Monday, 5 November 2012

ಭಂ ಬೋಲೆ..

ನಾನ್ಯಾರೆಂಬ ಒಗಟು...


"ನಿನ್ನ ಪ್ರಶ್ನೆಗಳಿಗೆ ಉತ್ತರವಿದೆ" ಎದುರಿಗೆ ಕುಳಿತಿದ್ದ ಸೂರಿಗೆ ಹೇಳುತ್ತಿದ್ದರು ಜಂಗುಬಾಬ.
"ಜುಕಾವು ನಿನ್ನನ್ನ ಇಲ್ಲಿಗೆ ಕರೆತಂದಿದ್ದಕ್ಕೆ ಬಲವಾದ ಕಾರಣವಿದೆ, ನಿನಗೆ ಈಗ ಒಂದುವಾರದ ಪ್ರಣವಮಂತ್ರದ ಧ್ಯಾನವೂ ಆಗಿದೆ, ಸಹಜವಾಗಿ ನಿನ್ನಲ್ಲಿ ಬದಲಾವಣೆ ನನಗೆ ಕಾಣಿಸುತ್ತಿದೆ. ಈಗ ಕೆಲವಿಚಾರಗಳನ್ನ ನಾನು ಹೇಳಬಹುದು." ಒಮ್ಮೆ ತಡೆದು ಮತ್ತೆ ಮುಂದುವರಿಸಿದರು.
"ಮಾನವ ಬದಲಾಗುತ್ತ ಬಂದಹಾಗೆ ತನ್ನ ನೈಜ ಸ್ವಭಾವವಾದ ಕ್ರೌರ್ಯವನ್ನ ಬದಲಾಯಿಸಿಕೊಳ್ಳಲಿಲ್ಲ. ಕತ್ತಲೆಯ ಪ್ರಪಂಚ ತೆರೆದುಕೊಳ್ಳುತ್ತಿದೆ. ಅದು ಬೆಳೆಯುತ್ತಿದೆ. ಅದು ಸಂಪೂರ್ಣವಾಗಿ ಆವರಿಸಿಕೊಳ್ಳುವ ಮೊದಲು ಅದನ್ನ ತಡೆಯಬೇಕು. ಅದಕ್ಕಾಗಿಯೇ ಜುಕಾವು ನಿನ್ನನ್ನ ಇಲ್ಲಿಗೆ ಕರೆದುಕೊಂಡು ಬಂದಿದ್ದು." ಸೂರಿ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ.
"ನೀನು ಮಾಡಬೇಕಾಗಿರುವ ಕೆಲಸ ಬಹಳವಿದೆ. ಅದನ್ನೆಲ್ಲ ಸೂಕ್ಷ್ಮವಾಗಿ ಸಮಯನಬಂದಾಗ ಹೆಳುತ್ತೇನೆ."
ಸೂರಿ ಮಧ್ಯದಲ್ಲಿ ಮಾತನಾಡಿದ" ಸರಿ ನನ್ನನ್ನು ಆಯ್ಕೆ ಮಾಡಿಕೊಂಡಿದ್ದೇಕೆ? ನನ್ನಲ್ಲಿ ಏನು ಕಂಡು ಹೀಗೆ ಕರೆದುಕೊಂಡು ಬಂದಿದ್ದೀರಿ?" ಎಂದ.
"ನಾನು ಏನೆಲ್ಲ ಹೇಳಿದರೂ ನೀನು ಯಾರೆಂಬುದನ್ನ ಮಾತ್ರ ಹೇಳಲಾರೆ. ಅದಕ್ಕೆ ನನಗೆ ಪರವಾನಿಗೆಯೂ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅದನ್ನ ನೀನೇ ಕಂಡುಕೊಳ್ಳಬೇಕು. ಅದೇ ನಿನ್ನ ವಿಧಿ." ಒಗಟನ್ನ ಬಿಡಿಸದೆ ಮರೆಮಾಚಿದರು ಜಂಗುಬಾಬ.
"ಈ ಗೊಂದಲವೇ ನನ್ನನ್ನ ತೀವ್ರವಾಗಿ ಕಾಡಿದೆ. ಜುಕಾವುವನ್ನು ನಾನು ಮೊದಲು ಕಂಡಾಗಲೇ ನನಗೆ ವಿಚಿತ್ರವಾದ ಅನುಭವಗಳು. ಅವರ ಮಾತನ್ನು ಕೇಳಿದ ಮೇಲೆಯತೂ ನಾನು ವಿಚಿತ್ರವಾದ ಭಾವ ತಳಮಳವನ್ನ ಅನುಭವಿಸಿದ್ದೇನೆ. ಕಡೆಗೆ ನಾನು ನನ್ನನ್ನೇ ಮರೆತುಹೋಗಿದ್ದೇನೆ." ಮೊದಲ ಬಾರಿಗೆ ತನ್ನ ಭಾವನೆಯನ್ನ ಹಂಚಿಕೊಂಡ ಸೂರಿ.
"ನಿನ್ನನ್ನ ನೀನು ಮರೆತದ್ದು, ನಿಜವಾದ ನಿನ್ನನ್ನ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ಹುಟ್ಟು ಯಾವುದಕ್ಕಾಗಿದೆ ಎಂಬುದನ್ನ ನಾವು ಮೊದಲು ಪತ್ತೆ ಹಚ್ಚಬೇಕು. ಅದೇ ನಮ್ಮ ಗುರಿಯಾಗಿರಬೇಕು." ಎಂದರು ಜಂಗುಬಾಬ.
"ಜುಕಾವು ಕೂಡಾ ಇದನ್ನೇ ಹೇಳಿದ್ದಾರೆ."
"ಅದೇ ಇಲ್ಲಿಯ ಅಲಿಖಿತ ನಿಯಮ. ಇದು ನೀನು ಇಷ್ಟುದಿನ ನೋಡಿರುವ ಜಗತ್ತಲ್ಲ. ಇಲ್ಲಿಯ ನಿಯಮಗಳೇ ಬೇರೆ. ಇಲ್ಲಿಯ ಸಹಜತೆಗಳೇ ಬೇರೆ. ಮೊದಲು ನೀನು ಭಾವನೆಯನ್ನ ಬಿಡಬೇಕು, ಬಾಂಧವ್ಯಗಳನ್ನ ಬಿಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಬದುಕನ್ನ ಬಿಡಬೇಕು. ಶ್ರಮ, ಸೌಕರ್ಯ,ಸುಖ ಎಂಬ ಮೂರನ್ನ ನೀನು ತಿಳಿಯಬೇಕು. ಜ್ನಾನವೇ ಜಗತ್ತು, ಬೆಳಕೊಂದೇ ಸತ್ಯ. ಇಲ್ಲಿ ನಿನಗಾಗುತ್ತಿರುವುದೆಲ್ಲ ಭ್ರಮೆ. ಕಡೆಗೆ ನೀನೇ ಒಂದು ಭ್ರಮೆ. ಎಲ್ಲವೂ ಕೇವಲ ಒಂದು ಚೆತನಕ್ಕಾಗುತ್ತಿರುವ ಭ್ರಮೆ ಎಂಬುದು ಪರಮ ಸತ್ಯ ಎಂಬುದು ತಿಳಿದಿರಲಿ. ಇದು ನಿನಗೆ ಸುಲಭವಾಗಿ ತಿಳಿಯುವುದಿಲ್ಲ. ಅದು ತಿಳಿದ ದಿನವೇ ನಿನಗೆ, ನೀನು ಯಾರು ಎಂಬುದು ತಿಳಿಯುತ್ತದೆ. ಅದನ್ನ ಸಾಧ್ಯವಾದಷ್ಟು ಬೇಗ ಸಾಧಿಸು." ಜಂಗುಬಾಬ ಸೂರಿಯ ಬದುಕಿನ ಸತ್ಯವನ್ನ ತೆರೆದಿಟ್ಟರು.
ಒಂದುವಾರ ಅವಿಶ್ರಾಂತವಾಗಿ ನಡೆದ ಪ್ರಣವ ಮಂತ್ರದ ಸಹಾಯದಿಂದ ಸೂರಿಗೆ ಜಂಗುಬಾಬಾರ ಮಾತೆಲ್ಲ ಅರ್ಥವಾದಂತಾಯ್ತು.

ಸಮಯ ಸಿಕ್ಕಾಗೆಲ್ಲ ಜಂಗುಬಾಬ ಸೂರಿಗೆ ಉಪದೇಶ ನೀಡುತ್ತಿದ್ದರು. ಸೂರಿ ಕೇವಲ ಹದಿನೈದು ವರ್ಷದ ಹುಡುಗನಾಗಿದ್ದರೂ, ಸೂಕ್ಷ್ಮಗಳನ್ನ ಬಹಳಬೇಗ ಗ್ರಹಿಸುತ್ತಿದ್ದ. ಸೂರಿಗೆ ತಾನು ಹುಟ್ತಿರುವುದೇ ಹೀಗೊಂದು ಬದಲಾವಣೆಯ ಸಲುವಾಗಿ ಎಂದು ತಿಳಿದಿರಲಿಲ್ಲ.
ಕುಠೀರದ ವಾತವರಣಕ್ಕೆ ಸೂರಿ ಬೇಗ ಹೊಂದಿಕೊಂಡಿದ್ದ. ತಪಸ್ಸನ್ನ ಮನಸಾರೆ ಸ್ವೀಕರಿಸಿದವನಂತೆ ಧ್ಯಾನಸ್ಥನಾಗುತ್ತಿದ್ದ. ಹಾಗೆ ಧ್ಯಾನಕ್ಕೆ ಹೋದಾಗಲೆಲ್ಲ ಅವನು ಪ್ರಪಂಚದ ಕೊಂಡಿಯನ್ನ ಕಳಚಿಕೊಂಡವನಂತೆ ಶವಸ್ಥಿತಿಗೆ ತಲುಪಿಬಿಡುತ್ತಿದ್ದ. ಅಂತಹದೊಂದು ತಲ್ಲೀನತೆಯನ್ನ ಅಷ್ಟು ಚಿಕ್ಕವಯಸ್ಸಿನಲ್ಲಿಯೇ ಮೈಗೂಡಿಸಿಕೊಂಡಿದ್ದನ್ನ ಕಂಡ ಜಂಗುಬಾಬಾರಿಗೆ ಅವನನ್ನ ಕರೆತಂದ ಊರ್ಧ್ವಗುರು ಜುಕಾವುರಮೇಲೆ ಮತ್ತಷ್ಟು ಗೌರವ ಬಂದಿತ್ತು.
ಸೂರಿಗೆ ರಾತ್ರಿಯೆಲ್ಲ ನಿದ್ದೆ ಬರುತ್ತಿರಲಿಲ್ಲ. ಸದಾ ಒಂಡೆ ಕನಸು ಬೀಳುತ್ತಿತ್ತು. ಆ ಕನಸಿನಲ್ಲಿ ಯಾವಾಗಲೂ ಒಂದು ಚಹರೆಯನ್ನ ಕಾಣುತ್ತಿದ್ದ. ಆಚಹರೆ ಪಕ್ಕದಲ್ಲಿ ಒಬ್ಬ ಮಹಾತಪಸ್ವಿ ಇರುತ್ತಿದ್ದ.ನೋಡಲೂ ಭಯವಾಗುವಷ್ಟು ಭೀಕರತೆ ಅವನಲ್ಲಿತ್ತು. ಆದರೆ ಆ ತಪಸ್ವಿಗಿಂತ ಅವನ ಪಕ್ಕದಲ್ಲಿಯ ಆ ಚಹರೆಯೇ ಸೂರಿಯನ್ನ ಕೆಣಕುತ್ತಿದ್ದುದು. ಆ ಚಹರೆ ಒಬ್ಬಳು ಹುಡುಗಿಯದು. ಅವನಲ್ಲಿ, ಮೋಹವಾಗಲೀ ಕಾಮವಾಗಲೀ ಆಕರ್ಷಣೆಯಾಗಲೀ ಹುಟ್ಟುತ್ತಿರಲಿಲ್ಲ. ಆದರೆ ಆ ಚಹರೆ ತನ್ನ ಬದುಕಿನಲ್ಲಿ ತೀರಾ ಹತ್ತಿರದ ಸಂಬಂಧವನ್ನ ಹೊಂದಲಿರುವಂತೆ ಅವನಿಗೆ ಭಾಸವಾಗುತ್ತಿತ್ತು. ಅವನ ಕನಸಿಗೆ ಸ್ಪಷ್ಟತೆಯಿರಲಿಲ್ಲ. ಆದರೆ ಅದು ಪ್ರತಿದಿನ ಅವನನ್ನ ಕಾಡುತ್ತಿತ್ತು. ಪ್ರತಿದಿನವೂ ಒಂದೇರೀತಿಯಾಗಿ ಆ ಕನಸು ಬೀಳುತ್ತಿತ್ತು. 

ಆದರೆ ಆ ಚಹರೆ ಸುಮೇರಿಯದೆಂಬ ಕಲ್ಪನೆ ಮಾತ್ರ ಅವನಿಗಿರಲಿಲ್ಲ.


No comments:

Post a Comment