Wednesday, 10 October 2012

ಭಂ ಬೋಲೆ ೫

ಭಿನ್ನವಶೀಕರಣ....ಭಿನ್ನವಶೀಕರಣಕ್ಕೆ ಮುದ್ವ ಮುಂದಾಗಿದ್ದ. ಅವನ ಆಣತಿಯಂತೆ, ನಾಲ್ಕು ಅಡಿಯ ಹೋಮಕುಂಡವನ್ನ ಸ್ಮಶಾನದ ಮುಂಬಾಗಿಲಲ್ಲಿ ಬೆಂಕಿ ಕೊಳ್ಳಿಯ ಬೆಳಕಲ್ಲಿ ತಯಾರಿಸಲಾಗಿತ್ತು. ಮುದ್ವನ ಹೊರತಾಗಿ ಅಲ್ಲಿ ಅವನ ನಾಲ್ಕು ಸಹಚರರು ಮಾತ್ರ ಇದ್ದಿದ್ದು. ಮತ್ತಾರೂ ಅಲ್ಲಿಗೆ ಬಾರದಂತೆ ದಿಗ್ಬಂಧನವನ್ನೂ ಹೇರಲಾಗಿತ್ತು. ಹಲಸಿನೆಲೆ, ತುಪ್ಪ, ದರ್ಬೆ, ಕುಂಕುಮದ ನೀರು, ಎಲುಬಿನ ತುಂಡುಗಳನ್ನ ಕುಂಡದ ಎಡಗಡೆಯಲ್ಲಿ ಸಾಲಾಗಿ ಜೋಡಿಸಲಾಗಿತ್ತು. ಕುಂಡದ ಎದುರಾಗಿ, ಮುದ್ವ ಪದ್ಮಾಸನದಲ್ಲಿ ಕಣ್ಮುಚ್ಚಿ ಕುಳಿತಿದ್ದವ ಕಣ್ನು ತೆರೆಯುತ್ತಿದ್ದಂತೆ ಕುಂಡದಲ್ಲಿ ಅಗ್ನಿ ಜ್ವಲಿಸಿತು.  ಸಹಚರರ ಮುಖದಲ್ಲಿ ಮಂದಹಾಸ. ಮೂಲಮಂತ್ರಗಳನ್ನ, ವಶೀಕರಣ ಛಂದಸ್ಸನ್ನ ಸಾದ್ಯಂತವಾಗಿ ಶುರುಮಾಡಿದ. ಬಣ್ಣದ ಪುಡಿಯಲ್ಲಿ ಮಂಡಲವನ್ನ ಚಿತ್ರಿಸಲಾಗಿತ್ತು. ಅದನ್ನ ಅಷ್ಟಚೌಕವನ್ನಾಗಿ ಬಿಡಿಸಿ, ಅದರ ಮಧ್ಯದಲ್ಲಿ, ವ್ರತ್ತವನ್ನ ರಚಿಸಲಾಗಿತ್ತು. ಆ ವ್ರತ್ತದ ಕೇಂದ್ರದಲ್ಲಿ ಗೋಲಿಯೊಂದನ್ನ ಚಲಿಸದಂತೆ ಇಡಲಾಗಿತ್ತು. ಮುದ್ವನ ಮಂತ್ರ ತಾರಕಕ್ಕೆ ಸಾಗುತ್ತಿದ್ದಂತೆ, ಗೊಲಿ ಅದುರಲು ಶುರುವಾಯ್ತು. ಸಹಚರರೆಲ್ಲ ಗೋಲಿಯನ್ನ ಬಿಟ್ಟಕಣ್ಣು ಬಿಡದಂತೆ ನೋಡುತ್ತಿದ್ದರೆ, ಮುದ್ವ ಮಾತ್ರ ಸಾವಿರಾರುಮೈಲಿ ದೂರದ ದಕ್ಷಿಣಭಾರತದಲ್ಲಿಯ ಹಳ್ಲಿಯೊಂದರ ಪುಟ್ಟಮನೆಯಲ್ಲಿ, ದಾವಣಿಯನ್ನೇ ಚಾದರವನ್ನಾಗಿಸಿ ಮಲಗಿದ್ದ ಹದಿನೈದರ ಕನ್ನೆಯನ್ನೇ ನೋಡುತ್ತಿದ್ದ. ಕುಳಿತಲ್ಲಿಂದಲೇ ಅವನು ವಶೀಕರಣದ ಪ್ರಯೋಗ ಮಾಡಿದ್ದೇ ಅವಳಮೇಲೆ. ಗೋಲಿ ಉರುಳಿ ನಾಲ್ಕು ಗೆರೆಯಲ್ಲಿ ಚಿತ್ರಿಸಿದ ವ್ರತ್ತದ ಮೊದಲ ಗೆರೆಯನ್ನ ದಾಟಿತು. ಮಲಗಿದ್ದ ಕನ್ನೆ ಕಣ್ನುತೆರೆದಿದ್ದಳು. ಮುದ್ವನಲ್ಲಿಯೂ ಮಂದಹಾಸ ಜಿನುಗಿತು. ಮಂತ್ರ ಮುಂದುವರೆದಿತ್ತು. ಅವಳ ಕಣ್ಣು ನೀಲಿ ಬಣ್ಣಕ್ಕೆ ಬದಲಾಗುತ್ತಿತ್ತು. ಗೋಲಿ ಮತ್ತೆಲ್ಲೊ ಸಾಗಲು ಹಿಂದುಮುಂದು ಚಲಿಸುತ್ತಿತ್ತು. ಕುಂಕುಮದ ನೀರನ್ನ ಮಂಡಲದಮೆಲೆ ಸೋಕಿಸಿ, ಎಲುಬಿನ ತುಂಡನ್ನ ಗೋಲಿಗೆ ತಾಕಿಸಿ, ಹಲಸಿನೆಲೆಯಲ್ಲಿ ತುಪ್ಪವನ್ನ ಹವಿಸ್ಸನ್ನಾಗಿ ಕುಂಡಕ್ಕೆ ಬಡಿಸಿದ ಮುದ್ವ. ಕನ್ನೆ ಎಚ್ಚರವಿದ್ದರೂ ತನ್ನ ಕೈಕಾಲುಗಳನ್ನ ಶರೀರವನ್ನ ಚಲಿಸದಂತಾದಳು. ಕಾಲಿನ ಎಲ್ಲ ಬೆರಳುಗಳು ಸೆಟೆದುಕೊಂಡವು. ಹವಿಸ್ಸು ಒಂದೊಂದು ಮಂತ್ರದ ತುದಿಯಲ್ಲಿಯೂ ಅಗ್ನಿಯನ್ನ ಸೇರುತ್ತಿತ್ತು. ಪದೇ ಪದೇ ಎಲುಬಿನತುಂಡು ಗೋಲಿಯನ್ನ ತಾಕುತ್ತಿತ್ತು. ಕನ್ನೆಯ ಶರೀರ ಇದ್ದಕ್ಕಿದ್ದಂತೆಯೆ ಸಡಿಲವಾಗಿಹೋಯ್ತು. ಗೋಲಿ ಎಡಬದಿಯ ಚೌಕದ ಮೂಲೆಗೆ ಬಂದು ನಿಂತಿತು. ಕನ್ನೆ ಹಾಸಿಗೆಯಿಂದ ಎದ್ದು ಕನ್ನಡಿಯ ಮುಂದೆಹೋಗಿ ನಿಂತುಕೊಂಡಳು. ತನ್ನ ಕೈಗಳೆರಡನ್ನೂ ಒಟ್ಟುಸೇರಿಸಿ ಬಿಗಿಯಾಗಿ ಹಿಡಿದುಕೊಂಡಳು. ಮುದ್ವ ಛಂದಸ್ಸನ್ನ ಬದಲಿಸಿ ತನ್ನ ಸಹಚರರಲ್ಲಿಯೇ ಒಬ್ಬನನ್ನ ಕರೆದು ಅವನನ್ನ ಪೂರ್ತಿಯಾಗಿ ದರ್ಬೆಯಲ್ಲಿ ತಲೆಯಿಂದ ಪಾದದವರೆಗೆ ಮುಟ್ಟಿದ. ದೂರದಲ್ಲಿದ್ದ ಕನ್ನೆ ಜೀವಛ್ಛವವಾದವಳಂತೆ ಇದ್ದ ಸ್ಥಿತಿಯಲ್ಲಿಯೇ ಕಲ್ಲಿನಂತೆ ನಿಂತುಬಿಟ್ಟಳು. ಸಹಚರನ ಚರ್ಯೆ ಇದ್ದಕ್ಕಿದ್ದಂತೆಯೇ ಬದಲಾಗಿಹೋಯ್ತು. ಸಹಚರ ಶರೀರದ ರಚನೆಯ ಹೊರತಾಗಿ ಉಳಿದೆಲ್ಲವೂ ಸಾವಿರಮೈಲಿ ದೂರದ ಕನ್ನೆಯಾಗಿದ್ದ. ಕನ್ನೆ ಕಲ್ಲಿನಂತಾಗಿದ್ದಳು. ಮುದ್ವ ಗೋಲಿಯನ್ನ ನೋಡುವ ಹೊತ್ತಿಗೆ ಗೋಲಿ ಮೊದಲಿನಂತೆ ವ್ರತ್ತದ ಮಧ್ಯಭಾಗಕ್ಕೆ ಉರುಳಿಬಂದು ನಿಂತಿತ್ತು. ಹೋಮದಕುಂಡಕ್ಕೆ ರಾಳವನ್ನ ಮುಷ್ಟಿಯಲ್ಲಿ ಎರಚಿದ. ಅಗ್ನಿ ಇಡೀ ಸ್ಮಶಾನವನ್ನೇ ಆವರಿಸುವಂತೆ ಭುಗ್ಗೆಂದು ಮುಗಿಲೆತ್ತರಕ್ಕೆ ಚಿಮ್ಮಿ ಮೊದಲಿನಂತಾಯಿತು. 
"ಹೇಳು ನಿನ್ನ ಹೆಸರೇನು?" ಸಹಚರನನ್ನ ಕುರಿತು ಕೇಳಿದ ಮುದ್ವ.
"ಮಾಧವಿ" ಎಂದ ಸಹಚರ. ಬಾಕಿ ಸಹಚರರಲ್ಲಿ ಕುತೂಹಲ ಇಮ್ಮಡಿಸಿತು. ಮುದ್ವನ ಶಕ್ತಿಯನ್ನಕಂಡ ಅವರು ಚಕಿತರಾದರು. ಇದು ನಿಜಕ್ಕೂ ಪವಾಡವೇ ಸರಿ. ಮುದ್ವ ಮಹಾಮಹಿಮನೆಂಬ ಭಾವಕ್ಕೆ ಅವರೆಲ್ಲ ಬಂದಿದ್ದರು
" ಎಲ್ಲಿದ್ದೀಯ" ಮುದ್ವ ಮುಂದುವರೆಸಿದ.
"ಕನ್ನಡಿಯ ಎದುರಲ್ಲಿ"
"ತಿರುಗಿ ಬಂದು ಹಾಸಿಗೆಯಲ್ಲಿ ಕೂರಲು ಸಾಧ್ಯವೊ?"
"ನೀವು ಹೇಳಿದಲ್ಲಿಗೆ ಹೋಗುತ್ತೇನೆ" ಕನ್ನೆಯ ಶಾರೀರ ಸಹಚರನ ಶರೀರದಲ್ಲಿ ಧ್ವನಿಸುತ್ತಿತ್ತು.
"ಓಹೊ, ನಾನಿದ್ದಲ್ಲಿಗೆ ಬರುವೆಯಾ?"
"ದಾರಿ ಹೇಳಿ, ಹೊರಡಲು ಸಿದ್ಧನಿದ್ದೇನೆ."
"ಮನೆಯವರನ್ನೆಲ್ಲ ಬಿಟ್ತು ಇಲ್ಲಿಗೆ ಬರಲು ಸಿದ್ಧವಿದ್ದೀಯ, ನಿನ್ನನ್ನ ಯಾರಾದರೂ ತಡೆದರೆ?" ಮುದ್ವ ದ್ವಂದ್ವವನ್ನ ಮುಂದಿಟ್ಟ.
" ಅಲ್ಲಿಗೆ ಬರುವುದು ಗುರಿ, ನೀವು ಹೇಳಿದ್ದೇ ದಾರಿ, ಮಧ್ಯದಲ್ಲಿಯ ತೊಡಕುಗಳನ್ನ ಲೆಕ್ಕಿಸುವುದಿಲ್ಲ" ನಿರ್ಧಾರಿಸಿದವಳಂತೆ ಹೇಳಿದಳು.
ಮುದ್ವನಿಗೆ ಅಲ್ಲಿಗೆ ಎಲ್ಲವೂ ಅವನ ಎಣಿಕೆಯಂತೆಯೇ ನದೆದಿತ್ತು. 
"ನಿನ್ನನ್ನ ಬೇಕಾದಾಗ ಕರೆಸಿಕೊಳ್ಳುವೆ. ಈಗ ನೀನು ಸ್ವತಂತ್ರಳು. ಹಾಗೆಯೇ ನಿನ್ನ ಸುಪ್ತಮನಸ್ಸಿನಲ್ಲಿ ಒಂದು ವಿಚಾರವಿರಲಿ. ನನ್ನ ಒಪ್ಪಿಗೆಯ ಹೊರತಾಗಿ ನೀನು ಕನ್ಯತ್ವವನ್ನ ಕಳೆದುಕೊಳ್ಳುವ ಹಾಗಿಲ್ಲ. ಹಾಗಾದಲ್ಲಿ ಅದೇ ನಿನ್ನ ಕೊನೆಯ ದಿನವಾಗಿರುತ್ತದೆ" ಎಂದು ಹೇಳುತ್ತ, ಕೊನೆಯ ಹವಿಸ್ಸನ್ನ ಅಗ್ನಿಗರ್ಪಿಸುತ್ತ ಸಹಚರನ ಮೈಮೇಲೆ ಮತ್ತೊಮ್ಮೆ ದರ್ಬೆಯನ್ನ ಸೋಕಿ ಗೋಲಿಯನ್ನ ಮಂಡಲದಿಂದ ಹೊರತೆಗೆದ. ಕನ್ನಡಿಯ ಎದುರಲ್ಲಿ ನಿಂತಿದ್ದ ಕನ್ನೆ ತ್ರಾಣವೇ ತೀರಿಹೋದವಳಂತೆ ಧೊಪ್ಪನೆ ಕೆಳಗೆ ಬಿದ್ದಳು. ಮುದ್ವ ಮುಷ್ಟಿಯನ್ನೊಮ್ಮೆ ಆಗಸಕ್ಕೆತ್ತಿ ಗಟ್ಟಿಯಾಗಿ ಕೂಗಿದ, ಭಂ ಬೋಲೆಯೆಂದು... ಸಹಚರರು ಅವಾನನ್ನ ಅನುಸರಿಸಿದರು.

No comments:

Post a Comment