Thursday 13 September 2012

ಕಡೆಗೆ ಬಯಸಿದ್ದನ್ನೇ ಮಾಡುವ ನಾವು ಸಲಹೆ ಕೇಳುವುದ್ಯಾಕೆ?.......

ಕಡೆಗೆ ಬಯಸಿದ್ದನ್ನೇ ಮಾಡುವ ನಾವು ಸಲಹೆ ಕೇಳುವುದ್ಯಾಕೆ?.......


ಮನೆಗೆ ಹೊರಟಿದ್ದ ನನಗೆ ಎಂದಿನಂತೆ ಕವಲು ಹಾದಿಯೋದು ತೆರೆದುಕೊಂಡಿತು. ಎರಡೂ ಹಾದಿಯು ನನ್ನನ್ನ ಮನೆ ತಲುಪಿಸುತ್ತದೆ. ಆದರೆ ಎಡಬದಿಯ ಹಾದಿ ಅವಳ ಮನೆಯೆದುರೇ ಸಾಗುತ್ತದೆ. ಅವಳು ಒಮ್ಮೊಮ್ಮೆ, ಈ ಸಂಜೆ ಹೊತ್ತಿನಲ್ಲಿ ಅಂಗಳದಲ್ಲಿ ಹೂಗಿಡಗಳಿಗೆ ನೀರೆರೆಯಲು ಹೊರಬರುವುದುಂಟು. ಹಾಗೆ ಸುಳಿಯುವಾಗ ಅವಳನ್ನೊಮ್ಮೆ ನೋಡುವುದೇ ಪರಮಾನಂದ.ಆದರೆ ಬಲಗಡೆಯ ಹಾದಿ ಇನ್ನೊಂದು ಹಾದಿಗಿಂತ ಬೇಗ ಮನೆಗೆ ಸಾಗುತ್ತದೆ. ಹಾಗಾಗಿ ಯಾವ ಹಾದಿಯಲ್ಲಿ ಹೋಗಲೆಂಬ ಗೊಂದಲ ಶುರುವಾಗಿ ನಾಣ್ಯ ಚಿಮ್ಮಿದೆ. ನಾಣ್ಯ ಗಾಳಿಯಲ್ಲಿ ಗಿರ್ರನೆ ತಿರುಗುವಾಗ ನನಗೆ ಸಹಮತವಿದ್ದ ಕಡೆಯಲ್ಲೇ ಸಾಗುವಂತೆ ಅದು ಬೀಳಲಿ ಎಂದು ಮನಸು ಬಯಸಿತ್ತು. ಯಾವ ದಾರಿಯೆಂಬ ಗೋಜು ಬೇಡ, ನಿರ್ಧಾರವೆಂಬ ಜವಾಬ್ದಾರಿ ಬೇಡ ಎಂಬ ಕಾರಣದಿಂದಲೇ ನಾಣ್ಯ ಚಿಮ್ಮಿದರೂ, ತನಗೆ ಬೇಕಾದಂತೆಯೇ ಅದು ಬೀಳಲಿ ಎಂಬ ಭಾವ ಮನಸಿನ ದೌರ್ಬಲ್ಯವನ್ನ ತೋರಿಸಿತು. ತಿರುಗುವಷ್ಟು ತಿರುಗಿ ಯಾವುದೋ ಒಂದು ಮುಖ ಮೇಲಾಗಿ ನಾಣ್ಯ ಕೆಳಗೆ ಬಿತ್ತು. ನಾಣ್ಯದ ಫಲಿತಾಂಶವನ್ನು ನೋಡುವ ಕುತೂಹಲ ಉಳಿದಿರಲಿಲ್ಲ. ಬಿದ್ದ ನಾಣ್ಯವನ್ನ ಅಲ್ಲಿಯೇ ಬಿಟ್ಟು ಯಾವ ಹಾದಿಯಮೇಲೆ ಮೋಹವಿತ್ತೊ ಅದನ್ನೇ ಆಯ್ಕೆಮಾಡಿಕೊಂಡೆ.

             ನಾಣ್ಯ ಕೈಯಿಂದ ಚಿಮ್ಮಿ, ನೆಲಕ್ಕೆ ಬೀಳುವಷ್ಟು ಸಣ್ಣ ಸಮಯದಲ್ಲಿ ಎಂಥ ಬದಲಾವಣೆಯನ್ನ ಕಂಡೆ. ಆ ಕವಲು ದಾರಿ ಬರಿಯ ಎರಡು ಹಾದಿಯಾಗಿರಲಿಲ್ಲ, ನನ್ನಪಾಲಿಗದು ಬುದ್ಧನ ಬೋಧಿವೃಕ್ಷವಾಗಿಹೋಯ್ತು. ನನ್ನದೇ ಮನಸಿನ ಹುಣ್ಣು ಕಣ್ಣೆದುರೇ ಕಾಣಿಸಿತು. ಾಅಯ್ಕೆಮಾಡಿಕೊಂಡ ಹಾದಿಯಲ್ಲಿ ಬರುವಾಗ ಕಲಿತ ಪಾಠದ ತಿರುಳನ್ನೇ ಮೆಲುಕುತ್ತ ಬಂದೆ. ಹೆಗ್ಡುಲಾ ಬಿದ್ದರೆ ಬಲಗಡೆಯ ಹಾದಿ ಟೇಯ್ಲ್ ಬಿದ್ದರೆ ಎಡಗಡೆಯ ಹಾದಿ ಎಂದು ಊಹಿಸಿದ್ದೆ. ಮನಸ್ಸಿನಲ್ಲಿ ಎಡಗಡೆಯ ಹಾದಿಯಬಗ್ಗೆ ಹೆಚ್ಚು ಒಲವಿತ್ತು. ಯಾಕೆಂದರೆ ಒಲವ್ ಅದೇ ಹಾದಿಯಲಿ ಶುರುವಾಗುವ ಸಂಭವವಿತ್ತು. ಅವಳು ನನ್ನ ಎಣಿಕೆಯಂತೆ ಡೇರೆ ಹೂಗಳನ್ನ ಮೀಟುತ್ತ ನೀರೆರೆಯುತ್ತ ಓಡಾಡಿಕೊಂಡಿದ್ದಳು. ಅವಳು ಕಾಣುವಷ್ಟು ಹೊತ್ತೂ ನನ್ನ ಕಣ್ಣು ದಾರಿಯನ್ನ ನೋಡಲಿಲ್ಲ. ಇನ್ನೇನು ನಾನು ಮರೆಯಾದೆ ಅನ್ನುವಾಗ ಅವಳು ನನ್ನನ್ನ ಗುರುತಿಸಿದಳು ಅನಿಸುತ್ತದೆ. ಯಾಕಂದರೆ ಸ್ವಲ್ಪ ದೂರವೇ ಅನಿಸಿದರೂ ಅವಳು ಸೌಹಾರ್ದವಾಗಿ ನಕ್ಕಿದ್ದು ನನಗೆ ಸ್ಪಷ್ಟವಾಗಿ ಕಾಣಿಸಿತು. ಅದೇ ನನ್ನಪಾಲಿನ ಗೆಲುವು. ಹುಡುಗಿರ ನಗು ಹುಡುಗರಿಗಲ್ಲದೇ ಇನ್ನಾರಿಗೆ ತಾನೇ ಸರಿಯಾಗಿ ಕಾಣಿಸುತ್ತದೆ ಹೇಳಿ.. ಅವರು ನಗುವುದೇ ನಮಗಾಗಲ್ಲವೇ...

             ಗೆದ್ದ ಹೆಮ್ಮೆಯಲ್ಲಿ ನಾನೂ ನಗುಮುಖದಲ್ಲಿ ಮನೆ ತಲುಪಿದೆ. ನಾನು ಬಂದ ಸ್ವಲ್ಪ ಹೊತ್ತಿನಲ್ಲಿಯೇ ಮನೆಗೆ ಬಂದ ನನ್ನ ತಮ್ಮ ಕವಲು ಹಾದಿಯಲ್ಲಿ 5ರೂ ನಾಣ್ಯ ಸಿಕ್ಕಿತೆಂದು ಹೇಳಿದ. ಮತ್ತೆ ಕುತೂಹಲ ಕೆರಳಿದ್ದರಿಂದ "ನೀನು ನಾಣ್ಯ ಹೆಕ್ಕುವಾಗ ಹೆಡ್ ಬಿದ್ದಿತ್ತೋ, ಟೇಯ್ಲೊ?" ಎಂದು ಕೇಳೀದೆ.ಅವನು ಸ್ವಲ್ಪ ತಡೆದು ನೆನಪಿಸಿಕೊಂಡು ಹೇಳಿದ "ಟೇಯ್ಲ್" ಎಂದು.

No comments:

Post a Comment