Tuesday, 2 October 2012

ಭಂ ಬೋಲೆ ೩ಎಲ್ಲವೂ ಒಂದು ಚೇತನಕ್ಕಾಗುತ್ತಿರುವ ಭ್ರಮೆಯಷ್ಟೇ...
ಒಂದೇ ಏಟಿಗೆ ಹುಡುಗನನ್ನ ಕೊಂದುಬಿಡುವಷ್ಟು ಕೋಪ ಬಂದಿತ್ತು ಮೇಸ್ಟ್ರಿಗೆ. ಇಡೀ ಶಾಲೆಯೆ ಅವರೆಂದರೆ ಗಡಗಡ ನಡುಗುತ್ತಿತ್ತು. ಹೆಡ್ ಮೇಶ್ಟ್ರು ಇವರನ್ನ ಎಂತಹ ಸಂದರ್ಭದಲ್ಲಿಯೂ ಎದುರುಹಾಕಿಕೊಂಡೋರಲ್ಲ. ಒಮ್ಮೆ ಅವರದೇ ತಪ್ಪಿದ್ದಾಗಲೂ ಯಾರೂ ಅವರನ್ನ ಪ್ರಶ್ನೆ ಮಾಡುತ್ತಿರಲಿಲ್ಲ. ಹಾಗಿರುವಾಗ ಅವರು ಕೇಳಿದ ಪ್ರಶ್ನೆಗೆ ಸೂರಿ ಅವನದೇ ಆದ ಉತ್ತರ ಹೇಳಿದ್ದು ಅವರ ಕೋಪಕ್ಕೆ ಕಾರಣವಾಗಿತ್ತು.
"ಕೊನೇಬಾರಿ ಕೇಳ್ತೇನೆ.. ಮಾನವನ ಪೂರ್ವಜರು ಯಾರು?" ಅವರ ಕೋಪ ಪರಮಾವಧಿ ಮಟ್ಟವನ್ನ ತಲುಪಿತ್ತು.
"ಮೂಲಸ್ವರೂಪ" ಹುಡುಗ ನಿರ್ಭಾವುಕನಾಗಿ ತಾನು ಮೊದಲು ಹೇಳಿದ ಉತ್ತರವನ್ನೇ ಹೇಳಿದ.
"ಬೇವರ್ಸಿ... ಬೋಳಿಮಗನೆ, ಎಷ್ಟೊ ಕೊಬ್ಬು ನಿಂಗೆ, ಆ ಧನಂಜಯ, ಅವನಿಗೆ ಒಂದು ಒಂದು ಎಷ್ಟು ಎಂದು ಕೇಳಿದ್ರು ಹೇಳೋಕೆ ಬಾರದವನೂ,ಮಾನವನ ಪೂರ್ವಜರು ವಾನರರು ಅಂತ ಹೇಳ್ತಾನೆ. ನಿಂಗೇನೊ ಜಡ ಅಷ್ಟು ಬೊಗಳೋಕೆ.." ತಮ್ಮ ಛಡಿಯಲ್ಲಿ ರಪರಪನೆ ಮೈಕೈಮೇಲೆಲ್ಲ ಹೊಡೆಯುತ್ತ ಹೇಳೀದರು. ಅವರ ಕೋಪ ತಣ್ಣಗಾಗೊ ಲಕ್ಷಣವಿರಲಿಲ್ಲ. ಪೂರ್ತಿ ಕ್ಲಾಸು ಬೆಚ್ಚಿ ಕುಳಿತಿತ್ತು. ಎಲ್ಲ ಮಕ್ಕಳಿಗೂ ಸೂರಿಯಮೇಲೆ, ಅನುಕಂಪ ಮೂಡಿತ್ತಾದರೂ,ಮೇಸ್ಟ್ರು ಎಷ್ಟುಬಾರಿ ಕೇಳಿದರೂ ಅವನು ಅವನ ಉತ್ತರ ಬದಲಾಯಿಸದೆ ಇದ್ದುದಕ್ಕೆ ಅಸಮಾಧಾನವಿತ್ತು. ಮೇಸ್ಟ್ರು ಒಂದೇಸಮನೆ ಹೊಡೆಯುತ್ತಿದ್ದರೂ ತನಗೇನೂ ಆಗುತ್ತಿಲ್ಲವೆಂಬಂತೆಯೆ ನಿರ್ಲಿಪ್ತನಾಗಿ ಛಡಿಯೇಟು ತಿನ್ನುತ್ತ ನಿಂತಿದ್ದ ಸೂರಿ. ಮೇಸ್ಟ್ರಿಗೇ ಸುಸ್ತಾಗಿ ಅರೆಕ್ಷಣ ಸುಮ್ಮನಾಗಿ ಮತ್ತೆ ತಲೆಯಮೇಲೆ ಗುದ್ದಿದರು. ಆಗಲೂ ಸೂರಿ ನೆಟ್ಟಗೆ ನಿಂತಿದ್ದ. ಮೇಸ್ಟ್ರಿಗೆ ಅವನ ಸ್ವಭಾವವೇ ವಿಚಿತ್ರವೆನಿಸಿಹೋಯ್ತು. ಮತ್ತೆ ಏನು ಮಾಡಬೇಕು ಎಂದು ಅರಿಯದೇ ತಿರುಗಿ ತಮ್ಮ ಖುರ್ಚಿಯಮೆಲೆ ಬಂದು ಕುಳಿತರು.
ಏನಾದರೊಂದು ಇತ್ಯರ್ಥವಾಗಲೇ ಬೇಕೆಂದು "ಯಾರಯ್ಯ ನಿಂಗೆ ಮಾನವನ ಪೂರ್ವಜರು ಮೂಲ ಸ್ವರೂಪ ಅಂತ ಹೇಳಿದೋರು" ಎಂದು ರೇಗಿದರು.
ಸೂರಿ ಉತ್ತರಿಸಲಿಲ್ಲ.
"ನಿನಗೆ ಹೇಳಿ ಏನು ಪ್ರಯೋಜನ. ನಿನ್ನ ಅಪ್ಪನಲ್ಲಿ ಮಾತನಾಡುತ್ತೇನೆ." ಎಂದು ಗೊಣಗಿದ ಮೇಸ್ಟ್ರು ತಮ್ಮ ಪಾಠವನ್ನ ಮುಂದುವರೆಸಿದರು. ಕ್ಲಾಸು ಮುಗಿಯೊ ವರೆಗೂ ಸೂರಿ ನಿಂತುಕೊಂಡೇ ಇದ್ದ.
..............................................................................................................................

ಅಪ್ಪ ಮನೆಗೆ ಬರುವಾಗಲೇ ಬೆಂಕಿ ಕೆಂಡವಾಗಿದ್ದ. ಮೇಸ್ಟ್ರ ಹೊಡೆತ ಎಷ್ಟು ಖಾರವಾಗಿದ್ದರೂ ತಾಳಿಕೊಳ್ಳಬಹುದು, ಆದರೆ ಅಪ್ಪನ ಹೊಡೆತ ಅದಕ್ಕಿಂತ ಭೀಕರವಾಗಿರುತ್ತದೆಂಬುದು ಸೂರಿಗೆ ತಿಳಿದಿತ್ತು. ಅಪ್ಪನ ಮುಖ ನೋಡುತ್ತಲೇ, ಮೇಸ್ಟ್ರು ಕ್ಲಾಸಿನಲ್ಲಿ ನಡೆದಿದ್ದನ್ನೆಲ್ಲ ವರದಿ ಮಾಡಿದ್ದಾರೆಂಬುದು ಸೂರಿಗೆ ಅರ್ಥವಾಯ್ತು. ತನ್ನ ಬಟ್ತೆಯನ್ನ ಬದಲಿಸಿದ ಅಪ್ಪ ಬೆಳ್ಟ್ ತೆಗೆದುಕೊಂಡು, ಮನಸೊ ಇಚ್ಛೆ ಥಳಿಸಿದ. ಸೂರಿಯ ಮೈಯಲ್ಲಿ ಬಾಸುಂಡೆಗಳು ಎದ್ದಿದ್ದವು. ಬೆಳ್ಟಿನ ಅಂಚು ಕೆಲವುಕಡೆ ಅವನ ಚರ್ಮವನ್ನ ಸೀಳಿತ್ತು. ಪಕ್ಕದಮನೆಯವರಿಗೆಲ್ಲ ಸೂರಿಗೆ ಏಟು ಬೀಳುತ್ತಿದೆಯೆಂಬುದು ಗೊತ್ತಾದರೂ ಸೂರಿಯ ಧ್ವನಿ ಮಾತ್ರ ಕೇಳಲಿಲ್ಲ. ಅವನ ಅಪ್ಪ ಮಾತ್ರ "ಮುಂಡೇ ಮಗನೆ, ತಾಯಿ ಇಲ್ಲ ಅಂತ ಸ್ವಲ್ಪೇ ಸ್ವಲ್ಪ ಮುದ್ದು ಮಾಡಿದ್ದಕ್ಕೆ, ಮರ್ಯಾದಿ ತೆಗೆಯೊ ಕೆಲಸ ಮಾಡ್ತೀಯಾ? ಹೊಟ್ಟೆ ಬಟ್ಟೇ ಕಟ್ಟಿ ಹೆಂಗೊ ನಿನ್ ಓದಿಸ್ತಿದೀನಿ, ತೆಪ್ಪಗೆ ಓದೋದ್ ಬಿಟ್ಟು ಶಾಲೆಗ್ ಹೋಗಿ ತಲೆಹರಟೆ ಮಾಡ್ತೀಯಾ?" ಮನಸಿಗೆ ಬಂದಂಗೆ ಬಯ್ಯುತ್ತ ತನ್ನ ಅಹಂಕಾರಕ್ಕೆ ಸಮಾಧಾನ ಆಗೊ ವರೆಗೂ ಹೊಡೆದ. ಮಗನಿಂದ ಪ್ರತಿಕ್ರಿಯೆಯೇ ಇಲ್ಲದ್ದನ್ನ ನೋಡಿ ಅಪ್ಪನಿಗೆ ಆಶ್ಚರ್ಯವಾಯ್ತು. ಮೊದಲೆಲ್ಲ ತಾನು ಕಣ್ನಲ್ಲಿ ಕೋಪ ತೋರಿಸಿದರೂ ಮುದುಡಿಕೊಂಡು ಮೂಲೆ ಸೇರಿಕೊಳ್ಳುತ್ತಿದ್ದವ, ಇಷ್ಟು ಹೊಡೆದರೂ ಗರಡುಗಂಬದಂತೆ ನಿಂತಿದ್ದನ್ನ ಅರಗಿಸಿಕೊಳ್ಳಲಾಗಲಿಲ್ಲ. ಸಿಟ್ಟೆಲ್ಲ ಇಳಿದಮೇಲೆ ಹೊಡೆದಿದ್ದಕ್ಕೆ ಬೇಸರವಾದರೂ ಅದನ್ನ ತೋರ್ಗೊಡದೆ ಊಟ ಮುಗಿಸಿ ಮಲಗಿದ.

ಸೂರಿಗೆ ಹೊಡೆತವೆಲ್ಲ ಸರ್ವೇ ಸಾಮಾನ್ಯವಾಗಿಹೋಗಿತ್ತು. ಸಣ್ಣವನಿದ್ದಾಗ ತನ್ನ ಪುಂಡಾಟಗಳಿಂದ, ತರಲೆಗಳಿಂದ ಹೊಡೆಸಿಕೊಳ್ಳುತ್ತಿದ್ದರೆ,ವೃದ್ಧ ಕುದುರೆ ಸವಾರ ಸಿಕ್ಕಿದಾಗಿನಿಂದ, ಬದಲಾದ ತನ್ನ ಯೋಚನಾಲಹರಿಗಳಿಂದ ಪೆಟ್ಟು ತಿನ್ನುವುದು ಸಾಮಾನ್ಯವಾಗಿಹೋಗಿತ್ತು. ವ್ರದ್ಧ ಕುದುರೆ ಸವಾರನ ಮಾತು ಸೂರಿಯನ್ನ ಎಲ್ಲಿಲ್ಲದಂತೆ ಕಾಡುತ್ತಿತ್ತು. "ಸಮಾಜ ಒಂದು ನಾಟಕ,ಯಾವುದಕ್ಕೂ ಅಸ್ತಿತ್ವವಿಲ್ಲ, ಎಲ್ಲವೂ ಒಂದು ಚೆತನಕ್ಕಾಗುತ್ತಿರುವ ಭ್ರಮೆಯಷ್ಟೇ. ನಿಜವಾದದ್ದು ಎಂಬುದು ಯಾವುದೂ ಇಲ್ಲ. ಶಾಶ್ವತವಾದದ್ದೂ ಇಲ್ಲಿಲ್ಲ. ನೋವು ನಗುವಿನಷ್ಟೇ ಆನಂದಮಯ, ಆದರೆ ಅದನ್ನ ಸ್ವೀಕರಿಸುವ ನಿನ್ನ ಮನೋಬಲ ಗಟ್ಟಿಯಾಗಿರಬೇಕಷ್ಟೇ." ವ್ರದ್ಧ ಹೇಳಿದ್ದು ಮತ್ತೆ ನೆನಪಾಯ್ತು ಸೂರಿಗೆ. ಅಮ್ಮ ಸತ್ತಾಗಿನಿಂದ ಯಾವುದನ್ನೂ ಆಸಕ್ತಿಯಿಲ್ಲದೇ ಮಾಡುತ್ತಿದ್ದ ಸೂರಿಯಲ್ಲಿ ವಿಚಿತ್ರವಾದ ಬದಲಾವಣೆಗಳು ಸಂಭವಿಸುತ್ತಿದ್ದವು. ಅದೇ ಸಂದರ್ಭದಲ್ಲೇ ವ್ರದ್ಧನ ಭೇಟಿಯಾಗಿದ್ದು. ವ್ರದ್ದನ ಮಾತನ್ನ ಮತ್ತೆ ನೆನಪಿಸಿಕೊಂಡ."ಶಾಂತಿ ಸಂಗಮವಾಗಬೇಕು, ನೆಮ್ಮದಿಯ ಮಳೆ ಸುರಿಯಬೇಕು, ಸದ್ಯದಲ್ಲೇ ದೊಡ್ಡ ವಿಪತ್ತು ಕಾದಿದೆ, ನಮ್ಮ ಜನ್ಮ ಯಾವುದಕ್ಕಾಗಿ ಆಗಿದೆ ಎಂಬುದನ್ನ ನಾವು ಎಷ್ಟು ಬೇಗ ತಿಳಿದುಕೊಳ್ಳುತ್ತೇವೋ ಅಷ್ಟು ಒಳ್ಳೆಯದು. ಸತ್ಕಾರ್ಯದಲ್ಲಿ ಸಾಧನೆಯಿದೆ, ಸೌಖ್ಯವಿದೆ, ನಾನು ಹೇಳಿದ ನೆಮ್ಮದಿಯಿದೆ. ನಿನ್ನಿಂದ ಆ ಸಾಧನೆ ಸಾಧ್ಯ. ನನ್ನ ಕುದುರೆ ಖಾಲಿಯಿದೆ ಬರುವ ಮನಸ್ಸು ಎಂದು ಆಗುವುದೋ ಅಂದು ನೆನಪಿಸಿಕೊ, ಅಂದು ಅದು ಅಲ್ಲಿರುತ್ತದೆ." ವ್ರದ್ಧನ ಮಾತಿಗೆ ಅವನಲ್ಲಿಯ ತೇಜಸ್ಸಿಗೆ, ಮರುಳಾಗಿದ್ದ ಸೂರಿ. ಮನೆಯಲ್ಲಿ ಸಮಾಜದಲ್ಲಿ,ಶಾಲೆಯಲ್ಲಿ ಎಲ್ಲ ಕದೆಯಲ್ಲೂ ಹಿಂಸೆ ಅನುಭವಿಸುತ್ತಿದ್ದ ಸೂರಿಗೆ ವ್ರದ್ಧನ ಮಾತೆ ಸರಿಯೆನಿಸಿತು. ತನ್ನ ತನಗಳಿಗೆ ಬೆಲೆಯಿಲ್ಲದೆ, ಒಪ್ಪಿಕೊಳ್ಳಲಾಗದ್ದನ್ನ ಅನಿವಾರ್ಯವಾಅಗಿ ಒಪ್ಪಿಕೊಳ್ಳುತ್ತಿರುವ, ತಾನಲ್ಲದ ತನ್ನನ್ನು ಸಂಭಾಳಿಸುವುದು ಅವನಿಗೆ ಸಾಧ್ಯವಾಗುತ್ತಿರಲಿಲ್ಲ. ಕೊನೆಯದಾಗಿ ನಿಶ್ಚಯಿಸಿಕೊಡ. ಮಲಗಿದ್ದ ಅಪ್ಪನ ಮುಖವನ್ನೊಮ್ಮೆ ನೋಡಿ, 'ಯಾವುದು ಸರಿಯೆಂದು ತಿಳಿಯುತ್ತಿಲ್ಲ, ಆದರೆ ಸದ್ಯದಲ್ಲಿ ನಾನಿರುವ ಸ್ಥಿತಿಯೆಂತು ಖಂಡಿತ ಸರಿಯಿಲ್ಲ. ನಿನ್ನನ್ನ ಒಬ್ಬಂಟಿಯನ್ನಾಗಿಸಿ ಹೊರಡುತ್ತಿದ್ದೇನೆ. ನಿನ್ನ ಕೋಪದ ಪರಿಚಯ ನನಗಿದೆ, ಸಿಟ್ಟು ಯಾರಮೇಲೇ ಬಂದಿರಲಿ, ಕಡೆಗೆ ಅದು ನಿನ್ನ ದೌರ್ಬಲ್ಯದಿಂದಾದ ಕೆಡುಕೇ ಆಗಿದ್ದರೂ, ನೀ ಅದನೆಲ್ಲ ತೀರಿಸಿಕೊಳ್ಳುತ್ತಿದ್ದುದು ನನ್ನಮೇಲೆಯೆ ಆಗಿತ್ತು. ನೀನು ಎಷ್ಟೇ ನನ್ನನ್ನ ಹೊಡೆದರೂ, ಹೊಡೆಯುವಾಗಲೂ ನಿನ್ನ ಮನಸಲ್ಲಿ ನನ್ನೆಡೆಗೊಂದು ಅದಮ್ಯವಾದ ಪ್ರೀತಿಯನ್ನ ನಾನು ಕಂಡಿದ್ದೇನೆ. ಇನ್ನು ನಿನ್ನ ಏಟು ತಿನ್ನಲು ನಾನಿರುವುದಿಲ್ಲ. ಕ್ಷಮೆಯಿರಲಿ' ಎಂದು ಮನಸಿನಲ್ಲಿಯೇ ಅಂದುಕೊಳ್ಳುತ್ತ ಅಪ್ಪನ ಪಾದ ಮುಟ್ಟಿ ನಮಸ್ಕರಿಸಿ ಹಿತ್ತಲುಕಡೆಯ ಬಾಗಿಲಿಂದ ಹೊರಬಂದ. ಮನೆಯ ಹಿಂಬದಿಯಲ್ಲಿ ಕಾಡು ಹಬ್ಬಿಕೊಂಡಿತ್ತು. ಸ್ವಲ್ಪ ದೂರ ಬಂದು ಹಿಂದೊಮ್ಮೆ ತಿರುಗಿ ಮನೆಯತ್ತ ನೋಡಿದ, ಮತ್ತೆ ತಾನು ಇಲ್ಲಿಗೆ ಬರುವುದು ಸಾಧ್ಯವಿಲ್ಲವೆನಿಸಿತು ಅವನಿಗೆ, ಮನಸನ್ನ ಮತ್ತಷ್ಟು ಗಟ್ತಿಮಾಡಿಕೊಂಡು, ಕಾಡಿನೊಳಕ್ಕೆ ವ್ರದ್ಧನ ಕುದುರೆಯನ್ನ ನೆನಪಿಸಿಕೊಳ್ಳುತ್ತ ನಡೆದ. ಎರಡುಮೂರು ಮೈಲಿ ಕಾಡಿನಲ್ಲಿಯೆ ನಡೆದ ನಂತರ, ಕಾಡು ಕಡಿಮೆಯಾಗುತ್ತ ಬಂತು. ಹಿಂದೆ ಮುಂದೆ ನೋಡದೆ ಒಂದೆಸಮನೆ ನಡೆದ. ಕೊನೆಗೆ ಕಾಡು ಕಡಿಮೆ ಆಗಿ ಆಗಿ ಪೂರ್ತಿ ಮುಗಿದಿತ್ತು. ಆಗ್ ಸೂರಿ ದೊಡ್ಡ ಹುಲ್ಲುಗಾವಲಿನೆದುರಲ್ಲಿ ನಿಂತುಕೊಂಡಿದ್ದ. ಆಳೆತ್ತರಕ್ಕೆ ಬೆಳೆದ ಹುಲ್ಲನ್ನ ಬದಿಯಲ್ಲಿ ತಳ್ಳುತ್ತ ತಳ್ಳುತ್ತ ಮುಂದೆ ಮುಂದೆ ನಡೆದ. ಒಂದೇ ವೇಗದಲ್ಲಿ ನಡೆಯುತ್ತಿದ್ದವ ಥಟ್ಟನೆ ಅವಾಕ್ಕಾಗಿ ನಿಂತುಕೊಂಡ.  ಸುಮಾರು ಫರ್ಲಾಂಗು ದೂರದಲ್ಲಿ,ಹುಣ್ಣಿಮೆಯ ಬೆಳಕಲ್ಲಿ ವ್ರದ್ಧನ ಕುದುರೆ ಹುಲ್ಲು ಮೇಯುತ್ತ ನಿಂತಿದ್ದು, ಅವನಿಗೆ ಸ್ಪಷ್ಟವಾಗಿ ಕಾಣಿಸಿತು. 

3 comments:

  1. Ella lekhanagalannu odide.... Nice write up... nicely narrated...

    ReplyDelete
  2. ಧನ್ಯವಾದಗಳು.

    ReplyDelete
  3. This comment has been removed by the author.

    ReplyDelete