Sunday 7 October 2012

ಭಂ ಬೋಲೆ ೪

ಪ್ರಣವಮಂತ್ರಂ


ಅವರಿಗೆ ಕತ್ತಲೆಯೇ ಆಗಬೇಕೆಂದೇನಿಲ್ಲ. ಅವರ ಆಚರವಿಚಾರಗಳಿಗೆ ಧಕ್ಕೆತರದಂತೆ ಅವರ ಕರ್ಮಾನುಷ್ಠಾನದ ಜಾಗದಲ್ಲಿ ನಿರ್ಜನ ಪರಿಸ್ಥಿತಿಯಿದ್ದರೆ ಸಾಕು. ಮುದ್ವನ ಸ್ನಾನ ಆಗತಾನೆ ಮುಗಿದಿತ್ತು. ಸ್ನಾನವೆಂದರೆ ನೀರಿನಲ್ಲಿ ಮೂರುಬಾರಿ ಮುಳುಗಿ ಏಳುವುದಷ್ಟೆ. ಮುಳುಗೆದ್ದ ನಂತರದಲ್ಲಿ, ಮೈತುಂಬ ಸಿಗುವಷ್ಟು ಭಸ್ಮವನ್ನ ಮೆತ್ತಿಕೊಳ್ಳುವುದು. ಮನಸಿಗೆ ಕಂಡಕಡೆಗಳಲ್ಲಿ ಜೀವವೇ ಇಲ್ಲವೆಂಬಷ್ಟು ನಿಶ್ಚಲನಾಗಿ ಕುಳಿತುಬಿಡುವುದು. ಮುದ್ವ ಧ್ಯಾನಕ್ಕೆ ಕೂರುವಾಗೆಲ್ಲ ಒಂದು ಕೈ ಮೇಲೆತ್ತಿ ಮುಷ್ಟಿ ಕಟ್ಟಿಯೇ ಕೂರುವುದು. ಅದು ಅವನ ಧ್ಯಾನಾಸನ. ಒಂದೂ ಮರವಿಲ್ಲದ ಬೋಳು ಬೆಟ್ಟದಮೇಲೆ ಮುದ್ವ ಹಾಗೆಯೇ ಕುಳಿತಿದ್ದ. ಬೆಟ್ಟದ  ಬುಡದಲ್ಲಿ ಸಣ್ಣ ತೊರೆಯೊಂದು ರಭಸದಲ್ಲಿ ಹರಿಯುತ್ತದೆ. ಮುದ್ವ ತೊರೆಯಲ್ಲಿ ಸ್ವಚ್ಚಂದವಾಗಿ ಈಜಿ ಹಾಯಗಿದ್ದ ಮೀನುಗಳನ್ನ ಕುಳಿತಲ್ಲಿಯೇ ಕೊಲ್ಲುತ್ತಿದ್ದ. ಅದು ಅವನಿಗೆ ಸಿದ್ಧಿಸಿದ ವಿದ್ಯೆ... ಮುದ್ವ ಸ್ವಭಾವದಲ್ಲೇ ಕ್ರೂರಿ. ಹಸಿವಿಗಾಗಿ ಕೊಲ್ಲುವುದು ನೈಸರ್ಗಿಕ ನಿಯಮ. ಮುದ್ವ ಹಾಗಲ್ಲ, ಅವನ ಮಂತ್ರದ ನೆನಪಿಗಾಗಿ, ತನ್ನ ವಿಕಾರ ವಿದ್ಯೆ ಸಿದ್ಧಿಗಾಗಿ ಹಾಗೆ ಕೊಲ್ಲುತ್ತಿದ್ದ. ಅವನ ಕಣ್ಣೆದುರು ಸಿಂಹವೇ ಬಂದರೂ ಅದನ್ನ ಬಲು ಸೀದ ಸಾದ ಕೊಂದುಮುಗಿಸುವಷ್ಟು ವಾಮ ವಿದ್ಯೆ ಅವನಿಗೆ ಕರಗತವಾಗಿತ್ತು. ವಾಮ ವಿದ್ಯೆಯಲ್ಲಿ ಪ್ರಚಲಿತ ಅಘೋರಿಗಳಲ್ಲೇ ಮುದ್ವ ಪ್ರಖಾಂಡ ಪಂಡಿತ. ಹಾಗೆ ಕೊಂದ ಮೀನುಗಳನ್ನ ಮುದ್ವ ತಿನ್ನುತ್ತಿರಲಿಲ್ಲ. ಅದು ಅವನ ಚೇಷ್ಟೆ ಅಷ್ಟೆ. ಧ್ಯಾನ ಮುಗಿಯುವುದರೊಳಗಾಗಿ ಅಸಂಖ್ಹ್ಯ ಮೀನುಗಳು ಸತ್ತಿರುತ್ತಿದ್ದವು.
..........................................
ವ್ರತ್ತಾಕಾರದಲ್ಲಿ ಸುತ್ತಲೂ ಹರಡಿದ ಬೆಟ್ಟಗಳ ಮಧ್ಯದಲ್ಲಿ ವಿಶಾಲವಾದ ಬಯಲು. ಅಲ್ಲಿ ಕೆಲವು ಕುಠೀರಗಳು. ಒಳಗೆ ಸದಾ ಧ್ಯಾನಸ್ಥರಾಗಿರುವ ವ್ರದ್ಧ ಸನ್ಯಾಸಿಗಳು. ಪ್ರಣವ ಮಂತ್ರದ ಹೊರತಾಗಿ ಅವರ ಆಲೋಚನೆಯಲ್ಲೂ ಇನ್ನೊಂದು ಕಲ್ಪನೆ ಇರಲಿಲ್ಲ. ಎಚ್ಚೆತ್ತರೂ ಸುಪ್ತ ಮನಸಲ್ಲಿ ಪ್ರಣವ ಮಂತ್ರ ಜಪಿಸುತ್ತಲೇ ಇರುವ ನಿಜವಾದ ಸಾಧುಗಳು ಅವರು. ಸೂರಿಯನ್ನ ಹೊತ್ತುಕೊಂಡು ಹೊರಟಿದ್ದ ವ್ರದ್ಧ ಕುದುರೆಸವಾರನ ಕುದುರೆ ಬಯಲಿನಲ್ಲಿಯ ಮಧ್ಯದ ಕುಠೀರದ ಮುಂದೆ ಬಂದು ನಿಂತುಕೊಂಡಿತು. ಆತ ವ್ರದ್ಧ, ಎದೆಯನ್ನ ದಾಟಿದ ಬಿಳಿಯ ಕೂದಲು, ಭುಜವನ್ನೂ ಮೀರಿ ಬೆಳೆದ ಬಿಳಿಯ ಹಿಪ್ಪಿ. ಮೈ ಮೇಲೆ ಯಾವಗಲೂ ಮೊಣಕಾಲಿನವರೆಗೆ ಬರುವ ಒಂದೇ ಒಂದು ಕಪ್ಪು ಕಾಷಾಯ.ಊಹೆಗೂ ನಿಲುಕದ ವೇಗದ ಬಿಳಿಯ ಕುದುರೆ ಅವನ ಆಸ್ತಿ. ಅವನ ತಪಸ್ಸು, ಮತ್ತು ಅವನ ಇತಿಹಾಸವೇ ಅವನ ಗೌರವ. ವ್ರದ್ಧನನ್ನ ವಾಮ ಹಾಗೂ ವಾಮೇತರ ಅಘೋರಿಗಳು ಕರೆಯುತ್ತಿದ್ದುದು, "ಜುಕಾವುಮುನಿ" ಎಂದು. ಜುಕಾವು ಪರಮಶ್ರೇಷ್ಠ ಮುನಿವರ್ಯನೆಂಬುದು ಎಲ್ಲ ಅಘೋರಿಗಳಿಗೆ ತಿಳಿದ ವಿಷಯವೇ.
ಜುಕಾವು ಅತಿಮಾನುಷನಂತೆ ಬರೋಬ್ಬರಿ ಏಳು ಅಡಿಯ ಆಳು. ಜುಕಾವು ಸೂರಿಯನ್ನ ಕುದುರೆಯಿಂದ ಕೆಳಗಿಳಿಸಿ ತಾವೂ ಇಳಿದರು . ಸೂರಿ ಜುಕಾವುಮುನಿಯನ್ನೇ ನೋಡುತ್ತ ನಿಂತುಕೊಂಡ. ತನ್ನೊಂದಿಗೆ ಬಾ ಎಂದು ಸನ್ನೆ ಮಾಡಿ ಜುಕಾವು ಮುಖ್ಯ ಕುಠೀರದ ಒಳನಡೆದರು. ಸೂರಿ ಹಿಂಬಾಲಿಸಿದ. ವಿಶಾಲವಾದ ಕುಠೀರದ ಒಳಾಂಗಣದಲ್ಲಿ, ಹಲವಾರು ವ್ರದ್ಧ ಸನ್ಯಾಸಿಗಳು ಧ್ಯಾನಸ್ಥರಾಗಿದ್ದರು. ಜುಕಾವು ಒಳಬರುತ್ತಿದ್ದಂತೆಯೆ ಧ್ಯಾನದಲ್ಲೇ ಪರಮಗುರುವಿನ ಆಗಮನವನ್ನ ಅರಿತ ಸನ್ಯಾಸಿಗಳೆಲ್ಲ, ಎದ್ದು ನಿಂತರು. ವ್ರದ್ಧ ಸನ್ಯಾಸಿಗಳ ಗುರುವಾಗಿದ್ದ ಜಂಗುಬಾಬಾ ತಾನಿದ್ದಲ್ಲಿಂದಲೆ ಉದ್ದಂದ ನಮಸ್ಕಾರ ಮಾಡಿದ. ಜಂಗುಬಾಬಾನ ಹಣೆ ಜುಕಾವುಮುನಿಯ ಕಾಲ್ಬೆರಳುಗಳನ್ನು ತಾಕುತ್ತಲೇ ಜುಕಾವು ಕಣ್ಮುಚ್ಚಿಕೊಂಡು, ಓಂ ಎಂದರು. ಸಮಸ್ಕರಿಸಿ ಎದ್ದ ಜಂಗುಬಾಬಾ "ಮಹಾಮುನಿ ನಿಮ್ಮ ಆಗಮನವನ್ನೇ ನಿರೀಕ್ಷಿಸುತ್ತಿದ್ದೆವು. ಕತ್ತಲ ಸಾಮ್ರಾಜ್ಯದ ಉದಯ ಆಗಿಹೋಯಿತು. ಸಾಮ್ರಾಜ್ಯಕ್ಕೆ ಮುದ್ವನೀಗ ಅಧಿಪತಿ. ಚರಾಚರಗಳ ರಕ್ಷಣೆ ನಿಮ್ಮಮೇಲಿದೆ. ನಾವು ದಾರಿಕಾಣದಾಗಿದ್ದೇವೆ." ವಿಹ್ವಲನಾಗಿ ಆತಂಕದಲ್ಲಿ ನುಡಿದ.
"ಅರಿತಿದ್ದೆನೆ," ಮತ್ತೇನನ್ನೋ ವಿಚಾರಮಾಡುತ್ತ ಹೇಳಿದರು ಜುಕಾವು. ವಿಚಾರದಿಂದ ಹೊರಬಂದವರಂತೆ " ಯಾವುದೂ ತಿಳಿಯಾಗಿ ಕಾಣುತ್ತಿಲ್ಲ. ನಿಮಗೆ ಕೊಟ್ಟ ಮಾತಿನಂತೆ ಹುಡುಗನನ್ನ ಕರೆತಂದಿದ್ದೇನೆ." ಎಂದು ಸೂರಿಯನ್ನ ಎದುರು ಎಳೆಯುತ್ತ ಎಲ್ಲರಿಗೂ ತೋರಿಸಿದರು ಜುಕಾವು. ಸೂರಿಗೆ ಎಲ್ಲವೂ ಕನಸಿನಂತೆಯೇ ಇತ್ತು. ಜಾಗ, ಅಲ್ಲಿಯ ಮುನಿಗಳು ಅವರ ಮಾತು, ಜುಕಾವು ಎಲ್ಲವೂ ಅವನಿಗೆ ಅಪರಿಚಿತವೇ. ತನ್ನನ್ನೇಕೆ ಕರೆತಂದಿದ್ದು, ಕರೆತರುವುದಾಗಿ ಮಾತುಕೊಟ್ಟಿದ್ದೇಕೆ, ತಾನು ಮಾದುವುದಾದರೂ ಏನು, ಸೂರಿಯ ಮನಸಲ್ಲಿ ಒಂದೇ ಸಮನೆ ನೂರೆಂಟು ಪ್ರಶ್ನೆಗಳು ಶುರುವಾದವು. ಮೂಲೆಯಲ್ಲಿ, ಭಯ ಶುರುವಾದರೂ, ಜುಕಾವುಮುನಿಯ ಸ್ಪರ್ಷದಿಂದ, ತಾನು ಅಭದ್ರನೆಂದು ಸೂರಿಗೆ ಅನಿಸಲಿಲ್ಲ.
ಎಲ್ಲರೂ ಒಮ್ಮೆ ಸೂರಿಯನ್ನೇ ನೋಡಿದರು. "ನಾವು ಧನ್ಯರು, ವಂದನೆಗಳು ಗುರುವರ್ಯ" ಎಂದ ಜಂಗುಬಾಬ. ಉಳಿದ ಸನ್ಯಾಸಿಗಳೂ ಜುಕಾವುಮುನಿಗೆ ನಿಂತಲ್ಲಿಯೇ ಬಾಗಿ ನಮಸ್ಕರಿಸಿದರು.
ಸೂರಿಯನ್ನ ತನ್ನ ಕಡೆಗೆ ತಿರುಗಿಸಿಕೊಂಡ ಜುಕಾವುಮುನಿ " ನಾನು ಅವತ್ತೇ ಹೇಳಿದ ಹಾಗೆ, ನಮ್ಮ ಜನ್ಮ ಯಾವುದಕ್ಕಾಗಿದೆ ಎಂಬುದನ್ನ ಮೊದಲು ಅರಿಯಬೇಕು. ಕಾಲ ನಿನಗೀಗ ಬಂದಿದೆ. ನಿನ್ನ ಹಳೆಯ ಬದುಕೆಲ್ಲವೂ ಬರಿಯ ಕಲ್ಪನೆಯಷ್ಟೆ. ಅದು ನಿನ್ನ ನೆನಪಲ್ಲಿ, ಹಗಲಾದಮೆಲೆ ಕನಸು ಮರೆಯುವಂತೆ ಮರೆತುಹೋಗುತ್ತದೆ. ಇಂದಿನಿಂದ ಜಂಗುಬಾಬ ನಿನ್ನ ಗುರುಗಳು. ಮತ್ತೆ ನಾನು ನಿನ್ನನ್ನ ಕಾಣುವವರೆಗೂ ನೀನು ಇಲ್ಲಿಯೇ ಇರತಕ್ಕದ್ದು. ನಿನ್ನ ಜವಾಬ್ದಾರಿ ನನ್ನದು. ಭಯ ನಿನ್ನಲ್ಲಿ ಬರಕೂಡದು. ದಾರಿಯಲ್ಲಿ ಹೇಳಿದ ವಿಷಯಗಳು ನೆನಪಿರಲಿ" ಎಂದು ಹೇಳಿ ಸೂರಿಯ ತಲೆಯಮೇಲೆ ಕೈ ಇಟ್ಟು ಓಂಕಾರ ಪಠಿಸಿ ಆಲ್ಲಿಂದ ಹೊರನಡೆದರು. ಸೂರಿ ಅವರನ್ನೆ ನೋಡುತ್ತ ನಿಂತುಕೊಂಡ.
ಜಂಗುಬಾಬಾ ಬಂದು ಸೂರಿಯನ್ನ ಮುಟ್ಟದಿದ್ದರೆ ಸೂರಿ ಹಾಗೆ ನೋಡುತ್ತಲೇ ಇರುತ್ತಿದ್ದನೇನೊ.
"ಮಗು ಇಂದಿನಿಂದ ನಿನ್ನ ಹೆಸರು ಬಾಬಾ." ಎಂದರು ಜಂಗುಬಾಬಾ.
"ನನ್ನಿಂದೇನಾಗುವುದಿದೆ, ನಾನೇನು ಮಾಡಬೇಕು ಇಲ್ಲಿ" ಅರ್ಥವಾಗದವನಂತೆ ಕೇಳಿದ ಸೂರಿ.
"ಮೊದಲನೆ ಪ್ರಶ್ನೆಗೆ ಉತ್ತರ ನೀನೇ ಹುಡುಕಬೇಕು. ಎರಡನೇಯದನ್ನ ನಾನು ಹೇಳುತ್ತೇನೆ. ಅದಕ್ಕಾಗಿಯೇ ಜುಕಾವು ನಿನ್ನನ್ನ ಇಲ್ಲಿಗೆ ಕರೆತಂದಿದ್ದು. ನಮಗೆ ಈಗ ಜಪದ ಸಮಯ. ನೀನೂ ಸಾಧ್ಯವಾದರೆ ನಮ್ಮನ್ನ ಅನುಸರಿಸು. ಓಂ ಎಂದು ಹೇಳುತ್ತಿರು ಮತ್ತೆ ನಾ ನಿನ್ನನ್ನ ಕರೆಯೊ ವರೆಗೆ" ಎಂದು ಕಿವಿಯಲ್ಲಿ ಓಂಕಾರ ಉಪದೇಶಿಸಿದ ಜಂಗುಬಾಬಾ ತಿರುಗಿ ತಮ್ಮ ಸ್ಥಾನಕ್ಕೆ ಹೋಗಿ ಧ್ಯಾನಸ್ಥರಾದರು.
ಸೂರಿಯೂ ಅಲ್ಲಿಯೇ ಕುಳಿತು ಓಂಕಾರ ಭಜಿಸಲು ಶುರುಮಾಡಿದ..................

No comments:

Post a Comment