ್ತಿ ತಮ್ಮೊಳಗೆ ಪ್ರವಹಿಸಲೆಂದು ಅವರು ಆಹ್ವಾನಿಸುತ್ತಿದ್ದರು. ಆ ಅವಾಹನೆ ಆಗೋವರೆಗೂ ಯಾರೂ ಮಾತಾಡುವಂತಿರಲಿಲ್ಲ. ಮಾತು ಹಾಗಿರಲಿ ಗಂಟಲನ್ನ ಸರಿಪಡಿಸಿಕೊಳ್ಳುವಂತ, ನಿಟ್ಟುಸಿರಂತ, ಆಕಳಿಕೆಯಂತ ಸಹಜ ಧ್ವನಿಗೂ ಅಲ್ಲಿ ಅವಕಾಶವಿರಲಿಲ್ಲ. ಒಮ್ಮೆ ನಿಶಿದ್ಧವೆಂದಮೇಲೆ ಮುಯಿತು, ಅಘೋರಿಗಳ ಪಾಲಿಗೆ ಅದು ಎಂದಿಗೂ ಪ್ರಶಸ್ತವಾಗುವುದಿಲ್ಲ. ವೇದಿಕೆಯಲ್ಲಿನ ಮೂವರ ದಿವ್ಯ ಧ್ಯಾನಸ್ಥ ಸ್ಥಿತಿಯನ್ನ ಎವೆಯಿಕ್ಕದೇ ನೋಡುತ್ತಿದ್ದ ನೂರಾರುಮಂದಿಯ ಕಂಗಳಲ್ಲಿಯೂ, ಆವಾಹನೆಯಾಗೊ ಶಕ್ತಿಯ ಕುರಿತಾಗಿ ಅದ್ವಿತೀಯ ಭಕ್ತಿಯಿತ್ತು. ಕಾಶಾಯ ವಸ್ತ್ರದಲ್ಲಿ, ಕಯ್ಯಲ್ಲೊಂದು ಆಕರವಿರದ ಕೋಲನ್ನ ದಂಡವಾಗಿ ಹಿಡಿದಿದ್ದ ಎಲ್ಲರೂ ಆ ದಂಡವನ್ನ ನೆಲಕ್ಕೆ ತಾಕದಂತೆ ತಮ್ಮ ತಮ್ಮ ಪಾದದಗಳಮೇಲೆ ಊರಿ ನಿಂತಿದ್ದರು. ಕಟ್ಟುಮಸ್ತಾದ ಅವರ ಮೈ ಕಟ್ಟು ಬೆಳದಿಂಗಳ ಬೆಳಕಲ್ಲಿಯೂ ಹೊಳೆಯುತ್ತಿತ್ತು. ಮುಖದಲ್ಲಿ ಮಿತಿಯನ್ನ ಲೆಕ್ಕಿಸದೇ ಬೆಳೆದಿದ್ದ ಕುರುಚಲು ಗಡ್ಡ ಎದೆಯನ್ನ ದಾಟಿ ಸಾಗಿತ್ತು. ಎಣ್ಣೆ ಕಾಣದೆ ತಲೆಯಿಂದ ಚದುರಿದ ಗೊಂಚಲು ಕೂದಲು, ಭುಜವನ್ನ ತಾಕಿತ್ತು. ನೆರೆದಿದ್ದ ಆ ನೂರಾರು ಮಂದಿಯಲ್ಲಿ ತೀರಾ ಸಾಮ್ಯವಾಗಿ ಕಾಣಿಸುತ್ತಿದ್ದ ಕೆಲವು ಲಕ್ಷಣಗಳೆಂದರೆ ಇವುಗಳು ಮಾತ್ರ. ಇವುಗಳ ಹೊರತಾಗಿ, ಅವರೆಲ್ಲರ ಪ್ರಕೃತಿ, ಸ್ವಭಾವ ಹಾಗೂ ಸಧನೆಗಳು ಭಿನ್ನವೇ.

ಗುರು ಸ್ಥಾನದಲ್ಲಿ ಕುಳಿತಿದ್ದ ಮೂವರಲ್ಲೊಬ್ಬ ಅಘೋರಿ, ತನ್ನ ಆಸನವನ್ನ ಬದಲಿಸಿ ಎದ್ದು ನಿಂತ. ಕೆಳಗಿದ್ದ ಎಲ್ಲರಲ್ಲಿಯೂ ಕುತೂಹಲ ಇಮ್ಮಡಿಸಿತು. ವೇದಿಕೆಯಲ್ಲಿನ ಉಳಿದಿಬ್ಬರು, ಗುರುಸ್ಥಾನದ ಅಘೋರಿಯನ್ನೇ ಅನುಸಾರಿಸಿದರು. ಗುರುಸ್ಥಾನದ ಅಘೋರಿ "ಸುಜ್ನಾನಂದ" ಬಲಗೈ ಮುಷ್ಟಿಯನ್ನ ಆಕಶಕ್ಕೆ ಎತ್ತಿ, ಆ ಮುಷ್ಟಿಯನ್ನ ಬಿಚ್ಚಿದ.. ಚಂದ್ರನನ್ನ ಹಾದು ಸಾಗುತ್ತಿದ್ದ ಮೋಡಗಳು ತಮ್ಮನ್ನ ಯಾರೋ ನೂಕಿದವರಂತೆ, ಚಂದ್ರನಿಗೆ ಅಡ್ಡಬಾರದಂತೆ ಪಥವನ್ನ ಬದಲಿಸಿದವು. ಕೈಗಳನ್ನು ನಿಧಾನವಾಗಿ ಕೆಳಗಿಳಿಸಿದ ಸುಜ್ನಾನಂದ ತನ್ನ ಬಲಗಡೆಯಲ್ಲಿ ನಿಂತಿದ್ದ ತನ್ನ ಗುರುವನ್ನು ವಿನಮ್ರವಾಗಿ ನೋಡಿ, ಅವರೆಡೆಗೆ ಎರಡೂ ಹಸ್ತಗಳನ್ನ ಚಾಚಿ ಅಪ್ಪಣೆಯನ್ನ ಕೋರಿದ.. ಗುರು ತನ್ನ ಜೋಳಿಗೆಯಲ್ಲಿಯ ಭಸ್ಮವನ್ನ ತೆಗೆದು ಸುಜ್ನಾನಂದರ ಹಣೆಯಲ್ಲಿ ಮೆತ್ತಿದರು. ಆ ಅಪ್ಪಣೆಯನ್ನ ಸ್ವೀಕರಿಸಿದ ಸುಜ್ನಾನಂದರು ತನ್ನ ಎಡಗಡೆಯಲ್ಲಿ ದೀಕ್ಷೆಗಾಗಿ ಎದುರು ನೋಡುತ್ತಿದ್ದ "ಮುದ್ವ"ನನ್ನು ನೋಡಿದರು. ಪ್ರಕಾಶಮಾನವಾಗಿ ಕಂಗೊಳಿಸುತ್ತಿದ್ದ ಮುದ್ವನ ಮುಖದಲ್ಲಿ ತೇಜಸ್ಸು ಪ್ರವಹಿಸುತ್ತಿತ್ತು. ಸುಜ್ನಾನಂದರ ಕನಸಿನ ಕೂಸು ಮುದ್ವ. ತನ್ನಿಂದ ಮಾಡಲಾಗದ ಸಾಧನೆಯನ್ನ ಮುದ್ವನಿಂದ ಸಾಧಿಸಿ ತಾನೇ ಸಾಧಿಸಿದಷ್ಟು ಸಂತೋಷ ಪಡುವ ಕನಸು ಸುಜ್ನಾನಂದರದು. ಅವರ ದಿವ್ಯ ಮಾರ್ಗದರ್ಶನದಲ್ಲೇ ಬೆಳೆದ ಮುದ್ವ ಅವರ ಎಲ್ಲ ಕನಸನ್ನೂ ಸಾಕಾರಗೊಳಿಸುವ ಎಕೈಕ ಅಘೋರಿಯಾಗಿದ್ದ. ಆ ಸಭೆ ಏರ್ಪಾಟಾದ ಕಾರಣವೂ ಅದೇ. ಮುದ್ವನನ್ನ ಮುಂದಿನ ಅಘೋರಿ ಗುರುವಾಗಿಸುವುದು. ಅದಕ್ಕೆ ಕಾಲ ಕೂಡಿ ಬಂದಿತ್ತು. ಸುಜ್ನಾನಂದರು ತಮ್ಮ ಕೈಯಲ್ಲಿದ್ದ ದಂಡವನ್ನ ಭೂಮಿಗೆ ಸಮನಾಂತರವಾಗಿ ಹಿಡಿದು ಕಣ್ಣು ಮುಚ್ಚಿ, ಮನಸಲ್ಲಿಯೇ ಮಂತ್ರವನ್ನ ಪಠಿಸಿ ಆ ದಂಡವನ್ನ ಮುದ್ವನೆದುರು ಚಾಚಿದರು. ಆಗಲೇ ಮುದ್ವ ಕಣ್ಣು ತೆರೆದದ್ದು. ಸುತ್ತಲೂ ನೆರೆದ ದಟ್ಟ ಕಾಡಿನ, ಹೆಮ್ಮರಗಳಲ್ಲಿ ಗೂಡು ಕಟ್ಟಿ ಮಲಗಿದ್ದ ಪಕ್ಷಿಗಳೆಲ್ಲ ಒಮ್ಮೆಲೇ ಚದುರಿದವು. ಅದು ಯಾವುದೋ ಒಂದು ಅನಿಷ್ಟದ ಸೂಚನೆಯಂತಿತ್ತು. ಮುದ್ವನ ಪಟ್ಟಾಭಿಶೇಕವನ್ನೇ ಎದುರು ನೋಡುತ್ತಿದ್ದ ಎಲ್ಲ ಅಘೋರಿಗಳಿಗೂ ಅದು ಗಮನಕ್ಕೇ ಬರಲಿಲ್ಲ. ಅವರೆಲ್ಲರೂ ಉನ್ಮತ್ತ ಸ್ಥಿತಿಯನ್ನ ತಲುಪಿಯಾಗಿತ್ತು. ಆದರೆ ಸುಜ್ನಾನಂದರ ಗುರು "ಏಕನಾಥ"ರಿಗೆ ಮಾತ್ರ ಅದು ತಿಳಿಯದೇ ಇರಲಿಲ್ಲ. ಮುದ್ವನ ಭೀಕರತೆ ಅಂತಹುದು. ಮುದ್ವ ದಂಡವನ್ನ ಭಕ್ತಿಯಿಂದ ಸ್ವೀಕರಿಸಿ ಗುರುವಿಗೆ, ಪರಮ ಗುರುವಿಗೆ ತನ್ಮಯನಾಗಿ ನಮಸ್ಕರಿಸಿದ. ಏಕನಾಥರು ಮತ್ತೆ ತಮ್ಮ ಜೋಳಿಗೆಯಿಂದ ಭಸ್ಮವನ್ನ ತೆಗೆದು ಮುದ್ವನ ಹಣೆಗೆ ಮೆತ್ತಿದರು. ಮುದ್ವ ಅಲ್ಲಿಗೆ ಅಧಿಕ್ರತವಾಗಿ ಅಘೋರಗುರುವಾಗಿ ನೇಮಕಗೊಂಡಿದ್ದ. ದಿಬ್ಬದ ತುದಿಯಲ್ಲಿ ಬಂದು, ತನ್ನ ಹೆಬ್ಬೆರಳಮೇಲೆ ಪೂರ್ತಿ ಶರೀರವನ್ನ ನಿಲ್ಲಿಸಿ ಬಲಗಯ್ಯಲ್ಲಿ ದಂಡವನ್ನ ಚಂದ್ರನತ್ತ ಎತ್ತಿದ ಮುದ್ವ,  ತನ್ನೆಲ್ಲ ಶಕ್ತಿಯನ್ನ ಒಗ್ಗೂಡಿಸಿ "ಭಮ್ ಬೋಲೇ" ಎಂದು ಘೋಶಿಸಿದ.. ಅದನ್ನೇ ಕಾಯುತ್ತಿದ್ದ ಉಳಿದೆಲ್ಲ ಅಘೋರಿಗಳು ಪ್ರತಿಯಾಗಿ ಭಂ ಬೋಲೆ ಎಂದು ಜಯಘೋಷ ಮೊಳಗಿಸಿದರು. ಕಾಡಿನ ಮೂಲೆ ಮೂಲೆಗೂ ಅವರ ಧ್ವನಿ ಪ್ರತಿಧ್ವನಿಸಿತು... ಮುದ್ವ ಮತ್ತೊಮ್ಮೆ ಕಣ್ಣುಮುಚ್ಚಿ ಭಂ ಬೋಲೆಯೆಂದು ಘೋಷಿಸಿದ. ಯಜ್ನಕುಂಡದಲ್ಲಿ ತನ್ನಿಂದ ತಾನೇ ಅಗ್ನಿ ಜ್ವಲಿಸಿತು..

                    ನಡುರಾತ್ರಿ ಎರಡು ಗಂಟೆಯಲ್ಲಿ, ಅಜ್ನಾತ ಕಾಡಿನಲ್ಲಿ, ಅಘೋರಿಗಳು ಸ್ವೇಚ್ಛೆಯಲ್ಲಿ ಚೀರಿದರು. ಉದ್ರಿಕ್ತರಾಗಿ ಉನ್ಮತ್ತರಾಗಿ ಉದ್ವೇಗದಲ್ಲಿ ನಲಿದರು. ಅವರೆಲ್ಲ ಒಬ್ಬರನ್ನೊಬ್ಬರು ಅಭಿನಂದಿಸುತ್ತ, ಕೇಕೆ ಹಾಕುತ್ತ, ಜಯಘೋಷ ಕೂಗುತ್ತ ಅತೀವ ಆನಂದದಲ್ಲಿ ತೇಲುತ್ತಿದ್ದರೆ, ಏಕನಾಥರು ಮಾತ್ರ, ಮತ್ತೆ ಧ್ಯಾನಸ್ಥ ಸ್ಥಿತಿಗೆ ತೆರಳಿದ ಸುಜ್ನಾನಂದರ ಹಣೆಯಲ್ಲಿ ಕಪ್ಪಾದ ಭಸ್ಮವನ್ನೇ ಗಮನಿಸುತ್ತ ಕಣ್ಮುಚ್ಚಿದರು. ಆ ಹೊತ್ತಿಗೆ ಪಕ್ಕದ ರಾಜ್ಯದ ಬಡ ಜಿಲ್ಲೆಯ ಕುಗ್ರಾಮದಲ್ಲಿ, ವೇಶ್ಯೆಯೊಬ್ಬಳು ಗಂಡುಮಗುವನ್ನ ಹಡೆದಿದ್ದು ಅವರಿಗೆ ಕಾಣಿಸಿತು.

Monday, 24 September 2012

ಭಂ ಬೋಲೆ...



ನಮಗೆ ಕಾಣುತ್ತಿರುವ ನಿಜವೆಲ್ಲವೂ ಸುಳ್ಳೆಂಬುದೇ ಸತ್ಯ....

ಅಘೊರಿ ಎಂಬ ಸಾಮಜಿಕರಲ್ಲದ, ತೀರಾ ವಿಚಿತ್ರವೆನಿಸುವ ಜೀವನಶೈಲಿಯ, ಕಲ್ಪನಾತೀತವೆನಿಸಿದರೂ, ವಾಸ್ತವಿಕವಾಗಿ ಸಜೀವವಾಗಿರುವ ಈ ಸಮುದಾಯದ ಚಟುವಟಿಕೆಗಳನ್ನ ಗಮನಿಸಿದ ನನಗೆ...ಅವರ ಮೇಲೆ ಎಲ್ಲಿಲ್ಲದ ಕುತೂಹಲ ಮೂಡಿದೆ. ಶವ ಶಯನ, ಶವ ಭೋಜನ ಮತ್ತು ಶವ ಮೈಥುನ ಎಂಬ ಮೂರು, ಊಹೆಗೂ ನಿಲುಕದ ಸಂಪ್ರದಾಯ ಹೊಂದಿರುವ ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೊ ಚಪಲ ಶುರುವಾಗಿದೆ. ಮನಸಲ್ಲಿ ಸೃಜಿಸಿದ ಸಣ್ಣ ಎಳೆಯೊಂದು, ಕತೆಯಾಗಿ ಸಿದ್ದವಾಗುತ್ತಿದೆ..
 "ಭಂ ಬೋಲೆ" ಯಾಗಿ.
Quantum physics,ಹಿಂದು ಧರ್ಮ, ಮತ್ತು ಶಂಕರಾಚಾರ್ಯರ ಬರಹಗಳ ತಿರುಳನ್ನ ಬಳಸಿಕೊಂಡು, ಹೀಗೊಂದು ಕತೆ ತಲೆಯಲ್ಲಿ ಕೊರೆಯಲು ಶುರುವಾಗಿ ಅನೇಕ ತಿಂಗಳುಗಳೇ ಕಳೆದಿವೆ. ಸೋಮಾರಿತನವೊ, ಪೂರ್ತಿ ಹಿಡಿತ ಸಿಗದ ವಿಷಯವೋ, ಅಥವ ಇದನ್ನು ಬರೆಯಲು ನಾನು ತೀರ ಸಣ್ನವನೆಂಬ ಕೀಳರಿಮೆಯೊ ಗೊತ್ತಿಲ್ಲ. ಇಷ್ಟು ದಿನವೂ ಅದು ಬರಿಯ ಎಳೆಯಾಗಿಯೇ ಮನಸಲ್ಲಿತ್ತು. ಈಗ ಈ ಎಳೆಗೆ ಹೆರಿಗೆ ಸಮಯ. ಇನ್ನೂ ಅದು ಎಳೆಯಾಗಿಯೇ ಇರಲು ಅವಕಾಶವಿಲ್ಲವಾಗಿ ಅದು ಕತೆಯಾಗಿ ಹೊರಬರುತ್ತಿದೆ. ಬರೆಯುವ ಪ್ರಯತ್ನ ನನ್ನದು. ಮುಂದಿನದು ನಿಮ್ಮ ಪಾಲಿಗೆ. 

Friday, 14 September 2012

ಕೈ ಸುಟ್ಟ ಸಿಗರೇಟು....


ಪೂರ್ತಿ ಮುಗಿಯದೇನೇ...


"ಕಾಲೇಜಿನಲ್ಲಿ ಕ್ಲಾಸು ಮುಗಿಯುತ್ತಿತ್ತೊ ಇಲ್ಲವೊ, ಆದರೆ ಮನಸಿಗೆ ಮಾತ್ರ ಕ್ಲಾಸು ಮುಗಿದು ಶಟ್ಟರ ಅಂಗಡಿಯ ಸಿಗರೇಟಿನ ತುದಿಯಲ್ಲಿಯ ಕೆಂಡ, ಕಣ್ಣು ಕುಕ್ಕುತ್ತಿತ್ತು. ಶೋಕಿಗಾಗಿ ತೀಟೆಗಾಗಿ ಶುರುವಾದ ಚಟವಲ್ಲ ಸಿಗರೇಟು. ಅಪ್ಪಟ ಹವ್ಯಾಸವದು ನನಗೆ. ಶಟ್ಟರ ಗೂಡಂಗಡಿಗೆ ಪೇಪರ್ಮೆಂಟ್ ತಿನ್ನಲು ಬರುತ್ತಿದ್ದ ಮಕ್ಕಳಿಗೆಲ್ಲ ನಾನು ಸಿಗರೇಟಿನ ಹೊಗೆಯನ್ನ ಸುರುಳಿ ಸುರುಳಿಯಾಗಿ ಬಿಡುವುದನ್ನ ನೋಡುವುದೇ ರೋಮಾಂಚನಕಾರಿ ವಿಷಯವಾಗಿತ್ತು. ನಾನೂ ಅಷ್ಟೇ, ಅವರ ಕುತೂಹಲವನ್ನ ಮತ್ತಷ್ಟು ಹೆಚ್ಚಿಸಲು,ಹೊಗೆಯನ್ನ ಉಂಗುರಾಕಾರದಲ್ಲಿ ಬಿಡುತ್ತ,ಓಲಂಪಿಕ್ ಚಿನ್ಹೆ ರಚಿಸಲು ಪ್ರಯತ್ನಿಸುತ್ತಿದ್ದೆ. ಆದರೆ ಕೊನೆಯ ಬಳೆಯನ್ನ ಕೂಡಿಸುವುದರೊಳಗಾಗಿ ಮೊದಲ ಬಳೆ ಕರಗಿಹೋಗುತ್ತಿತ್ತು. ಕಡೆವರೆಗೂ ಓಲಂಪಿಕ್ ಚಿನ್ಹೆ ನನಗೊಲಿಯಲೇ ಇಲ್ಲ. ಭಾರತಕ್ಕೆ ಸಿಗದ ಬಂಗಾರದಂತೆ.

              ಹುಡುಗಿ ಸಿಕ್ಕಿದಳು, ನನ್ನನ್ನೇ ಪ್ರೀತಿಸುವುದಾಗಿ ಹಠ ಹಿಡಿದಳು.ಹೇಗೆ ನನಗೆ ಸಿಗರೇಟನ್ನ ಬಿಡಲಾಗಲಿಲ್ಲವೋ ಹಾಗೆಯೇ ಅವಳಿಗೂ ನನ್ನ ನಾನಿದ್ದಂತೆಯೇ ಪ್ರೀತಿಸಲಾಗಲಿಲ್ಲ. ನನ್ನನ್ನ ಬದಲಾಯಿಸುವುದಾಗಿ, ಮೊದಲು ಸಿಗರೇಟನ್ನ ಬಿಡಬೇಕೆಂದು ರಂಪ ಮಾಡಿದಳು. ನಾನೂ ನೋಡುವಷ್ಟು ನೋಡಿ ಹಿಂಸೆಯನ್ನ ತಡೆಯಲಾಗದೆ ಬಿಡುವುದಾಗಿ ತೀರ್ಮಾನಿಸಿದೆ. ಸಿಗರೇಟನ್ನಲ್ಲ, ಅವಳನ್ನ. ಬೆಂಕಿ ಕಡ್ಡಿ ಗೀರುವುದರಿಂದ ಹಿಡಿದು, ಸಿಗರೇಟನ್ನ ಹೊತ್ತಿಸಿ ಮೊದಲ ದಮ್ ಹೀರುವಾಗಿನ ಮಜವೇ ನನ್ನನ್ನ ಪದೇ ಪದೇ ಸಿಗರೇಟಿಗೆ ದಾಸನನ್ನಾಗಿ ಮಾಡಿದ್ದು. ಗೆಳೆಯರ ಬಳಗದಲ್ಲಿ ನನ್ನ ಸಿಗರೇಟಿನ ಚಟದ ಬಗ್ಗೆ ವಿಶೇಷವಾದ ಸ್ಥಾನವಿದೆ. ನಾನು ಎಂದೂ ಇನ್ನೊಬ್ಬರ ಹಣದಲ್ಲಿ ಚಟ ಮಾಡಲಿಲ್ಲ. ಮತ್ತೊಬ್ಬನಿಗೆ ಸಿಗರೇಟ್ ಸೇದೆಂದು ಪೀಡಿಸಲಿಲ್ಲ. ನನ್ನ ಮೋಜು ನನ್ನ ಮಜಗಳಿಗಾಗಿ ಮಾತ್ರ ಸಿಗರೇಟು ನನ್ನ ಆಸಕ್ತಿಯ ವಸ್ತುವಾಗಿತ್ತು.

ಹೊಗೆ ನನ್ನ ಎದೆಯೊಳಗೆ ನುಸುಳುತ್ತಿದ್ದ ಹಾಗೆ ನಾನು, ನನಗೆ ಬೇಕಾದ ನಾನಾಗುತ್ತಿದ್ದೆ. ಆಗ ನನ್ನನ್ನ, ಯಾರು, ಏನೇ ಪ್ರಶ್ನಿಸಿದರೂ, ನನ್ನಿಂದ ಯಾವ ಪ್ರತಿಕ್ರಿಯೆಯೂ ಬರುತ್ತಿರಲಿಲ್ಲ. ಅಸಲಿಗೆ ನಾನು ವಾಸ್ತವದಲ್ಲೇ ಇರುತ್ತಿರಲಿಲ್ಲ. ಎದ ಬಿಗಿಯಾಗಿ ಭಾರವಾಗಿ, ಉನ್ಮತ್ತ ಮನಸು ಲಗಾಮಿಲ್ಲದೆ, ಕಲ್ಪನೆಯಲ್ಲಿ ತೇಲಾಡುವಾಗಲೇ ಎಂದೂ ಬಾರದ ಭಾವಗಳು ನನ್ನನ್ನ ಬಿಗಿದಪ್ಪುತ್ತಿದ್ದವು. ವಿಚಲಿತಗೊಳ್ಳದ ಅನಿರ್ವಚನೀಯ ಭಾವ ಸ್ಪಂದನೆಗಳನ್ನ ನಾನು ಕಂಡಿದ್ದೇ ಧೂಮದಲ್ಲಿ ಮುಳುಗಿದಾಗ. ನಾವೇ ಹಾಕಿಕೊಂಡ ಬೇಲಿಗಳು, ಪ್ರತಿಕ್ಷಣ ಅದನ್ನು ಮುರಿದುಹಾಕಲು ನಾವೇ ಪ್ರಯತ್ನಿಸುವುದು, ಅನಂತದವರೆಗೆ ಬೆಳೆಯೊ ಆಕಾಂಕ್ಷೆ ಹೊಂದಿ, ಒಳಗೊಳಗೇ ಅಂತರವನ್ನ ಬೆಳೆಸಿಕೊಳ್ಳುವುದು, ನಮ್ಮಮೇಲೆಯೇ ಅನುಮಾನ, ಅಸಹ್ಯೆ, ಜಿಗುಪ್ಸೆಗಳಿದ್ದರೂ ನಮ್ಮ ಪ್ರತಿ ಸೋಲುಗಳಿಗೆ ಇನ್ನೊಬ್ಬರ ನೆರಳನ್ನ ಗುರುತುಮಾಡುವುದು, ಅನುದಿನ ಸಾಯುವುದು, ಬದುಕಿರುವಂತೆ ಶರೀರವನ್ನ ಚಲಿಸುವುದು,ತಲೆ ಬುಡ ಎರಡೂ ಇಲ್ಲದ, ಸಲ್ಲದ ಹರಟೆಗಳಲ್ಲಿ ಸದಾ ಸುಖವನ್ನ ಕಾಣುವುದು, ನಿನ್ನೆಗಳನ್ನ ನೆನೆಯುತ್ತ, ಇವತ್ತನ್ನು ಕಳೆಯುತ್ತ, ನಾಳೆಯನ್ನ ಅಳೆಯುವುದು, ಮಗ್ಗಿಯೂ ಬಾರದವನು ಬೀಜಗಣಿತವನ್ನ ಬಿಡಿಸಿದಂತೆ, ತನ್ನ ವಿಧಿಯನ್ನ ಶಪಿಸುವುದು, ಉತ್ತರವೇ ಇಲ್ಲದ ಪ್ರಶ್ನೆಗಳನ್ನ ಕೇಳುತ್ತ, ಉತ್ತರಿಸಲಾಗದವರನ್ನ ದಡ್ಡರೆಂದು ತೀರ್ಮಾನಿಸುವುದು, ಹೀಗೆ ಹೇಳಲಾಗದಷ್ಟು, ಹುಳುಕು ಕೊಳಕುಗಳು ನನ್ನನ್ನ ತೀವ್ರವಾಗಿ, ಬಲವಂತವಾಗಿ ಕಾಡಿದ್ದೇ ಸಿಗರೇಟಿನ ಅಮಲಲ್ಲಿ ತೇಲಿದಾಗ...

ಕೆಲವು ಬೇಡದ, ಬೇಕೇಬೇಕಾದ ಸಬಂಧಗಳನ್ನ, ಸ್ನೇಹವನ್ನ, ಸಹನೆಯನ್ನ, ಸಂತೋಷವನ್ನೆಲ್ಲ ಸಿಗರೇಟಿನಿಂದಾಗಿ ಕಳೆದುಕೊಂಡೆ. ಸಿಗರೇಟನ್ನ ಸಿಕ್ಕಿಸುವ ಕೈ ಬೆರಳ ಸಂಧಿ ಬದಲಾಯ್ತೆ ವಿನಹ ನಾನು ಬದಲಾಗಲಿಲ್ಲ. ಬಾಯಲ್ಲಿ ಹೊಗೆ ಬಂದಾಗಲಿಲ್ಲ. ಸಿಗರೇಟನ್ನ ಸೇದುವುದು ನನ್ನತನ ಎಂದು ಭಾವಿಸಿದ್ದ ನನಗೆ, ಸಿಗರೇಟು ಬಿಡುವುದು ಸರಿಯೋ, ಅಥವಾ ಅದನ್ನು ಬಿಟ್ಟು ನನ್ನತನ ಕಳೆದುಕೊಳ್ಳುವುದು ತಪ್ಪೊ ಎಂಬುದು ಬಗೆಹರಿಯದ ಸಮಸ್ಯೆಯಾಗಿ ಕಾಡಿತು. ಕೆಲವು ಇಕ್ಕಟ್ಟಿನಲ್ಲಿ ಆನಂದವಿದೆಯಾದರೂ, ತರಾತುರಿಯ ಅನಿವಾರ್ಯತೆಯಲ್ಲಿ ಯಾವ ಆನಂದವೂ ಇಲ್ಲ. ಕಡೆಗೂ ನನ್ನ ಪಾಲಿಗೆ ಅಂಥದೊಂದು ಅನಿವಾರ್ಯತೆ ಬಂದೇ ಬಿಟ್ಟಿತು.

ಹವ್ಯಾಸವಾಗಿದ್ದ ವಿಷಯ ಚಟವಾಯ್ತು, ಅಧೀನದಲ್ಲಿದ್ದ ಚಟ ಅಧಿಕಾರಿಯಾಯ್ತು, ಕಡೆಗೆ ನನಗೆ ಸಿಗರೇಟು ಬೆಕೆಂದಲ್ಲ, ಸಿಗರೇಟಿಗೆ ನಾನು ಬೆಕೇಬೆಕೆಂಬ ಸ್ಥಿತಿ ಬಂದುಹೋಯ್ತು. ತುಟಿ ಕಪ್ಪಾಯ್ತು, ಸಿಕ್ಕ ಇನ್ನೊಬ್ಬಳು ಗೆಳತಿ ಮುತ್ತನ್ನ ನಿರಾಕರಿಸಿದಳು, ಮನಸು ವಿಚಲಿತವಾಯ್ತು, ಗೆಳೆಯರು ದುರವಿಡಲು ಶುರುಮಾಡಿದರು, ಏನನ್ನಾದರೂ ಬರೆದು, ಬದುಕಿಗೊಂದು ದಾರಿಮಾದಿದ್ದ ಕೈಗಳು ಅದುರಿದವು, ಎದೆಯಲ್ಲಿ ಪ್ರತಿದಿನ ಕನಸುಗಳು ಸತ್ತಂತೆ ಚೀರುತ್ತಿದ್ದವು, ಹಾಗೆಯೇ ಸಾಯುತ್ತಿದ್ದವು, ಪ್ರಶ್ನೆಗಳು ಶುರುವಾದವು, ಕತ್ತಲೆಗಳು ಹೆಚ್ಚಾದವು, ಸಿಗರೇಟನ್ನ ಬರಿಯ ಮೋಜೆಂದು ಭಾವಿಸಿದ್ದ ನನಗೆ ಅದು ಹಾಗಲ್ಲವೆಂಬ ಸತ್ಯ ಅರಿವಾಗಿ ಜ್ನಾನೋದಯವಾಗೊ ಅವಕಾಶ ಮುಗಿದುಹೋಯ್ತು. ಯಾಕೆಂದರೆ ತಿಂಗಳುಗಟ್ಟಲೆ, ಆಸ್ಪತ್ರೆಯಲ್ಲಿ ಮಲಗಿದಮೇಲೆ,ಡಾಕ್ಟರ್ ಹೇಳಿದರು" ಈಗ ನಿನ್ನ ಎದೆಯಲ್ಲಿ ಮೂರು ರಂಧ್ರಗಳಾಗಿವೆ, ಅವುಗಳನ್ನ ಮುಚ್ಚುವುದು, ಅಥವಾ ಸರಿ ಮಾಡುವುದು ಆಗದ ಮಾತು, ಹೇಳಲೇಬೇಕಾದ ಅನಿವಾರ್ಯತೆಯಲ್ಲಿ ನಾನಿರುವುದರಿಂದ ಹೇಳುತ್ತಿದ್ದೇನೆ, ನಿನ್ನಲ್ಲಿ ಹೆಚ್ಚು ದಿನಗಳು ಉಳಿದಿಲ್ಲ"ಎಂದು. ಡಾಕ್ಟರ್ ಹೇಳಿದ ಮೂರು ರಂಧ್ರಗಳೆಂಬ ವಾಕ್ಯ ಮತ್ತೆ ಮನಸಿಗೆ ಪ್ರತಿಧ್ವನಿಸಿದಾಗ ನಾನು ಎದೆಯನ್ನ ಮುಟ್ಟಿಕೊಳ್ಳಲಿಲ್ಲ. ಬದಲಾಗಿ ಸಿಗರೇಟು ಹಿಡಿಯುತ್ತಿದ್ದ ಬೆರಳುಗಳನ್ನ ನೋಡಿದೆ. ಎಂದೂ ಕಾಣದ ಸುಟ್ಟ ಕಲೆಗಳು ಆ ಬೆರಳ ಸಂಧಿಗಳಲ್ಲಿ ಅಂದು ಕಾಣಿಸಿದಂತೆ ಭಾಸವಾಯ್ತು. ಆಗಲೇ ಖಾತ್ರಿಯಾಗಿದ್ದು ಸಿಗರೇಟು ಕೈ ಸುಟ್ಟಿದೆಯೆಂದು".
ಇದು ತನ್ನ ಕೊನೆಯ ಬರಹವೆಂದು ಸಾಯುವ ಹಾಸಿಗೆಯಮೇಲೇ ಹಾಳೆಯನ್ನ ತರಿಸಿಕೊಂಡು, ಹೀಗೆ ಬರೆದ ನನ್ನ ಸ್ನೇಹಿತನ ಕೈಯಲ್ಲಿ ಸಾಯುವಾಗಲೂ ಸಿಗರೇಟಿತ್ತು. ಸುಟ್ಟ ಕಲೆಗಳೂ ಸಹ....

Thursday, 13 September 2012

ಕಡೆಗೆ ಬಯಸಿದ್ದನ್ನೇ ಮಾಡುವ ನಾವು ಸಲಹೆ ಕೇಳುವುದ್ಯಾಕೆ?.......

ಕಡೆಗೆ ಬಯಸಿದ್ದನ್ನೇ ಮಾಡುವ ನಾವು ಸಲಹೆ ಕೇಳುವುದ್ಯಾಕೆ?.......


ಮನೆಗೆ ಹೊರಟಿದ್ದ ನನಗೆ ಎಂದಿನಂತೆ ಕವಲು ಹಾದಿಯೋದು ತೆರೆದುಕೊಂಡಿತು. ಎರಡೂ ಹಾದಿಯು ನನ್ನನ್ನ ಮನೆ ತಲುಪಿಸುತ್ತದೆ. ಆದರೆ ಎಡಬದಿಯ ಹಾದಿ ಅವಳ ಮನೆಯೆದುರೇ ಸಾಗುತ್ತದೆ. ಅವಳು ಒಮ್ಮೊಮ್ಮೆ, ಈ ಸಂಜೆ ಹೊತ್ತಿನಲ್ಲಿ ಅಂಗಳದಲ್ಲಿ ಹೂಗಿಡಗಳಿಗೆ ನೀರೆರೆಯಲು ಹೊರಬರುವುದುಂಟು. ಹಾಗೆ ಸುಳಿಯುವಾಗ ಅವಳನ್ನೊಮ್ಮೆ ನೋಡುವುದೇ ಪರಮಾನಂದ.ಆದರೆ ಬಲಗಡೆಯ ಹಾದಿ ಇನ್ನೊಂದು ಹಾದಿಗಿಂತ ಬೇಗ ಮನೆಗೆ ಸಾಗುತ್ತದೆ. ಹಾಗಾಗಿ ಯಾವ ಹಾದಿಯಲ್ಲಿ ಹೋಗಲೆಂಬ ಗೊಂದಲ ಶುರುವಾಗಿ ನಾಣ್ಯ ಚಿಮ್ಮಿದೆ. ನಾಣ್ಯ ಗಾಳಿಯಲ್ಲಿ ಗಿರ್ರನೆ ತಿರುಗುವಾಗ ನನಗೆ ಸಹಮತವಿದ್ದ ಕಡೆಯಲ್ಲೇ ಸಾಗುವಂತೆ ಅದು ಬೀಳಲಿ ಎಂದು ಮನಸು ಬಯಸಿತ್ತು. ಯಾವ ದಾರಿಯೆಂಬ ಗೋಜು ಬೇಡ, ನಿರ್ಧಾರವೆಂಬ ಜವಾಬ್ದಾರಿ ಬೇಡ ಎಂಬ ಕಾರಣದಿಂದಲೇ ನಾಣ್ಯ ಚಿಮ್ಮಿದರೂ, ತನಗೆ ಬೇಕಾದಂತೆಯೇ ಅದು ಬೀಳಲಿ ಎಂಬ ಭಾವ ಮನಸಿನ ದೌರ್ಬಲ್ಯವನ್ನ ತೋರಿಸಿತು. ತಿರುಗುವಷ್ಟು ತಿರುಗಿ ಯಾವುದೋ ಒಂದು ಮುಖ ಮೇಲಾಗಿ ನಾಣ್ಯ ಕೆಳಗೆ ಬಿತ್ತು. ನಾಣ್ಯದ ಫಲಿತಾಂಶವನ್ನು ನೋಡುವ ಕುತೂಹಲ ಉಳಿದಿರಲಿಲ್ಲ. ಬಿದ್ದ ನಾಣ್ಯವನ್ನ ಅಲ್ಲಿಯೇ ಬಿಟ್ಟು ಯಾವ ಹಾದಿಯಮೇಲೆ ಮೋಹವಿತ್ತೊ ಅದನ್ನೇ ಆಯ್ಕೆಮಾಡಿಕೊಂಡೆ.

             ನಾಣ್ಯ ಕೈಯಿಂದ ಚಿಮ್ಮಿ, ನೆಲಕ್ಕೆ ಬೀಳುವಷ್ಟು ಸಣ್ಣ ಸಮಯದಲ್ಲಿ ಎಂಥ ಬದಲಾವಣೆಯನ್ನ ಕಂಡೆ. ಆ ಕವಲು ದಾರಿ ಬರಿಯ ಎರಡು ಹಾದಿಯಾಗಿರಲಿಲ್ಲ, ನನ್ನಪಾಲಿಗದು ಬುದ್ಧನ ಬೋಧಿವೃಕ್ಷವಾಗಿಹೋಯ್ತು. ನನ್ನದೇ ಮನಸಿನ ಹುಣ್ಣು ಕಣ್ಣೆದುರೇ ಕಾಣಿಸಿತು. ಾಅಯ್ಕೆಮಾಡಿಕೊಂಡ ಹಾದಿಯಲ್ಲಿ ಬರುವಾಗ ಕಲಿತ ಪಾಠದ ತಿರುಳನ್ನೇ ಮೆಲುಕುತ್ತ ಬಂದೆ. ಹೆಗ್ಡುಲಾ ಬಿದ್ದರೆ ಬಲಗಡೆಯ ಹಾದಿ ಟೇಯ್ಲ್ ಬಿದ್ದರೆ ಎಡಗಡೆಯ ಹಾದಿ ಎಂದು ಊಹಿಸಿದ್ದೆ. ಮನಸ್ಸಿನಲ್ಲಿ ಎಡಗಡೆಯ ಹಾದಿಯಬಗ್ಗೆ ಹೆಚ್ಚು ಒಲವಿತ್ತು. ಯಾಕೆಂದರೆ ಒಲವ್ ಅದೇ ಹಾದಿಯಲಿ ಶುರುವಾಗುವ ಸಂಭವವಿತ್ತು. ಅವಳು ನನ್ನ ಎಣಿಕೆಯಂತೆ ಡೇರೆ ಹೂಗಳನ್ನ ಮೀಟುತ್ತ ನೀರೆರೆಯುತ್ತ ಓಡಾಡಿಕೊಂಡಿದ್ದಳು. ಅವಳು ಕಾಣುವಷ್ಟು ಹೊತ್ತೂ ನನ್ನ ಕಣ್ಣು ದಾರಿಯನ್ನ ನೋಡಲಿಲ್ಲ. ಇನ್ನೇನು ನಾನು ಮರೆಯಾದೆ ಅನ್ನುವಾಗ ಅವಳು ನನ್ನನ್ನ ಗುರುತಿಸಿದಳು ಅನಿಸುತ್ತದೆ. ಯಾಕಂದರೆ ಸ್ವಲ್ಪ ದೂರವೇ ಅನಿಸಿದರೂ ಅವಳು ಸೌಹಾರ್ದವಾಗಿ ನಕ್ಕಿದ್ದು ನನಗೆ ಸ್ಪಷ್ಟವಾಗಿ ಕಾಣಿಸಿತು. ಅದೇ ನನ್ನಪಾಲಿನ ಗೆಲುವು. ಹುಡುಗಿರ ನಗು ಹುಡುಗರಿಗಲ್ಲದೇ ಇನ್ನಾರಿಗೆ ತಾನೇ ಸರಿಯಾಗಿ ಕಾಣಿಸುತ್ತದೆ ಹೇಳಿ.. ಅವರು ನಗುವುದೇ ನಮಗಾಗಲ್ಲವೇ...

             ಗೆದ್ದ ಹೆಮ್ಮೆಯಲ್ಲಿ ನಾನೂ ನಗುಮುಖದಲ್ಲಿ ಮನೆ ತಲುಪಿದೆ. ನಾನು ಬಂದ ಸ್ವಲ್ಪ ಹೊತ್ತಿನಲ್ಲಿಯೇ ಮನೆಗೆ ಬಂದ ನನ್ನ ತಮ್ಮ ಕವಲು ಹಾದಿಯಲ್ಲಿ 5ರೂ ನಾಣ್ಯ ಸಿಕ್ಕಿತೆಂದು ಹೇಳಿದ. ಮತ್ತೆ ಕುತೂಹಲ ಕೆರಳಿದ್ದರಿಂದ "ನೀನು ನಾಣ್ಯ ಹೆಕ್ಕುವಾಗ ಹೆಡ್ ಬಿದ್ದಿತ್ತೋ, ಟೇಯ್ಲೊ?" ಎಂದು ಕೇಳೀದೆ.ಅವನು ಸ್ವಲ್ಪ ತಡೆದು ನೆನಪಿಸಿಕೊಂಡು ಹೇಳಿದ "ಟೇಯ್ಲ್" ಎಂದು.

Wednesday, 12 September 2012

ಒಂದು ಹನಿ.....




ಒಂದು ಹನಿ.....


ಕಣ್ಣಂಚ ಸವರಿದ ಒಂದು ಹನಿ
ಎಲ್ಲಿ ಬಿತ್ತೊ ನಾ ಕಾಣೆ.
ಅದರೆಡೆಗೆ ಗಮನವಾದರೂ ಎಲ್ಲಿತ್ತು?
ಕೋಟಿಮಂದಿ ನೆರೆದ ಸಭೆಯ
ವಿಜ್ರಂಭಣೆಯ ಭವ್ಯತೆಗೆ
ಭಾವಚಿತ್ರದ ಬೆಳಕಿನ ಮಳೆಗೆ
ನನ್ನ ಕಣ್ಣು ಕುರುಡಾಗಿತ್ತೊ ಏನೊ
ನನ್ನನಗಲಿದ ಆ ಹನಿ ಕಾಣಲೇ ಇಲ್ಲ.
            ರತ್ನಗಂಬಳಿ ಹಾಸಿದ ಮಾರುದ್ದದ ವೇದಿಕೆ
            ವಜ್ರಖಚಿತ ಆಸನದಮೆಲೆ ಬಣ್ಣದ ದೀಪಗಳ ಹೊದಿಕೆ,
            ನನಸೇ ಆದರೂ ಕನಸೆಂಬಂತಿತ್ತು,
            ಕನಸೇ ನನಸಾಗಿತ್ತು.
ಕಿವಿಗಡಚಿಕ್ಕುವ ಕರತಾಡನ
ಅಭಿಮಾನದಿ ಉಕ್ಕೇರಿದ ತಾಳವಿರದ ನರ್ತನ,
ಕೇಕೆ ಸಿಳ್ಳೆಗಳ ನಡುವೆ ಮಾತಿಗೆ ನಿಂತಿದ್ದೆ.
ಗಂಟಲ ಪಸೆ ಆರಿಹೋಗಿತ್ತು.
ಪ್ರಶಸ್ತಿ ಹಿಡಿದಿದ್ದ ಕೈ
ಒಂದೇ ಸಮನೆ ನಡುಗುತ್ತಿತ್ತು.
"ನಲ್ಲೆಗೊಂದು ದಿನ ಹೇಳಿದ್ದೆ,
ಅವಳ ಒತ್ತಾಯಕೆ ಮಣಿದು
ಪ್ರೀತಿಗುಡುಗೊರೆ ಕೇಳಿದ್ದಕ್ಕೆ,
'ಸುರಿವ ಒಂದು ಹನಿಯೆಂದು'
ಅವಳು ನಗಲೇ ಇಲ್ಲ ಅವಳಿಗದು ಹಿಡಿಸಲೇ ಇಲ್ಲ.
ಬಹುಮಾನ ನೀಡಲಾಗದ ಬಡವ ನಾನೆಂದು
ನನ್ನೊಂದಿಗೆ ಉಳಿಯಲೇ ಇಲ್ಲ.
                   ದಡ್ಡಿಯವಳು
                   ಹನಿಹಿಂದಿನ ಹಿರಿದಾಸೆ ತಿಳಿಯದೆ
                   ಅದನ್ನ ಪಡೆವ ಸಂದರ್ಭ ಅರಿಯದೆ
                   ಕೈ ಬೀಸಿ ಕಾಣೆಯಾದಳು ಯಾವುದೊ
                   ಸಿರಿವಂತನ ತೆಕ್ಕೆಯೊಳಗೆ ಕರಗಿ.
ಅವಳು ಹೋದರೇನನಂತೆ
ಅವಳಿಗಾಗೇ ಕಂಡಿದ್ದ ಕನಸು
ಕೈ ಹಿಡಿದು ನಡೆಸಿತ್ತು.
ಅದೇ ನನ್ನ ನಿಮ್ಮೆದುರು ನಿಲ್ಲಿಸಿದೆ."
ಹೇಗೋ ತಡವರಿಸಿ ಇಷ್ಟು ಮಾತನಾಡಿದ್ದೆ.
ಭಾವಸಹಿತ ಚಪ್ಪಾಳೆ ಪ್ರವಾಹದಲ್ಲಿ
ನನ್ನ ದನಿ ಕಿರಿದಾಗಿತ್ತು.
ನನ್ನಎದುರ ಜನಸ್ತೋಮ ಎದ್ದು ನಿಂತಿತ್ತು.
ಏನು ಬಂದರೆ ಏನು
ಅವಳು ನನ್ನೊಂದಿಗಿಲ್ಲ,
ಒಮ್ಮೆ ಈ ಸಾಗರದಲ್ಲಿ ಅವಳಿದ್ದರೂ ಇರಬಹುದು,
ಆದರೀಗ
ಕೊಡಬಯಸಿದ್ದ ಹನಿಯಾಗಲೀ
ಕೊಡುವ ಮನಸಾಗಲೀ
ನನ್ನೊಂದಿಗಿಲ್ಲ, ನನಗಿಲ್ಲ

Friday, 30 December 2011

ಇವತ್ತು ಕೆಲಸದಿಂದಾಗಿಯೇ ಕೆಲಸಕ್ಕೆ  ಬೇಗ ಬಿಡುವು ಸಿಕ್ಕಿತ್ತು. ಹಾಗಂತ ನಾನು ರೂಮಿಗೆ ಬೇಗ ಹೋಗಿ ಮಾಡುವುದು ಏನೂ ಇರಲಿಲ್ಲ. ನಮ್ಮ ಮೆಟ್ರೋ ಗೆ ಚಾಲನೆ ಸಿಕ್ಕ ವಿಷಯ ನನ್ನಲ್ಲಿ ಕುತೂಹಲ ಮೂಡಿಸಿ ಆಗಿತ್ತು. ರಜೆಯ ದಿನಗಳಲ್ಲಿ ಇದ್ದುಬದ್ದ ಕೆಲಸವನ್ನೆಲ್ಲಾ ಮುಗಿಸಿ ಮೊದಲಿನಿಂದಲೂ ಇರುವ ಸಿನೆಮಾ ಹುಚ್ಚನ್ನು ನೀಗಲು ಅಲ್ಲಿಗೆ ಹೋಗಿ ಬರುವುದರೊಳಗಾಗಿ ಅಪರೂಪವೆಂಬಂತೆ ಭಾಸವಾಗೋ ಭಾನುವಾರ ಮುಗಿದು ಮತ್ತೆ ಸೋಮವಾರದ ಗಡಿಬಿಡಿ ಶುರುವಾಗಿಬಿಡುತ್ತಿತ್ತು. ಅಲ್ಲಿಗೆ ಉಳಿದ ಆಸೆಗಳಿಗೆ ಮತ್ತೊಂದು ಭಾನುವಾರದ ಬೆಣ್ಣೆ ಒರೆಸುತ್ತಿದ್ದೆ. ಆದರೆ ಗ್ರಹಚಾರಕ್ಕೆ ಇವತ್ತು ಸ್ವಲ್ಪ ಸಮಯ ಬಿಡುವು ಸಿಕ್ಕಿತ್ತು. ಎಂ ಜಿ ರೋಡ್ ನಲ್ಲಿ  ಇದ್ದುದರಿಂದ ಮೆಟ್ರೋ ಹತ್ತಲೆಬೇಕೆಂದು ನಿಶ್ಚಯ ಮಾಡಿಬಿಟ್ಟೆ. ೧೫ ರೊಪಾಯಿ ಕೊಟ್ಟು ಬಿಲ್ಲೆಯಂತ ತಿಕೆಟ್ಟೂ ಕೊಂಡು ಜೀವಮಾನದಲ್ಲಿ  ಮೊಟ್ಟ ಮೊದಲ ಬಾರಿಗೆ ಮೆಟ್ರೋ ಏರಿಯೂ ಆಯಿತು. ನನ್ನಂಥದ್ದೇ ಕುತೂಹಲದಲ್ಲಿ ಅಲ್ಲಿ ಅನೇಕರಿದ್ದರು. ಕಾದಿದ್ದ ರೈಲು ಬಂದೇಬಿಟ್ಟಿತು. ಬಿ ಟಿ ಎಸ್ ಬಸ್ಸುಗಳನ್ನು  ಹತ್ತಿ ರೂಢಿಯಾಗಿದ್ದ ನಮಗೆ ನಿಧಾನಕ್ಕೆ ಹತ್ತುವ ಅವಧಾನವಿರಲಿಲ್ಲ. ಆದರೆ ಸಂಖ್ಯೆಯಲ್ಲಿ ಕಡಿಮೆಯಿದ್ದ ನಮಗೆಲ್ಲರಿಗೂ ಒಳಗೆ ಆಸನಗಳಿದ್ದವು. ಸ್ವಲ್ಪ ಹೊತ್ತು ಎಲ್ಲರದು ಮೌನಾಸನಗಳೇ. ಜೇಬಿನಲ್ಲಿದ್ದ ಕ್ಯಾಮರಕ್ಕೆ ಹೆಚ್ಚು ಹೊತ್ತು ಅಲ್ಲೇ ಇರಲು ಮನಸು ಬಿಡಲಿಲ್ಲ. ಚೊಕ್ಕಟವಾದ ರೈಲಿನ  ಗಾಜಿನಿಂದ ಎಂದೂ ನೋಡದ ಬೆ೦ಗಳೂರು ಕಣ್ಣ ತುಂಬಿಕೊಳ್ಳುತ್ತಿತ್ತು. ಸೋಕಾಸುಮ್ಮನೆ ಬೆ೦ಗಳೂರನ್ನ ಗುರಿಯಾಗಿಸಿಕೊ೦ಡು ಫ್ಲಾಶ್ ಸಹಿತ   ಒಂದು ಫೋಟೊ ಕ್ಲಿಕ್ಕಿಸಿಬಿಟ್ಟೆ. ನನ್ನ ಕ್ಯಾಮರಾದ ಬೆಳಕೇ ಎಲ್ಲರನ್ನೂ ಎಬ್ಬಿಸಿತೇನೋ ಎ೦ಬ ಅನುಮಾನ ಶುರುವಾಯ್ತು. ಎಲ್ಲೆಲ್ಲಿಯೋ ಇದ್ದ ಮೊಬೈಲ್, ಕ್ಯಾಮರಗಳೆಲ್ಲ ತನ್ನಿ೦ದತಾನೆ ಹೊರಗೆಬ೦ದು ಚಕಚಕನೆ ಫೋಟೋಗಳು ಜೆವತಳೆದವು. ಮೊಟ್ಟ ಮೊದಲಬಾರಿಗೆ ಯಾವುದೋ ಒ೦ದನ್ನ ಆರ೦ಭಿಸಿದ ಖುಷಿ  ನನ್ನದಾಗಿತ್ತು ಇವತ್ತು. ತಮ್ಮ ನೆ೦ಟರಿಸ್ಟ್ರನ್ನೆಲ್ಲ ಒ೦ದು ಕಡೆ ನಿಲ್ಲಿಸಿದವರು, ಮಕ್ಕಳ ಕೈ ಗೆ ಮೊಬೈಲ್ ಕೊಟ್ಟು ಒಟ್ಟಿಗೆ ಕೂತ ಅಪ್ಪ ಅಮ್ಮ , ತಾವೇ ತಮ್ಮನ್ನ ಕ್ಲಿಕ್ಕಿಸುವ ಪ್ರೇಮಿಗಳು,  ಹೀಗೆ ಭಾವಚಿತ್ರಗಳು ಸೆರೆ ಸಿಕಿದ್ದೇ ಸಿಕ್ಕಿದ್ದು. ನಾನೂ ಎಲ್ಲರೋಳ್ಗೊಬ್ಬ ಮ೦ಕುತಿಮ್ಮನಾಗಿ ನನಗೆ ಮನಸಾದ ಚಿತ್ರಗಳನೆಲ್ಲ ಸೆರೆಹಿಡಿದೆ.
                                                         ಇದು ಒಂದು ಹೊಸ ಹಾಗು ಆನಂದದ ಅನುಭವವಾದರೆ ಮೊತ್ತೊ೦ದು ನನ್ನನ್ನ ಚಿ೦ತೆಗೆ ಹಚ್ಚಿದ್ದು. ಹಾಗೆ ರೈಲಿನ ಗಾಜಿನಿಂದ ಹೊರಗೆ ನೋಡುವಾಗ ಅಕ್ಕಪಕ್ಕದಲ್ಲಿದ್ದ ಮಕ್ಕಳು ಸ೦ಭ್ರಮಿಸುತ್ತಿದ್ದವು. ಕೆಲವರಿಗೆ ಮಾತಿನ ಅವಶ್ಯಕತೆಯಿರಲಿಲ್ಲ. ಇನ್ನು ಕೆಲವರಿಗೆ ಮ೦ದಹಾಸವೆ ಹಿತ ನೀಡುತ್ತಿತ್ತು. ಹಾಗೆ ಸ್ವಚ್ಛ ಉನ್ಮಾದದಲ್ಲಿದ್ದ ಮಕ್ಕಳ ಗು೦ಪಿನಲ್ಲಿದ್ದ ಒ೦ದು ಹೆಣ್ಣುಮಗು ಹೊರಗೆ ಕಾಣಿಸಿದ ಕೆಲವು ಮರಗಳನ್ನ ನೋಡಿ ತನ್ನ ಅಮ್ಮನಲ್ಲಿ " ಅಮ್ಮ ಇದು ಕಾಡಿರಬೇಕು
ಅಲ್ವ ಅಮ್ಮ? " ಎ೦ದು ಕೇಳುತ್ತಿತ್ತು. ಅಮ್ಮನಿ೦ದ ಯಾವ ಪ್ರತಿಕ್ರಿಯೆಯನ್ನೂ  ನಾನು ಗಮನಿಸಲಿಲ್ಲ. ಆದರೆ ಪಕ್ಕದಲ್ಲಿದ್ದ ಮತ್ತೊ೦ದು ಮಗು " ಇದು ಕಾಡಲ್ಲ ಕಣೆ, ಕಾಡು ದೊಡ್ಡದಾಗಿರುತ್ತ೦ತೆ " ಎ೦ದಿತ್ತು. ಆ ಇಬ್ಬರೂ ಮಕ್ಕಳು ಕಾಡನ್ನ ನೋಡಿಲ್ಲವೆನ್ನುವುದು ಅಲ್ಲಿಗೆ ಸ್ಪಸ್ಟ. ಅಲ್ಲಿಗೆ ನನ್ನ ಫೋಟೊ ಕ್ಲಿಕ್ಕಿಸುವ ಉಮೇದಿ ಮುಗಿದಿತ್ತು. ಆ ಪುಟ್ಟ ಮಗುವಿನ ಯಾ೦ತ್ರಿಕ ಜಗತ್ತು ನನ್ನನ್ನ ಪ್ರಶ್ನಿಸಲು ಆರ೦ಭಿಸಿತು. ರಜೆ ಸಿಕ್ಕಿತೆ೦ದರೆ ಕಾಡು ಬೆಟ್ಟ ಹೊಳೆ ಕೆರೆ ಎ೦ದು ಅಲೆಯಬೇಕಾದ ಮಕ್ಕಳೆಲ್ಲ ಇ೦ದು ಕಾಡನ್ನ ಫೋಟೊ ದಲ್ಲಿಯೋ, ಟೀವಿಯಲ್ಲಿಯೋ ನೋಡಬೇಕಾದ ಅನಿವಾರ್ಯತೆ ಇ೦ದಿನದಾಗಿರುವುದು ವಿಷಾದ. ಮು೦ದೊ೦ದು ದಿನ ಅದೇ ಮಗು ದೊಡ್ಡವಳಾದಮೇಲೆ ಸಮಯ ಸಿಕ್ಕಾಗ ಔಟಿ೦ಗ್, ಟೂರ್, ಹೀಗೆ ಯಾವುದೊ ಒ೦ದು ಹೆಸರಲ್ಲಿ ಕಾಡನ್ನ ನೋಡಬಹುದು. ಆದರೆ ಅವಳ ಬಾಲ್ಯವೆ೦ಬ ಅಮೂಲ್ಯ ಅದ್ಭುತ ಲೋಕವೊ೦ದು ಪಟ್ಟಣದ ಹೈವೇಲೋ, ಕಾ೦ಕ್ರೀಟ್  ಗೋಡೆಗಳ ಮಧ್ಯದಲ್ಲೇ ಮುಗಿದುಹೋಗುತ್ತವೆ. ಮಗಳಿಗೆ ಹೊರೆಗಟ್ಟಲೆ ಪುಸ್ತಕಗಳನ್ನ ಹೊರಿಸಿ ಹೋಂವರ್ಕ್ ಗಳಲ್ಲೇ ಕೂರಿಸುವ ಕೆಲಸ ಸ೦ಪ್ರದಾಯವಾಗಿ ಬೆಳೆದುಹೊಗಿರುವುದು ಇನ್ನೂ ಅಸಹ್ಯ. ಕಾಡು ಪ್ರಾಣಿಗಳು ಹಾಗಿರಲಿ ಕಾಡೇ  ಅಪರಿಚಿತವಾಗಿರುವ  ಆ ಮಗುವಿನ ತೀರ ಸು೦ದರವಾದ  ಬಾಲ್ಯ ಸ್ವಾರಸ್ಯ ಕುತೂಹಲಗಳೇ ಇರದ ಒ೦ದು ಸಹಜ ರುಟೀನ್ ಬದುಕಾಗಿಹೊಗಿರುವುದು ಬೇಸರದ ಸ೦ಗತಿ. ಆ ಮಗುವಿನ ತಾಯಿಯ ಮನಸು  ಮಗಳ ಪುಟ್ಟ ಪ್ರಶ್ನೆಗೂ ಉತ್ತರಿಸುವ ಅವಧಾನವಿರದ ಒತ್ತಡದ ದಿನಚರಿಯಲ್ಲಿಯೇ ಮುಳುಗಿತ್ತು. ಅವಳ  ಅವ್ಯಕ್ತ ಅಸಹನೆಯ ಭಾವನೆಯನ್ನ ನನ್ನ ಕ್ಯಾಮರ ಭಾವಚಿತ್ರವಾಗಿಸುವುದರಲ್ಲಿ  ಸೋತಿತ್ತು. ಆದರೆ ಆ ಮಗು ಮಾತ್ರ ಕಾಡೆ೦ಬುದರ ಬಗ್ಗೆ ಕಡೆಗೂ ಉತ್ತರ ಸಿಗದ ಪ್ರಶ್ನೆಯನ್ನೇ ಹೊತ್ತು ರೈಲು ಇಳಿದಿತ್ತು.

                                       ---KARTIK MOONI

Thursday, 29 December 2011

ಈ ಬ್ಲಾಗ್ ಕೇವಲ ಭಾವಚಿತ್ರಗಳಿಗಾಗಿ. ನನ್ನ ಕೈ ಗೆ ಕ್ಯಾಮರ ಬಂದಮೇಲೆ ಪೂರ್ತಿ ಜಗತ್ತನ್ನ ಸೆರೆಹಿಡಿಯುವ ಹುಚ್ಚು  ಶುರುವಾಗಿತ್ತು. ಆದರೆ ಭಾವಚಿತ್ರಗಳ ಹಿಂದಿನ ಭಾವಗಳು ನನ್ನನ್ನ ಚಕಿತಗೊಳಿಸುತ್ತಿದ್ದವು. ಅದಕ್ಕಿಂತ ಹೆಚ್ಚಾಗಿ ನನ್ನನ್ನ ವಿಚಲಿತಗೊಳಿಸುತ್ತಿದ್ದವು. ಕಂಡಿದ್ದೆಲ್ಲ ಚಿತ್ರಗಳಾಗಲಿಲ್ಲ,  ಸೇರೆಸಿಕ್ಕಿದ್ದೆಲ್ಲ ಚಂದ ಕಾಣಲಿಲ್ಲ, ಕೊನೆಗೆ ಚಂದ ಕಾನಿಸಿದ್ದೆಲ್ಲ ಮನಸಿಗೆ ಹಿಡಿಸಲೇ ಇಲ್ಲ. ಹಾಗಾಗಿ ಇಲ್ಲಿ ಸೆರೆಹಿಡಿದ ಚಿತ್ರಗಳಿಗಿಂತ ಕ್ಯಾಮರ ಹೊಟ್ಟೆ ಸೇರದ ಚಿತ್ರಗಳನ್ನ ಹೊಂದಿರುತ್ತದೆ ಎಂದು ಹೇಳಲು ವಿಷಾದಿಸುತ್ತೇನೆ. ನಿಮ್ಮ ಅಮೂಲ್ಯ ಸಮಯವನ್ನ ಇಲ್ಲಿ ವ್ಯಯಿಸಿರುವುದಕ್ಕಾಗಿ ನಿಜವಾದ ಅಭಿನಂದನೆಗಳು.ಭಾವಚಿತ್ರಗಳಲ್ಲಿ ಏನಾದರು ಭಾವನೆ ಕಂಡು ನಿಮಗೆ ಖುಷಿ ಆದಲ್ಲಿ ನಾನು ಧನ್ಯ.