Sunday 4 August 2013

ಭಾಗ ೧

ಇದು ಹವ್ಯಕ ಭಾಷೆಯ ಸಂಭಾಷಣೆಯುಳ್ಳ ಬರಹ. ಹವ್ಯಕ ಪೇಜ್ ನಲ್ಲಿ ಇದನ್ನ ಪೋಸ್ಟ್ ಮಾಡುತ್ತಿದ್ದೇನೆ. ಅಲ್ಲಿ ಹಾಕುವಾಗ ಸಮಯದ ಅಂತರವಿರುವುದರಿಂದ ಒಂದು ಬರಹದಿಂದ ಮತ್ತೊಂದು ಬರಹಕ್ಕೆ ಕೊಂಡಿ ತಪ್ಪಬಹುದು. ಹಾಗಾಗಿ ಆಸಕ್ತರಿಗೆ ಹಿಂದಿನ ಬರಹ ಒಂದೇಸಾರಿ ಸಿಗುವಂತಾಗಲಿ ಎಂಬ ಕಾರಣಕ್ಕೆ ಇಲ್ಲಿ ಎಲ್ಲವನ್ನು ಮುದ್ರಿಸುತ್ತಿದ್ದೇನೆ.


1)


ಕೈಯಲ್ಲಿ ಹಾಲಿನ ಕ್ಯಾನು ಹಿಡಿದುಕೊಂಡು ಡೇರಿಗೆ ಬಂದವಳಲ್ಲಿ ನಿರೀಕ್ಷೆಯಿತ್ತು ಮತ್ತು ಅಷ್ಟೇ ಪ್ರಶ್ನೆಗಳು ಸಹ. ದಿನಾಲೂ ಅವನೂ ಅದೇ ಸಮಯಕ್ಕೆ ಡೇರಿಗೆ ಬರುತ್ತಿದ್ದ. ಮೊದಮೊದಲು ಸಮಯ ಹೆಚ್ಚು ಕಮ್ಮಿ ಆಗುತ್ತಿತ್ತಾದರೂ ಒಬ್ಬರಿಗೊಬ್ಬರು ಅಚಾನಕ್ಕಾಗಿ ಸಿಕ್ಕಿಕೊಂಡಮೇಲಂತು ಡೇರಿಗೆ ಬರುವ ಸಮಯದಲ್ಲಿ ವ್ಯತ್ಯಾಸವಾಗಲಿಲ್ಲ. ಅವಳ ಕಂಗಳಲ್ಲಿಯ ನಿರೀಕ್ಷೆ ಅಸಹನೆಯಾಗಿ ಮಾರ್ಪಡುವ ಮೊದಲೇ ಅವನು ಬಂದುಬಿಟ್ಟ. ಬಂದಕೂಡಲೆ ಮಾತಾಡುವಂತಿಲ್ಲ, ಏಕೆಂದರೆ ಡೇರಿಗೆ ಹಾಲು ತರುವವರು ಇವರಿಬರೇ ಅಲ್ಲವಲ್ಲಾ.. ಹಾಲು ಕೊಟ್ಟು ಕಾರ್ಡಿನಲ್ಲಿ ಎಂಟ್ರಿ ಮಾಡಿಸಿಯೂ ಆದಮೇಲೆ ಹೊರಡುವುದೊಂದೆ ಉಳಿದ ಕೆಲಸವಾದ್ದರಿಂದ ಇಬ್ಬರೂ ಹೊರಟಿದ್ದಾಯಿತು. ಮತ್ತೆ ಮರುದಿನದ ಭೇಟಿಯವರೆಗೆ ಕಾಯಬೇಕಾ ಅಂತ ಯೋಚಿಸ್ಬೇಡಿ.. ಇಬ್ಬರೂ ಹೋಗುವ ದಾರಿ ಒಂದೇ. ಬರುವಾಗಲೂ ಓಟ್ಟಿಗೆ ಬಂದರೆ ನೋಡುವವರಿಗೆ ಅನುಮಾನ ಬರಬಹುದೆಂದು ಅವರಿಬ್ಬರು ಅನವಶ್ಯಕವಾಗಿ ಅಂದುಕೊಂಡಿದ್ದರಿಂದ ಡೇರಿಯಲ್ಲಿ ಅವರಿಬ್ಬರನ್ನ ಬೇರೆಬೇರೆಯಾಗಿ ದರ್ಶನ ಮಾಡಿಸಿದೆ ಅಷ್ಟೆ. ದಾರಿಯಲ್ಲಿ ಸುಮ್ಮನೆ ಹೋಗಲಾದೀತೆ? ಹಾಗೇನೇ ಹೋಗ್ಬೇಕು ಅಂದ್ರೆ ಬರುವಾಗಿನ ತರಹ ಬೇರೆಬೇರೆಯಾಗಿಯೇ ಬರಬಹುದಲ್ಲ. ಡೋಂಟ್ ವರಿ ಅವರಿಬ್ಬರೂ ಮಾತಾಡ್ತಾರೆ.

"ಡೇರಿಗೂ ಚಡ್ಡಿ ಹಾಕ್ಯಂಡೇ ಬತ್ಯಲಾ..?" ಅವಿಳಿಗೆಂತ ಇರಿಸುಮುರುಸು ಗೊತ್ತಿಲ್ಲ, ಆದ್ರೆ ಹಂಗೆ ಕೇಳ್ಬಿಟ್ಳು.
"ಅದೂ ಬ್ಯಾಡದಾಗಿತ್ತು ಅಂಬ್ಯಾ?" ಅವನು ಹೀಗೆ ಕೇಳಿದ್ದರಲ್ಲಿ ತಪ್ಪೇನಿಲ್ಲ ಬಿಡಿ.
"ಥು ಹೊಗಾ.. ಸಾಯ್ಲಿ ಚೊಲೊ ಆದ್ರು ಇದ್ದ, ಅದೂ ಇಲ್ಲೆ. ಗಲೀಜು" ಹೇಳಿಕೇಳಿ ಹೆಣ್ಮಕ್ಳು ಒಮ್ಮೆ ಹೇಳಿದ್ಮೇಲೆ ಮೊದ್ಲು ಹೇಳಿದ್ದಕ್ಕೆ ಸಬೂಬು ನೀಡೋದು ಅವರ ಧರ್ಮ.
"ನಿಂಗೆತ ಆತೆ ಹಾಕ್ಯಂಡಿದ್ ಯಂದೆಯ" ನಿಂದೇನಲ್ಲಬಿಡು ಅನ್ನೋ ದಾಟೀಲೇ ಹೇಳಿದ್ದ.
"ಎಂತು ಇವತ್ತು ಖಡಕ್ ಮಾತುಕತೆ" ಸೋಲುತ್ತಿದ್ದೇನೆ ಅಂತ ಅನಿಸಿದ್ಮೇಲೆ ಹುಡ್ಗೀರು ವಿಷ್ಯ ಬದ್ಲಾಯಿಸ್ತಾರೆ ಅನ್ನೋದ್ ಹೊಸಾ ಗಾದೆ ಅಂತು ಅಲ್ಲ.

"ಡೇರಿ ಗೋವಿಂದನತ್ರ ಹಲ್ ಕಿರಿತಿದ್ದಿದ್ದೆ" ಪಾಪ ಪೊಸೆಸ್ಸಿವ್ನೆಸ್ಸು. ಹಂಗಂತ ಅವಳು ಅವನ ಲವ್ವರೇನಲ್ಲ.
"ಅಯ್ಯ ಅದ್ರಲ್ಲೆಂತಾ.. ಅವ ನಗಾಡ್ಜಾ ಆನು ನಗಾಡ್ಜಿ." ಅವಳು ನಕ್ಕಿದ್ದು ಅಷ್ಟಕ್ಕೇ ಆಗಿತ್ತು.
" ಹಾಲ್ ಅಳತೆ ಮಾಡ ಕೆರ್ದೇವಿನೂ ಯನ್ನತ್ರೆ ನಗಾಡ್ತು ಆದ್ರೆ ಆನು ಹಂಗೇ ಹಲ್ ಕಿರಿತ್ನ?" ಈ ಬಾರಿ ಸಬೂಬು ನೀಡುವ ಸರದಿ ಅವನದ್ದಾಗಿತ್ತು.
"ಅದು ನಿನ್ ನೋಡ್ಕೆಂಡ್ ನಗಾಡ್ತು ಅಂದ್ಕಂಜ್ಯ ಮಂಗ್ಯಾ? ನೀ ಜಿಪ್ ಹಾಕ್ಯ ಬಂಜಿಲ್ಲೆ ಅದ್ಕೆ ನಗಾಡಿದ್ದು. ದೇವ್ರೆ ಅದ್ಕೂ ಕಂಡೋತಲೊ" ಕಾಲೆಳೆಯುವ ಸಂದರ್ಭ ಬಂದ್ರೆ ಹುಡ್ಗೀರು ಹುಡುಗರ ಮರ್ಯಾದೆಯನ್ನು ಸಲೀಸಾಗಿ ತಗೋತಾರೆ ಅನ್ನೋದು ನೀತಿ.
ಥಟ್ಟನೆ ಜಿಪ್ ಎಳೆದುಕೊಂಡನಾದರೂ ಅವಮಾನ ಬೆತ್ತಲಾಗೇ ಇತ್ತು. ಸ್ವಲ್ಪ ಹೊತ್ತು ಮಾತಿರಲಿಲ್ಲ. ಏನಂತ ಮಾತಾಡ್ತಾರೆ ಹೇಳಿ. ಅವಳು ಮಾತಾಡಿದ್ರೆ ಇವನ ಮುಜುಗರ ಹೆಚ್ಚಾಗತ್ತೆ. ಇವನು ವಿಷಯ ಬದ್ಲಾಯ್ಸಿದ್ರೆ ಮ್ಯಾಚು ಸೋತ್ಮೇಲೆ ಅಂಪೈರ್ ಸರಿ ಇಲ್ಲ ಅಂದಂಗಿರತ್ತೆ. ಸೊ ಇಬ್ರೂ ಸೈಲೆಂಟಾಗಿ ಸ್ವಲ್ಪ ದೂರ ಹೆಜ್ಜೆ ಹಾಕಿದ್ರು. ಆದ್ರು ಅವ್ಳಿಗೆ ನಗು ಬರ್ತಾನೇ ಇತ್ತು.
ಹೆಣ್ಣುಮಕ್ಳಿಗೆ ಉರ್ಸೋಕು ಗೊತ್ತು, ಸವ್ರೋಕು ಗೊತ್ತು. ಅದ್ಕೆ ಅವ್ಳೇ ಮಾತಾಡಿದಳು.
"ಕಾಲೇಜಿಗೆಂತಕ್ ಬಂಜಿಲ್ಲೆ ಇವತ್ತು?" ಅಂದಳು.
ವಿಷ್ಯ ಬದ್ಲಾಯ್ಸಿದ್ ರೀತೀಲಿ ಕೊಂಕಿದ್ದಂತೆ ಅವನಿಗೆ ಕಾಣಿಸಲಿಲ್ಲ. 
" ಏನಾರು ವಿಷೇಶ ಇತ್ತ?" ಬರದೇ ಇರೋದರಿಂದ ನಷ್ಟ ಎಷ್ಟು ಅಂತ ಹುಡುಗರು ವಿಚಾರ ಮಾಡ್ತಾರ್ಯೆ ಹೊರತು ಬರಲಾರದಂತೆ ಮಾಡಿದ ಕಾರಣವನ್ನ ಮರುಕಳಿಸದಂತೆ ನೋಡಿಕೊಳ್ಳುವ ಬಗ್ಗೆಯಲ್ಲ.
" ಹೌದು... ನಗರಾಜನ್ನ ಗೊತ್ತಿದ್ದ?" ನಿರುತ್ತರವನ್ನ ನಿರೀಕ್ಷಿಸಿದವಳಾಗಿ ಮತ್ತೆ ಶುರುಮಾಡಿದಳು "ನಿಮ್ಮನೆ ಕವ್ವನ ಅಜ್ಜನ್ ಮನೆ ಭಾವನ ಷಡ್ಕನ್ ಎರಡನೆ ಮಗ" ಸಂಬಂಧದ ವಂಶವೃಕ್ಷ ವಿವರಿಸೋದರಲ್ಲಿ ಹೆಣ್ನುಮಕ್ಕಳಿಗೆ ಸಾಟಿಯಿಲ್ಲ ಬಿಡಿ. ಅವನಿಗೂ ಅದೇ ಅನಿಸ್ತೇನೊ ಅದಕ್ಕೆ ಹೀಗಂದ.
"ಅವ ಯಾರಾದ್ರೆ ಯಂಗೆಂತೆ ವಿಷ್ಯ ಹೇಳು ಮಾರಾಯ್ತಿ." 
" ಪೆಂಗಿದ್ದಂಗಿದ್ದ. ಗುಲಾಬಿ ಹೂ ತಗ ಬಂದಿದ್ದ. ಪ್ರಪೋಸ್ ಮಾಡವಾಗಿದ್ನಡಾ.. ಪಕ್ಕಯಾ ಮಾರಯಾ ಒಂದ್ ಹತ್ತುಸಾರಿ ಕ್ಲಾಸತ್ರೆ ಬಂದಿದ್ನನ.. ಕಡಿಗೂ ಹೇಳಿದ್ನೇ ಇಲ್ಲೆ ಮಾರಾಯಾ" ಅವಳ ದನಿಯಲ್ಲಿ ಮೊದಲ ಒಲವ ಪುಳಕದ ನೆರಳಿತ್ತು.
"ಹೇಳಿದ್ರೆ ನೀ ಎಂತ ಹೇಳ್ತಿದ್ದೆ?" ನೇರವಾಗಿ ಕೇಳಿದ.
ಅವನಿಂದ ಆಶ್ಚರ್ಯ ಅಪೇಕ್ಷಿಸಿದ್ದಳೇ ಹೊರತು ಪ್ರಶ್ನೆಯನ್ನಾಗಿರಲಿಲ್ಲ. ಸ್ವಲ್ಪ ತಡವರಿಸಿದರೂ ಸುಧಾರಿಸಿಕೊಂಡು ಹೇಳಿದಳು.
"ಎಂತ ಕೇಳಿದ್ಕೂಡ್ಲೆ ಹೇಳ್ಬುಡಲಾಗ್ತಾ?" ಹೆಣ್ಣು ಮಕ್ಳು ಈ ವಿಷ್ಯದಲ್ಲಿ ಕಾಯ್ಸಿದ್ರೇ ಚಂದ.
ಅವನಿಗೆ ಸ್ವಲ್ಪ ಸಮಾಧಾನವಾಯ್ತು. 
"ಆದ್ರೂ ಏನೊ ಖುಷಿ ಆದಂಗಿದ್ದು ತಮ್ಗೆ" ಪಾಪ, ಅವಳ ಅನಿಸಿಕೆಯನ್ನ ಅರ್ಥಮಾಡಿಕೊಳ್ಳುವ ಅನಿವಾರ್ಯತೆಯಿತ್ತವನಿಗೆ.
"ಸುಮ್ನಿರಾ ಖುಷಿ ಎಂತು ಇಲ್ಲೆ. ಅಷ್ಟೆಲ್ಲಾ ಹೆದ್ರದೆಂತಕ್ಕೆ? ಹೇಳವು ಅಂದ್ರೆ ಹೇಳ್ಬಿಡವು."
"ನಿಂಗ ಅಕ್ಕು ಹೇಳ್ತಿ ಹೇಳದ್ ಖಾತ್ರಿ ಇದ್ರೆ ಹೆದರ್ದೆ ಹೇಳ್ತ ಹುಡುಗರು" ತಾನು ಗಂಡು ಜನ್ಮದ ರಾಯಭಾರಿಯೇನೊ ಅನ್ನೋ ಮಟ್ಟದಲ್ಲಿ ಹೇಳಿದ. 
"ನೋಡಪಾ, ಯಂಗ ಹೇಳದ್ ಹೇಳ್ಯೇ ಹೇಳ್ತ್ಯ. ಅದು ನಿಂಗಕ್ ಬೇಕಾಗಿದ್ದೇ ಆಗವು ಹೇಳೇನ್ ಎಲ್ಲು ಇಲ್ಲೆ. ಅದ್ರಲ್ಲೂ ಫಸ್ಟ್ ಪ್ರಪೋಸಲ್ನೇ ಒಪ್ಗೆಂಡ್ರೆ ಕಡಿಗ್ ಬೇರೆ ಆಫರೇ ಬತ್ತಿಲ್ಲೆ.ಅದ್ಕೆ ಸ್ವಲ್ಪ ಯೋಚ್ನೆ ಮಡ್ತ್ಯ." ಪ್ರೇಮ ಭಗವದ್ಗೀತೆಯನ್ನ ಸರಳೀಕ್ರತವಾಗಿ ರಾಧೆ ದ್ರೌಪತಿಗೆ ಉಪದೇಶ ಮಾಡಿದಂಗಿತ್ತು ಆ ಸಂದರ್ಭ. 
"ಅಂಗರ್ ಹುಡುಗ್ರು ಫಸ್ಟ್ ಟೈಮ್ ಯಾವ್ದಾರು ಸ್ಕ್ರಾಪ್ ಫಿಗರ್ ಗೆ ಪ್ರಪೋಸ್ ಮಾಡವು ಕುಶಾಲಿಗೆ ಹೇಳಾತು" ಗಲ್ಲಿ ಕ್ರಿಕೆಟ್ ನಲ್ಲಿ ಉಪ್ಯೋಗಕಿಲ್ಲದ ಪುಕ್ಕಟೆ ಟ್ರಯಲ್ ಬಾಲ್ ಇರತ್ತಲ್ಲ, ಅದೇ ರೀತಿ ಇದೂನು ಅನ್ನೋ ರೀತಿಲ್ ಹೇಳಿದ.
" ಹೊ ಒಂದ್ ಮಟ್ಟಿಗೆ ಅದು ಚೊಲೊನೇಯ" ಪರವಾಗಿಲ್ಲ ಅನ್ನೋದು ಅವಳ ಭಾವನೆಯಾಗಿತ್ತು.
"ಹಾಗಿದ್ರೆ ನಾಗರಾಜನೂ ಅದೇ ಪ್ರಯತ್ನದಲ್ಲಿದ್ದಿದ್ನ ಎಂತನ".. ಹೋದ ಮಾನ ವಾಪಸ್ಸು ಬಂದಂಗಿತ್ತು ಅವನ ದನಿಯಲ್ಲಾದ ಬದಲಾವಣೆಯಲ್ಲಿ. 
"ಹೊಟ್ಟೆ ಉರಿ ನಿಂಗೆ" ಇಷ್ಟೊತ್ತು ಅವನಿಗಾಗುತ್ತಿರುವುದನ್ನೇ ಅವಳು ಹೇಳಿದರೂ ಅವಳ ದನಿಯಲ್ಲಿದ್ದ ಅರ್ಥ ಅದಾಗಿರಲಿಲ್ಲ. ಅವನೇನೋ ಹೇಳಬೇಕೆನ್ನುವಷ್ಟರಲ್ಲಿ ಅವರವರ ಊರಿನ ಕವಲು ದಾರಿ ಎದುರಾಗಿತ್ತು.. ದೈನಂದಿನ ರುಟೀನಿನಂತೆ ಕವಲು ಹಾದಿ ಬಂತೆಂದರೆ ಅಲ್ಲಿ ಹೆಚ್ಚು ಹೊತ್ತು ನಿಲ್ಲದೆ ಹೊರಟುಬಿಡಬೇಕು. ಇಬ್ಬರೂ ತಮ್ಮ ತಮ್ಮ ದಾರಿ ಹಿಡಿದರು. 
"ಸುಮಾರ್ ಸುದ್ದಿ ಇದ್ದು ವಿಜು.. ನಾಳೆ ಮಾತಾಡನ" ಹೆಣ್ಣು ಮಕ್ಕಳಿಗೆ ವ್ಯಕ್ತಿ, ವಿಷಯಕ್ಕಿಂತ ಸಮಯ ಸಂದರ್ಭ ಎರಡೂ ಮುಖ್ಯ ಅಂತ ಅವನಿಗನಿಸಿತು. ಅವಳು ತಿರುವಲ್ಲಿ ಮರೆಯಾಗುತ್ತಿದ್ದಳು. ಅವನ ಕಾಲುಗಳು ಯಾರ ಅನುಮತಿಯನ್ನೂ ಕೇಳದೆ ಮನೆಯತ್ತ ಹೆಜ್ಜೆ ಹಾಕಿದ್ದವು. ಬೆನ್ನ ಹಿಂದೆ ಅಂಗಿಯೊಳಗೆ ಇಟ್ಟುಕೊಂಡಿದ್ದ ಗುಲಾಬಿ ಹೂ, ಅವನಲ್ಲಿಯೇ ಉಳಿದಿತ್ತು. ಖಾಲಿಯಾದ ಹಾಲಿನ ಕ್ಯಾನು ಸುಮ್ಮನೆ ಸದ್ದು ಮಾಡುತ್ತಿತ್ತು.

ಕಥೆ ಶುರು ಮಾಡಿದ್ದು ನಾನು. ಮುಗಿಸೋದು ನಾನೇ ತಾನೆ.. ಕವಲು ದಾರಿ ಬಂತು ಅಂತ ಮನೆಗ್ ಹೋಗ್ಬಿಟ್ರೆ ಆಗೋಯ್ತಾ? ದನ ಮರುದಿನವೂ ಹಾಲು ಕೊಡಲ್ವಾ? ಡೇರಿ ಮುಚ್ಚಿಹೋಗತ್ತಾ? ನಾಳೆ ಮತ್ತೆ ಬರ್ತಾರೆ ಅದೇ ಕ್ಯಾನ್ ಹಿಡ್ಕೊಂಡು. ಮತ್ತೆ ಮಾತಾಡ್ಸಿದ್ರಾಯ್ತು ಬಿಡಿ. 

ಸಂಭಾಷಣೆ ಸಷೇಶ.

No comments:

Post a Comment