Friday 14 September 2012

ಕೈ ಸುಟ್ಟ ಸಿಗರೇಟು....


ಪೂರ್ತಿ ಮುಗಿಯದೇನೇ...


"ಕಾಲೇಜಿನಲ್ಲಿ ಕ್ಲಾಸು ಮುಗಿಯುತ್ತಿತ್ತೊ ಇಲ್ಲವೊ, ಆದರೆ ಮನಸಿಗೆ ಮಾತ್ರ ಕ್ಲಾಸು ಮುಗಿದು ಶಟ್ಟರ ಅಂಗಡಿಯ ಸಿಗರೇಟಿನ ತುದಿಯಲ್ಲಿಯ ಕೆಂಡ, ಕಣ್ಣು ಕುಕ್ಕುತ್ತಿತ್ತು. ಶೋಕಿಗಾಗಿ ತೀಟೆಗಾಗಿ ಶುರುವಾದ ಚಟವಲ್ಲ ಸಿಗರೇಟು. ಅಪ್ಪಟ ಹವ್ಯಾಸವದು ನನಗೆ. ಶಟ್ಟರ ಗೂಡಂಗಡಿಗೆ ಪೇಪರ್ಮೆಂಟ್ ತಿನ್ನಲು ಬರುತ್ತಿದ್ದ ಮಕ್ಕಳಿಗೆಲ್ಲ ನಾನು ಸಿಗರೇಟಿನ ಹೊಗೆಯನ್ನ ಸುರುಳಿ ಸುರುಳಿಯಾಗಿ ಬಿಡುವುದನ್ನ ನೋಡುವುದೇ ರೋಮಾಂಚನಕಾರಿ ವಿಷಯವಾಗಿತ್ತು. ನಾನೂ ಅಷ್ಟೇ, ಅವರ ಕುತೂಹಲವನ್ನ ಮತ್ತಷ್ಟು ಹೆಚ್ಚಿಸಲು,ಹೊಗೆಯನ್ನ ಉಂಗುರಾಕಾರದಲ್ಲಿ ಬಿಡುತ್ತ,ಓಲಂಪಿಕ್ ಚಿನ್ಹೆ ರಚಿಸಲು ಪ್ರಯತ್ನಿಸುತ್ತಿದ್ದೆ. ಆದರೆ ಕೊನೆಯ ಬಳೆಯನ್ನ ಕೂಡಿಸುವುದರೊಳಗಾಗಿ ಮೊದಲ ಬಳೆ ಕರಗಿಹೋಗುತ್ತಿತ್ತು. ಕಡೆವರೆಗೂ ಓಲಂಪಿಕ್ ಚಿನ್ಹೆ ನನಗೊಲಿಯಲೇ ಇಲ್ಲ. ಭಾರತಕ್ಕೆ ಸಿಗದ ಬಂಗಾರದಂತೆ.

              ಹುಡುಗಿ ಸಿಕ್ಕಿದಳು, ನನ್ನನ್ನೇ ಪ್ರೀತಿಸುವುದಾಗಿ ಹಠ ಹಿಡಿದಳು.ಹೇಗೆ ನನಗೆ ಸಿಗರೇಟನ್ನ ಬಿಡಲಾಗಲಿಲ್ಲವೋ ಹಾಗೆಯೇ ಅವಳಿಗೂ ನನ್ನ ನಾನಿದ್ದಂತೆಯೇ ಪ್ರೀತಿಸಲಾಗಲಿಲ್ಲ. ನನ್ನನ್ನ ಬದಲಾಯಿಸುವುದಾಗಿ, ಮೊದಲು ಸಿಗರೇಟನ್ನ ಬಿಡಬೇಕೆಂದು ರಂಪ ಮಾಡಿದಳು. ನಾನೂ ನೋಡುವಷ್ಟು ನೋಡಿ ಹಿಂಸೆಯನ್ನ ತಡೆಯಲಾಗದೆ ಬಿಡುವುದಾಗಿ ತೀರ್ಮಾನಿಸಿದೆ. ಸಿಗರೇಟನ್ನಲ್ಲ, ಅವಳನ್ನ. ಬೆಂಕಿ ಕಡ್ಡಿ ಗೀರುವುದರಿಂದ ಹಿಡಿದು, ಸಿಗರೇಟನ್ನ ಹೊತ್ತಿಸಿ ಮೊದಲ ದಮ್ ಹೀರುವಾಗಿನ ಮಜವೇ ನನ್ನನ್ನ ಪದೇ ಪದೇ ಸಿಗರೇಟಿಗೆ ದಾಸನನ್ನಾಗಿ ಮಾಡಿದ್ದು. ಗೆಳೆಯರ ಬಳಗದಲ್ಲಿ ನನ್ನ ಸಿಗರೇಟಿನ ಚಟದ ಬಗ್ಗೆ ವಿಶೇಷವಾದ ಸ್ಥಾನವಿದೆ. ನಾನು ಎಂದೂ ಇನ್ನೊಬ್ಬರ ಹಣದಲ್ಲಿ ಚಟ ಮಾಡಲಿಲ್ಲ. ಮತ್ತೊಬ್ಬನಿಗೆ ಸಿಗರೇಟ್ ಸೇದೆಂದು ಪೀಡಿಸಲಿಲ್ಲ. ನನ್ನ ಮೋಜು ನನ್ನ ಮಜಗಳಿಗಾಗಿ ಮಾತ್ರ ಸಿಗರೇಟು ನನ್ನ ಆಸಕ್ತಿಯ ವಸ್ತುವಾಗಿತ್ತು.

ಹೊಗೆ ನನ್ನ ಎದೆಯೊಳಗೆ ನುಸುಳುತ್ತಿದ್ದ ಹಾಗೆ ನಾನು, ನನಗೆ ಬೇಕಾದ ನಾನಾಗುತ್ತಿದ್ದೆ. ಆಗ ನನ್ನನ್ನ, ಯಾರು, ಏನೇ ಪ್ರಶ್ನಿಸಿದರೂ, ನನ್ನಿಂದ ಯಾವ ಪ್ರತಿಕ್ರಿಯೆಯೂ ಬರುತ್ತಿರಲಿಲ್ಲ. ಅಸಲಿಗೆ ನಾನು ವಾಸ್ತವದಲ್ಲೇ ಇರುತ್ತಿರಲಿಲ್ಲ. ಎದ ಬಿಗಿಯಾಗಿ ಭಾರವಾಗಿ, ಉನ್ಮತ್ತ ಮನಸು ಲಗಾಮಿಲ್ಲದೆ, ಕಲ್ಪನೆಯಲ್ಲಿ ತೇಲಾಡುವಾಗಲೇ ಎಂದೂ ಬಾರದ ಭಾವಗಳು ನನ್ನನ್ನ ಬಿಗಿದಪ್ಪುತ್ತಿದ್ದವು. ವಿಚಲಿತಗೊಳ್ಳದ ಅನಿರ್ವಚನೀಯ ಭಾವ ಸ್ಪಂದನೆಗಳನ್ನ ನಾನು ಕಂಡಿದ್ದೇ ಧೂಮದಲ್ಲಿ ಮುಳುಗಿದಾಗ. ನಾವೇ ಹಾಕಿಕೊಂಡ ಬೇಲಿಗಳು, ಪ್ರತಿಕ್ಷಣ ಅದನ್ನು ಮುರಿದುಹಾಕಲು ನಾವೇ ಪ್ರಯತ್ನಿಸುವುದು, ಅನಂತದವರೆಗೆ ಬೆಳೆಯೊ ಆಕಾಂಕ್ಷೆ ಹೊಂದಿ, ಒಳಗೊಳಗೇ ಅಂತರವನ್ನ ಬೆಳೆಸಿಕೊಳ್ಳುವುದು, ನಮ್ಮಮೇಲೆಯೇ ಅನುಮಾನ, ಅಸಹ್ಯೆ, ಜಿಗುಪ್ಸೆಗಳಿದ್ದರೂ ನಮ್ಮ ಪ್ರತಿ ಸೋಲುಗಳಿಗೆ ಇನ್ನೊಬ್ಬರ ನೆರಳನ್ನ ಗುರುತುಮಾಡುವುದು, ಅನುದಿನ ಸಾಯುವುದು, ಬದುಕಿರುವಂತೆ ಶರೀರವನ್ನ ಚಲಿಸುವುದು,ತಲೆ ಬುಡ ಎರಡೂ ಇಲ್ಲದ, ಸಲ್ಲದ ಹರಟೆಗಳಲ್ಲಿ ಸದಾ ಸುಖವನ್ನ ಕಾಣುವುದು, ನಿನ್ನೆಗಳನ್ನ ನೆನೆಯುತ್ತ, ಇವತ್ತನ್ನು ಕಳೆಯುತ್ತ, ನಾಳೆಯನ್ನ ಅಳೆಯುವುದು, ಮಗ್ಗಿಯೂ ಬಾರದವನು ಬೀಜಗಣಿತವನ್ನ ಬಿಡಿಸಿದಂತೆ, ತನ್ನ ವಿಧಿಯನ್ನ ಶಪಿಸುವುದು, ಉತ್ತರವೇ ಇಲ್ಲದ ಪ್ರಶ್ನೆಗಳನ್ನ ಕೇಳುತ್ತ, ಉತ್ತರಿಸಲಾಗದವರನ್ನ ದಡ್ಡರೆಂದು ತೀರ್ಮಾನಿಸುವುದು, ಹೀಗೆ ಹೇಳಲಾಗದಷ್ಟು, ಹುಳುಕು ಕೊಳಕುಗಳು ನನ್ನನ್ನ ತೀವ್ರವಾಗಿ, ಬಲವಂತವಾಗಿ ಕಾಡಿದ್ದೇ ಸಿಗರೇಟಿನ ಅಮಲಲ್ಲಿ ತೇಲಿದಾಗ...

ಕೆಲವು ಬೇಡದ, ಬೇಕೇಬೇಕಾದ ಸಬಂಧಗಳನ್ನ, ಸ್ನೇಹವನ್ನ, ಸಹನೆಯನ್ನ, ಸಂತೋಷವನ್ನೆಲ್ಲ ಸಿಗರೇಟಿನಿಂದಾಗಿ ಕಳೆದುಕೊಂಡೆ. ಸಿಗರೇಟನ್ನ ಸಿಕ್ಕಿಸುವ ಕೈ ಬೆರಳ ಸಂಧಿ ಬದಲಾಯ್ತೆ ವಿನಹ ನಾನು ಬದಲಾಗಲಿಲ್ಲ. ಬಾಯಲ್ಲಿ ಹೊಗೆ ಬಂದಾಗಲಿಲ್ಲ. ಸಿಗರೇಟನ್ನ ಸೇದುವುದು ನನ್ನತನ ಎಂದು ಭಾವಿಸಿದ್ದ ನನಗೆ, ಸಿಗರೇಟು ಬಿಡುವುದು ಸರಿಯೋ, ಅಥವಾ ಅದನ್ನು ಬಿಟ್ಟು ನನ್ನತನ ಕಳೆದುಕೊಳ್ಳುವುದು ತಪ್ಪೊ ಎಂಬುದು ಬಗೆಹರಿಯದ ಸಮಸ್ಯೆಯಾಗಿ ಕಾಡಿತು. ಕೆಲವು ಇಕ್ಕಟ್ಟಿನಲ್ಲಿ ಆನಂದವಿದೆಯಾದರೂ, ತರಾತುರಿಯ ಅನಿವಾರ್ಯತೆಯಲ್ಲಿ ಯಾವ ಆನಂದವೂ ಇಲ್ಲ. ಕಡೆಗೂ ನನ್ನ ಪಾಲಿಗೆ ಅಂಥದೊಂದು ಅನಿವಾರ್ಯತೆ ಬಂದೇ ಬಿಟ್ಟಿತು.

ಹವ್ಯಾಸವಾಗಿದ್ದ ವಿಷಯ ಚಟವಾಯ್ತು, ಅಧೀನದಲ್ಲಿದ್ದ ಚಟ ಅಧಿಕಾರಿಯಾಯ್ತು, ಕಡೆಗೆ ನನಗೆ ಸಿಗರೇಟು ಬೆಕೆಂದಲ್ಲ, ಸಿಗರೇಟಿಗೆ ನಾನು ಬೆಕೇಬೆಕೆಂಬ ಸ್ಥಿತಿ ಬಂದುಹೋಯ್ತು. ತುಟಿ ಕಪ್ಪಾಯ್ತು, ಸಿಕ್ಕ ಇನ್ನೊಬ್ಬಳು ಗೆಳತಿ ಮುತ್ತನ್ನ ನಿರಾಕರಿಸಿದಳು, ಮನಸು ವಿಚಲಿತವಾಯ್ತು, ಗೆಳೆಯರು ದುರವಿಡಲು ಶುರುಮಾಡಿದರು, ಏನನ್ನಾದರೂ ಬರೆದು, ಬದುಕಿಗೊಂದು ದಾರಿಮಾದಿದ್ದ ಕೈಗಳು ಅದುರಿದವು, ಎದೆಯಲ್ಲಿ ಪ್ರತಿದಿನ ಕನಸುಗಳು ಸತ್ತಂತೆ ಚೀರುತ್ತಿದ್ದವು, ಹಾಗೆಯೇ ಸಾಯುತ್ತಿದ್ದವು, ಪ್ರಶ್ನೆಗಳು ಶುರುವಾದವು, ಕತ್ತಲೆಗಳು ಹೆಚ್ಚಾದವು, ಸಿಗರೇಟನ್ನ ಬರಿಯ ಮೋಜೆಂದು ಭಾವಿಸಿದ್ದ ನನಗೆ ಅದು ಹಾಗಲ್ಲವೆಂಬ ಸತ್ಯ ಅರಿವಾಗಿ ಜ್ನಾನೋದಯವಾಗೊ ಅವಕಾಶ ಮುಗಿದುಹೋಯ್ತು. ಯಾಕೆಂದರೆ ತಿಂಗಳುಗಟ್ಟಲೆ, ಆಸ್ಪತ್ರೆಯಲ್ಲಿ ಮಲಗಿದಮೇಲೆ,ಡಾಕ್ಟರ್ ಹೇಳಿದರು" ಈಗ ನಿನ್ನ ಎದೆಯಲ್ಲಿ ಮೂರು ರಂಧ್ರಗಳಾಗಿವೆ, ಅವುಗಳನ್ನ ಮುಚ್ಚುವುದು, ಅಥವಾ ಸರಿ ಮಾಡುವುದು ಆಗದ ಮಾತು, ಹೇಳಲೇಬೇಕಾದ ಅನಿವಾರ್ಯತೆಯಲ್ಲಿ ನಾನಿರುವುದರಿಂದ ಹೇಳುತ್ತಿದ್ದೇನೆ, ನಿನ್ನಲ್ಲಿ ಹೆಚ್ಚು ದಿನಗಳು ಉಳಿದಿಲ್ಲ"ಎಂದು. ಡಾಕ್ಟರ್ ಹೇಳಿದ ಮೂರು ರಂಧ್ರಗಳೆಂಬ ವಾಕ್ಯ ಮತ್ತೆ ಮನಸಿಗೆ ಪ್ರತಿಧ್ವನಿಸಿದಾಗ ನಾನು ಎದೆಯನ್ನ ಮುಟ್ಟಿಕೊಳ್ಳಲಿಲ್ಲ. ಬದಲಾಗಿ ಸಿಗರೇಟು ಹಿಡಿಯುತ್ತಿದ್ದ ಬೆರಳುಗಳನ್ನ ನೋಡಿದೆ. ಎಂದೂ ಕಾಣದ ಸುಟ್ಟ ಕಲೆಗಳು ಆ ಬೆರಳ ಸಂಧಿಗಳಲ್ಲಿ ಅಂದು ಕಾಣಿಸಿದಂತೆ ಭಾಸವಾಯ್ತು. ಆಗಲೇ ಖಾತ್ರಿಯಾಗಿದ್ದು ಸಿಗರೇಟು ಕೈ ಸುಟ್ಟಿದೆಯೆಂದು".
ಇದು ತನ್ನ ಕೊನೆಯ ಬರಹವೆಂದು ಸಾಯುವ ಹಾಸಿಗೆಯಮೇಲೇ ಹಾಳೆಯನ್ನ ತರಿಸಿಕೊಂಡು, ಹೀಗೆ ಬರೆದ ನನ್ನ ಸ್ನೇಹಿತನ ಕೈಯಲ್ಲಿ ಸಾಯುವಾಗಲೂ ಸಿಗರೇಟಿತ್ತು. ಸುಟ್ಟ ಕಲೆಗಳೂ ಸಹ....

2 comments:

  1. Nimma ella lekhanagalalliyu, kalpanegalige bhavanegalannu beresi baravanigeyalli adhbhutavagi roopisiddira sir...

    ReplyDelete
  2. Kalpanegalige bhavanegalannu beresi baravanigeyalli adhbhutavagi roopisiddira sir...

    ReplyDelete