Sunday, 4 August 2013

ಭಾಗ ೨


ಬಾರಲ್ಲಿ ಬಾಗಿಲು ಬದಿಯಲ್ಲಿದ್ರು ಪರವಾಗಿಲ್ಲ, ಆದ್ರೆ ಒಳಗೆ ಅಟ್ಲೀಸ್ಟ್ ಬೀರು ಇರ್ಲೇಬೇಕು. ಬಾರು ಬೀರು ಅಂತ ಹೆಂಡದ್ ಕಥೆ ಹೇಳ್ತೀನಿ ಅಂದ್ಕೋಬೇಡಿ. ಲವ್ ಸ್ಟೋರಿ ಅಂದ್ಮೇಲೆ ಟ್ವಿಸ್ಟ್ ಇರ್ಲೇಬೇಕು ಇಲ್ಲಾ ಅಂದ್ರೆ ಮಜ ಇಲ್ಲ ಅನ್ನೋದಕ್ಕೆ ಸಣ್ಣ ಪೀಠಿಕೆ ಅಷ್ಟೆ. ಶನಿವಾರದ ಮಧ್ಯಾನ್ನ ಮುಗಿದು ಸುಮಾರಿಗೆ ಸಂಜೆ ಶುರುವಾಗಲಿತ್ತು.ಯಂಕಟಿ ಬಿಕ್ಕೆಗುಡ್ಡದ ತುದಿಯಲ್ಲಿಹೋಗಿ ಕೂತಿದ್ದ. ಅದು ಬಿಕ್ಕೆಹಣ್ಣು ಬೀಳುವ ಸೀಸನ್ನೇನಲ್ಲ. ಹಂಗೆ ಫೊಟೊ ತೆಗ್ಯೋಕ್ ಹೋಗಿರ್ಬೇಕು ಅಂದ್ಕೊಂಡ್ರೆ ಅವನಲ್ಲಿ ಕ್ಯಾಮರಾನೂ ಇರಲಿಲ್ಲ. ಸುಮ್ನೆ ಬಿಲ್ಡಪ್ ಯಾಕೆ, ಕಸೂತಿಯ ಬರುವನ್ನ ಎದುರುನೋಡುತ್ತಿದ್ದ. ಇದೆಂತ ಹೆಸ್ರಪ್ಪ ಅಂದ್ಕೊಂಡ್ರೆ ಕಾಮನ್ನು ಆಲೋಚನೆ ಆಗತ್ತೆ. ಅದೇ ಯಾಕ್ ಆ ಹೆಸರು ಅಂದ್ಕೊಂಡ್ರೆ ಕಥೆ ಮುಂದುವರಿಸಲು ನನಗೆ ಸಹಾಯವಾಗುತ್ತದೆ. ಹೆಸರು ಕಸ್ತೂರಿ ಅಂತ ಮನೆಮಂದಿ ಸರಿಯಾಗೆ ಇಟ್ಟಿದಾರೆ. ಯಂಕಟಿ ಅವಳನ್ನ ಪೀಡಿಸೋಕೆ ಹಾಗೆ ಕರೆಯುತ್ತಿದ್ದ ಅಷ್ಟೆ. ಹಂಗೆ ಕರ್ಯೋದು ಅವಳಿಗೂ ಇಷ್ಟ ಅಂತ ಉಲ್ಲೇಖ ಮಾಡಿದ್ರೆ ಸ್ವಲ್ಪ ಓವರ್ ಆಗ್ಬಹುದೇನೊ.. 
"ಏನಾ ಬೆಗ್ನೆ ಬಂದಿಗಿದೆ, ಮನೆಲ್ ಗಡಿಯಾರ ಅರ್ಧತಾಸು ಮುಂದಿಟ್ಟವ್ ಯಾರೊ?" ಗುಡ್ಡದ ಕೆಳಗಿನಿಂದಲೇ ಕೂಗುತ್ತ ಅವನಕಡೆ ಸಾಗಿದ್ದಳು.
"ಬಾಯ್ಬಡಕಿ, ಗೋಣಿಚೀಲಾ, ಉದ್ದಾರಪ್ಪ ದೊಣಗೀನೇ ಅಲ್ಲ ಇದು" ಮನಸಲ್ಲೇ ಅಂದುಕೊಂಡ.
"ಸ್ವಲ್ಪ ಹಲ್ ತೋರ್ಸೊ ಅಡ್ದಿಲ್ಲೆ, ನಪ್ಪಿಹೋದ ಬೋಗಣಿ ಹಂಗ್ ಮಕ ಮಾಡ್ಕೆಂಡ್ ಕುಂತಿದ್ಯಲಾ" ಅಷ್ಟು ಹೇಳುವಾಗ ಅವನ ಬಳಿಯಲ್ಲೇ ಬಂದು ಕೂತಿದ್ದಳು. 
"ಸೊಕಾಗ್ ಮಳ್ ಹರ್ಯಡಾ. ವಿಷ್ಯ ಸೀರ್ಯಸ್ಸು" ಅವ್ನಿಗ್ ಚಿಂತೆಯಿತ್ತು.
"ಪ್ಲೀಸ್ ಸೀರ್ಯಸ್ ಮಾತ್ರ ಆಗಡ" ಅವಳಿಗೆ ತನ್ನ ಭಾವನೆ ಅರ್ಥವಾಗಿ ತನ್ನ ಮನೋಲಹರಿಗೆ ಹೊಂದಿಕೊಂಡಳಿರಬೇಕು ಎಂದು ಅವನು ಅಂದುಕೊಳ್ಳುವಷ್ಟರಲ್ಲಿ ಅವಳು ಮತ್ತೆ ಮಾತಾಡಿದ್ದಳು " ಯನ್ನ ಅಜ್ಜ ಹೋಗಿದ್ ಸೀರ್ಯಸ್ ಆಗೆಯ. ಪ್ಲೀಸ್ ಸೀರ್ಯಸ್ ಮಾತ್ರ ಆಗಡ."
ಅವನಿಗೆ ಮುಷ್ಟಿಕಟ್ಟಿ ಗುದ್ದುವಷ್ಟು ಸಿಟ್ಟು ಬಂದಿತ್ತಾದರೂ ಅದನ್ನ ಮಾಡುವಂತಿರಲಿಲ್ಲ.
"ಆತು ಮಾರಾಯಾ ಹೇಳು. ಇಲ್ಲಿ ತಂಕಾ ಬಪ್ಪಲ್ ಹೇಳಿದ್ದೆಂತಕ್ಕಪಾ?"
ಅವನು ಆಗಿಂದಾಗ್ಗೆ ಮಾತಾಡಲಿಲ್ಲವಾದರೂ, ಮತ್ತೆ ಅವಳಿನ್ನೇನಾದರೂ ಮಾತಾಡಿಯಾಳು ಎಂದು ಶುರುಮಾಡಿದ.
"ನಿಂಗ್ ಎಂತಾ ಅನಿಸ್ತು" 
"ಹೇಳಿರ್ ಬಯ್ತೆ" ಅವಳಿಗಾಗಲೇ ನಗು ಬಂದಿತ್ತು.
"ಹೇಳದ್ ಬ್ಯಾಡ. ಕೇಳು" ಅವನ ಧ್ವನಿಯಲ್ಲಿ ಅಧಿಕಾರವಿತ್ತು ಜೊತೆಯಲ್ಲಿ ಚೂರು ಅಸಹನೆ.
"ಕೇಳ್ತಿ"
"ಯನ್ನ ದೋಸ್ತರಲ್ಲಿ ಸುಮಾರೆಲ್ಲರದ್ದೂ ಲವ್ ಸ್ಟೋರಿನೆಯಾ"
"ಅದ್ಕೆ ನೀ ಈಗ್ ಮದ್ವೆ ಅಪ್ಪವ್ನಾ?" 
"ಮಧ್ಯ ಬಾಯ್ಹಾಕಡ ಕೊಟ್ಬುಡ್ತಿ." ಗಂಡು ಜನ್ಮದ ತಳಮಳಕ್ಕೆ ಸಾಹಿತ್ಯದಲ್ಲಿ ಉದಾಹರಣೆಯಿಲ್ಲ ಬಿಡಿ.
ಅವಳು ಕಷ್ಟಪಟ್ಟು ಸರಿಯಪ್ಪ ಅನ್ನುವಂತೆ ತಲೆಯಾಡಿಸಿದಳು.
"ಆನು ನಿನ್ ಲವ್ ಮಾಡಿದಿದ್ದಿ. ಹೇಳಲಾಗ್ದೆ ಪೇಚಾಡಿ ಕಡಿಗ್ ಬೇರ್ಯವರಿಂದ ನಿಂಗ್ ವಿಷ್ಯ ಗೊತ್ತಾಗಿ ಅದು ಅಲ್ಲಿಗೇ ನಿಂತೋತು." ಸ್ವಲ್ಪ ತಡೆದು ಅವನೇ ಹೇಳಿದ. " ಆದ್ರೆ ಈಗ ಮತ್ತೆ ಹಂಗಿದ್ದೇ ಭಾವನೆ ಶುರುವಾಜು" 
ಅವಳಿಂದ ಏನೂ ಪ್ರತಿಕ್ರಿಯೆ ಇಲ್ಲದ್ದನ್ನ ನೋಡಿ ಅವಳ ಮುಖ ನೋಡಿದ. ಮಾತನಾಡಬಹುದಾ ಎಂಬಂತೆ ಅವಳು ಸನ್ನೆಯಲ್ಲೇ ಕೇಳುತ್ತಿದ್ದಳು. ಹೆಣ್ಣುಮಕ್ಕಳಿಗೆ ಕಣ್ಣಲ್ ನೀರ್ ಬಂದ್ರು ಗಂಡುಮಕ್ಕಳು ಥಟ್ಟನೆ ಕರ್ಚೀಪು ಕೊಡ್ತಾರೆ. ಗಂಡು ಮಕ್ಕಳಿಗೆ ಗಾಯವಾದ್ರು ಹೆಣ್ಮಕ್ಳು ಟಿಶ್ಯೂಪೇಪರ್ ಸಿಗ್ಬಹುದಾ ಅಂತ ಹುಡುಕ್ತಾರೆ.
"ಅಡ್ಡಿಲ್ಲೆ ಮತಾಡ್ಸಾಯಿ ಮಾರಾಯ್ತಿ" ಅವಳು ಹಂಗೆ ಅಂತ ಅವನಿಗೆ ನಮ್ಕಿಂತ ಚೆನ್ನಾಗೇ ಗೊತ್ತಿತ್ತು ಪುಣ್ಯ.
"ಯಾರ್ಮೇಲೋ ಅಂತಾ ಭಾವನೆ?" ಮಾತಲ್ಲಿ ಕುಚೇಷ್ಟೆಯಿತ್ತಾದರೂ ಮನಸಲ್ಲಿ ಹಿಂಸೆಯಿತ್ತು.
"ಅದಲ್ಲ ವಿಷ್ಯ. ಆ ಭಾವನೆ ಮೊದ್ಲಾದಂಗೆ ಬೇರ್ಯವರಿಂದ ಗೊತ್ತಾಪ್ಪದರ ಬದಲು ಆನೇ ಹೇಳಿರ್ ಹೆಂಗೆ ಹೇಳಿ ನಿನ್ ಕೇಳ್ತಿದ್ದಿ"
" ಹೌದು ಅದೇ ಚೊಲೋದು." ದನಿಯಲ್ಲಿ ಬದಲಾವಣೆಯಿತ್ತು.
"ಹೆಂಗ್ ಹೇಳ್ಳೇ?" ಮಕ್ಕಳಂತೆ ಕೇಳಿದ್ದ ಹೆಮ್ಮೆಯಲ್ಲಿ. ಅವಳ ಚೂಡಿದಾರದ ವೇಲಿನ ತುದಿಯನ್ನ ಬೆರಳತುಂಬ ಸುತ್ತಿಕೊಂಡಿದ್ದ.
"ನಿ ಹಿಂಗೇ ವೇಲ್ ಸುತ್ತತಾ ಇದ್ರೆ ಆನ್ ಬೆನ್ನು ಹಾಕಿ ಕೂರಕಾಗ್ತು" ಅವನನ್ನ ಬೇರೇನೋ ಆಲೋಚಿಸುವಂತೆ ಕದಲಿಸಿದಳು.
ಸುಮ್ನೆ ಗಂಡು ಮಕ್ಳು ಎದುರಲ್ಲಿ ಹಾದುಹೋದ್ರೇನೇ ವೆಲ್ ಸರಿ ಮಾಡಿಕೊಳ್ಳುವ ಹೆಣ್ಮಕ್ಳು, ಅದನ್ನೇ ಎಳೆದು ಸುತ್ತಿಕೊಂಡ್ರೆ ಸುಮ್ನಿರ್ತಾರ್ಯೆ?
"ಏನ್ ಅನಿಸ್ತಾ ಇದ್ದ ಅದ್ನ ಹೇಳವಪಾ" ತನಗೇನ್ ಗೊತ್ತು ಅನ್ನೋದ್ ಅವಳ ಭಾವನೆ.
"ಹೆಂಗ್ ಹೇಳಿರ್ ಹುಡ್ಗೀರ್ಗೆ ಇಷ್ಟಾಗ್ತು?"
ಹಾಗಲಕಾಯಿ ಅಡುಗೆಗೆ ಹಾಕಿದ್ರೂ ಹಾಗೆ ತಿಂದ್ರು ಹೇಗೆ ಕಹಿಯೋ ಹಾಗೇನೇ, ಹೆಂಗ್ ಹೇಳಿದ್ರೂ ಅವ್ರಿಗ್ ಅರ್ಥ ಆಗೋದ್ ಅಷ್ಟೇ ಅಂನ್ನೋದ್ ಮಾತ್ರ ಹುಡುಗರಿಗೆ ಗೊತ್ತಾಗೋದೇ ಇಲ್ಲ. 
"ಅದೆಂತ ಸಿಲೇಬಸ್ ಇರ ಕೋರ್ಸನಾ ಹಿಂಗೆಯಾ ಹಂಗೆಯಾ ಹೇಳಲೆ" ಅಲ್ಲಿಗ್ ನಾವ್ ಅರ್ಥ ಮಾಡ್ಕೊಬೇಕು ಹೆಣ್ಣುಮಕ್ಕಳಿಗೇ ಹೆಣ್ಣುಮಕ್ಳು ಅರ್ಥ ಆಗ್ಲಿಲ್ಲ ಅನ್ನೋದನ್ನ. 
"ಆದ್ರೂ ಹೆಂಗ್ ಹೇಳಿದ್ರೆ ಇಷ್ಟ ಆಗ್ತಿಲ್ಲೆ ಹೇಳ್ ಗೊತ್ತಾಗ್ತಲೆ" ಕೆಲವರು ಚಟ ಬಿಟ್ರೂ ಹಠ ಬಿಡಲ್ಲ. 
"ಎಲ್ಲರಂಗೆ ಸುಮ್ನೆ ಇಷ್ಟ, ಪ್ರಿತಿ ಮಾಡ್ತಿ ಹೇಳದ್ನ ಕೇಳಿ ಕೇಳಿ ಬೇಜಾರ್ ಆಗೋಗಿರ್ತು. ಹಂಗಂತ ಬೇರೆ ಏನೋ ಹೇಳದಲ್ಲ. ಬೆರೆ ನಮ್ನಿ ಹೇಳಿರ್ ಕ್ಯೂರಿಯಾಸಿಟಿ ಹೆಚ್ಚಾಗ್ತು. ಭಾವನೆ ಒಳ್ಳೇದ್ ಬತ್ತು." ಪ್ರಪೋಸ್ ಮಾಡೊದಕ್ಕೂ ಸ್ಟೈಲ್ ಐತ್ರಪ್ಪ. 
"ಮಂಡಿ ಊರಿ ಕೈ ಎರಡೂ ಎತ್ತಿ ಹೇಳ್ಳಾ"
"ಎಂತಕ್ಕೆ ನಿಂತ್ಕಂಬ್ಲೆ ಸೊಂಟನೋವಾ?"
"ಎದುರಲ್ಲಿ ಕೂತು ಅವಳ ಕಣ್ಣಲ್ಲೇ ಕಣ್ಣೀಟ್ಟು ಹೇಳ್ಳ?"
"ಕಣ್ ಹೋಗ್ಬುಡ್ಗು ಹುಷಾರಿ.."
""ಲೆಟರ್ ಬರ್ದು ಕೊಡ್ಲಾ?"
"ಎಂತಕ್ಕೆ, ಮೆಸೇಜ್ ಗೆ ದುಡ್ಡು ಕಟ್ ಆಗ್ತಿಲ್ಲೆ ಹೇಳಾದ್ರೆ ಅದ್ನೇ ಕಳ್ಸಿಬಿಡು."
"ಮತ್ತಿನ್ ಹೆಂಗ್ ಹೇಳವೆ..." 
"ಮೊದ್ಲು ಕೂಸು ಯಾರು ಹೇಳು" ಉತ್ತರ ಗೊತ್ತಿಲ್ಲದಿದ್ದಾಗ ಪ್ರಶ್ನೆಯನ್ನೇ ಬದಲಾಯಿಸುತ್ತಾರೆ ಹೆಣ್ಮಕ್ಕಳು. 
ಸಂಜೆ ಸಾಯಂಕಾಲವಾಗಿ ಬದಲಾಗಿತ್ತು. ಸಮಯ ಸರಿದಿತ್ತು. ಇಬ್ಬರಲ್ಲೊಬ್ಬರು ಹೊರಡಲೇಬೇಕಿತ್ತು. ಅವಳ ಕಡೆಯ ಪ್ರಶೆಗೆ ಅವನಿಂದ ಉತ್ತರ ಸಿಗಲಿಲ್ಲ. ಅವನ ಪ್ರಶ್ನೆಗೂ ಅವಳಿಂದ ಉತ್ತರ ಬಂದಿರಲಿಲ್ಲ ಹಂಗಾಗಿ ಮ್ಯಾಚು ಡ್ರಾ ಅಂದ್ಕೊಬೇಡಿ. ಯಾಕಂದ್ರೆ ವಂಡೆ ಮ್ಯಾಚು ಟೈ ಆಗಬಹುದೇ ವಿನಹ ಡ್ರಾ ಆಗಲ್ಲ. ಅವಳು ಹೊರಟಳು ಅವನು ಹಿಂಬಾಲಿಸಲೇಬೇಕಿತ್ತು. ಬೆಟ್ಟದ ಇಳಿಜಾರಲ್ಲಿ ಒಣಗಿದ ಹುಲ್ಲು ಆಳೆತ್ತರಕ್ಕೆ ಬೆಳೆದಿತ್ತು. 
"ಕಡಿಗೂ ನೀ ಹೇಳಿದ್ದಿಲ್ಲೆ" 
"ಮೊದ್ಲೇ ಹೇಳಿದ್ನಲಾ ಹೇಳಲ್ ಬತ್ತಿಲ್ಲೆ ಅದು ಹೇಳಿ" ಇದೇ ಮಾತನ್ನ ಮತ್ತೊಮ್ಮೆ ಅವಾಗ್ಲೇ ಹೇಳಿದ್ರೆ ಇಷ್ಟು ಸಾಲು ಬರೆಯುವ ಕೆಲಸವಿರಲಿಲ್ಲ ನಂಗೆ. 
"ಅಂಗಾರೆ ಆನು ಯೋಚ್ನೆ ಮಾಡ್ಜಂಗೇ ಹೇಳ್ತಿ. ಏನ್ಬೇಕಾರ್ ಅಂದ್ಕಳ್ಳಲಿ. ಅಟ್ಲೀಸ್ಟ್ ಅದು ಯನ್ನ ಸ್ವಂತದ್ದು ಹೇಳ ಸಮಾಧಾನ ಆದ್ರೂ ಇರ್ತು." ಸಿಗರೇಟು ಫಿಲ್ಟರ್ ವರೆಗೆ ಸುಟ್ಟಾದಮೇಲೆ ಸೇದದಿದ್ದರೇ ಚೆನ್ನಾಗಿತ್ತು ಅನಿಸುವ ಹಾಗೆ, ಹುಡುಗರಿಗೆ ತಾವು ಸರಿಯಾಗೇ ಇದ್ದಿದ್ದೆವು ಅಂತ ಅರ್ಥವಾಗೋದು ಹಾಳಾದಮೇಲೆಯೇ.
"ಹೆಂಗೆ" ಕುತೂಹಲವಿತ್ತು.
ಮುಂದೆ ಹೊರಟಿದ್ದವಳ ಕೈ ಹಿಡಿದು ಎಳೆದುಕೊಂಡ. ಅವನ ನಡೆಯ ಬಗ್ಗೆ ಕಿಂಚಿತ್ತೂ ಕಲ್ಪನೆಯಿರದಿದ್ದರಿಂದ ಅವನೆಳೆದ ರೀತಿಗೆ ತಿರುಗುವಾಗ ಆಯ ತಪ್ಪಿ ಅವನನ್ನಪ್ಪಿದಳು. ಇಬ್ಬರಿಗೂ ಅವರವರ ಉಸಿರು ತಾಕುವಷ್ಟು ಹತ್ತಿರದಲ್ಲಿ ಮುಖ ಬಂದಿತ್ತು. ಕಣ್ಣು ಹೋದರೂ ಪರವಾಗಿಲ್ಲವೆಂಬಂತೆ ಅವಳ ಕಣ್ಣಿನ ಕಪ್ಪಲ್ಲಿ ತನ್ನ ಬಿಂಬ ನೋಡುತ್ತಿದ್ದ. ಅನಿರೀಕ್ಷಿತತೆಗೆ ಶರಣಾಗಿದ್ದ ಅವಳಲ್ಲಿ 
ಪ್ರತಿಕ್ರಿಯೆಯೇ ಇರಲಿಲ್ಲ.ಸುರುಳಿ ಮುಂಗುರಳ ಕಿವಿಹಿಂದೆ ಸರಿಸಿ, ತನ್ನೆರಡೂ ಬೊಗಸೆಯಲ್ಲಿ ಅವಳ ಮುಖ ಹಿಡಿದುಕೊಂಡು
ಅವಳಿಗಷ್ಟೇ ಕೇಳುವ ಹಾಗೆ ಹೇಳಿದ.
"ಆನು ಬೋರು, ನಿನ್ನಂಗೆ ಕಿಲಾಡಿ ಮಾಡಲ್ ಬಪ್ಪವಲ್ಲ. ಆದ್ರೆ ಗೊತ್ತಿಲ್ಲದ ಕಾರಣ ಹುಡ್ಕಿ ಸಮಜಾಯಿಷಿ ಕೊಡ್ತ್ನಿಲ್ಲೆ. ಅಪ್ಪಯ್ಯನ ಎದ್ರಿಗೆ ಕಣ್ಣುಹೊಡ್ಯಲ್ ಹೆದ್ರಿಕೆ, ಸೊಸೈಟಿ ಎದ್ರಿಗೆ ಕಂಡ್ರೂ ಹೆಸರಿಟ್ಟು ಕರ್ಯಲೆ ನಾಚ್ಕೆ. ಯಾವ್ದಾರು ತಿಥಿ ಮನೆಲ್ಲಿ ಅಕಸ್ಮಾತ್ ಪಕ್ಕದಲ್ಲೇ ಊಟಕ್ ಕೂರ್ವಂಗ್ ಆಗ್ಬುಟ್ರೆ ಅರ್ಧ ಹೊಟ್ಟೇಲಿ ಯೋಳದು ಗ್ಯಾರೆಂಟಿ. ಇಬ್ಬರೇ ಇದ್ದಾಗ್ಲೂ ಮುತ್ತು ಕೊಡುವಷ್ಟು ಧೈರ್ಯಾ ಇಲ್ಲೆ. ಆದ್ರೆ ನಿ ಅಕ್ಕು ಹೇಳಿರ್ ಅಂಬಾಡಿ ಎಲೆ ಬಳ್ಳೀಲಿ ಗುಲಾಬಿ ಹೂ ತೋರ್ಸ್ತಿ. ಮಗ್ಗಿ ಪುಸ್ತಕದಲ್ಲಿ ಸಾಹಿತ್ಯ ಓದಸ್ತಿ, ಕಿತ್ಲೆಹಣ್ಣಲ್ ಅಪ್ಪೆಹುಳಿ ಮಾಡ್ತಿ, ನಿಂಗ್ ಸಿಟ್ಟು ಬಂದಾಗ್ಲು ಪ್ರೀತಿ ಮಾಡ್ತಿ, ಅರುವುಮರುವು ಅಪ್ಪತಕನೂ ಪ್ರೀತಿ ಮಾಡ್ತಾನೇ ಇರ್ತಿ." ಅರೆಕ್ಷಣ ಸುಮ್ಮನಾದ ಅವಳ ಪ್ರತಿಕ್ರಿಯೆಗಾಗಿ. ಅವಳಲ್ಲಿ ಆಶ್ಚರ್ಯದ ಹೊರತಾಗಿ ಮತ್ತಾವ ಭಾವನೆಯನ್ನೂ ಅವನು ನೋಡಲಿಲ್ಲ. ಮತ್ತೆ ಅವನೇ ಹೇಳಿದ" ಹಿಂಗ್ ಹೇಳವು ಹೇಳೇ ಮಾಡ್ಕೆಂದಿದಿದ್ದಿ.
ಇದನ್ನೆಲ್ಲ ತನಗೇ ಹೇಳಿದ್ದನೆಂದುಕೊಂಡಿದ್ದ ಅವಳ ಮುಖದಲ್ಲಿ ಹಿಗ್ಗಿದ್ದ ನೆರಿಗೆಗಳು ಅವನ ಕೊನೆಯ ಮಾತಿಂದ ಕುಗ್ಗಿದವು.
ಅವನು ಮುಗಿಸಿರಲಿಲ್ಲ "ಯಾರು ಆ ಕೂಸು ಅಂದ್ಯಲೆ ಅದು ನೀನೇಯ. ಅವತ್ತು ನಿನ್ನೇ ಇಷ್ಟ ಪಟ್ಟಿದಿದ್ದಿ ಇವತ್ತು ನಿನ್ನೇ ಇಷ್ಟ ಪಟ್ಟಿದ್ದಿ ಮುಂದು ಅಷ್ಟೆಯಾ. ಈ ಭಾವನೆ ನಿನ್ಮೇಲೊಂದೆಯ"
ಅದೆ ನೆರಿಗೆಗಳು ಮತ್ತಷ್ಟು ಹಿಗ್ಗಿದವು. ಯಂಕಟಿ ಹಿಂಗೆಲ್ಲ ಮಾತಾಡಿದ್ದನ್ನ ಅವಳು ಎಂದೂ ನೋಡಿರಲಿಲ್ಲ. ಮಾತಲ್ಲಿ ಸಿಕ್ಕಾಪಟ್ಟೆ 
ವ್ಯತ್ಯಾಸವಾಗಿಹೋಗಿತ್ತು. ಅದನ್ನೇ ಅವಳು ಬಯಸಿದ್ದಳು ಅಂತ ಈಗ ಹೇಳಿದ್ರೆ ಪ್ರಾಬ್ಲಮ್ ಇಲ್ಲಾ ಅಂದ್ಕೊತೀನಿ.
ಅವನ ಖಾಲಿ ಎದೆಯ ಮೇಲೆ ಅವಳು ಮುಖ ಹುದುಗಿಸಿದ್ದಳು.
OK ಅಂತ ಹೇಳೋಕೆ ಮೌನಕ್ಕಿಂತ ಒಳ್ಳೆ ಭಾಷೆ ಮತ್ತೊಂದಿಲ್ಲ ಬಿಡಿ. ಕಣ್ಣಮೇಲೆ ಧರ್ಯಮಾಡಿ ಕೊಡಬೇಕೆಂದಿದ್ದ ಮುತ್ತನ್ನ ಅವಳು ಎದೆಗೊರಗಿಕೊಂಡಿದ್ದರಿಂದ ಅವನು ಅವಳ ನೆತ್ತಿಯಮೇಲೆ ಕೊಡಬೇಕಾಯ್ತು ಅನ್ನೋದಷ್ಟೇ ಟ್ವಿಸ್ಟು. 
ಬಯ್ಕೋಬೇಡಿ.
ಹಾಗೆಯೇ ಮೋಹವಿರದ ಅಪ್ಪುಗೆಯಲ್ಲಿ ಅವರಿಬ್ಬರು ಕಳೆದುಹೋಗುತ್ತಿದ್ದರೊ ಏನೊ ಸಂಜೆಯಾಗಿದ್ದರಿಂದ ಕಸೂತಿಗೆ ಕೊಟ್ಟಿಗೆಗೆ ಹೋಗುವ ಹೊತ್ತಾಗಿತ್ತು. 
"ಆನ್ ಹೋಗವು ಹಾಲ್ ಕರ್ದಾಜಿಲ್ಲೆ ಇಲ್ದೋರ್ ಕಡಿಗ್ ತಮ್ಮ ವಿಜುಂಗೆ ಡೇರಿಗ್ ಹೋಪಲೆ ಲೇಟ್ ಆಗ್ತು." ಅಂದಳು.
ಅವನು ಸಮ್ಮತಿಸಿದ್ದ.

ಸಂಭಾಷಣೆ ಸಶೇಷ....

No comments:

Post a Comment